ಕಾಲಕಾಲಕ್ಕೆ ಕಂಪ್ಯೂಟರ್‌ ಸೆಂಟರ್‌ಗಳು ತೊಟ್ಟ ಹೊಸಹೊಸ ವೇಷಗಳು!

ಟೈಪ್‌ ರೈಟರ್‌ಗಳನ್ನು ಪಕ್ಕಕ್ಕೆ ತಳ್ಳಿ ಡೆಸ್ಕ್‌ಟಾಪ್‌ ಕಂಪ್ಯೂಟರ್‌ ತಂದಿಟ್ಟುಕೊಂಡ ಇನ್‌ಸ್ಟಿಟ್ಯೂಟ್‌ಗಳು, ಕಂಪ್ಯೂಟರ್‌ ಸೆಂಟರ್‌ಗಳಾದವು, ಸೈಬರ್‌ ಕೆಫೆಗಳಾದವು. ಹೀಗೆ ಎರಡು ದಶಕಗಳ ಅವಧಿಯಲ್ಲಿ ಕಂಪ್ಯೂಟರ್‌ ಸೆಂಟರ್‌ಗಳು ಎತ್ತಿದ ಅವತಾರ, ತನ್ನ ಅಸ್ತಿತ್ವವನ್ನು ಕಾಲಕಾಲಕ್ಕೆ ಉಳಿಸಿಕೊಳ್ಳುತ್ತಾ ಬಂದ ಬಗೆ ಅಧ್ಯಯನಾರ್ಹ ಬೆಳವಣಿಗೆ!

ಕರಾವಳಿಯಲ್ಲಿ 90ರ ದಶಕದ ಆರಂಭದ ತನಕವೂ ಹುಲುಸಾಗಿದ್ದ ಟೈಪಿಂಗ್ ಇನ್‌ಸ್ಟಿಟ್ಯೂಟ್‌ಗಳು, ಕ್ರಮೇಣ ಕಂಪ್ಯೂಟರ್ ಸೆಂಟರ್‌ಗಳಾಗಿ, ಸೈಬರ್ ಸೆಂಟರ್‌ಗಳಾಗಿ ಮತ್ತು ಈಗ ಕೋಚಿಂಗ್ ಕ್ಲಾಸ್‌ಗಳೋ ಅಥವಾ ಆಧಾರ್ ಇತ್ಯಾದಿ ಸರ್ಕಾರಿ ಸೇವಾಕೇಂದ್ರಗಳೋ ಆಗಿ ಕಾಲಕ್ಕೆ ತಕ್ಕ ಕೋಲ ಕಟ್ಟುತ್ತಾ ಬಂದಿರುವುದು ಒಂದು ವ್ಯವಹಾರ ಮಾದರಿಯ ಆಡಾಪ್ಟೇಷನ್ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಿಗೆ ಒಳ್ಳೆಯ ಅಧ್ಯಯನ ವಸ್ತು ಆಗಬಲ್ಲುದು.

80ರ ದಶಕದ ತನಕವೂ ಕರಾವಳಿಯ ಪ್ರತಿಯೊಂದು ಊರಿನಲ್ಲೂ ಒಂದು ಟೈಪಿಂಗ್ ಇನ್‌ಸ್ಟಿಟ್ಯೂಟ್‌ ಇರುವುದು ಮಾಮೂಲಾಗಿತ್ತು. 90ರ ದಶಕದಲ್ಲಿ ಡೆಸ್ಕ್ ಟಾಪ್ ಕಂಪ್ಯೂಟರ್‌ಗಳು ಮನೆಗಳೊಳಗೆ ಬರಲಾರಂಭಿಸಿದಾಗ ಸಂಭವಿಸಿದ ಮೊದಲ ಬದಲಾವಣೆ ಎಂದರೆ ಸಾಂಪ್ರದಾಯಿಕ ಟೈಪಿಂಗ್ ಶೈಲಿ ಸಾಯತೊಡಗಿದ್ದು. ಯಾಕೆಂದರೆ, ಕಂಪ್ಯೂಟರ್  ಕೀಬೋರ್ಡಿನಲ್ಲಿ ಟೈಪಿಂಗ್ ಗೆ ಟೈಪ್ ರೈಟರ್ ನ ಶಿಸ್ತು ಬಹಳ ಉಪಯೋಗಕ್ಕೇನೂ ಬರುತ್ತಿರಲಿಲ್ಲ. ಬಹುತೇಕ DOS ಆಪರೇಟಿಂಗ್ ಸಿಸ್ಟಮ್ ಸಾಯುವ ಹೊತ್ತಿಗೆ ಟೈಪ್ ರೈಟರ್ ಕೀಲಿಮಣೆಯೂ ಸತ್ತುಹೋಗಿದೆ. ಟೈಪಿಂಗ್ ಶಿಸ್ತು ಸಾಯತೊಡಗಿದಂತೆ ಅದಕ್ಕೆ, ಮೊದಲ ಬಲಿ ಇದೇ ಟೈಪಿಂಗ್ ಇನ್‌ಸ್ಟಿಟ್ಯೂಟ್‌ಗಳು. ಈ  ಟೈಪಿಂಗ್ ಇನ್‌ಸ್ಟಿಟ್ಯೂಟ್‌ಗಳು ಈ ಬೆಳವಣಿಗೆಯಿಂದ ಎದೆಗುಂದಲಿಲ್ಲ. ಬದಲಾಗಿ, ನಿಧಾನಕ್ಕೆ ಟೈಪ್‌ರೈಟರ್‌ಗಳನ್ನು ಮೂಲೆಗೆ ಸರಿಸಿ ಕಂಪ್ಯೂಟರ್‌ಗಳನ್ನು ತಂದಿಟ್ಟುಕೊಂಡು, DOS, ವಿಂಡೋಸ್ ಆಪರೇಟಿಂಗ್ ಸಿಸ್ಟಮ್‌ಗಳನ್ನು ಹೇಳಿಕೊಡಲಾರಂಭಿಸಿದವು. ಜೊತೆಗೆ BASIC, C, C+, COBAL, CAD, JAVA ಎಂದೆಲ್ಲ ಪ್ರೋಗ್ರಾಮಿಂಗ್ ಕಡೆ ಹೆಚ್ಚು ಒತ್ತುಕೊಟ್ಟ ಸರ್ಟಿಫಿಕೇಷನ್  ಕೋರ್ಸ್‌ಗಳು ಅಲ್ಲಿ ಆರಂಭಗೊಂಡವು.

          ಒಂದು ಹಂತದಲ್ಲಿ ಫಾರ್ಮಲ್ ಶಿಕ್ಷಣವಾಗಿ ಕಂಪ್ಯೂಟರ್ ಕೋರ್ಸ್‌ಗಳು ಶಾಲೆ-ಕಾಲೇಜುಗಳ ಅಕಾಡೆಮಿಕ್ ಕರಿಕ್ಯುಲಂ ಅನ್ನು ಪ್ರವೇಶಿಸ ತೊಡಗಿದಾಗ, BCA, MCA ಗಳು ಪದವಿಗಳಾದಾಗ, ಮತ್ತೆ ತಳತಪ್ಪಿದ ಕಂಪ್ಯೂಟರ್ ಸೆಂಟರ್‌ಗಳ ಕೈಹಿಡಿದದ್ದು ಇಂಟರ್ನೆಟ್! ಈ ಹಂತದಲ್ಲಿ ಸುಮಾರಿಗೆ 2000ನೇ ಇಸವಿಯ ಪ್ರವೇಶಕಾಲದಲ್ಲಿ ಅಂದರೆ 1998-99 ಹೊತ್ತಿಗೆ Y2K ಎಂಬ ಗಾಳಿಗುಳ್ಳೆ ಎಬ್ಬಿಸಿದ ಸುಳಿಗಾಳಿ ಉದ್ಯೋಗ ಮಾರುಕಟ್ಟೆಯನ್ನು ಷೇರು ಮಾರುಕಟ್ಟೆಯೋಪಾದಿಯಲ್ಲಿ ಏರಿಳಿಸಿದಾಗಲೂ  ಅದರ ಭರಪೂರ ಲಾಭ ಎತ್ತಿದ್ದು ಇದೇ ಕಂಪ್ಯೂಟರ್ ಸೆಂಟರ್ ಗಳು.

          1995ರಲ್ಲಿ ಭಾರತದಲ್ಲಿ ಇಂಟರ್ನೆಟ್ ಯುಗ ಆರಂಭಗೊಂಡಾಗ ಈ ಕಂಪ್ಯೂಟರ್ ಸೆಂಟರ್‌ಗಳೇ ಬದಲಾಗಿ ಇಂಟರ್ನೆಟ್ ಬಳಕೆಗೆ ಗಂಟೆ ಲೆಕ್ಕದಲ್ಲಿ ಶುಲ್ಕ ವಿಧಿಸುವ “ಸೈಬರ್ ಸೆಂಟರ್” ಗಳಾದವು. ಜೊತೆಗೆ, ಕಲಿಕೆಯ ಮುಂದುವರಿಕೆಗಾಗಿ HTML,  ಜಾವ ಸ್ಕ್ರಿಪ್ಟ್ ಎಂದೋ ಅಥವಾ ವೆಬ್ ಡಿಸೈನಿಂಗ್, ವೆಬ್ ಡೆವಲಪ್‌ಮೆಂಟ್ ಎಂದೋ ಸರ್ಟಿಫಿಕೇಷನ್ ಕೋರ್ಸ್‌ಗಳನ್ನು ಆರಂಭಿಸಿದವು. ಈ ನಡುವೆ DTP, ಪೇಜ್ ಮೇಕಿಂಗ್, ಫೋಟೊ ಎಡಿಟಿಂಗ್, ಆನಿಮೇಷನ್, ಒರಾಕಲ್, ಫಿನಾಕಲ್ ಎಂದೆಲ್ಲ ಹೊಸ ಹೊಸ ವಿಶೇಷ ಪರಿಣತಿ ಕವಲುಗಳಿಗೆ ಸರ್ಟಿಫಿಕೇಷನ್ – ಡಿಪ್ಲೋಮಾ ಕೋರ್ಸ್ ಗಳು ಹುಟ್ಟಿಕೊಂಡವು.

          90ರ ದಶಕದ ಉತ್ತರಾರ್ಧದಲ್ಲಿ ಮೊಬೈಲ್ ಫೋನ್‌ಗಳು ಭಾರತದಲ್ಲಿ ಅವತರಿಸಿದಾಗ ಇದೇ ಕಂಪ್ಯೂಟರ್ ಸೆಂಟರ್‌ಗಳು ಮೊಬೈಲ್ ರಿಪೇರಿ-ಸರ್ವೀಸ್ ಸೆಂಟರ್‌ಗಳೂ ಆಗಿದ್ದಿದೆ. ಈ ಎಲ್ಲ ಕೋರ್ಸ್‌ಗಳನ್ನು ಸರ್ಟಿಫಿಕೇಟ್ ಕೋರ್ಸ್‌ಗಳಾಗಿಯೇ ನಡೆಸುತ್ತಾ ಬಂದಿದ್ದರಿಂದ ಈ “ಸೆಂಟರ್” ಗಳು ಬಹುತೇಕ ಅಧಿಕೃತ ಖಾಸಗಿ ಶಿಕ್ಷಣ ಕೇಂದ್ರಗಳಂತೆಯೇ ಕಾರ್ಯಾಚರಿಸುತ್ತಿದ್ದವು. ಮೊದಲು ಟೈಪಿಂಗ್ ಇನ್ಸ್ಟಿಟ್ಯೂಟ್ ಮಾಲಕ ಅದರ ಪ್ರಿನ್ಸಿಪಾಲ್ ಆಗಿದ್ದರೆ, ಈಗ ಕಂಪ್ಯೂಟರ್ ಸೆಂಟರ್ ಮಾಲಕನೇ ಅದರ ಪ್ರಿನ್ಸಿಪಾಲ್!

          2009ರ ಹೊತ್ತಿಗೆ ಸ್ಮಾರ್ಟ್‌ಫೋನ್‌ಗಳು ಕಂಪ್ಯೂಟರ್ ಜಗತ್ತನ್ನು ಆವರಿಸಿಕೊಳ್ಳ ತೊಡಗಿದಾಗ ಇದೇ “ಸೆಂಟರ್” ಗಳು ಮೊಬೈಲ್ ಆಪ್ಲಿಕೇಷನ್‌ಗಳ ತಯಾರಿ – ಸ್ಮಾರ್ಟ್‌ಫೋನ್ ದುರಸ್ಥಿಯನ್ನು ನೆಚ್ಚಿಕೊಂಡು ಮುಂದುವರಿಯುತ್ತಿವೆ.

          ಈ ಅಂದಾಜು 40 ವರ್ಷಗಳ ಪ್ರಯಾಣದಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಈ “ಸೆಂಟರ್”ಗಳು ಯಾವತ್ತೂ ಬದಲಾಗುತ್ತಾ ಬಂದ ತಂತ್ರಜ್ಞಾನಕ್ಕೆ ತನ್ನನ್ನು ತಾನು ಹೊಂದಿಸಿಕೊಂಡು, ಅದರ ಜೊತೆಗೆ ಏಗುವಲ್ಲಿ ತಪ್ಪಿ ಬೀಳಲಿಲ್ಲ. ಹಾಗಾಗಿಯೇ ಈ ಯಾನ ಅಧ್ಯಯನ ಯೋಗ್ಯ.

ಇದನ್ನೂ ಓದಿ |ಆಡಾಡ್ತಾ ಕಲಿತು, ಕಂಪ್ಯೂಟರ್ ಕ್ಲಾಸಿನವರ ಹೊಟ್ಟೆಗೆ ಹೊಡೆದದ್ದು!

          ಅದೇ ವೇಳೆ ಈ ಇಡಿಯ ಪ್ರಕ್ರಿಯೆಯಲ್ಲಿ ಈ ಸೆಂಟರ್‌ಗಳಿಗೆ “ಕಲಿಕೆ” ಗೆ ಎಂದು ಹೋಗುವ ಮನೋಸ್ಥಿತಿಯೂ ಅಧ್ಯಯನ ಯೋಗ್ಯ. ಏಕೆಂದರೆ, ಇಂತಹ ಬಹುತೇಕ ಕೋರ್ಸ್‌ಗಳು ಇಂಟರ್ನೆಟ್ ನಲ್ಲಿ ಅಥವಾ ಪುಸ್ತಕ ರೂಪದಲ್ಲಿ ಮುಕ್ತವಾಗಿ ಕಲಿಕೆಗೆ ಲಭ್ಯವಿವೆ. ಜೊತೆಗೆ ಈ ಸೆಂಟರ್‌ಗಳಲ್ಲಿ ಕಲಿತು ಸರ್ಟಿಫಿಕೇಟುಗಳನ್ನು ಪಡೆದುಕೊಂಡ ಬಳಿಕವೂ, ಒಬ್ಬ ವ್ಯಕ್ತಿ ತನ್ನ ಕಸುಬಿನಲ್ಲಿ ಪರಿಣತನಾಗಲು ಆ ಟೂಲ್ ಬಳಸಿಕೊಂಡು ಕೆಲಸ ಮಾಡಿದಾಗಲಷ್ಟೇ ಸಾಧ್ಯ (ಉದಾ: ಫೋಟೊಶಾಪ್, ಕೊರೆಲ್ ನಂತಹ ವಿನ್ಯಾಸ ಸಂಬಂಧಿ ಸಾಪ್ಟ್‌ವೇರ್‍‌‌‌ಗಳು). ಹಾಗಿದ್ದೂ ಜನ ಇಂತಹ ಸೆಂಟರ್ ಗಳಿಗೆ ಮುಗಿಬೀಳುವುದು ಈಹೊತ್ತಿಗೂ ಕಡಿಮೆ ಆಗಿಲ್ಲ.

( ಮುಂದಿನ ಸಂಚಿಕೆಯಲ್ಲಿ: ವರದಿಗಾರಿಕೆಯ ಮಿಂಚುಅಂಚೆ)