ಸಿಇಒ ಸರದಾರ ಸುಂದರ್‌ ಪಿಚ್ಚೈ | ಅಂಕಿಗಳ ಜೊತೆ ಆಡಿದ ಪೋರ, ಈಗ ಗೂಗಲ್‌ ಸಂಸ್ಥೆಯ ಚುಕ್ಕಾಣಿ ಹಿಡಿದ ಚತುರ

ಸಣಕಲು ದೇಹ, ಕುರುಚಲು ಗಡ್ಡದ ಪಿಚ್ಚೈ ಸುಂದರರಾಜನ್‌ ಈಗ ಗೂಗಲ್‌ ಮಾತೃ ಸಂಸ್ಥೆ ಗೂಗಲ್‌ ಆಲ್ಫಾಬೆಟ್‌ನ ನೇತೃತ್ವ ವಹಿಸಿಕೊಂಡಿದ್ದಾರೆ. ಒಂದೂವರೆ ದಶಕಗಳ ಕಾಲ ಈ ಸಂಸ್ಥೆಗೆ ದುಡಿದ ಪಿಚ್ಚೈ ಪಾಲಿಗೆ ಬದುಕಿನ ದೊಡ್ಡ ಕೊಡುಗೆ. ಹಲವು ವಿನೂತನ ಪ್ರಯೋಗಗಳನ್ನು ಮಾಡಿದ ಹೆಗ್ಗಳಿಕೆ ಇರುವ ಪಿಚ್ಚೈ ಮುಂಬರುವ ದಿನಗಳಲ್ಲಿ ಗೂಗಲ್‌ನನ್ನು ಯಾವ ಎತ್ತರಕ್ಕೆ ಒಯ್ಯುವರು ಎಂಬ ನಿರೀಕ್ಷೆ ಹುಟ್ಟುಹಾಕಿದೆ

2004 ಏಪ್ರಿಲ್‌ 1ನೇ ತಾರೀಖು. ಅಂದರೆ ಮೂರ್ಖರ ದಿನ. ಅವತ್ತು ಗೂಗಲ್‌ ಸಂಸ್ಥೆ ಜಿಮೇಲ್‌ ಅನ್ನು ಪರಿಚಯಿಸಿತು. ಅದೇ ದಿನ ಸಂದರ್ಶನ. ಗೂಗಲ್‌ಪ್ಲೆಕ್ಸ್‌ನಲ್ಲಿ ಸಂದರ್ಶನಕ್ಕೆ ಕೂತ ಈ ಯುವಕನಿಗೆ, ಜಿಮೇಲ್‌, ಗೂಗಲ್‌ ಮಾಡುತ್ತಿರುವ ಒಂದು ಪ್ರಾಂಕ್‌ ಎಂದೇ ಬಗೆದಿದ್ದ. ಆದರೆ ಸಂದರ್ಶನದಲ್ಲಿ ಆಯ್ಕೆಯಾದ ಆತ ಗೂಗಲ್‌ ಸಿಬ್ಬಂದಿಗಳಲ್ಲಿ ಒಬ್ಬನಾದ.

ಹದಿನೈದು ವರ್ಷಗಳ ಹಿಂದೆ ಗೂಗಲ್‌ನಲ್ಲಿ ಎಂದಿಗೂ ನಡೆಯುವ ವಿದ್ಯಮಾನದಂತೆ ಕಾಣಿಸುವ ಮೇಲೆ ಹೇಳಿದ ಘಟನೆಯಲ್ಲಿ ಸಂದರ್ಶನಕ್ಕೆ ಹೋಗಿ ಕೂತಿದ್ದ ವ್ಯಕ್ತಿ ಹೆಸರು ಪಿಚ್ಚೈ ಸುಂದರರಾಜನ್‌. ಇಂದಿನ ಗೂಗಲ್‌ ಮತ್ತು ಆಲ್ಫಾಬೆಟ್‌ ಸಂಸ್ಥೆಯ ಸಿಇಒ.

ಗೂಗಲ್‌ ಸಂಸ್ಥಾಪಕರಾದ ಲ್ಯಾರಿ ಪೇಜ್‌ ಮತ್ತು ಸೆರ್ಗಿ ಬ್ರಿನ್‌ ಅವರ ದೈನಂದಿನ ವ್ಯವಹಾರಗಳಿಂದ ದೂರ ಸರಿಯಲು ನಿರ್ಧರಿಸ, ಆ ಎಲ್ಲ ಜವಾಬ್ದಾರಿಗಳನ್ನು ಸುಂದರ್‌ ಪಿಚ್ಚೈ ಅವರಿಗೆ ಹೊರಿಸಿದ್ದಾರೆ.

ಹದಿನೈದು ವರ್ಷಗಳ ಹಿಂದೆ ಸಾಮಾನ್ಯ ಪ್ರಾಡಕ್ಟ್‌ ಮ್ಯಾನೇಜರ್‌ ಆಗಿ ಸೇರಿದ ಸುಂದರ್ ಪಿಚ್ಚೈ ಇಂದು ಬೆಳೆದು ನಿಂತಿರುವ ಪರಿ ಬೆರಗಾಗಿಸುವಂತಹದ್ದು.

ನಲವತ್ತೇಳು ವರ್ಷದ ಸುಂದರ್‌ ಪಿಚ್ಚೈ ಜನಿಸಿದ್ದು ಚೆನ್ನೈನಲ್ಲಿ (ಜೂನ್ 10, 1972). ತಂದೆ ರಂಗನಾಥ ಪಿಚ್ಚೈ, ಎಲೆಕ್ಟ್ರಿಕಲ್‌ ಎಂಜಿನಿಯರ್‌. ತಾಯಿ, ಲಕ್ಷ್ಮಿ ಸ್ಟೆನೊ ಗ್ರಾಫರ್‌.
ಅಂಕಿಗಳನ್ನು ಅಚ್ಚರಿ ಮೂಡಿಸುವಂತೆ ನೆನಪಿಟ್ಟುಕೊಳ್ಳುತ್ತಿದ್ದ ಪಿಚ್ಚೈ ಕುಟುಂಬದವರಿಗೆ, ಸ್ನೇಹಿತರಿಗೆ ನೆರೆಹೊರೆಯವರಿಗೆ ವಿಸ್ಮಯ ಹುಟ್ಟಿಸಿದ್ದ.

ಚೆನ್ನೈ ಅಶೋಕ ನಗರದ ಜವಾಹರ್‌ ವಿದ್ಯಾಲಯಾದಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ, ವನವಾಣಿ ಶಾಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಪೂರೈಸಿ ಕಾಲಿಟ್ಟಿದ್ದು ಐಐಟಿ ಖರಗ್‌ಪುರ್‌ಗೆ. ಮೆಟಲರ್ಜಿಕಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದು ಅವರು ಸ್ಟ್ಯಾನ್‌ಫೋರ್ಡ್‌ ವಿವಿಯಲ್ಲಿ ಮೆಟಿರಿಯಲ್‌ ಸೈನ್ಸಸ್‌ ಅಂಡ್‌ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ ಸ್ಕಾಲರ್‌ಶಿಪ್‌ ಅನ್ನು ಸಂಪಾದಿಸಿಕೊಂಡರು. ನಂತರ ಪೆನ್ಸಿಲ್ವೇನಿಯಾ ವಿವಿಯ ವಾರ್ಟನ್‌ ಸ್ಕೂಲ್‌ನಲ್ಲಿ ಎಂಬಿಎ ಪದವಿ ಪಡೆದುಕೊಂಡರು.

ಕಂಪ್ಯೂಟರ್‌, ಸಾಫ್ಟ್‌ವೇರ್‌ಗಳ ಆಕರ್ಷಣೆಗೆ ಬಿದ್ದ ಪಿಚ್ಚೈ ಚೆಸ್‌ ಗೇಮ್‌ ಒಂದರ ಪ್ರೋಗ್ರಾಮ್‌ ಯಶಸ್ವಿಯಾಗಿ ಬರೆದು ಸೈ ಎನಿಸಿಕೊಂಡರು.

ಹೀಗೆ ಸಿಲಿಕಾನ್‌ ವ್ಯಾಲಿಯ ಬಗ್ಗೆ ಕನಸು ಕಟ್ಟಿಕೊಳ್ಳಲಾರಂಭಿಸಿದ ಪಿಚ್ಚೈ, ತಂತ್ರಜ್ಞಾನದ ಬಗ್ಗೆ ತಮ್ಮದ ಆಸೆ, ಆಕಾಂಕ್ಷೆಗಳನ್ನು ಬೆಳೆಸಿಕೊಂಡರು. ಗೂಗಲ್ ಅವರ ಈ ಕಲ್ಪನೆಗಳಿಗೆ ರೆಕ್ಕೆ ಕಟ್ಟಿತು.

ಗೂಗಲ್‌ಗೆ ಕಾಲಿಟ್ಟ ಕೂಡಲೇ ಸರ್ಚ್‌ ಟೂಲ್‌ ಬಾರ್‌ ಅಭಿವೃದ್ಧಿ ಕೆಲಸದಲ್ಲಿ ತೊಡಗಿದರು. ಎರಡು ವರ್ಷಗಳ ಕಾಲ ಬಹಳ ಮಹತ್ವದ ಟೂಲ್‌ ಬಳಕೆಯಾಯಿತು. ಈ ಹೊತ್ತಿಗೆ ಮೈಕ್ರೋಸಾಫ್ಟ್‌ ಬಿಂಗ್‌ ಹೆಸರಿನ ಬ್ರೌಸರ್‌ ಒಂದನ್ನು ಪರಿಚಯಿಸಿತು. ಈ ಸಂದರ್ಭದಲ್ಲಿ ಪಿಚ್ಚೈ ಕಂಪ್ಯೂಟರ್‌ ಉತ್ಪಾದಕರು ಗೂಗಲ್‌ ಟೂಲ್‌ ಬಾರನ್ನು ಮೊದಲೇ ಇನ್‌ಸ್ಟಾಲ್‌ ಮಾಡಲು ಮನವೊಲಿಸುವ ಪ್ರಯತ್ನ ಮಾಡಿದರು.

ಇದೇ ವೇಳೆ ಪಿಚ್ಚೈ ಲ್ಯಾರಿ ಮತ್ತು ಬ್ರಿನ್‌ ಅವರಿಗೆ ತಮ್ಮದೇ ಆದ ಬ್ರೌಸರ್‌ ರೂಪಿಸುವುದಕ್ಕೂ ಮನವೊಲಿಸುವಲ್ಲಿ ಯಶಸ್ವಿಯಾದರು. ಅದರ ಫಲವೇ ಗೂಗಲ್‌ ಕ್ರೋಮ್‌. ಇಂದು ಅತಿ ಹೆಚ್ಚು ಬಳಕೆಯಾಗುತ್ತಿರುವ ಬ್ರೌಸರ್‌ ಇದೆ.

ಪಿಚ್ಚೈ ತಂಡವನ್ನು ನಡೆಸುವ, ಮತ್ತು ದುಡಿಸುವ ರೀತಿ ವಿಶಿಷ್ಟವಾಗಿತ್ತು. ತಾವು ಕೈಗೆತ್ತಿಕೊಳ್ಳುವ ಪ್ರತಿ ಕೆಲಸ ಯಶಸ್ವಿಯೂ, ಪರಿಣಾಮಕಾರಿಯೂ ಆಗುತ್ತಿತ್ತು. ಇದನ್ನು ಗಮನಿಸಿ ಸಂಸ್ಥೆ 2013ರಲ್ಲಿ ಆಂಡ್ರಾಯ್ಡ್‌ ವಿಭಾಗವನ್ನು ಅವರಿಗೆ ಒಪ್ಪಿಸಿತು.

ಗೂಗಲ್‌ ಮತ್ತು ಪಿಚ್ಚೈ ಅವರ ಜೀವನದಲ್ಲಿ ಮಹತ್ವದ ಘಟ್ಟವಿದು. ಅಲ್ಲಿಯವರೆಗೆ ಆಂಡ್ರಾಯ್ಡ್‌ ಪ್ರತ್ಯೇಕ ವ್ಯವಹಾರವಾಗಿತ್ತು. ಪಿಚ್ಚೈ ಅದನ್ನು ಗೂಗಲ್‌ ತೆಕ್ಕೆಯೊಳಗೆ ತಂದರು. ಹಾಗೆಯೇ ಆಂಡ್ರಾಯ್ಡ್‌ ಒನ್‌ ಅಭಿವೃದ್ಧಿ ಪಡಿಸಿದ, ಅಗ್ಗದ ಸ್ಮಾರ್ಟ್‌ಫೋನ್‌ ಅಭಿವೃದ್ಧಿಗೆ ದಾರಿ ಮಾಡಿಕೊಟ್ಟರು.

ನೆಸ್ಟ್‌ ಖರೀದಿ, ಕ್ರೋಮ್‌ ಬುಕ್‌ ಲ್ಯಾಪ್‌ಟಾಪ್‌ಗಳಲ್ಲಿ ಬಳಕೆಯಾಗುವ ಕ್ರೋಮ್‌ ಒಎಸ್‌ ಅಭಿವೃದ್ಧಿಗೆ ಅಗಾಧವಾಗಿ ಶ್ರಮಿಸಿದ ಸುಂದರ್ ಪಿಚ್ಚೈ ಗೂಗಲ್‌ನ ನಿಷ್ಠ, ನೆಚ್ಚಿನ ವ್ಯಕ್ತಿ ಎಂದೆನಿಸಿಕೊಂಡಿದ್ದರಲ್ಲಿ ಅಚ್ಚರಿಯಿಲ್ಲ.

ಗೂಗಲ್‌ ಸಂಸ್ಥೆಯೊಳಗೆ ಲ್ಯಾರಿ ಪೇಜ್‌ನ ವಿಶ್ಲೇಷಕ ಎಂದು ಕರೆಸಿಕೊಳ್ಳುವ ಸುಂದರ್‌ ಪಿಚ್ಚೈ, ಪೇಜ್‌ ಅವರ ಆಲೋಚನೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬಲ್ಲ ಎಂದು ಗುರುತಿಸಿಕೊಂಡಿದ್ದಾರೆ. ಪೇಜ್‌ ಅವರ ಕಲ್ಪನೆ, ಆಲೋಚನೆಗಳನ್ನು ಸಮರ್ಥವಾಗಿ ಅರ್ಥಮಾಡಿಕೊಂಡು ತಂಡಗಳಿಗೆ ದಾಟಿಸುತ್ತಾರೆ ಎಂಬುದು ಅವರ ವೈಶಿಷ್ಟ್ಯ.

ಅಪಾರ ಮೆಚ್ಚುಗೆ ಪಡೆದ ನಾಯಕ

ಪಿಚ್ಚೈ ಈ ಯಶಸ್ಸಿಗೆ ಕಾರಣ ಅವರ ತನ್ನಿಂದಾಯಿತು ಎಂದು ಶ್ರೇಯ ಪಡೆಯುವ ಹಪಾಹಪಿಯಿಲ್ಲ. ಅಹಂಕಾರವಿಲ್ಲ. ತಂಡವನ್ನು ಸದಾ ಪ್ರೋತ್ಸಾಹಿಸುವ ವ್ಯಕ್ತಿ. ಲ್ಯಾರಿ ಪೇಜ್‌, ಬಡ್ತಿ ಕುರಿತು ಟಿಪ್ಪಣಿ ಬರೆಯುವಾಗ, ” ಸುಂದರ್‌ಗೆ ಮುಂದಾಗುವುದನ್ನು ಗ್ರಹಿಸುವ ಅಗಾಧ ಸಾಮರ್ಥ್ಯವಿದೆ ಮತ್ತು ಬಹುಮುಖ್ಯವಾದ ವಸ್ತುಗಳತ್ತ ತನ್ನ ತಂಡವನ್ನು ಮುನ್ನಡೆಸುವ ಶಕ್ತಿ ಇದೆ. ಹಾಗಾಗಿ ಈ ಜವಾಬ್ದಾರಿಗೆ ಸಮರ್ಥ ಆಯ್ಕೆ” ಎಂದು ಒತ್ತಿ ಹೇಳಿದ್ದರು.

2017ರಲ್ಲಿ ಐಐಟಿ ಖರಗ್‌ಪುರದಲ್ಲಿ ಪಿಚ್ಚೈ ಸಂವಾದ | ವಿಡಿಯೋ ಕೃಪೆ: ಬಿಸ್ಕೂಟ್‌ಟಿವಿ

ಕೋರಾ ತಾಣದಲ್ಲಿ ಗೂಗಲ್‌ ಸಿಬ್ಬಂದಿಯೊಬ್ಬ ಪಿಚ್ಚೈ ಕುರಿತು ಬರೆಯುತ್ತಾ, ” ಗೂಗಲ್‌ ಸಂಸ್ಥೆಯಲ್ಲಿ ಈತನನ್ನು ಅಕ್ಷರಶಃ ಆರಾಧಿಸಲಾಗುತ್ತದೆ. ಎಂಜಿನಿಯರ್‌ಗಳಿಗೆ ಈತನ ಮೇಲೆ ಪ್ರೀತಿ. ಪ್ರಾಡಕ್ಟ್‌ ಮ್ಯಾನೇಜರ್‌ಗಳಿಗೆ ಈತನೆಂದರೆ ಪ್ರೀತಿ. ಬಿಸಿನೆಸ್ ಮಂದಿಗೂ ಕೂಡ ಪ್ರೀತಿ ಪಾತ್ರ ಈ ವ್ಯಕ್ತಿ” ಎಂದಿದ್ದಾರೆ.

ಎಲ್ಲ ಭಾರತೀಯರಂತೆ ಕ್ರಿಕೆಟ್‌ ಪ್ರೀತಿಸುವ ಪಿಚ್ಚೈ, ರಾಜಕೀಯ ವಿಚಾರಗಳು ಬಂದಾಗ ನಿರ್ಭಿಡೆಯಿಂದ ಮಾತನಾಡುವ ದನಿಯನ್ನು ಉಳಿಸಿಕೊಂಡಿದ್ದಾರೆ. ಟ್ರಂಪ್‌ ನೀತಿಯನ್ನು ಟೀಕಿಸಿ ಸುದ್ದಿಯಾಗಿದ್ದನ್ನು ನೆನಪಿಸಿಕೊಳ್ಳಬಹುದು.

“ನಿಮ್ಮಲ್ಲಿ ಅಭದ್ರತೆಯ ಭಾವವನ್ನು ಮೂಡಿಸುವವರೊಂದಿಗೆ ಕೆಲಸ ಮಾಡುವುದು ಯಾವಾಗಲೂ ಒಳ್ಳೆಯದು. ಯಾಕೆಂದರೆ ಸತತವಾಗಿ ನಿಮ್ಮ ಮಿತಿಗಳನ್ನು ವಿಸ್ತರಿಸಿಕೊಳ್ಳುವುದಕ್ಕೆ ನೀವು ಶ್ರಮಿಸುತ್ತಲೇ ಇರುತ್ತೀರಿ” ಎಂದು ಹೇಳುವ ಸುಂದರ್‌ ಪಿಚ್ಚೈ, ಇಷ್ಟು ಎತ್ತರಕ್ಕೆ ಬೆಳೆಯುವುದರ ಹಿಂದಿನ ಬಲ, ಮನೋಬಲ ಯಾವುದು ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.