ಕಚೇರಿ ಪ್ರಿಂಟರ್‌ಗಳ ಮೂಲಕ ಕಂಪನಿ ನೆಟ್‌ವರ್ಕ್‌ಗೆ ನುಸುಳುತ್ತಿರುವ ಹ್ಯಾಕರ್‌ಗಳು

ಇದು ಇಂಟರ್ನೆಟ್‌ ಆಫ್‌ ಥಿಂಗ್ಸ್‌ ಸೃಷ್ಟಿಸಿದ ಅವಕಾಶ. ಇಂರ್ಟನೆಟ್‌ ಮೂಲಕ ಹಲವು ಸಾಧನಗಳನ್ನು ಪರಸ್ಪರ ಬೆಸೆಯುವ ಈ ತಂತ್ರ ಈಗ ಹ್ಯಾಕರ್‌ಗಳಿಗೆ ಕನ್ನ ಹಾಕುವುದಕ್ಕೆ ಸುಲಭ ಮಾರ್ಗವಾಗಿ ಪರಿಣಮಿಸಿದೆ

  • ಟೆಕ್‌ಕನ್ನಡ ಡೆಸ್ಕ್‌

ಹೀಗೆ ಆತಂಕಪಡುವಂತೆ ಮಾಡಿರುವುದು ರಷ್ಯಾದ ಹ್ಯಾಕರ್‌ಗಳು. ರಷ್ಯಾದ ಗೂಢಚಾರಿ ಸಂಸ್ಥೆಗಳ ಹ್ಯಾಕರ್‌ಗಳಿವರು. ಮಿಲಿಟರಿ ಇಂಟೆಲಿಜೆನ್ಸ್‌ ಏಜೆನ್ಸಿ ಜಿಆರ್‌ಯುನೊಂದಿಗೆ ಸಂಪರ್ಕ ಹೊಂದಿರುವ ಈ ಹ್ಯಾಕರ್‌ಗಳು ಸ್ಟ್ರೋಟಿನಿಯಂ, ಫ್ಯಾನ್ಸಿ ಬಿಯರ್‌, ಎಪಿಟಿ28 ಹೆಸರುಗಳಿಂದ ಪರಿಚಿತ. ಸುಮಾರು ಹನ್ನೆರಡು ವರ್ಷಗಳ ಸಕ್ರಿಯವಾಗಿರುವ ಈ ಗುಂಪುಗಳು ಕಳೆದ ಮೂರು ವರ್ಷಗಳ ಡೆಮೊಕ್ರಟಿಕ್‌ ನ್ಯಾಷನಲ್‌ ಕಮಿಟಿ, ಉಕ್ರೇನ್‌, ಯುರೋಪ್‌ ಮತ್ತು ಉತ್ತರ ಅಮೆರಿಕದ ರಾಜಕೀಯ ಗುಂಪುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ.

ಈಗ ಈ ಹ್ಯಾಕರ್‌ ಗುಂಪುಗಳು ವಿಒಐಪಿ ಅಂರೆ ವಾಯ್ಸ್‌ ಓವರ್‌ ಇಂಟರ್ನೆಟ್‌ ಪ್ರೊಟೊಕಾಲ್‌, ವೈಫೈ ಸೌಲಭ್ಯವಿರುವ ಪ್ರಿಂಟರ್‌, ವಿಡಿಯೋ ಡೀಕೋಡರ್‌ಗಳನ್ನು ಬಳಸಿಕೊಂಡು ಕಾರ್ಪೋರೇಟ್‌ ಕಂಪನಿಗಳ ನೆಟ್‌ವರ್ಕ್‌ ನಿಯಂತ್ರಣವನ್ನು ಪಡೆದುಕೊಳ್ಳುತ್ತಿದ್ದಾರೆ.

ಸಾಮಾನ್ಯವಾಗಿ ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌ಗಳ ಪಾಸ್‌ವರ್ಡ್‌ ವಿಷಯದಲ್ಲಿ ಅತಿ ಹೆಚ್ಚು ಎಚ್ಚರಿಕೆ ವಹಿಸುವ ಈ ಸಂಸ್ಥೆಯ ತಂತ್ರಜ್ಞರು, ಪ್ರಿಂಟರ್‌, ಕ್ಯಾಮೆರಾ, ಡೀಕೋಡಕರ್‌ಗಳ ವಿಷಯದಲ್ಲಿ ತಳೆಯುವ ಉಪೇಕ್ಷೆ ಹ್ಯಾಕರ್‌ಗಳಿಗೆ ನೆಟ್‌ವರ್ಕ್‌ ಒಳಗೆ ನುಸುಳುವುದಕ್ಕೆ ಅನುಕೂಲ ಮಾಡಿಕೊಡುತ್ತದೆ. ಹೀಗಾಗುವುದಕ್ಕೆ ಕಾರಣ, ಪಾಸ್‌ವರ್ಡ್‌ಗಳು ಒಂದೋ, ಸಂಸ್ಥೆಗಳು ನಿಗದಿ ಮಾಡಿದ-ಡೀಫಾಲ್ಟ್‌ ಪಾಸ್‌ವರ್ಡ್‌ಗಳಾಗಿರುತ್ತವೆ ಅಥವಾ PASSWORD ಪದವನ್ನೇ ಬಳಸುತ್ತಾರೆ. ಇದು ನೆಟ್‌ವರ್ಕ್‌ ಒಳಗೆ ನುಸುಳುವುದಕ್ಕೆ ಸುಲಭ ದಾರಿಯನ್ನು ಮಾಡಿಕೊಡುತ್ತದೆ ಎಂದು ಅಧ್ಯಯನ ನಡೆಸಿದ ಮೈಕ್ರೋಸಾಫ್ಟ್‌ ಸಂಸ್ಥೆ ಎಂದಿದೆ.

ಒಮ್ಮೆ ಈ ಹ್ಯಾಕರ್‌ಗಳಿಗೆ ನೆಟ್‌ವರ್ಕ್‌ ಒಳಗೆ ಪ್ರವೇಶ ದೊರೆತರೆ, ಉಳಿದ ಹೆಚ್ಚು ಭದ್ರತೆ ಇಲ್ಲದ ಸಾಧನಗಳ ಮೂಲಕ ಸರ್ವರ್‌ಗಳ ನಿಯಂತ್ರಣವನ್ನು ಕಂಡುಕೊಂಡು ಉಳಿದ ಸಾಧನಗಳಿಗೆ ಕನ್ನ ಹಾಕುತ್ತಾರೆ. ಈ ಮೂಲಕ ಭಾರಿ ಪ್ರಮಾಣದ ಡಾಟಾವನ್ನು ಕಳವು ಮಾಡುತ್ತಾರೆ.

ಇದನ್ನೂ ಓದಿ |ಸೆಕ್ಷನ್ 370 ರದ್ದು ಚರ್ಚೆ| ಸೋಷಿಯಲ್‌ ಮೀಡಿಯಾ ಮೇಲೆ ಕಣ್ಣಿಟ್ಟಿರುವ ಸರ್ಕಾರ

ಫ್ಯಾನ್ಸಿ ಬಿಯರ್‌ ಹ್ಯಾಕರ್‌ ಗುಂಪು, ನುಸುಳಿದ ನೆಟ್‌ವರ್ಕ್‌ನಿಂದ ಡೆಲಿವರಿಯಾದ 1400 ನೋಟಿಫಿಕೇಷನ್‌ಗಳು ಶೇ. 20ರಷ್ಟು ಸರ್ಕಾರೇತರ ಸಂಘಟನೆಗಳು, ಚಿಂತಕರ ಗುಂಪು, ರಾಜಕೀಯ ಸಂಘಟನೆಗಳಿಗೆ ಸಂಬಂಧಿಸಿದ್ದು. ಶೇ. 80ರಷ್ಟು ಸರ್ಕಾರ, ತಂತ್ರಜ್ಞಾನ, ಸೇನೆ, ವೈದ್ಯಕೀಯ, ಶಿಕ್ಷಣ ಮತ್ತು ಎಂಜಿನಿಯರಿಂಗ್ ವಲಯಗಳಿಗೆ ಸಂಬಂಧಿಸಿದವು. ಇನ್ನು ಸ್ಟ್ರೋಂಟಿಯಮ್‌ ಒಲಿಂಪಿಕ್‌ ಸಂಘಟನಾ ಸಮಿತಿ, ಮಾದಕ ಪದಾರ್ಥಗಳ ವಿರೋಧಿ ಸಂಸ್ಥೆಗಳ ನೆಟ್‌ವರ್ಕ್‌ಗಳ ಮೇಲೆ ದಾಳಿ ನಡೆಸಿರುವುದನ್ನು ಮೈಕ್ರೋಸಾಫ್ಟ್‌ ಪತ್ತೆ ಮಾಡಿದೆ.