10000 ಗಣ್ಯರ ಭಾರತೀಯರ ಮಾಹಿತಿ ಕಲೆ ಹಾಕುತ್ತಿರುವ ಚೀನಾ; ಹೈಬ್ರೀಡ್‌ವಾರ್‌ ನಡೆಸುತ್ತಿದೆಯೇ ನೆರೆಯ ರಾಷ್ಟ್ರ?!

ಚೀನಾ ಭಾರತವನ್ನು ಎಲ್ಲ ರೀತಿಯಲ್ಲೂ ಕಟ್ಟಿ ಹಾಕಲು ಹೊರಟಂತಿದೆ. ಗಡಿಯಲ್ಲಿ ಚೀನಾ ಸೇನೆ ಮುನ್ನುಗ್ಗುತ್ತಿರುವ ಸುದ್ದಿ ಒಂದೆಡೆಯಾದರೆ, ಸರ್ಕಾರಿ ಬೆಂಬಲದ ಚೀನಾದ ಟೆಕ್‌ ಕಂಪನಿ ಭಾರತದ ಗಣ್ಯರ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದೆ!

Pic: Indianexpress

ಕರೋನಾ ವೈರಸ್‌ ಚೀನಾದ ಪ್ರಯೋಗಾಲಯದಿಂದ ಹೊರಬಿತ್ತು ಎಂದು ಇಡೀ ಜಗತ್ತೇ ಆರೋಪಿಸಿದ್ದನ್ನು ಕೇಳಿದ್ದೇವೆ. ಅದೊಂದು ಬಯೋವಾರ್‌ ಎಂಬ ಮಟ್ಟಿನ ವಿಶ್ಲೇಷಣೆಗಳು ಕೇಳಿದ್ದೇವೆ. ಈ ಬಗ್ಗೆ ಯಾವುದೇ ಖಚಿತ ಮಾಹಿತಿಯಿಲ್ಲ. ಆದರೆ ಚೀನಾ ಭಾರತದ ಮೇಲೆ ಟೆಕ್‌ವಾರ್‌ ನಡೆಸಲು ಸಜ್ಜಾಗಿದೆಯೇ ಎಂಬ ಪ್ರಶ್ನೆ ಹುಟ್ಟುವಂತಹ ಬೆಳವಣಿಗೆಯೊಂದು ಆಗಿದೆ.

ಇಂಡಿಯನ್‌ ಎಕ್ಸ್‌ಪ್ರೆಸ್‌ ಪ್ರಕಟಿಸಿರುವ ತನಿಖಾ ವರದಿ ಬೆಚ್ಚಿ ಬೀಳಿಸುವ ಮಾಹಿತಿಯನ್ನು ಹೊರಹಾಕಿದೆ. ಭಾರತದ 10000 ಗಣ್ಯರ ದೈನಂದಿನ ವಿನಿಮಯಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದೆ ಎಂದು ಈ ತನಿಖಾ ವರದಿ ಹೇಳುತ್ತಿದೆ.

ಸೆಪ್ಟೆಂಬರ್‌ 14 ಬೆಳಗ್ಗೆ ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆ, ಚೀನಾದ ಕಮ್ಯುನಿಸ್ಟ್ ಪಕ್ಷದ ಮತ್ತು ಆಡಳಿತಾರೂಢ ಸರ್ಕಾರದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುವ ಶೆನ್‌ಜಾನ್‌ ಮೂಲದ ಝೆನ್‌ಹುವಾ ಡಾಟಾ ಇನ್‌ಫಾರ್ಮೆಷನ್‌ ಟೆಕ್ನಾಲಜಿ ಕಂಪನಿ ಲಿಮಿಟೆಡ್‌ ಹೆಸರಿನ ಟೆಕ್‌ ಕಂಪನಿಯು ಭಾರತದ ರಾಷ್ಟ್ರಪತಿ, ಪ್ರಧಾನ ಮಂತ್ರಿ, ವಿರೋಧ ಪಕ್ಷದ ಮುಖ್ಯ ನಾಯಕರು, ನ್ಯಾಯಮೂರ್ತಿಗಳು, ಮುಖ್ಯಮಂತ್ರಿಗಳು, ಸಂಪುಟದ ಸಚಿವರು, ಸೇನೆಯ ಮಾಜಿ ಮುಖ್ಯಸ್ಥರು, ಟೆಕ್‌ ಉದ್ಯಮಿಗಳ ಮಾಹಿತಿಯನ್ನು ಕಲೆ ಹಾಕುತ್ತಿದೆ ಎಂದು ಸುದ್ದಿ ಪ್ರಕಟಿಸಿತ್ತು.

ಕಳೆದ ಎರಡು ತಿಂಗಳುಗಳಿಂದ ಬಿಗ್‌ ಡಾಟಾ ಟೂಲ್‌ಗಳ ಮೂಲಕ ಇಂಡಿಯನ್‌ ಎಕ್ಸ್‌ಪ್ರೆಸ್‌, ಝೆನ್‌ಹುವಾ ಕಂಪನಿಯ ಮಾಹಿತಿಯ ಕಲೆಹಾಕುವ ಚಟುವಟಿಕೆಗಳನ್ನು ಗಮನಿಸುತ್ತಾ ಬಂದಿತ್ತು. ಭಾರತವಷ್ಟೇ ಅಲ್ಲದೆ, ಅಮೆರಿಕ, ಇಂಗ್ಲೆಂಡ್‌, ಜಪಾನ್‌, ಆಸ್ಟ್ರೇಲಿಯಾ, ಕೆನಡಾ, ಜರ್ಮನಿ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಿಂದಲೂ ಮಾಹಿತಿ ಕಲೆ ಹಾಕುತ್ತಿರುವುದಾಗಿ ಇಂಡಿಯನ್‌ ಎಕ್ಸ್‌ಪ್ರೆಸ್‌ ಈ ತನಿಖಾ ವರದಿ ಬಿಚ್ಚಿಟ್ಟಿದೆ.

ದಾಖಲೆಗಳ ಪ್ರಕಾರ ಝೆನ್‌ಹುವಾ 2018ರ ಏಪ್ರಿಲ್‌ನಲ್ಲಿ ಅಸ್ತಿತ್ವಕ್ಕೆ ಬಂದ ಕಂಪನಿ. ಇದು ಚೀನಾದ ಉದ್ದಗಲಕ್ಕೂ 20 ಮಾಹಿತಿ ಸಂಸ್ಕರಣಾ ಕೇಂದ್ರಗಳನ್ನು ಹೊಂದಿದೆ. ಚೀನಾ ಸರ್ಕಾರ ಮತ್ತು ಚೀನಾ ಸೇನೆ ಇವರ ಸೇವೆ ಪಡೆಯುತ್ತವೆ.

ಇದೊಂದು ಹೈಬ್ರೀಡ್‌ ವಾರ್‌!

ಹಾಗೆಂದರೇನು? ಸೇನೆ, ಶಸ್ತ್ರಾಸ್ತ್ರಗಳಿಲ್ಲದೆ ಎದುರಾಳಿಯ ಮೇಲೆ ಮೇಲುಗೈ ಸಾಧಿಸುವುದು, ಹಾನಿ ಉಂಟು ಮಾಡುವುದು ಅಥವಾ ಪ್ರಭಾವಿಸುವುದು. ಇದಕ್ಕಾಗಿ ಬಳಕೆಯಾಗುವುದು ತಂತ್ರಜ್ಞಾನ ಮತ್ತು ಕಲೆಹಾಕುವ ಅಗಾಧವಾದ ಮಾಹಿತಿ.

ಝೆನ್‌ಹುವಾ ಕಲೆಹಾಕುತ್ತಿರುವ ಮಾಹಿತಿಯನ್ನು ಓವರ್‌ಸೀಸ್‌ ಕೀ ಇನ್‌ಫಾರ್ಮೆಷನ್‌ ಡಾಟಾ ಬೇಸ್‌ ಎಂದು ಕರೆದಿದೆ. ಇದನ್ನು ಆಧರಿಸಿ, ತಾನುಕಲೆ ಹಾಕುತ್ತಿರುವ ಗಣ್ಯರ ವಂಶವೃಕ್ಷವನ್ನೇ ರಚಿಸುತ್ತಿದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಹೇಳುತ್ತದೆ.

ಉದಾಹರಣೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪತ್ನಿ ಜಶೋಧಬೆನ್‌, ರಾಷ್ಟ್ರಪತಿ ಕೋವಿದ್‌ ಅವರ ಪತ್ನಿ ಸವಿತಾ ಕೋವಿದ್‌, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಪತ್ನಿ ಗುರ್‌ಶರನ್‌ ಕೌರ್‌ ಮತ್ತು ಮಕ್ಕಳಾದ ಉಪಿಂದರ್‌, ದಮನ್‌, ಅಮೃತ್‌, ಸೋನಿಯಾಗಾಂಧಿ, ಅವರ ಪತಿ ರಾಜೀವ್‌ಗಾಂಧಿ, ಮಗ ರಾಹುಲ್‌ ಗಾಂಧಿ, ಮಗಳಾದ ಪ್ರಿಯಾಂಕಗಾಂಧಿ, ಹಾಲಿ ಸಚಿವೆ ಸ್ಮೃತಿ ಇರಾನಿ, ಅವರ ಪತಿ ಝುಬಿನ್‌ ಇರಾನಿ, ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ತನಿಖೆಯನ್ನು ಆಧರಿಸಿ ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆ ಝೆನ್‌ಹುವಾ ಸಂಸ್ಥೆಗೆ ಪ್ರತಿಕ್ರಿಯೆ ಬಯಸಿ ಸಂಪರ್ಕಿಸಿದ ಕೆಲವೇ ಗಂಟೆಗಳಲ್ಲಿ ಕಂಪನಿಯ ವೆಬ್‌ಸೈಟ್‌ ನಿಷ್ಕ್ರಿಯಗೊಂಡಿದೆ.

ಈ ಬೆಳವಣಿಗೆ ಏನು ಹೇಳುತ್ತದೆ?


ಝೆನ್‌ಹುವಾ ಮಾಹಿತಿ ಕಲೆ ಹಾಕುತ್ತಿರುವ ವಿಧಾನವೇ ಬೆಚ್ಚಿ ಬೀಳಿಸುವಂತಿದೆ. ರಾಜಕೀಯ ಪಕ್ಷಗಳು, ಸರ್ಕಾರಿ ಸಂಸ್ಥೆಗಳು, ಉದ್ಯಮಿಗಳು, ತಂತ್ರಜ್ಞಾನ ಕಂಪನಿಗಳು, ಮಾಧ್ಯಮ ಸೇರಿದಂತೆ ಎಲ್ಲ ಕ್ಷೇತ್ರದ ಗಣ್ಯರು, ಪ್ರಮುಖರ ಡಿಜಿಟಲ್‌ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದೆ. ಸುದ್ದಿ ಸಂಸ್ಥೆಗಳ ಪ್ರಕಟಣೆಗಳು, ಚರ್ಚಾ ವೇದಿಕೆಗಳು ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿಯನ್ನು ಸಂಗ್ರಹಿಸಿ, ಮಾಹಿತಿ ಗ್ರಂಥಾಲಯವನ್ನು ರೂಪಿಸಿದೆ. ಇದು ಗುಪ್ತಚರ ಸೇವೆಗಳಿಗೆ ಅಪಾಯ ಒಡ್ಡುವಂತಹ ಬೆಳವಣಿಗೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ವಿಶ್ಲೇಷಿಸಿದೆ.

ಇದನ್ದಿನೂ ಓದಿ | ಸೋಷಿಯಲ್‌ ಡಿಲೆಮಾ | ಈ ಸಾಕ್ಷ್ಯಚಿತ್ರ ನೋಡಿದ ಮೇಲೆ, ಸೋಷಿಯಲ್‌ ಮಿಡಿಯಾ ಬಳಸುವ ಮುನ್ನ ಯೋಚಿಸುತ್ತೀರಿ

ಚೀನಾ ಭಾರತೀಯ ಗಡಿಯಲ್ಲಿ ತನ್ನ ಸೇನೆಯನ್ನು ಮುನ್ನುಗ್ಗಿಸುತ್ತಿದೆ ಎಂಬ ವರದಿಗಳು ಅಪ್ಪಳಿಸುತ್ತಿರುವಾಗ, ಚೀನಾ ಸೈಬರ್‌ ಯುದ್ಧವನ್ನೇ ಸಾರಲು ಸಿದ್ಧವಾಗುತ್ತಿರುವ ಸೂಚನೆಯನ್ನು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ನೀಡಿದೆ. ಚೀನಾ ಒಂದಲ್ಲ ಒಂದು ರೀತಿಯಲ್ಲಿ ಭಾರತದ ಮೇಲೆ ದಾಳಿ ನಡೆಸುವ ಪ್ರಯತ್ನ ಮಾಡುತ್ತಲೇ ಇರುವ ಭಾರತ ಸರ್ಕಾರ ಕ್ಷುಲ್ಲಕ ಪ್ರಕರಣಗಳ ಮೇಲೆ ರಾಜಕೀಯ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.