ಕರೋನಾ ಕಳಕಳಿ|ಸೋಂಕು ಹರಡುವುದನ್ನು ಗುರುತಿಸಲು ಭಾರತ ಸರ್ಕಾರದಿಂದ ಕೋವಿನ್‌-20 ಆ್ಯಪ್‌

ಭಾರತ ಸರ್ಕಾರ ಕರೋನಾ ವೈರಸ್‌ ಸೋಂಕನ್ನು ನಿಯಂತ್ರಿಸುವುದಕ್ಕೆ ಟೊಂಕ ಕಟ್ಟಿ ಕೆಲಸ ಮಾಡಲು ಆರಂಭಿಸಿದೆ. ಸೋಂಕು ಹರಡುವುದನ್ನು ನಿಖರವಾಗಿ, ಹಾಗೂ ಎಲ್ಲೆಲ್ಲೆ ಹರಡುತ್ತಿದೆ ಎಂಬುದನ್ನು ತ್ವರಿತವಾಗಿ ಪತ್ತೆ ಮಾಡಲು ಟ್ರ್ಯಾಕರ್‌ ಆ್ಯಪ್‌ ಪರಿಚಯಿಸಲು ಸಿದ್ಧವಾಗಿದೆ. ಅದರ ಹೆಸರು ಕೋವಿನ್‌-20

ಚಿತ್ರ: ಟಿಎನ್‌ಡಬ್ಲ್ಯೂ

ಕೋವಿಡ್‌-19 ವ್ಯಾಪಕವಾಗಿ ಹರಡುತ್ತಿದ್ದು, ದಿನೇದಿನೇ ಸೋಂಕಿತ ಸಂಖ್ಯೆ ಹೆಚ್ಚುತ್ತಿರುವುದು ನಿಜಕ್ಕೂ ಆತಂಕ ಹುಟ್ಟಿಸುತ್ತಿದೆ. ಆದರೆ ಭಾರತ ಸರ್ಕಾರ ಎಲ್ಲ ಸಂಭವನೀಯ ಮಾರ್ಗಗಳಲ್ಲಿ ಕೆಲಸ ಮಾಡುತ್ತಿದೆ. ಈಗ ತಂತ್ರಜ್ಞಾನವನ್ನೂ ಬಳಸಿಕೊಳ್ಳಲು ಮುಂದಾಗಿದ್ದು, ಸೋಂಕನ್ನು ಟ್ರ್ಯಾಕ್‌ ಮಾಡಲು ಕೋವಿನ್‌-20 ಹೆಸರಿನ ಮೊಬೈಲ್‌ ಅಪ್ಲಿಕೇಷನ್‌ ಪರಿಚಯಸಿಲು ಮುಂದಾಗಿದೆ.

ಇದು ಸೋಂಕಿರುವ ವ್ಯಕ್ತಿಯ ಸ್ಥಳದ ಮಾಹಿತಿಯನ್ನು ನೀಡುವ ಮೂಲಕ ಎಚ್ಚರಿಕೆ ನೀಡುತ್ತದೆ. ಈಗಾಗಲೇ ಸೋಂಕಿಗೆ ಒಳಗಾದ ವ್ಯಕ್ತಿಗಳ ಮಾಹಿತಿಯನ್ನು ಹೊಂದಲಿರುವ ಈ ಆ್ಯಪ್‌, ಯಾವುದೇ ಸ್ಮಾರ್ಟ್‌ ಫೋನ್‌ ಬಳಕೆದಾರರ ಲೋಕೇಶನ್‌ ಮತ್ತು ಬ್ಲೂಟೂತ್‌ ಮೂಲಕ ಸೋಂಕಿರುವ ವ್ಯಕ್ತಿಯ ವ್ಯಾಪ್ತಿಯಲ್ಲಿರುವುದನ್ನು ಗುರುತಿಸಿ ಸಂದೇಶವನ್ನು ರವಾನಿಸುತ್ತದೆ.

ಆ್ಯಪ್‌ ಇನ್‌ಸ್ಟಾಲ್‌ ಮಾಡುವಾಗ, ಇತರೆ ಎಲ್ಲ ಆ್ಯಪ್‌ಗಳಂತೆಯೇ ಲೋಕೇಷನ್‌ ಮಾಹಿತಿ ಸದಾ ಕಾಲ ಗಮನಿಸಲು ಅನುಮತಿ ನೀಡುತ್ತದೆ. ಇದು ಖಾಸಗಿತನಕ್ಕೆ ಧಕ್ಕೆ ಉಂಟು ಮಾಡುವ ಪ್ರಶ್ನೆಗೆ ಕಾರಣವಾಗಬಹುದು. ಆದರೆ ಆ್ಯಪ್‌ ಅಭಿವೃದ್ಧಿಪಡಿಸುತ್ತಿರುವ ತಂಡದ ಪ್ರಕಾರ ಸಂಗ್ರಹಿಸಲಾಗುವ ಎಲ್ಲ ಮಾಹಿತಿ ಎನ್‌ಕ್ರಿಪ್ಟ್‌ ಆಗಿರುತ್ತದೆ ಮತ್ತು ಆಯಾ ಮೊಬೈಲ್‌ನಲ್ಲೇ ಇರುತ್ತದೆ.

ಒಂದು ವೇಳೆ ನಿಮಗೆ ಸೋಂಕು ಇರುವುದು ಖಚಿತವಾಗಿದ್ದರೆ ಅದನ್ನು ಕೂಡಲೇ ಆರೋಗ್ಯ ಸಚಿವಾಲಯಕ್ಕೆ ತಿಳಿಸುತ್ತದೆ. ಆದರೆ ಟ್ರ್ಯಾಕ್‌ ಹೇಗೆ ಮಾಡುತ್ತದೆ ಎಂಬುದು ಇನ್ನು ಸ್ಪಷ್ಟವಾಗಬೇಕಿದೆ.

ನೀತಿ ಆಯೋಗ ಈ ಆ್ಯಪ್‌ ಅಭಿವೃದ್ಧಿ ಮಾಡುವ ಜವಾಬ್ದಾರಿಯನ್ನು ಹೊತ್ತಿದ್ದು ಐಒಎಸ್‌ ಅಂದ್ರೆ ಐಫೋನ್‌ಗಳಿಗೆ ಮತ್ತು ಆಂಡ್ರಾಯ್ಡ್‌ ಫೋನ್‌ಗಳಿಗೆ ಇನ್ನು ಕೆಲವೇ ದಿನಗಳಲ್ಲಿ ಲಭ್ಯವಾಗಲಿದೆ. ಆಯ್ದ ಗುಂಪುಗಳಲ್ಲಿ ಪರೀಕ್ಷಾರ್ಥ ಬಳಕೆಗೆ ನೀಡಲಾಗಿದ್ದು, ಅಭಿಪ್ರಾಯ ಸಂಗ್ರಹಿಸಿ ಅಗತ್ಯ ಮಾರ್ಪಾಡುಗಳೊಂದಿಗೆ ಸಾರ್ವಜನಿಕರಿಗೆ ಬಿಡುಗಡೆ ಮಾಡಲಿದೆ.

ಭಾರತ ಸರ್ಕಾರದ ಆಪ್ ಕುರಿತು ವರದಿ ಪ್ರಕಟಿಸಿರುವ ದಿ ನೆಕ್ಸ್ಟ್‌ವೆಬ್‌, ಮಾಹಿತಿ ಸುರಕ್ಷತೆ ಮತ್ತು ಖಾಸಗಿತನದ ಪ್ರಶ್ನೆಗಳನ್ನು ಎತ್ತಿದೆ. ಎಲ್ಲಿಯವರೆಗೆ ಬಳಕೆದಾರರ ಮಾಹಿತಿಯನ್ನು ಸರ್ಕಾರ ಸಂಗ್ರಹಿಸುತ್ತದೆ? ಸಂಗ್ರಹಿಸಿದ ಮಾಹಿತಿ ಎಷ್ಟು ಸುರಕ್ಷಿತವಾಗಿರುತ್ತದೆ. ಈಗಾಗಲೇ ಭಾರತ ಸರ್ಕಾರದ ವಿರುದ್ಧ ಖಾಸಗಿತನದ ಉಲ್ಲಂಘನೆಯ ಆರೋಪವಿದೆ.

ಭಾರತಕ್ಕೂ ಮೊದಲು ಚೀನಾ, ಇಸ್ರೇಲ್‌, ಸಿಂಗಾಪುರ್‌ಗಳು ಆ್ಯಪ್‌ಗಳನ್ನು ಪರಿಚಯಿಸಿದ್ದು, ಸೋಂಕಿತರ ಮಾಹಿತಿ, ಸೋಂಕು ಹರಡುತ್ತಿರುವುದನ್ನು ಟ್ರ್ಯಾಕ್‌ ಮಾಡುವುದಕ್ಕೆ ಬಳಸುತ್ತಿವೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.