ಐಸಾಕ್‌ ನ್ಯೂಟನ್‌ ಕ್ಯಾಲ್ಕ್ಯುಲಸ್‌ ಜನಕ ಎಂಬುದು ಅರ್ಧಸತ್ಯವೆ?

ಯಾವುದೇ ವಿಜ್ಞಾನದ ಸಿದ್ಧಾಂತ ಅಥವಾ ಶಾಖೆಯನ್ನು ಸಮರ್ಥವಾಗಿ ಬೆಳೆಸಿದ, ವಿನ್ಯಾಸ ಮಾಡಿದ, ಬೆಳೆಸಿದ ಶ್ರೇಯ ಒಬ್ಬ ವಿಜ್ಞಾನಿಯದ್ದಾಗಿರುವುದಿಲ್ಲ. ಅಡಿಪಾಯ ಒಬ್ಬರು ಹಾಕಿದರೂ ಅದನ್ನು ವಿಸ್ತರಿಸಿದ ಖ್ಯಾತಿ ಕೆಲವರದ್ದಾಗಿರುತ್ತದೆ. ಕಲನಶಾಸ್ತ್ರ ಎಂದ ಕೂಡಲೇ ನಾವು ನ್ಯೂಟನ್‌ ನೆನಪಿಸಿಕೊಳ್ಳುತ್ತೇವೆ. ಆದರೆ ಇನ್ನೊಬ್ಬ ಜಮರ್ನಿ ವಿಜ್ಞಾನಿಯ ಕೊಡುಗೆಯೂ ಅಪಾರ ಎನ್ನುತ್ತದೆ ಈ ಅಂಕಣ ಬರಹ

ಕ್ಯಾಲ್ಕ್ಯುಲಸ್ ನ (ಕಲನ ಶಾಸ್ತ್ರ) ದ ಮಹತ್ವ ಎಷ್ಟೆಂದರೆ ಬಹುಶಃ ನಾವು ಉಪಯೋಗಿಸುತ್ತಿರುವ ಪ್ರತಿಯೊಂದು ವಸ್ತುವಿನ ವಿನ್ಯಾಸದ ಸಂದರ್ಭದಲ್ಲಿ ಅದರ ಬಳಕೆಯನ್ನು ಮಾಡಲಾಗುತ್ತದೆ.  ಮೇಲೇರಿದ ಚೆಂಡು ಕೆಳಕ್ಕೆ ಬೀಳುವಾಗ ಅದರ ಚಲನೆಯನ್ನು ಅರ್ಥ ಮಾಡಿಕೊಳ್ಳುವಾಗಲೂ ,  ಅಂತರಿಕ್ಷಕ್ಕೇರುವ ಪ್ರತಿಯೊಂದು ಯಂತ್ರಗಳು ಹೇಗೆ ಕೆಲಸ ಮಾಡಬೇಕೆಂದು ವಿನ್ಯಾಸಗೊಳಿಸಿದಾಗಲೂ ಕಲನಶಾಸ್ತ್ರದ ಉಪಯೋಗವಾಗುತ್ತದೆ.  ಕ್ಯಾಲ್ಕ್ಯುಲಸ್ ನ ಜನಕ ನ್ಯೂಟನ್ ಎಂಬುದೊಂದು ಜನಪ್ರಿಯ ನಂಬಿಕೆ.  ಬಹುಶಃ ಅದು ಅರ್ಧ ಸತ್ಯವೆಂದೂ,  ಅದರ ಸಂಶೋಧನೆಯನ್ನು ಮೊದಲು ಮಾಡಿದ ಯಶಸ್ಸು ಜರ್ಮನಿಯ ಲೀಬ್‍ನಿಝ್ ಸೇರಬೇಕೆಂದೂ ಮಂಡಿಸುವ ಕುತೂಹಲಕಾರಿ ಚರ್ಚೆಯೊಂದು ವಿಜ್ಞಾನದ ಇತಿಹಾಸವನ್ನು ಅಧ್ಯಯನ ಮಾಡುತ್ತಿರುವ ಎಲ್ಲರನ್ನೂ ಕಾಡಿಸಿದೆ. 

1693ರಲ್ಲಿ ಮೊದಲ ಬಾರಿಗೆ ತನ್ನ ’ಪ್ರಿನ್ಸಿಪಿಯಾ ಮ್ಯಾಥಮಾಟಿಕಾ’ ಪುಸ್ತಕದಲ್ಲಿ ನ್ಯೂಟನ್ ಕ್ಯಾಲ್ಕ್ಯುಲಸ್ ನ್ನು ದೀರ್ಘವಾಗಿ ಚರ್ಚಿಸುತ್ತಾನೆ.  ಇದಕ್ಕಿಂತ  ಎಂಟು ವರ್ಷ ಮೊದಲು 1684 ರಲ್ಲೇ  ಲೀಬ್‍ನಿಝ್ ಒಂದು ಪ್ರಬಂಧದಲ್ಲಿ ಇದರ ಬಗ್ಗೆ ಪ್ರಸ್ತಾಪಿಸಿ ಮುಂದಿನ ಸಂಶೋಧನೆಗೆ ನಾಂದಿ ಹಾಡಿದ್ದರು ಎನ್ನುವುದೇ ಈ ವಾಗ್ವಾದದ ಕೇಂದ್ರ ಬಿಂದು. ಪ್ರಬಂಧವನ್ನು ಪ್ರಕಟಿಸುವುದಕ್ಕಿಂತ ಇಪ್ಪತ್ತು ವರ್ಷ ಮೊದಲು ೧೬೬೪ ರಲ್ಲೇ ಲೀಬ್‍ನಿಝ್ ಇದರ ಬಗೆಗಿನ ಚಿಂತನೆ ಪ್ರಾರಂಭಿಸಿದ್ದರು ಎಂದೂ ಹೇಳಲಾಗಿದೆ.  ನ್ಯೂಟನ್ ಗುಂಪು ಇದಕ್ಕೆ ಸಮಜಾಯಿಶಿ ಕೊಡುತ್ತಾ  1666 ರಷ್ಟು ಮೊದಲೇ ನ್ಯೂಟನ್ ’ಫ್ಲಕ್ಸಿಯಾನ್’ ಎಂಬ ಪದವನ್ನು ಬಳಸಿ  ಕ್ಯಾಲ್ಕ್ಯುಲಸ್ ನ ಮೊದಲ ಹೆಜ್ಜೆಗಳನ್ನು ಇಟ್ಟರು ಎಂದು ಹೇಳುತ್ತಾರೆ.  ಒಂದೇ ವಿಷಯದ ಬಗ್ಗೆ ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದು,  ಸರಿಸುಮಾರು ಒಂದೇ ಕಾಲಮಾನದಲ್ಲಿ ಹೊಸ ಸಂಶೋಧನೆಯನ್ನು ಬೆಳಕಿಗೆ ತಂದಿರುವ ಅನೇಕ ಉದಾಹರಣೆಗಳಿವೆ.  ಇಂತಹ ಘಟನೆಗಳಾದಾಗ , ತಾನೇ ಮೊದಲ  ಸಂಶೋಧಕ ಎಂಬ ಪ್ರಾಶಸ್ತ್ಯ ಸಿಗಬೇಕು ಎನ್ನುವ ಚರ್ಚೆ, ವಾಗ್ವಾದ ಮತ್ತು ಜಗಳ ಸಂಶೋಧಕರಲ್ಲೂ ನಡೆಯುತ್ತದೆ.  ಈ ರೀತಿಯ ಜಗಳ ನ್ಯೂಟನ್ ಮತ್ತು  ಲೀಬ್‍ನಿಝ್ ರ ನಡುವೆಯೂ ಆಯಿತು. ಜಗಳ ಇವರಿಬ್ಬರ ನಡುವೆ ಆಯಿತು ಎನ್ನುವುದಕ್ಕಿಂತ ಇವರಿಬ್ಬರ ಗುಂಪುಗಳ ನಡುವೆ ಆಯಿತು ಎನ್ನುವುದು ಸೂಕ್ತವಾದೀತೇನೋ.  ನ್ಯೂಟನ್ ಇಂಗ್ಲೆಂಡ್ ಮತ್ತು ಲೀಬ್‍ನಿಝ್ ಜರ್ಮನಿಗೆ ಸೇರಿದ್ದರಿಂದ ’ರಾಷ್ಟ್ರೀಯ ಗೌರವ’ ದ ಆಯಾಮವೂ ಈ ಚರ್ಚೆ – ಜಗಳದ ಹಿಂದೆ ಕೆಲಸ ಮಾಡಿತ್ತು (ಈಗಲೂ ಈ ಚರ್ಚೆ ನಡೆಯುತ್ತಿದೆ).

ಐಸಾಕ್‌ ನ್ಯೂಟನ್‌

ಲೀಬ್‍ನಿಝ್ ರೇ ಮೊದಲ ಸಂಶೋಧಕರು ಎನ್ನುವುದಕ್ಕೆ ಕೆಲವು ಪುರಾವೆಗಳಿವೆ:

1. ನ್ಯೂಟನ್ ’ಫ್ಲಕ್ಸಿಯಾನ್’ ಗಳೆಂದು ಹೆಸರಿಸಿ ಅವುಗಳನ್ನು ವಿವರಿಸಿ ಹೇಳುವ ಹೆಲವು ವರ್ಷ ಮೊದಲೇ ಲೀಬ್‍ನಿಝ್ ಅವರು ತಮ್ಮ ಕ್ಯಾಲ್ಕ್ಯುಲಸ್ ನ ವಿವರಗಳನ್ನು ಪ್ರಕಟಿಸಿದ್ದರು

2. ಈ ಸಂಶೋಧನೆ ತಾನು ಮಾಡಿದ್ದೆಂದೂ ; ಅದರ  ಹಿಂದೆ ಯಾರ ಪ್ರಭಾವವೂ ಇಲ್ಲವೆಂದು ಲೀಬ್‍ನಿಝ್ ಹಲವು ಸಲ ಹೇಳಿದ್ದರು.  ಸುಮಾರು ವರ್ಷಗಳ ಕಾಲ ಅವರ ಈ ಹೇಳಿಕೆಯನ್ನು ಯಾರೂ ವಿರೋಧಿಸಲಿಲ್ಲ.

ಲೀಬ್‌ನಿಝ್

ಇದೆಲ್ಲದರ ಹಿಂದೆ ನ್ಯೂಟನ್ ಮತ್ತು ಲೀಬ್‍ನಿಝ್ ಅವರ ವ್ಯಕ್ತಿತ್ವದ ಅನೇಕ ಆಯಾಮಗಳೂ, ಆಗಿನ ಸಂದರ್ಭದಲ್ಲಿ ’ಪ್ರಕಟಣೆ’ ಗೆ ಕೊಡುತ್ತಿದ್ದ ಮಹತ್ವ, ಇವುಗಳೂ ಪ್ರಭಾವ ಬೀರುವುದನ್ನು ಗಮನಿಸಬೇಕಿದೆ. ನ್ಯೂಟನ್, ತಮ್ಮ ಬದುಕಿನ ಮೊದಲ ಭಾಗದಲ್ಲಿ ಪ್ರಕಟಿಸಿದ್ದ ’ಬೆಳಕು ಮತ್ತು ಬಣ್ಣಗಳ’ ಬಗೆಗಿನ ಪ್ರಬಂಧದ ಬಗ್ಗೆ ಬಂದ ಟೀಕೆ ಟಿಪ್ಪಣಿಗಳ ಬಗ್ಗೆ ತುಂಬ ನೊಂದುಕೊಂಡಿದ್ದು, ಅವು ’ತನ್ನ ಮನಸ್ಸಿಗೆ ತುಂಬ ಅಶಾಂತಿ’ ಯನ್ನು ತಂದುಕೊಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಈ ಘಟನೆಯಿಂದ ನ್ಯೂಟನ್ ತಮ್ಮ ಇತರ ಸಂಶೋಧನೆಗಳನ್ನು ಪ್ರಕಟಿಸಿಲ್ಲ ಎನ್ನುವ ಊಹೆ ಇದೆ.  ಆದರೆ ತಮ್ಮ ಜೀವನದ್ದುದ್ದಕ್ಕೂ ತನ್ನ ಸಂಶೋಧನೆಗಳಿಗೆ  ’ಬೇರೆಯವರ ಮತ್ತು ಪೂರ್ವಸೂರಿಗಳ ಕಾಣಿಕೆ’ ಇರುವುದನ್ನು ನ್ಯೂಟನ್ ವಿರೋಧಿಸಿಕೊಂಡೇ ಬಂದಿದ್ದರು.

1703ರಲ್ಲಿ ನ್ಯೂಟನ್ ಗುಂಪಿನೊಂದಿಗೆ ಗುರುತಿಸಿಕೊಂಡಿದ್ದ ಜಾರ್ಜ್ ಚೇನಿ ಎಂಬುವರು “On the Inverse Mthod of Fluxions” ಎಂಬ ಪುಸ್ತಕವನ್ನು ಪ್ರಕಟಿಸಿ ಇಂಟಿಗ್ರಲ್ ಕ್ಯಾಲ್ಕುಲಸ್ ನ್ನು ವಿವರಿಸಿದರು. ಈ ಪುಸ್ತಕದ ಕೊನೆಯಲ್ಲಿ ಅವರು “ಕಳೆದ ೨೫ ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಸಾಧಿಸಿದ್ದೆಲ್ಲವೂ ನ್ಯೂಟನ್ ತಮ್ಮ ಸ್ನೇಹಿತರ ಎದುರಿಗೆ ಹಂಚಿಕೊಂಡಿದ್ದ ಸಂಶೋಧನೆಯ ಮೇಲೆಯೇ ನಿಂತಿದೆ’ ಎಂದರು.  ಮುಂದುವರೆಯುತ್ತಾ, ಪ್ರಕಟವಾದ ಸಂಶೋಧನೆಗಳ ಮೂಲ ಸ್ರೋತವೂ ನ್ಯೂಟನ್ ಚಿಂತನೆಯೇ ಆಗಿದೆ ಎಂದರು.  ಇದರ ಹಿಂದಿನ  ಭಾವ ’ಮೂಲ ಚಿಂತನೆ ಇಂಗ್ಲೆಂಡ್ (ನ್ಯೂಟನ್) ನಲ್ಲಿ ಆಗಿದ್ದು, ಪ್ರಕಟಣೆ ಜರ್ಮನಿ (ಲೀಬ್‍ನಿಝ್) ಆಗಿರಬಹುದು; ಹೇಗಿದ್ದರೂ ಪ್ರಕಟಣೆ ಎನ್ನುವುದು ಅಮೂರ್ತ ಕಲ್ಪನೆಯ ಮೂರ್ತ ರೂಪವಷ್ಟೆ’ ಎಂದಾಗಿತ್ತು.

ಬಹುಶಃ ತಮ್ಮ ತಮ್ಮ ಸಂಶೋಧನೆಗಳು ಒಂದೇ ರೀತಿಯಲ್ಲಿರಬಹುದೆಂಬ ಸಂಶಯ ಇಬ್ಬರನ್ನೂ ಕಾಡಿತ್ತೆಂದು ಕಾಣುತ್ತದೆ.  ಆದರೆ ನ್ಯೂಟನ್ ಅವರ ಪ್ರಾಮುಖ್ಯತೆ ಇಂಗ್ಲೆಂಡಿನ ಸಮುದ್ರ ತೀರವನ್ನು ದಾಟಿ ಯೂರೋಪಿನ ಮಧ್ಯಭಾಗವನ್ನು  ತಲುಪಲಾರದು ಎಂಬ ಭಾವನೆ ಲೀಬ್‍ನಿಝ್ ಗೆ ಇದ್ದಂತೆ ತೋರುತ್ತದೆ. ಈ ಮಧ್ಯೆ ಪಿಯರೆ ವಾರಿನ್ಯೋನ್ ಎಂಬ ಗಣಿತದ ಪ್ರೊಫೆಸರ್ ಲೀಬ್‍ನಿಝ್ ಅವರ ಸಿದ್ಧಾಂತಗಳನ್ನೊಳಗೊಂಡ ಹೊಸ ಗಣಿತವನ್ನು ವಿಶ್ವವಿದ್ಯಾನಿಲಯದಲ್ಲಿ ಪಾಠ ಮಾಡುವುದಕ್ಕೆ ಪ್ರಾರಂಭಿಸಿದ ಮೇಲೆ ಲೀಬ್‍ನಿಝ್ ಅವರ ಹೆಸರು ಜನಜನಿತವಾಯಿತು.

ಆದರೆ ಇವರಿಬ್ಬರ ನಡುವಿನ ಮುಸುಕಿನ ಜಗಳ ಮುಂದಲೆಗೆ ಬಂದದ್ದು ಜಾನ್ ಕೀಲ್ ಎನ್ನುವವರು ಬರೆದ “On the laws of Centripetal Force” ಎನ್ನುವ ಪುಸ್ತಕ ಪ್ರಕಟವಾದ ಬಳಿಕ.  ಆ ಪುಸ್ತಕದಲ್ಲಿ ಕೀಲ್ ಅವರು ಕ್ಯಾಲ್ಕ್ಯುಲಸ್ ನ ’ಮೊದಲ ಸಂಶೋಧಕ ನ್ಯೂಟನ್ ಎಂದೂ ಹೇಳುವುದಲ್ಲದೆ, ಲೀಬ್‍ನಿಝ್ ರ ಸಂಶೋಧನೆ ಹೊಸದಲ್ಲವೆಂದೂ, ಅದು  ನ್ಯೂಟನ್ ಸಂಶೋಧನೆಯನ್ನು ಬರೇ ಹೆಸರು ಮತ್ತು ಸಂಜ್ಞೆಗಳನ್ನು ಬದಲಾಯಿಸಿ ಬರೆದಿದ್ದೆಂದೂ ಹೇಳುವುದರ ಮೂಲಕ ಕೃತಿಚೌರ್ಯದ ಆಪಾದನೆಯನ್ನು ನೇರವಾಗಿ ಮಾಡಲಾಯಿತು.

ಈ ಆಪಾದನೆಯಿಂದ ಕೆರಳಿದ ಲೀಬ್‍ನಿಝ್ ರಾಯಲ್ ಸೊಸೈಟಿಗೆ ದೂರು ಸಲ್ಲಿಸಿದರು.  ನ್ಯೂಟನ್ ರಾಯಲ್ ಸೊಸೈಟಿಯ ಅಧ್ಯಕ್ಷರಾಗಿದ್ದರೂ, ತನಗೆ ಅನ್ಯಾಯವಾಗದಂತೆ ಸೊಸೈಟಿ  ನಡೆದುಕೊಂಡು, ತನ್ನ ನೈತಿಕತೆಯನ್ನು ಕಾಪಾಡಿಕೊಳ್ಳುತ್ತದೆ ಎಂದು ಅವರು ನಂಬಿದ್ದರು ಎಂದು ಕಾಣುತ್ತದೆ.  ಆದರೆ ನ್ಯೂಟನ್ ಗೆ ’ಸಂಶೋಧನೆಯಲ್ಲಿ ಮೊದಲಿಗನೆಂಬ ಪ್ರಾಶಸ್ಯ’ ದ ಬಗ್ಗೆ ಎಲ್ಲಿಲ್ಲದ ವ್ಯಾಮೋಹ.  ಅವರು ಈ ವಾಗ್ವಾದವನ್ನು ಬಗೆಹರಿಸಲು ಒಂದು ಅಂತಾರಾಷ್ಟ್ರೀಯ ಸಮಿತಿಯನ್ನು ರಚಿಸಿದರು. ಕೊನೆಗೂ ನ್ಯೂಟನ್ ಅವರೇ ’ಕ್ಯಾಲ್ಕ್ಯುಲಸ್’ ನ ಮೊದಲ ಸಂಶೋಧಕರು  ಎಂಬ ತೀರ್ಮಾನವನ್ನು ಸಮಿತಿ ತೆಗೆದುಕೊಂಡಿತು. 

ಇದನ್ನೂ ಓದಿ : ಡಿಟಿಪಿಗೇನು ಗೊತ್ತು ಮೊಳೆ ಜೋಡಿಸುವ ಸಂಭ್ರಮ?!

ರಸಾಯನಶಾಸ್ತ್ರಜ್ಞ ಕಾರ್ಲ್ ಜೆರಾಸಿ ಇದೇ ಘಟನೆಯನ್ನು ಆಧರಿಸಿ ’ಕ್ಯಾಲ್ಕ್ಯುಲಸ್’ ಎಂಬ ನಾಟಕವನ್ನು ರಚಿಸಿದ್ದಾರೆ.  ಈ ನಾಟಕವನ್ನು ರಚಿಸಲು ಅವರು ಸುಮಾರು ಎರಡು ವರ್ಷಗಳ ಕಾಲ ಶ್ರಮಿಸಿ ರಾಯಲ್ ಸೊಸೈಟಿ ಮತ್ತು ಇತರೆಡೆ ದೊರೆತ ಸಾಕ್ಷ್ತಾಧಾರಗಳನ್ನು ಆಧರಿಸಿ ವಿಶಿಷ್ಟವಾದ ನಾಟಕವನ್ನು ಹೆಣೆದಿದ್ದಾರೆ. ’ನ್ಯೂಟನ್ ಅವರನ್ನು ದೋಷಿಯ ಸ್ಥಾನದಲ್ಲಿರಿಸುವುದು ನನ್ನ ಗುರಿಯಲ್ಲ;   ಅವರೂ  ಎಲ್ಲರ ತರಹ ಉಪ್ಪು ಖಾರ ತಿಂದ ಮನುಷ್ಯ. ಆದ್ದರಿಂದ ಮನುಷ್ಯ ಸಹಜವಾದ ಗುಣ ದೋಷಗಳನ್ನು ಅವರೂ ಹೊಂದಿದ್ದರು ಎನ್ನುತ್ತಾರೆ’ ಜೆರಾಸಿ.

ಆದರೆ ಕಾಲದ ಮಹಿಮೆ ಹೇಗಿದೆಯೆಂದರೆ, ಇಂದು ಲೀಬ್‍ನಿಝ್ ಅವರು ಮೊದಲು ಉಪಯೋಗಿಸಿದ್ದ ‘ಕ್ಯಾಲ್ಕ್ಯುಲಸ್’ ಪದವನ್ನು ಇಂದೂ ಬಳಸುತ್ತಿದ್ದು, ನ್ಯೂಟನ್ ಅವರು ಬಳಸಿದ್ದ ’ಫ್ಲಕ್ಸಿಯಾನ್’ ಪದ ಇತಿಹಾಸದ ಬುಟ್ಟಿಗೆ ಸೇರಿದೆ.