ಲಾಕ್‌ಡೌನ್ ಹಿನ್ನೆಲೆಯಲ್ಲಿ ದಿಢೀರನೆ ಜನಪ್ರಿಯಗೊಂಡ ಝೂಮ್ ಮೊಬೈಲ್ ಅಪ್ಲಿಕೇಷನ್, ಮಾಹಿತಿ ಸುರಕ್ಷತೆಯ ವಿಷಯದಲ್ಲಿ ಟೀಕೆಗೆ ಗುರಿಯಾದ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಸರ್ಕಾರಗಳು ಝೂಮ್ ಬಳಕೆ ನಿಷೇಧಿಸಿವೆ. ಆದರೆ ಭಾರತ ಝೂಮ್ ಮಾದರಿಯ ಆಪ್ ಅಭಿವೃದ್ಧಿಗೆ ಮುಂದಾಗಿದೆ

ಝೂಮ್ ಹೋಲುವ ಆಪ್‌ವೊಂದನ್ನು ಅಭಿವೃದ್ಧಿಪಡಿಸುವುದಕ್ಕೆ ಭಾರತ ಸರ್ಕಾರ ಖಾಸಗಿ ಟೆಕ್ ಕಂಪನಿಗಳಿಗೆ ಆಹ್ವಾನ ನೀಡಿದೆ. ಏಪ್ರಿಲ್ 30ರೊಳಗೆ ತಮ್ಮ ಪ್ರಾಜೆಕ್ಟ್‌ಗಳನ್ನು ಸಲ್ಲಿಸಲು ಸೂಚಿಸದೆ. ಮೂರು ಹಂತಗಳಲ್ಲಿ ನಡೆಯುವ ಆಯ್ಕೆಯ ಪ್ರಕ್ರಿಯೆ ಬಳಿಕ ಒಂದು ಪ್ರಾಜೆಕ್ಟ್‌ಗೆ 1 ಕೋಟಿ ರು. ನೀಡಲಿದೆ.
ಆಪ್ ಹೇಗಿರಬೇಕು ಎಂಬುದನ್ನು ಸರ್ಕಾರ ತಿಳಿಸಿದೆ. ಖಾಸಗಿತನಕ್ಕೆ ಹೆಚ್ಚು ಆದ್ಯತೆ ಇರಬೇಕು, ನೆಟ್‌ವರ್ಕ್ ದುರ್ಬಲವಾಗಿದ್ದರೂ ಸಮರ್ಥವಾಗಿ ಕಾರ್ಯನಿರ್ವಹಿಸುವಂತಿರಬೇಕು ಮತ್ತು ಬಹುಭಾಷೆಗಳಲ್ಲಿ ಲಭ್ಯವಾಗಬೇಕು ಎಂದು ತಿಳಿಸಿದೆ.
ಯಾವುದೇ ಮೊಬೈಲ್‌ನಲ್ಲಿ ಕೆಲಸ ಮಾಡುವಂತಿರಬೇಕು, ಆಡಿಯೋ, ವಿಡಿಯೋ ರೆಕಾರ್ಡ್ ಮಾಡುವುದಕ್ಕೆ ಅವಕಾಶವಿರಬೇಕು ಎಂದು ಸೂಚಿಸಿದೆ.
ವ್ಯಾಪಕ ಬಳಕೆ- ನಿಷೇಧ
ಕರೋನಾ ವೈರಸ್ ಇಡೀ ಜಗತ್ತು ಲಾಕ್‌ಡೌನ್ ಆಗುವುದಕ್ಕೆ ಕಾರಣವಾಯಿತು. ಕಚೇರಿ ಬಂದ್ ಮಾಡಿದರು, ಕೆಲಸವನ್ನು ನಿಲ್ಲಿಸದೇ ಮನೆಯಿಂದಲೇ ಕೆಲಸ ಮಾಡಬೇಕಾಗಿ ಬಂತು. ಈ ಕಾರಣಕ್ಕೆ ಝೂಮ್ ಏಕಾಏಕಿ ಬೇಡಿಕೆಯನ್ನು ಗಳಿಸಿತು.
ಆದರೆ ಒಂದೆರಡು ತಿಂಗಳಲ್ಲೇ ಮಾಹಿತಿ ಸುರಕ್ಷತೆಯ ಎಲ್ಲ ನಿಯಮಗಳನ್ನು ಉಲ್ಲಂಘಿಸಿದ ಟೀಕೆಗೆ ಗುರಿಯಾಯಿತು. ಫೇಸ್‌ಬುಕ್ ತನ್ನ ಬಳಕೆದಾರರ ಮಾಹಿತಿಯನ್ನುಮಾರಿಕೊಳ್ಳುತ್ತಿದೆ ಎಂದು ದೂರು ಕೇಳಿ ಬಂತು. ಚೀನಾದಲ್ಲಿ ಸರ್ವರ್‌ಗಳಲ್ಲಿ ಬಳಕೆದಾರರ ಮಾಹಿತಿ ಸಂಗ್ರಹಿಸಿಡುತ್ತಿದೆ. ಇದು ಖಾಸಗಿತನದ ಹಕ್ಕಿಗೆ ವಿರುದ್ಧವಾದುದು ಎಂಬ ಟೀಕೆಯೂ ವ್ಯಕ್ತವಾಯಿತು. ಈ ನಡುವೆ ಹ್ಯಾಕರ್‌ಗಳು ಝೂಮ್ ಖಾತೆಗಳಿಗೆ ಕನ್ನ ಹಾಕಿ ಸುದ್ದಿ ಮಾಡಿದರು.
ಈ ಬೆಳವಣಿಗೆಗಳನ್ನು ಗಮನಿಸಿದ ಭಾರತ ಸರ್ಕಾರ ಸರ್ಕಾರಿ ಸಭೆಗಳಿಗೆ, ಸಂವಹನಕ್ಕೆ ಝೂಮ್ ಆಪ್ ಬಳಸದೆ ಸೂಚನೆ ನೀಡಿತು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಅಧಿಕಾರಿಗಳೊಂದಿಗೆ ನಡೆಸುತ್ತಿದ್ದ ಎಲ್ಲ ಸಭೆಗಳಿಗೆ ಝೂಮ್ ಆಪನ್ನೇ ಅವಲಂಭಿಸಿತ್ತು. ಝೂಮ್ ಉಚಿತ ಸೇವೆ ನಿಯಮಿತವಾಗಿದ್ದು, ಹೆಚ್ಚಿನ ಬಳಕೆಗೆ ಹಣ ಪಾವತಿ ಮಾಡಬೇಕು. ಆ ಲೆಕ್ಕದಲ್ಲಿ ತಿಂಗಳಿಗೆ 1999 ರೂ.ಗಳನ್ನು ಪಾವತಿಸಬೇಕು. ಈ ತುರ್ತು ಪರಿಸ್ಥಿತಿಯಲ್ಲಿ ಅಸಂಖ್ಯ ಸಭೆಗಳು ನಡೆಯುವುದರಿಂದ ಲಕ್ಷಾಂತರ ರೂ.ಗಳನ್ನು ವೆಚ್ಚ ಮಾಡಬೇಕಾಗುತ್ತದೆ ಎಂದು ಅರಿತ ಸರ್ಕಾರ ತಮ್ಮದೇ ಆಪ್ ಅಭಿವೃದ್ಧಿಗೆ ಮುಂದಾಗಿದೆ.
ಪ್ರಸ್ತುತ ಝೂಮ್ ಬಳಕೆ ನಿಲ್ಲಿಸಿ, ನ್ಯಾಷನಲ್ ಇನ್‌ಫಾರ್ಮ್ಯಾಟಿಕ್ಸ್ ಸೆಂಟರ್ ಅಭಿವೃದ್ಧಿಪಡಿಸಿದ ಆಪ್ ಬಳಸುತ್ತಿದೆ. ಈ ಆಪ್ ದೇಶದಲ್ಲಿರುವ 1800 ಸ್ಟುಡಿಯೋಗಳನ್ನು ಬೆಸೆಯುತ್ತದೆ. ಆದರೆ ಹೊಸ ಆಪ್ ಸ್ಟುಡಿಯೋಗಳನ್ನು ಅವಲಂಭಿಸದೆ, ಲ್ಯಾಪ್‌ಟಾಪ್, ಮೊಬೈಲ್‌ಗಳ ಮೂಲಕವೇ ಸಂಪರ್ಕ ಸಾಧ್ಯವಾಗಿಸುವುದಕ್ಕೆ ಒತ್ತು ನೀಡಿದೆ.