ಬಿಡುಗಡೆಯಾದ ಒಂದೇ ದಿನದಲ್ಲಿ ನಿಷ್ಕ್ರಿಯವಾದ ದೇಶದ ಮೊದಲ ಸೂಪರ್ ಸೋಷಿಯಲ್ ಆ್ಯಪ್ ‘ಎಲಿಮೆಂಟ್ಸ್’

ಆತ್ಮನಿರ್ಭರ ಭಾರತ ರೂಪಿಸಲು ಪ್ರಧಾನಿಗಳ ಕೊಟ್ಟ ಕರೆ ಪ್ರಭಾವ ಬೀರಿದೆ. ಭಾರತದ ಉತ್ಸಾಹಿ ತಂತ್ರಜ್ಞರು, ವಿದೇಶಿ ಸೋಷಿಯಲ್‌ ಆ್ಯಪ್ಗಳಿಗೆ ಪರ್ಯಾಯಗಳನ್ನು ಸೃಷ್ಟಿಸಲು ಮುಗಿಬಿದಿದ್ದಾರೆ. ಈಗ ಎಲಿಮೆಂಟ್ಸ್‌ ಹೆಸರಿನ ಪರ್ಯಾಯವೊಂದು ಬಿಡುಗಡೆಯಾಗಿದೆ.

Pic:Beebom

ಕಳೆದ ವಾರ ಭಾರತ ಸರ್ಕಾರ ಚೀನಾ ಮೇಲಿನ ಕೋಪವನ್ನು 59 ಮೊಬೈಲ್‌ ಅಪ್ಲಿಕೇಷನ್‌ಗಳನ್ನು ನಿಷೇಧಿಸುವ ಮೂಲಕ ಹೊರಹಾಕಿತು. ಚೀನಾ  ಆ್ಯಪ್‌ಗಳನ್ನು ಅನ್‌ಇನ್‌ಸ್ಟಾಲ್‌ ಮಾಡುವ ಮೂಲಕ ಚೀನಾಕ್ಕೆ ಪಾಠ ಕಲಿಸಬೇಕು, ನಮ್ಮದೇ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಬೇಕು ಎಂದಿದ್ದರು.

ಪ್ರಧಾನಿಗಳ ಹೇಳಿಕೆ ಅನೇಕ ಉತ್ಸಾಹಿ ತಂತ್ರಜ್ಞರಿಗೆ ಸ್ಫೂರ್ತಿ ನೀಡಿದ್ದು, ಜನಪ್ರಿಯವಾದ ಟಿಕ್‌ಟಾಕ್‌ಗೆ ಪರ್ಯಾಯ ಆ್ಯಪ್‌ಗಳು ಸೃಷ್ಟಿಯಾದವು. ಈಗ ಸರದಿ ಇತರೆ ವಿಶ್ವ ಪ್ರಸಿದ್ಧ ಸೋಷಿಯಲ್‌ ಮೆಸೇಜಿಂಗ್ ಆ್ಯಪ್‌ಗಳದ್ದು.

ದೇಶದ ವಿವಿಧೆಡೆಯ 1000 ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಸೇರಿ ಅಭಿವೃದ್ಧಿಪಡಿಸಿದ ಈ ಆ್ಯಪ್, ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌, ಇನ್‌ಸ್ಟಾಗ್ರಾಮ್‌ ಗಳಲ್ಲಿ ಸಿಗುವ ಫೀಚರ್‌ಗಳನ್ನು ಒಂದೆಡೆಯೇ ನೀಡುತ್ತಿದೆ ಎಂಬ ಹೆಗ್ಗಳಿಕೆಯೊಂದಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಬಿಡುಗಡೆ ಮಾಡಿದರು. ಇದು ಫೇಸ್‌ಬುಕ್‌ಗೆ ಸಡ್ಡು ಹೊಡೆಯುವಂತಿದೆ ಎಂಬ ಮೆಚ್ಚುಗೆಯೂ ಅವರಿಂದ ವ್ಯಕ್ತವಾಯಿತು.

ದೇಶದ ಮೊದಲ ಸೋಷಿಯಲ್‌ ಮೀಡಿಯಾ ಸೂಪರ್‌ ಆ್ಯಪ್ ಎಂದೇ  ಹೇಳಲಾದ ಈ ಆ್ಯಪ್ ಅನ್ನು ಬೆಂಗಳೂರು ಮೂಲದ ಸುಮೇರು ಸಾಫ್ಟ್‌ವೇರ್‌ ಸಲುಷನ್ಸ್‌ ಅಭಿವೃದ್ಧಿಪಡಿಸಿದೆ.

ಏನಿದೆ? ಹೇಗಿದೆ?

ಫೇಸ್‌ಬುಕ್‌ ಮಾದರಿಯಲ್ಲಿ ನೀವು ನಿಮ್ಮದೇ ಆದ ಪ್ರೊಫೈಲ್‌ ಸೃಷ್ಟಿಸಿಕೊಳ್ಳಬಹುದು. ನಿಮ್ಮ ಪ್ರೊಫೈಲ್‌ನಲ್ಲಿ ನೀವು ಪ್ರಕಟಿಸಿದ ಫೋಸ್ಟ್‌ಗಳನ್ನು ನಿಮ್ಮ ಸ್ನೇಹಿತರು ಓದಬಹುದು ಮತ್ತು ಪ್ರತಿಕ್ರಿಯಿಸಬಹುದು. ಅಲ್ಲದೇ ‘ಡಿಸ್ಕವರ್’ ಎಂದಿರುವ ಆಯ್ಕೆಯಿಂದ ನಿಮಗೆ ಹೊಸ ಸ್ನೇಹಿತರ ಕಾಣಿಸಿಕೊಳ್ಳುತ್ತಾರೆ.

ವಿನ್ಯಾಸವೂ ಆಪ್ತವೂ, ಸರಳವೂ ಆಗಿದ್ದು, ಬಳಕೆದಾರರನ್ನು ಸೆಳೆಯುವಂತಿದೆ. ಚಾಟ್‌ ಮಾಡುವುದಕ್ಕೆ, ವಿಡಿಯೋ ಕಾಲ್‌ ಮಾಡುವುದಕ್ಕೆ ಇದರಲ್ಲಿ ಅವಕಾಶಗಳಿವೆ. ವ್ಯಕ್ತಿಗತ ಸಂಭಾಷಣೆ-ಸಂವಹನಕ್ಕೆ ಮತ್ತು ಗುಂಪುಗಳನ್ನು ಸೃಷ್ಟಿಸುವುದಕ್ಕೂ ಅವಕಾಶ ನೀಡಲಾಗಿದೆ.

ಇನ್‌ ಕ್ಯಾಮೆರಾ ಇದ್ದು, ವಿವಿಧ ಫಿಲ್ಟರ್‌ಗಳನ್ನು ಬೆಂಬಲಿಸುತ್ತದೆ, ಎಆರ್‌ ಕ್ಯಾರೆಕ್ಟರ್‌ಗಳನ್ನು ಬೆಂಬಲಿಸುತ್ತದೆ. ಕನ್ನಡ ಸೇರಿದಂತೆ ಭಾರತದ 8 ಪ್ರಮುಖ ಭಾಷೆಗಳಲ್ಲಿ ಆಪ್‌ ಲಭ್ಯವಿದೆ.

ಈ ಆ್ಯಪ್ ಮೂಲಕ ವಿನಿಮಯವಾಗುವ ಎಲ್ಲ ರೀತಿಯ ಮಾಹಿತಿಯೂ ಭಾರತೀಯ ಸರ್ವರ್‌ಗಳ ಮೂಲಕವೇ ಆಗುತ್ತದೆ. ಮಾಹಿತಿ ಸುರಕ್ಷಿತವಾಗಿರುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.


ಇದನ್ನೂ ಓದಿ | ಭಾರತದ ಟಿಕ್‌ಟಾಕ್ ಆದ ಬೆಂಗಳೂರಿನ ‘ಚಿಂಗಾರಿ’: ಮೂರ್ನಾಲ್ಕು ದಿನದಲ್ಲೇ ಕೋಟಿ ಬಳಕೆದಾರರು


ಕೆಲಸ ಮಾಡುತ್ತಿಲ್ಲ!!

ಬಿಡುಗಡೆ ದಿನದಿಂದ ಇಲ್ಲಿಯವರೆಗೆ 5 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ಗಳಾಗಿವೆ. ಮೊಬೈಲ್‌ ನಂಬರ್‌ ಬಳಸಿ ಲಾಗಿನ್‌ ಮಾಡುವುದಕ್ಕೆ ಅವಕಾಶವಿದ್ದು, ಒಟಿಪಿ ವೆರಿಫಿಕೇಷನ್‌ ಆಗದೆ ಅನೇಕರಿಗೆ ಬಳಸಲು ಸಾಧ್ಯವಾಗುತ್ತಿಲ್ಲ.

ದೇಶದ ಮೊದಲ ಆ್ಯಪ್ ಎಂದು ಬೀಗಬೇಕಾದ ಕಾಲದಲ್ಲಿ ತಾಂತ್ರಿಕ ದೋಷಗಳು ಬಯಲಾಗುತ್ತಿದ್ದು, ಟ್ವಿಟರ್‌ ಮುಂತಾದ ಸಾಮಾಜಿಕ ತಾಣಗಳಲ್ಲಿ ಬಳಸುವ ಉತ್ಸಾಹದಿಂದ ಇನ್‌ಸ್ಟಾಲ್‌ ಮಾಡಿಕೊಂಡವರೆಲ್ಲಾ ಟೀಕಿಸಿ ಪೋಸ್ಟ್‌ಗಳನ್ನು ಬರೆಯುತ್ತಿದ್ದಾರೆ.

ಈ ಕುರಿತು ಅಭಿಪ್ರಾಯ ಕೇಳಲು ಸಂಸ್ಥೆಯನ್ನು ‘ಟೆಕ್‌ ಕನ್ನಡ’ ಸಂಪರ್ಕಿಸಿದಾಗ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಆತ್ಮ ನಿರ್ಭರ ಘೋಷಣೆಯಡಿ, ದೇಶೀ ಆ್ಯಪ್ ಗಳನ್ನು ಅಭಿವೃದ್ಧಿಪಡಿಸುವ, ಬಿಡುಗಡೆ ಮಾಡುವ ಉತ್ಸಾಹ ಈಗ ಎಲ್ಲೆಡೆ ಕಾಣಿಸುತ್ತಿದೆ. ಆದರೆ ಮೂಲಭೂತವಾದ ಅಗತ್ಯಗಳದ್ದೇ ಸಮಸ್ಯೆ ಇರುವಂತಹ ಇಂತಹ ಪ್ರಯತ್ನಗಳು ತಾತ್ಕಾಲಿಕ ಯಶ ಕಂಡು ಕರಗಿ ಹೋಗುತ್ತವೆ ಎಂಬ ದೂರೂ ಕೇಳಿಬರುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.