ಕರೋನಾ ಕಾಳಜಿ | ಸಿಎಸ್‌ಐಆರ್‌ ಲ್ಯಾಬ್‌ನಿಂದ ಭಾರತದ ಮೊದಲ ಪೇಪರ್ ಸ್ಟ್ರಿಪ್‌ ಟೆಸ್ಟ್‌, ಇದರ ಬೆಲೆ ಕೇವಲ 500 ರೂ

ಕರೋನಾ ಸೋಂಕು ತಡೆಯಲು ಇರುವ ಏಕೈಕ ಮಾರ್ಗ ಪರೀಕ್ಷೆ ಪರೀಕ್ಷೆ ಪರೀಕ್ಷೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ ಟೆಸ್ಟ್‌ ಕಿಟ್‌ಗಳೇ ಲಭ್ಯವಿಲ್ಲ. ಇರುವವರು ದುಬಾರಿ. ಇಂಥ ಹೊತ್ತಲ್ಲಿ ಭಾರತದ ಪ್ರತಿಷ್ಠಿತ ವಿಜ್ಞಾನ ಸಂಸ್ಥೆ ಸಿಎಸ್‌ಐಆರ್‌ ಕಡಿಮೆ ಬೆಲೆಯ, ಸುಲಭದ ಪರೀಕ್ಷಾ ವಿಧಾನವನ್ನು ಕಂಡುಕೊಂಡಿದೆ

ಕರೋನಾ ವೈರಸ್‌ ಹರಡಲಾರಂಭಿಸಿ ನಾಲ್ಕು ತಿಂಗಳು ದಾಟಿವೆ. ಲಕ್ಷಾಂತರ ಜನರ ಇದರ ಸೋಂಕಿನಿಂದ ಬಳಲುತ್ತಿದ್ದಾರೆ. ಸಾವಿರಾರು ಜನ ಸಾವನ್ನಪ್ಪಿದ್ದಾರೆ. ಆದರೂ ಔಷಧಿ, ಲಸಿಕೆ ಲಭ್ಯವಾಗಿಲ್ಲ. ಎಲ್ಲಕ್ಕೂ ಮುಖ್ಯವಾಗಿ ಸೋಂಕನ್ನು ನಿಯಂತ್ರಿಸುವುದಕ್ಕೆ ಅನುಕೂಲವಾಗುವಂತೆ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ಮಾಡಲಾಗುತ್ತಿಲ್ಲ.

ಟೆಸ್ಟ್‌ ಕಿಟ್‌ಗಳ ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿಲ್ಲದಿರುವುದೇ ಇದಕ್ಕೆ ಕಾರಣ. ಅಮೆರಿಕ, ಭಾರತ ಸೇರಿದಂತೆ ವಿವಿಧ ಒಂದೆಡೆ ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಶ್ರಮಿಸುತ್ತಿರುವಾಗ, ಇನ್ನು ಕೆಲವು ಸಂಸ್ಥೆಗಳು ಕಿಟ್‌ಗಳನ್ನು ಅಭಿವೃದ್ಧಿಪಡಿಸುತ್ತಿವೆ.

ಭಾರತದ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಯಾದ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ-ಸಿಎಸ್‌ಐಆರ್‌ ಕೇವಲ 500 ರೂ. ಬೆಲೆಗೆ ಲಭ್ಯವಾಗುವಂತಹ ಸುಲಭವಾಗಿ ಪರೀಕ್ಷೆ ಮಾಡಬಹುದಾದ ಪಟ್ಟಿ ರೂಪದ ವಿಧಾನವನ್ನು ಕಂಡುಕೊಂಡಿದೆ.

ಈ ಕುರಿತು ವರದಿ ಮಾಡಿರುವ ಲೈವ್‌ ಮಿಂಟ್‌ ಪತ್ರಿಕೆ, ಜೀನ್‌ಗಳನ್ನು ತಿದ್ದುವ ಸಾಧನವಾದ ಕ್ರಿಸ್ಪಆರ್‌-ಕ್ಯಾಸ್‌9 (Crispr-Cas9) ಬಳಸಿ, ಸೋಂಕಿನ ಶಂಕೆ ಇರುವವರಿಂದ ಸಂಗ್ರಹಿಸಿದ ಮಾದರಿಯಲ್ಲಿ ನೊವೆಲ್‌ ಕರೋನಾ ವೈರಸ್‌ನ ವಂಶವಾಹಿ ವಿನ್ಯಾಸವನ್ನು ಅರಿಯುವ ಪ್ರಯತ್ನ ಮಾಡುತ್ತದೆ ಎಂದು ತಿಳಿಸಿದೆ.

ಕಾಗದದ ಹಾಳೆಯ ತುಂಡಿನಂತಿರುವ ಈ ಸಾಧನ, ಗರ್ಭಧರಿಸುವುದನ್ನು ಪರೀಕ್ಷಿಸಲು ಬಳಸುವ ಸಾಧನದಂತೆಯೇ ಇರುತ್ತದೆ. ಇದನ್ನು ಬಳಸುವುದಕ್ಕೆ ಯಾವುದೇ ವಿಶೇಷ ಕೌಶಲ್ಯ, ಜ್ಞಾನ ಅಗತ್ಯವಿಲ್ಲ. ಅತ್ಯಂತ ವೇಗವಾಗಿ ಪರೀಕ್ಷೆ ನಡೆಸುತ್ತದೆ.

ಪಾಲಿಮರೇಸ್‌ ಚೈನ್‌ ರಿಯಾಕ್ಷನ್‌ ಹೆಸರಿನ ಪರೀಕ್ಷೆಯ ಮೂಲಕ ಕೋವಿಡ್‌ 19 ಸೋಂಕನ್ನು ಖಚಿತ ಪಡಿಸಿಕೊಳ್ಳುವ ಮಾದರಿಯೊಂದು ಈಗ ಬಳಕೆಯಲ್ಲಿದೆ. ಇದರ ಬೆಲೆ 4500 ರೂ.ಗಳು. ಆದರೆ ಸಿಎಸ್‌ಐಆರ್‌ ರೂಪಿಸಿರುವ ಪೇಪರ್‌ ಸ್ಟ್ರಿಪ್‌ ಟೆಸ್ಟ್‌ ಕೇವಲ 500 ರೂ.ಗಳಿಗೆ ಲಭ್ಯವಾಗಲಿದೆ ಎಂದಿದೆ ಸಂಶೋಧನಾ ತಂಡ.
ಈ ಕುರಿತು ಪತ್ರಿಕೆಗೆ ಹೇಳಿಕೆ ನೀಡಿರುವ ಈ ಸಾಧನ ರೂಪಿಸುವ ತಂಡದ ನೇತೃತ್ವವಹಿಸಿದ್ದ ಸಿಎಸ್‌ಐಆರ್‌ನ ಜಿನೊಮಿಕ್‌ ಅಂಡ್‌ ಇಂಟಿಗ್ರೇಟಿವ್‌ ಬಯೊಲಜಿ ಸಂಸ್ಥೆಯ ದೇವಜ್ಯೋತಿ ಚಕ್ರವರ್ತಿ, ” ಕಳೆದ ಎರಡು ವರ್ಷಗಳಿಂದ ನಾವು ಈ ಸಾಧನವನ್ನು ರೂಪಿಸುವುದಕ್ಕೆ ಪ್ರಯತ್ನ ಮಾಡುತ್ತಿದ್ದೇವೆ. ಕಳೆದ ಜನವರಿಯಲ್ಲಿ ಚೀನಾದಲ್ಲಿ ಸೋಂಕು ತೀವ್ರವಾಗಿ ಹರಡಿದಾಗ, ನಾವು ಈ ಸಾಧನದ ಪರೀಕ್ಷಾರ್ಥ ಪ್ರಯೋಗ ನಡೆಸಿದೆವು. ಇದು ಕೋವಿಡ್‌ 19ರ ಸೋಂಕು ಗುರುತಿಸುವಲ್ಲಿ ಸಮರ್ಥವಾಗಿ ಕೆಲಸ ಮಾಡಬಲ್ಲದೆ ಎಂಬ ಕುತೂಹಲವಿಲ್ಲ. ನಮಗೆ ಫಲಿತಾಂಶ ಸಿಗುವುದಕ್ಕೆ ಎರಡು ತಿಂಗಳು ಬೇಕಾಯಿತು” ಎಂದು ವಿವರಿಸಿದ್ದಾರೆ.

ದೇವಜ್ಯೋತಿ ಚಕ್ರವರ್ತಿ ಹಾಗೂ ಸೌವಿಕ್‌ ಮೈತಿ ಅವರ ತಂಡವು ನಿಖರ ಫಲಿತಾಂಶ, ಸೂಕ್ಷ್ಮಗಳನ್ನು ಅರಿಯುವುದಕ್ಕೆ ಪ್ರಯೋಗ ನಡೆಸುತ್ತಿದ್ದಾರೆ. ಜೊತೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಾನ್ಯತೆಯ ನಿರೀಕ್ಷೆಯಲ್ಲಿದ್ದಾರೆ.

ಯಾವುದೇ ಸಣ್ಣ ಆರೋಗ್ಯ ಕೇಂದ್ರಗಳಲ್ಲಿ, ಲ್ಯಾಬ್‌ಗಳಲ್ಲಿ ಈ ಸಾಧನ ಬಳಸಿ ಪರೀಕ್ಷೆ ನಡೆಸಬಹುದು ಎಂದು ವಿವರಿಸಿರುವ ದೇವಜ್ಯೋತಿ ಚಕ್ರವರ್ತಿಯವರು, ಇನ್ನೊಂದು ವಾರದಲ್ಲಿ ಐಸಿಎಂಆರ್‌ನಿಂದ ಪ್ರತಿಕ್ರಿಯೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.