ಕೋಡ್ ಬರೆಯುವ ಜಾಣೆಯರಿಗೆ ಇದೋ ಇಲ್ಲಿದೆ 2019ರ ಗೀಕ್ ಗಾಡೆಸ್ ಸ್ಪರ್ಧೆ

ಕೋಡ್‌ ಬರೆಯುವುದು ಕೇವಲ ಪುರುಷ ಕ್ಷೇತ್ರವೇನಲ್ಲ. ಸಾವಿರಾರು ಯುವತಿಯರು ಈ ಕ್ಷೇತ್ರದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಅಂತಹವರನ್ನು ಗುರುತಿಸಿ, ಪ್ರೋತ್ಸಾಹಿಸುವುದಕ್ಕಾಗಿ ಟೆಕ್‌ ಗಿಗ್‌ ಈ ಸ್ಪರ್ಧೆ ಆಯೋಜಿಸುತ್ತಿದೆ. ಆಸಕ್ತರು ಅರ್ಜಿ ತುಂಬಿ, ಸ್ಪರ್ಧೆಗಿಳಿಯಬಹುದು

ಬಿಹಾರ ಎಂದರೆ ಜನರ ಕಣ್ಣಲ್ಲಿ ಮೂಡುವ ಚಿತ್ರಗಳು ಬೇರೆ. ಹಸಿವು, ಬಡತನ, ಅನಕ್ಷರತೆ, ಅಂದಾದುಂದಿ ಆಡಳಿತ ಹೀಗೆ… ಅದರಲ್ಲಿಯೂ ಅಲ್ಲಿನ ಹಳ್ಳಿಗಳ ಸ್ಥಿತಿಗಳ ಬಗ್ಗೆ ಮೂಗು ಮುರಿಯುವಂತಹ ಸ್ಥಿತಿ ಇದೆ. ಅಂತಹ ಹಳ್ಳಿಯೊಂದರಿಂದ ಬಂದ ಸ್ನೇಹಲತಾ ಮಿಶ್ರಾ ಅವರು ಟೆಕ್ ಸ್ಪರ್ಧೆಯಲ್ಲಿ ದಾಪುಗಾಲು ಹಾಕಿದ್ದು ಹೇಗೆ ಎಂಬುದು ರೋಮಾಂಚನದ ವಿಚಾರ; ಈಗಷ್ಟೇ ಕಣ್ಣರಳಿಸುತ್ತಿರುವ ಟೆಕಿಗಳಿಗೆ ಸ್ಪೂರ್ತಿ ತುಂಬುವ ಸಂಗತಿ. ಅಷ್ಟೇ ಅಲ್ಲ ತಂತ್ರಜ್ಞಾನ ಲೋಕದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹುಡುಕುವವರಿಗೆ ಉತ್ತಮ ಉದಾಹರಣೆ.

ಬೆಂಗಳೂರಿನಲ್ಲಿ ನಡೆದ ಗೀಕ್‌ ಗಾಡೆಸ್‌ನಲ್ಲಿ ವಿಜೇತ ಸ್ನೇಹಲತಾ ಮಿಶ್ರಾ

2018ರಲ್ಲಿ ಟೆಕ್‌ಗಿಗ್‌ ಆಯೋಜಿಸಿದ್ದ ಗೀಕ್‌ ಗಾಡೆಸ್‌ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವಿನ ಕಿರೀಟ ತೊಟ್ಟಿದ್ದಳು. ಸ್ನೇಹಲತಾ ಅವರಂತೆ ಕೋಡ್‌ ಬರೆಯುವ ಎಷ್ಟೋ ಉತ್ಸಾಹಿ ಯುವತಿಯರಿಗೆ ತಮ್ಮ ಪ್ರತಿಭೆಯನ್ನು ಪರೀಕ್ಷೆಗೊಡ್ಡುವ ಅವಕಾಶ ಮತ್ತೆ ಒದಗಿ ಬಂದಿದೆ.

ಅತಿ ದೊಡ್ಡ ಆನ್‌ಲೈನ್‌ ಸಮುದಾಯವನ್ನು ಹೊಂದಿರುವ ಟೆಕ್‌ಗಿಗ್‌ 2019ರ ಗೀಕ್‌ ಗಾಡೆಸ್‌ ಸ್ಪರ್ಧೆಗೆ ಆಹ್ವಾನವಿತ್ತಿದೆ.  ಆಗಸ್ಟ್ ತಿಂಗಳಿನಿಂದಲೇ ನೋಂದಣಿ ಆರಂಭವಾಗಿದ್ದು ಇದೇ ಅಕ್ಟೋಬರ್ 14ರವರೆಗೂ ಸ್ಪರ್ಧಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು ಈ ಲಿಂಕ್‌ ನೋಡಬಹುದು.

ಈಗಾಗಲೇ 37 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ ಎನ್ನುತ್ತಾರೆ ಸಂಘಟಕರು.  ಸ್ಪರ್ಧೆ ಕಡ್ಡಾಯವಾಗಿ ಮಹಿಳೆಯರಿಗೆ ಮಾತ್ರ.

ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತದೆ. ಚಾಂಪಿಯನ್‌ ಆಗಿ ಹೊಮ್ಮುವವರಿಗೆ 1.5 ಲಕ್ಷ ರೂ.ಗಳು ಹಾಗೂ ಅನುಕ್ರಮವಾಗಿ ನಾಲ್ಕು ರನ್ನರ್‌ ಅಪ್‌ ಬಹುಮಾನ ನೀಡಲಾಗುವುದು.  ಮೊದಲ ರನ್ನರ್‌ ಅಪ್‌ಗೆ  1 ಲಕ್ಷರೂ, ಎರಡನೆಯ ರನ್ನರ್‌ ಅಪ್‌ಗೆ  75, ಸಾವಿರ ರೂ. ಮೂರನೆಯ ರನ್ನರ್‌ ಅಪ್‌ಗೆ  50ಸಾವಿರ ರೂ ಹಾಗೂ ನಾಲ್ಕನೆಯ ರನ್ನರ್‌ ಅಪ್‌ಗೆ 25 ಸಾವಿರ ರೂ.ಗಳನ್ನು ನೀಡಲಾಗುವುದು.

ಇಂಡಿಯನ್‌ ವೆಬ್‌ 2 ತಾಣಕ್ಕೆ ಹೇಳಿಕೆ ನೀಡಿರುವ ಟೈಮ್ಸ್ ಜಾಬ್ಸ್ ಮತ್ತು ಟೆಕ್ ಗಿಗ್ ನ ವ್ಯವಹಾರ ಮುಖ್ಯಸ್ಥ ಸಂಜಯ್ ಗೋಯೆಲ್,  ‘ಈ ಬಾರಿಯ ಸ್ಪರ್ಧೆ ಹಿಂದಿನ ಆವೃತ್ತಿಗಳಿಗಿಂತಲೂ ಬೃಹತ್ ಮತ್ತು ಉತ್ತಮವಾಗಿರಲಿದೆ. ಭಾರತದ ಕಾರ್ಪೊರೇಟ್ ತಾಣದಲ್ಲಿ ಮಹಿಳಾ ನೈಪುಣ್ಯತೆ ಗುರುತಿಸಲು ಸ್ಪರ್ಧೆ ಸಹಕಾರಿಯಾಗಲಿದೆ’ ಎಂದಿದ್ದಾರೆ.

ಕಳೆದ ವರ್ಷ 68 ಸಾವಿರಕ್ಕೂ ಹೆಚ್ಚು ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಎಂಬುದು ಸ್ಪರ್ಧೆಯ ಮಹತ್ತನ್ನು ವಿವರಿಸುತ್ತದೆ. ಇಲ್ಲಿ ಸ್ಪರ್ಧಿಸುವವರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಕಳೆದ ವರ್ಷ ಅಮೆರಿಕನ್ ಎಕ್ಸ್ ಪ್ರೆಸ್ ಎಂಬ ಬಹುರಾಷ್ಟ್ರೀಯ ಕಂಪೆನಿ ಭಾರತದ ಟೆಕ್ ಗಿಗ್ ನೊಂದಿಗೆ ಕೈಜೋಡಿಸಿರುವುದು ಸಾಕ್ಷಿ. ಮಾಹಿತಿ ತಂತ್ರಜ್ಞಾನ ಲೋಕದ ಮಹಿಳಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಸಂಸ್ಥೆ ಉತ್ಸಾಹ ತೋರಿರುವುದು ಸ್ಪರ್ಧೆಗೆ ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ.

ಸಂಸ್ಥೆಯ ಉಪಾಧ್ಯಕ್ಷೆ ರುಚಿಕಾ ಪನ್ಸೀರ್ ‘ ಅಮೆರಿಕನ್ ಎಕ್ಸ್ ಪ್ರೆಸ್ ಸಂಸ್ಥೆ ಅನನ್ಯ ಉದ್ದೇಶದ, ವಿಶಿಷ್ಟ ಹಿನ್ನೆಲೆ ಮತ್ತು ಅನುಭವವ ಹೊಂದಿರುವ ಪ್ರತಿಭಾ ಸಮೂಹವೊಂದನ್ನು ಸೃಷ್ಟಿಸಲು ಬದ್ಧವಾಗಿದೆ. ತಂತ್ರಜ್ಞಾನದಲ್ಲಿ ಮಹಿಳೆಯರಿಗೆ ಬೆಂಬಲವಾಗಿ ನಿಲ್ಲುತ್ತಿರುವ ಟೆಕ್ ಗಿಗ್ ಜೊತೆಗೆ ಹೆಜ್ಜೆ ಹಾಕುವುದು ಹೆಮ್ಮೆಯ ವಿಚಾರ’ ಎಂದಿದ್ದಾರೆ.

2019ನೇ ಸಾಲಿನಲ್ಲಿ ನಡೆಯುತ್ತಿರುವ ಸ್ಪರ್ಧೆ ಐದನೇ ಆವೃತ್ತಿಯಾಗಿದ್ದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್/ ಮಷೀನ್ ಲರ್ನಿಂಗ್, ರೋಬೋಟಿಕ್ ಪ್ರೋಸೆಸ್ ಆಟೊಮೇಷನ್ (ಆರ್ ಪಿಎ), ಸಲ್ಯೂಷನ್ ಹಂಟರ್ಸ್ ಹ್ಯಾಕಥಾನ್ ಮುಂತಾದ ವಿಭಾಗಗಳಲ್ಲಿ ಈ ವರ್ಷ ಜಿದ್ದಾಜಿದ್ದಿ ಪೈಪೋಟಿ ಏರ್ಪಡಲಿದೆ.