ವಿಶ್ವದ ಅತಿ ಸಣ್ಣ ಕಣದ ಬೆನ್ನುಹತ್ತಿರುವ ಭಾರತೀಯ ವಿಜ್ಞಾನಿ ಇಂದುಮತಿ

ಚೆನ್ನೈನ ದಿ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾಥಮೆಟಿಕಲ್‌ ಸೈನ್ಸ್‌ನಲ್ಲಿ ಬೋಧಿಸುತ್ತಿರುವ ಇಂದುಮತಿ ಸೇರಿದಂತೆ 31 ಮಹಿಳಾ ವಿಜ್ಞಾನಿಗಳನ್ನು ಪರಿಚಯಿಸುವ ಕೃತಿ, ’31 ಫ್ಯಾಂಟಾಸ್ಟಿಕ್‌ ಅಡ್ವೆಂಚರ್ಸ್‌ ಇನ್‌ ಸೈನ್‌’ ಬಿಡುಗಡೆಯಾಗಿದೆ. ನಂದಿತಾ ಜಯರಾಜ್‌, ಆಶಿಮಾ ಫ್ರೀಡಾಗ್‌ ಸಂಪಾದಿಸಿರುವ ಈ ಕೃತಿಯಿಂದ ಆಯ್ದ ಭಾಗ

ಇಂದುಮತಿ ತಮಿಳುನಾಡಿನ ಚೆನ್ನೈನಲ್ಲಿ ಬೆಳೆದವರು. ಇಂದಿಗೂ ಅಲ್ಲೇ ವಾಸವಾಗಿರುವ ಅವರು ವಿಶ್ವದ ಅತಿ ದೊಡ್ಡ ನಿಗೂಢವನ್ನು ಕಂಡುಕೊಳ್ಳುವುದಕ್ಕೆ ತಮ್ಮೆಲ್ಲಾ ಸಮಯವನ್ನು ವಿನಿಯೋಗಿಸಿದ್ದಾರೆ. ಅವರ ತಂದೆ ಮೆಕ್ಯಾನಿಕಲ್‌ ಎಂಜಿನಿಯರ್‌. ಮನೆಯಲ್ಲೂ, ಕಚೇರಿಯಲ್ಲೂ ಅದೇ ಕೆಲಸ. ಹರೆಯದ ಹುಡುಗಿ ಇಂದು ಅಪ್ಪನ ಹೆಗಲ ಮೇಲೆ ಕೈ ಇಟ್ಟುಕೊಂಡು, ಅವರು ಕಾರ್ ರಿಪೇರಿ ಮಾಡುವುನ್ನು, ಮುರಿದ ಪೈಪ್‌ ಸರಿ ಮಾಡುವುದನ್ನು ಅಥವಾ ಕೆಟ್ಟ ರೇಡಿಯೋ ಸರಿ ಮಾಡುವುದನ್ನು ನೋಡುತ್ತಾ ಬೆಳೆದವರು. ಡೈನಿಂಗ್‌ ಟೇಬಲ್‌ ಮೇಲೆ ಚೆಲ್ಲಿದ್ದ ಟೂಲ್‌ಗಳು ಅವರಿಗೆ ಕೊಡುತ್ತಿದ್ದ ಸಂತೋಷಕ್ಕೆ ಕೊನೆಯೇ ಇಲ್ಲ. ನಿಧಾನವಾಗಿ ಸಣ್ಣ ಪುಟ್ಟ ಸಮಸ್ಯೆಗಳನ್ನು ತಾವೂ ರಿಪೇರಿ ಮಾಡಲು ಆರಂಭಿಸಿದರು.

ಇಂದು ಮೊದಲ ಲವ್‌ ಅಂದ್ರೆ ಕ್ರಿಕೆಟ್‌. ತಮ್ಮ ಶಾಲೆಯ ತಂಡದಲ್ಲಿ ಆಡಿದ ಇವರು, ನಂತರ ವಿಶ್ವವಿದ್ಯಾಲಯ ತಂಡದ ಸದಸ್ಯಯಾಗಿ ಕ್ರಿಕೆಟ್‌ ಆಡಿದ್ದಾರೆ. ಕಾಲೇಜಿನಲ್ಲಿ ಪಂದ್ಯವೊಂದರಲ್ಲಿ ಬಲ ಪಾದಕ್ಕೆ ಪೆಟ್ಟು ಬಿದ್ದಿತ್ತು. ಅದು ಎಷ್ಟು ಗಂಭೀರವಾಗಿತ್ತು ಎಂದರೆ, ವೈದ್ಯರು ಇನ್ನು ಈಕೆ ನಡೆಯುವುದೇ ಕಷ್ಟ ಎಂದು ಆತಂಕಕ್ಕೆ ಒಳಗಾಗಿದ್ದರು. ಇಂದು ವೈದ್ಯರ ಆತಂಕ ಸುಳ್ಳಾಗಿಸಿದರು, ಮತ್ತೆ ಕ್ರಿಕೆಟ್‌ ಬ್ಯಾಟ್‌ ಎತ್ತಿಕೊಳ್ಳಲಿಲ್ಲ. ಬದಲಿಗೆ ಅವರ ಎರಡನೆಯ ಪ್ರೀತಿ ಭೌತಶಾಸ್ತ್ರದತ್ತ ತಿರುಗಿದ್ದರು. ನಮ್ಮ ಸುತ್ತಲೂ ಇರುವ ಪ್ರತಿಯೊಂದು ವಸ್ತುವಿನಲ್ಲೂ ಇರುವ ಮೂಲ ಕಣ ಯಾವುದು ಎಂಬುದು ಅವರನ್ನು ಗಾಢವಾಗಿ ಕಾಡಿದ ಪ್ರಶ್ನೆ. ನಾವು ಇಂದು ನೋಡುತ್ತಿರುವ ವಿಶ್ವವನ್ನು ಆ ಕಣಗಳು ಒಟ್ಟಾಗಿ ಹೇಗೆ ರೂಪಿಸಿದವು? ಈ ಪ್ರಶ್ನೆಗಳನ್ನು ಬೆನ್ನುಹತ್ತಿ ಹೊರಟ ಇಂದು ಭೌತಶಾಸ್ತ್ರಜ್ಞರಾಗಿ ಗುರುತಿಸಿಕೊಂಡರು.

ಕಣಭೌಸ್ತ್ರಜ್ಞರಾಗಿ ಅಧ್ಯಯನ ಆರಂಭಿಸಿದ ಇಂದು, ವಿಶ್ವದ ಅತಿ ಸಣ್ಣ ಅಂದರೆ ಯಾವುದು? ಅಣುವೆ? ಇಲ್ಲ, ಅದರ ಕೇಂದ್ರದಲ್ಲಿ ನ್ಯೂಕ್ಲಿಯಸ್‌ ಇದೆ. ಈ ನ್ಯೂಕ್ಲಿಯಸ್‌ ಕೂಡ ಅದಕ್ಕಿಂತ ಸೂಕ್ಷ್ಮವಾದ ಕಣಗಳಾದ ಪ್ರೊಟಾನ್‌ ಮತ್ತು ನ್ಯೂಟ್ರಾನ್‌ಗಳಿಂದ ಆಗಿದೆ. ಪ್ರತಿಯೊಂದು ಪ್ರೊಟಾನ್‌ ಮತ್ತು ನ್ಯೂಟ್ರಾನ್‌ ಅವುಗಳಿಂದ ಸಣ್ಣದಾದ ಕ್ವಾರ್ಕ್‌ ಮತ್ತು ಗ್ಲೂಆನ್ಸ್‌ನಿಂದಾಗಿವೆ. ಹಾಗಾದರೆ ಕ್ವಾರ್ಕ್ಸ್‌ ಮತ್ತು ಗ್ಲೂಆನ್ಸ್‌ಗಳು ವಿಶ್ವದ ಅತಿ ಸಣ್ಣ ಕಣಗಳೇ?
ಯಾರೂ ಖಚಿತವಾಗಿ ಹೇಳಲಾರರು. ನೂರಾರು ವರ್ಷಗಳ ಹಿಂದೆ ಅಣುಗಳನ್ನು ವಿಶ್ವದ ಅತಿ ಸಣ್ಣ ಕಣಗಳೆಂದು ಭಾವಿಸಲಾಗಿತ್ತು. ಆಗಿನಿಂದಲೂ ಅನೇಕ ವಿಜ್ಞಾನಿಗಳು ಅಣಗಳನ್ನು ಪತ್ತೆಮಾಡುವ, ಸಾಧನಗಳು, ಅಕ್ಸಲರೇಟರ್‌ಗಳು ಮತ್ತು ಕೊಲ್ಲೈಡರ್‌ಗಳನ್ನು ಅಭಿವೃದ್ಧಿ ಪಡಿಸಿ, ಕೂಲಂಕಷವಾಗಿ ಅಧ್ಯಯನ ಮಾಡುತ್ತಾ ಬಂದಿದ್ದಾರೆ. ಆ ಸಾಧನಗಳಿಗೆ ನಾವು ಕೃತಜ್ಞರಾಗಿರಬೇಕು, ಯಾಕೆಂದರೆ ಈ ಹೊತ್ತಿನವರೆಗೆ ನಾವು ಅತ್ಯಂತ ಸಣ್ಣ ಮತ್ತು ಮೂಲಭೂತ ಎಂದು ಪರಿಗಣಿಸಲಾಗಿರುವ ಕಣಗಳನ್ನು ಈ ಸಾಧನಗಳ ಮೂಲಕ ಕಂಡುಕೊಳ್ಳಲು ಸಾಧ್ಯವಾಯಿತು.

ಕ್ವಾರ್ಕ್ಸ್‌ ಮತ್ತು ಗ್ಲೂಆನ್ಸ್‌ ಪ್ರಸ್ತುತ ನಮಗೆ ತಿಳಿದಿರುವ ಅತಿ ಸಣ್ಣ ಗಳಾಗಿದ್ದು, ಅವುಗಳು ಕೂಡಿ ಪ್ರೋಟಾನ್‌ ಮತ್ತು ನ್ಯೂಟ್ರಾನ್‌ಗಳು ಸೃಷ್ಟಿಯಾಗುತ್ತವೆ. ಇವುಗಳ ಜೊತೆಗೆ ಎಲೆಕ್ಟ್ರಾನ್‌ಗಳು ಕುಡಿ ಅಣುಗಳು ಸೃಷ್ಟಿಯಾಗುತ್ತವೆ. ಈ ಅಣುಗಳಿಂದ ನಾವು ತಿಳಿದಿರುವ ಮರ, ಕಲ್ಲುಗಳಿಂದ ಹಿಡಿದು ಪ್ರಾಣಿ-ಪಕ್ಷಗಳವರೆಗೆ ಎಲ್ಲದ ಸೃಷ್ಟಿಯ ಕಾರಣವಾಗಿದೆ. ಆದರೆ ಇಂದು ಅವರ ನಂಬಿಕೆ ಎಂದರೆ ವಿಶ್ವದಲ್ಲಿ ಇನ್ನೂ ಕೆಲವು ಕಣಗಳಿವೆ, ಅವು ಈ ಅಣುವಿನ ಭಾಗವಾಗಿಯೇ ಇರುವುದಿಲ್ಲ! ಅಂತಹ ಒಂದು ಮೂಲ ಕಣವೆಂದರೆ ನ್ಯೂಟ್ರಿನೊ. ಇದು ಇಂದು ಅವರ ಅತಿ ನೆಚ್ಚಿನ ವಿಷಯ. ನ್ಯೂಟ್ರಿನೊಗಳು ಎಲ್ಲೆಲ್ಲೂ ಇವೆ. ಸೂರ್ಯನಿಂದ ಹಿಡಿದು, ಬಾಹ್ಯಾಕಾಶದ ಯಾವುದೋ ಮೂಲೆಯಿಂದ ಹಿಡಿದು ಎಲ್ಲೆಲ್ಲೂ ಇವೆ. ಅವು ಭೂಮಿಗೂ ಬರುತ್ತವೆ, ನಮ್ಮನ್ನೂ ಮುಟ್ಟುತ್ತವೆ. ಹಾಗಾದರೆ ಅವು ಅಷ್ಟು ಸಾಮಾನ್ಯವೇ?

ಒಂದು ಉದಾಹರಣೆ; ಒಂದೇ ನಿಮ್ಮ ಬೆರಳನ್ನು ಬಳಸಿ ಒಂದೇ ಒಂದು ಚಿಟಿಕೆ ಹೊಡೆಯಿರಿ. ನೀವು ಚಿಟಿಕೆ ಹೊಡೆಯಲು ತೆಗೆದುಕೊಂಡ ಸಮಯಲ್ಲಿ ಬಿಲಿಯನ್‌ಗಟ್ಟಲೆ ನ್ಯೂಟ್ರಿನೊಗಳು ಬೆರಳ ಸಂದಿಯಲ್ಲಿ ಹಾದು ಹೋಗಿರುತ್ತವೆ! ನ್ಯೂಟ್ರಿನೋಗಳು ಅತಿ ಸೂಕ್ಷ್ಮ ಕಣಗಳಾಗಿರಬಹುದು. ಆದರೆ ಅವು ಮುಖ್ಯ, ಯಾಕೆಂದರೆ ವಿಶ್ವವನ್ನು ಆವರಿಸಿಕೊಂಡಿವೆ. ಈ ನ್ಯೂಟ್ರಿನೊಗಳ ಸಾಂದ್ರತೆಯನ್ನು ತಿಳಿಯುವುರಿಂದ ವಿಶ್ವ ಯಾವ ಪ್ರಮಾಣದಲ್ಲಿ ವಿಸ್ತರಿಸಿಕೊಳ್ಳುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಇಂದು ಅವರಿಗೆ ನೆರವಾಗುತ್ತದೆ.

ಕೃತಿಯ ಲೇಖಕಿಯರು

ನಂದಿತಾ ಜಯರಾಜ್‌ ಹವ್ಯಾಸಿ ವಿಜ್ಞಾನ ಲೇಖಕಿ. ದಿ ಹಿಂದು ಪತ್ರಿಕೆಯಲ್ಲಿ ವೃತ್ತಿ ಆರಂಭಿಸಿದ ಇವರು ನಂತರದಲ್ಲಿ ಬ್ರೇನ್‌ವೇವ್‌ ಹೆಸರಿನ ಪತ್ರಿಕೆಯಲ್ಲಿ ಕೆಲ ಕಾಲ ಕಾರ್ಯನಿರ್ವಹಿಸಿದರು. ನಂತರದಲ್ಲಿ ಕೃತಿಯ ಸಹ ಲೇಖಕಿಯಾದ ಆಶಿಮಾ ಅವರ ಜೊತೆಗೂಡಿ ಕೇರಳ ಮತ್ತು ಕರ್ನಾಟಕದಲ್ಲಿ ವಿವಿಧ ವೈಜ್ಞಾನಿಕ ಯೋಜನೆಗಳನ್ನು ಕೈಗೆತ್ತಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಆಶಿಮಾ ವಿಜ್ಞಾನ ಲೇಖಕಿಯಾಗಿದ್ದು, ಮಕ್ಕಳು ಮತ್ತು ವಯಸ್ಕರಿಗಾಗಿ ವಿಜ್ಞಾನ ಬರವಣಿಗೆ ಮಾಡುತ್ತಿದ್ದಾರೆ.

  • ಪುಸ್ತಕ : 31 ಫ್ಯಾಂಟಾಸ್ಟಿಕ್‌ ಅಡ್ವೆಂಚರ್ಸ್‌ ಇನ್‌ಸೈನ್ಸ್‌
  • ಲೇಖಕರು: ನಂದಿತ ಜಯರಾಜ್‌ ಮತ್ತು ಆಶಿಮಾ ಫ್ರೀಡಾಗ್
  • ಪ್ರಕಾಶಕರು: ಪೆಂಗ್ವಿನ್‌ ರಾಂಡಮ್‌ಹೌಸ್‌ ಇಂಡಿಯಾ
  • ಬೆಲೆ: 399/- ಪುಟ: 128