ಕನ್ನಡ ಸೇರಿ 44 ಭಾಷೆಗಳನ್ನು ಕ್ಷಣದಲ್ಲಿ ಅನುವಾದಿಸುವ ಗೂಗಲ್‌ ಇಂಟರ್‌ಪ್ರಿಟರ್‌

ಭಾಷೆ ಮತ್ತು ತಂತ್ರಜ್ಞಾನಗಳೆರಡು ಜೊತೆಯಾದರೆ ಸಂವಹನದ ಸಾಧ್ಯತೆ ಅಗಾಧವಾಗುತ್ತದೆ. ಈಗಾಗಲೇ ಗೂಗಲ್‌ ಭಾಷಾ ಸೇವೆಗಳನ್ನು ಒದಗಿಸುತ್ತಿದೆ. ಅವುಗಳಲ್ಲಿ ಇದು ಇನ್ನೊಂದು ಮಹತ್ವದ ಹೆಜ್ಜೆ ಎಂದೇ ಹೇಳಬೇಕು

ಒಂದು ಭಾ‍ಷೆಯಲ್ಲಿರುವ ವಾಕ್ಯವನ್ನು, ಇನ್ನೊಂದು ಭಾಷೆಯಲ್ಲಿ ಲಿಪಿಯಲ್ಲಿ ಬರೆಯುವ ಟ್ರ್ಯಾನ್ಸ್‌ಲಿಟರೇಷನ್‌, ಅನುವಾದ ಸೇರಿದಂತೆ ಬಹಳ ಮುಖ್ಯವಾದ ಭಾಷೆಗೆ ಸಂಬಂಧಿಸಿದ ಸೇವೆಗಳನ್ನು ಗೂಗಲ್‌ ಈಗಾಗಲೇ ನೀಡುತ್ತಿದೆ.

ವಿಶ್ವದ ಪ್ರಮುಖ ಭಾಷೆಗಳಲ್ಲದೆ, ಅನೇಕ ಪ್ರಾದೇಶಿಕವಾದ ಭಾಷೆಗಳೂ ತಂತ್ರಜ್ಞಾನದ ನೆರವಿನೊಂದಿಗೆ ಹೊಸ ಚೈತನ್ಯ ಪಡೆದುಕೊಳ್ಳುವಂತೆ ಮಾಡುವಲ್ಲಿ ಗೂಗಲ್‌ ಶ್ರಮವಹಿಸುತ್ತಿದೆ. ಈ ನಿಟ್ಟಿನಲ್ಲಿ ಗೂಗಲ್‌ ಇಂಟರ್‌ಪ್ರಿಂಟರ್ ಬಹಳ ಮುಖ್ಯವಾದ ಹೆಜ್ಜೆ.

ಆಂಡ್ರಾಯ್ಡ್‌ ಫೋನ್‌ಗಳು, ಗೂಗಲ್‌ ಹೋಮ್‌ ಸ್ಪೀಕರ್‌ಗಳು, ಸ್ಮಾರ್ಟ್‌ ಕ್ಲಾಕ್‌ಗಳು ಸೇರಿದಂತೆ ಗೂಗಲ್‌ ಅಸಿಸ್ಟಂಟ್‌ ಇರುವ ಎಲ್ಲ ಸಾಧನಗಳಲ್ಲಿ ಈ ಇಂಟರ್‌ಪ್ರಿಟರ್‌ ಸೇವೆ ನೀಡುತ್ತದೆ.

ಇಷ್ಟು ದಿನ ಜಗತ್ತಿನ ಕೆಲವೇ ಕೆಲವು ಪ್ರಮುಖ ಭಾಷೆಗಳಿಗೆ ಸರಿಯಾಗಿ ಸ್ಪಂದಿಸಿ, ನಮಗೆ ಬೇಕಾದ ಮಾಹಿತಿಯನ್ನು ನೀಡುತ್ತಿತ್ತು. ಈಗ ಇದನ್ನು 44 ಭಾಷೆಗಳಿಗೆ ವಿಸ್ತರಿಸಲಾಗಿದೆ.

ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅಗತ್ಯವಾದ ಅನುವಾದದ ಸೇವೆಯನ್ನು ಬಹಳ ಮುಖ್ಯವಾಗಿ ನೀಡುತ್ತದೆ. ನೀವು ಕನ್ನಡ ಬಲ್ಲವರಾಗಿ, ಇಂಗ್ಲಿಷ್‌ ಮಾತನಾಡುವುದು ಹೇಗೆಂದು ಯೋಚಿಸುತ್ತಿದ್ದರೆ, ನಿಮ್ಮ ಕನ್ನಡದ ಮಾತನ್ನು ನೀವು ವಾಕ್ಯ ಪೂರೈಸಿದ ಕ್ಷಣದಲ್ಲೇ ಇಂಗ್ಲಿಷಿಗೆ ಅನುವಾದಿಸಿ ಕೊಡುತ್ತದೆ.

ಭಾರತೀಯ ಭಾಷೆಗಳಾದ ಕನ್ನಡ, ಬಂಗಾಳಿ, ಗುಜರಾತಿ, ಹಿಂದಿ, ಮಲಯಾಳಂ, ತಮಿಳು, ತೆಲುಗು, ಉರ್ದು ಭಾಷೆಗಳಿಗೆ ಈ ಸೇವೆ ಲಭ್ಯವಿದೆ. ಓಕೆ ಗೂಗಲ್‌ ಎಂದು ಆದೇಶ ನೀಡಿದ ಬಳಿಕ ನಿಮಗೆ ಯಾವ ಭಾಷೆಯಲ್ಲಿ ಸೇವೆ ಬೇಕೊ ಅದನ್ನು ಹೇಳಿದರೆ, ಕೂಡಲೇ ನಿಮ್ಮ ನೆರವಿಗೆ ಬರುತ್ತಿದೆ.

ಈಗಾಗಲೇ ತಿಳಿದಿರುವ ಗೂಗಲ್‌ನ ಕನ್ನಡ ಭಾಷೆಯ ಅನುವಾದ ಅಷ್ಟು ಸಮರ್ಪಕವಾಗಿಲ್ಲ. ಬಹುತೇಕ ಅದೇ ಡಾಟಾ ಬೇಸ್‌ ಆಧರಿಸಿ, ಇಂಟರ್‌ಪ್ರಿಟರ್‌ ಸಿದ್ಧವಾಗಿರುವುದರಿಂದ ಶೇಕಡ ಐವತ್ತಕ್ಕಿಂತ ಹೆಚ್ಚು ನಿಖರವಾದ ಫಲಿತಾಂಶವ ನಿರೀಕ್ಷಿಸಲಾಗದು. ಮುಂದಿನ ದಿನಗಳಲ್ಲಿ ಇದೂ ಪರಿಪೂರ್ಣವಾಗಿ ಸರಿಪಡಿಸಲು ಸಾಧ್ಯವಾದರೆ, ಕನ್ನಡ ಭಾಷಿಕರಿಗೆ ಬಹುದೊಡ್ಡ ಬಲ ಲಭ್ಯವಾದಂತಾಗುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.