ಇಸ್ರೋ-ಶಿಯೋಮಿ ಒಪ್ಪಂದ, ನಿಮ್ಮ ಫೋನ್‌ಗಳಿಗೆ ಬರಲಿದೆ ಜಿಪಿಎಸ್‌ ಬದಲಿಗೆ ನಾವಿಕ್‌

ಜಿಯೋ ಪೊಸಿಷನಿಂಗ್‌ ಸಿಸ್ಟಮ್‌, ಜಿಪಿಎಸ್‌ ತಂತ್ರಜ್ಞಾನ ನಮ್ಮ ಭೌಗೋಳಿಕ ಉಪಸ್ಥಿತಿಯನ್ನು ತಿಳಿಸುವ ತಂತ್ರಜ್ಞಾನ. ಆದರೆ ಅಮೆರಿಕದ ವ್ಯವಸ್ಥೆ. ಈ ಜಿಪಿಎಸ್‌ನಂತೆಯೇ ಕೆಲಸ ಮಾಡುವ ಆದರೆ, ದೇಸೀ ಆವೃತ್ತಿಯೊಂದನ್ನು ಇಸ್ರೋ ಸಿದ್ಧ ಮಾಡಿದೆ. ಏನಿದು?

Pic Courtesty : Dataquest

ನೀವು ಪ್ರವಾಸ ಮಾಡುವ, ನಿಮ್ಮ ಆನ್‌ಲೈನ್‌ ಆರ್ಡರ್‌ ಅನ್ನು ಡೆಲಿವರಿ ಮಾಡುವಾಗ ಬಳಕೆಯಾಗುವುದು ಮ್ಯಾಪ್‌, ಇದು ಕಾರ್ಯನಿರ್ವಹಿಸುವುದು ಜಿಪಿಎಸ್‌ ತಂತ್ರಜ್ಞಾನವನ್ನು ಆಧರಿಸಿ. ಈ ತಂತ್ರಜ್ಞಾನಕ್ಕೆ ದೇಸೀ ಸ್ಪರ್ಶ ಲಭ್ಯವಾಗುತ್ತಿದೆ. ಇಸ್ರೋ ಶ್ರಮದ ಫಲವಾಗಿ ನಾವಿಕ್‌ ( ನ್ಯಾವಿಗೇಷನ್‌ ವಿತ್‌ ಇಂಡಿಯನ್‌ ಕಾನ್‌ಸ್ಟಲೇಷನ್‌ನ ಹ್ರಸ್ವರೂಪ) ಎಂಬ ಜಿಪಿಎಸ್‌ ವ್ಯವಸ್ಥೆ ಸಿದ್ಧವಾಗಿದೆ. ಇದನ್ನು ಭಾರತೀಯ ಮೊಬೈಲ್‌ ಫೋನ್‌ಗೆ ಅಳವಡಿಸುವ ನಿಟ್ಟಿನಲ್ಲಿ ಶಿಯೋಮಿಯೊಂದಿಗೆ ಮಾತುಕತೆ ನಡೆಯುತ್ತಿದೆ.

ನಿಖರವಾದ ಕ್ಷಣಕ್ಷಣದ ಮಾಹಿತಿಯನ್ನು ಒದಗಿಸುವಷ್ಟು ಸಮರ್ಥವಾಗಿರುವ ಈ ಸೇವೆ ನೀಡುವುದಕ್ಕೆ ಸಮರ್ಥವಾದ ಚಿಪ್‌ಸೆಟ್‌ಗಳನ್ನು ಕಾಲ್‌ಕಾಂ ಸಂಸ್ಥೆ ಸಿದ್ಧಪಡಿಸಿದೆ. ಈ ಚಿಪ್‌ಸೆಟ್‌ಗಳನ್ನು ಶಿಯೋಮಿ ತನ್ನ ಫೋನ್‌ಗಳಲ್ಲಿ ಅಳವಡಿಸುವ ಕುರಿತು ಒಪ್ಪಂದದ ಮಾತುಕತೆ ನಡೆಯುತ್ತಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

ಈಗಾಗಲೇ ಯಶಸ್ವಿ ಪ್ರಯೋಗಗಳು ನಡೆದಿದ್ದು, ಕಳೆದ ಅಕ್ಟೋಬರ್‌ನಲ್ಲಿ ದೆಹಲಿಯಲ್ಲಿ ನಡೆದ ಇಂಡಿಯಾ ಮೊಬೈಲ್‌ ಕಾಂಗ್ರೆಸ್‌ನಲ್ಲಿ ಇದನ್ನು ಪ್ರದರ್ಶಿಸಲಾಗಿದೆ.

ವಾಸ್ತವದಲ್ಲಿ ಇದನ್ನು ಇಂಡಿಯನ್‌ ರೀಜಿನಲ್‌ ನ್ಯಾವಿಗೇಷನ್‌ ಸ್ಯಾಟಲೈಟ್‌ ಸಿಸ್ಟಮ್‌ ಎಂದು ಕರೆಯಲಾಗುತ್ತದೆ. ಇದರ ಮೂಲಭೂತವಾದ ಕೆಲಸ ಭೌಗೋಳಿಕ ಉಪಸ್ಥಿತಿಯನ್ನು ನೇರ, ಅದೇ ಸಮಯಕ್ಕೆ ಇನ್ನೊಂದು ತುದಿಯಲ್ಲಿರುವ ವ್ಯವಸ್ಥೆಗೆ ಮಾಹಿತಿಯನ್ನು ರವಾನಿಸುವುದು. ನಾವಿಕ್‌ ಎರಡು ರೀತಿಯ ಸಂವಹನಕ್ಕೆ ಮಾಧ್ಯಮವಾಗಲಿದೆ ಎಂದು ಇಸ್ರೋ ತಿಳಿಸಿದೆ.

1 . ಸ್ಟ್ಯಾಂಡರ್ಡ್‌ ಪೊಸಿಷನಿಂಗ್‌ ಸರ್ವಿಸ್‌ – ಇದು ಎಲ್ಲಾ ಬಳಕೆದಾರರು ಲಭ್ಯವಿರುವ ಸೇವೆ

2. ರಿಸ್ಟ್ರಿಕ್ಟಿಡ್‌ ಸರ್ವಿಸ್‌ – ಗೌಪ್ಯವಾಗಿರುತ್ತದೆ ಮತ್ತು ಸೀಮಿತ ಹಾಗೂ ಅಧಿಕೃತ ಬಳಕೆದಾರರಿಗೆ (ಅಂದರೆ ಸೇನೆ, ಬೇಹುಗಾರಿಕೆಗೆ) ಮಾತ್ರ ಲಭ್ಯವಿರುವ ಸೇವೆ.

ಅತ್ಯಂತ ನಿಖರವಾದ ಮಾಹಿತಿಯನ್ನು ಇದು ನೀಡಬಲ್ಲದು ಎಂದು ಇಸ್ರೋ ಹೇಳಿದೆ. ಜಿಪಿಎಸ್‌ ಸಾಮಾನ್ಯವಾಗಿ ಭೌಗೋಳಿಕ ಪ್ರದೇಶದ ಮಾಹಿತಿ ನೀಡುವ ಸುಮಾರು 20-30 ಮೀಟರ್‌ನಷ್ಟು ವ್ಯತ್ಯಾಸವಿರುತ್ತದೆ. ಆದರೆ ನಾವಿಕ್‌ 5 ಮೀಟರ್‌ನಷ್ಟು ಮಾತ್ರ ವ್ಯತ್ಯಾಸ ಕಾಣಿಸಬಹುದು ಎಂದು ಹೇಳಲಾಗಿದೆ.

ಮೊಬೈಲ್‌ ಫೋನ್‌ಗಳು, ವಾಹನಗಳು, ಸರಕು ಸಾರಿಗೆಗಳಿಗೆ ಈ ಸೇವೆ ಲಭ್ಯವಾಗಲಿದೆ. ಧ್ವನಿ ಹಾಗೂ ದೃಶ್ಯ ರೂಪದಲ್ಲಿ ನ್ಯಾವಿಗೇಷನ್‌ ಒದಗಿಸಲಿದೆ. ಪ್ರಕೃತಿ ವಿಕೋಪಗಳು, ನಿಖರ ಕಾಲಮಾನ, ಭೂಮಿ, ವಾಯು ಹಾಗೂ ಸಾಗರಯಾನದಲ್ಲಿ ಹೆಚ್ಚು ನಿಖರ ಮಾಹಿತಿ ನೀಡುವ ಮೂಲಕ ನೆರವಾಗಲಿದೆ ಎನ್ನಲಾಗಿದೆ. ಈ ಸೇವೆಯನ್ನು ಹೆಚ್ಚು ಸಮರ್ಥವಾಗಿ ನಿರ್ವಹಿಸಲು ಅನುಕೂಲವಾಗಲೆಂದು ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಏಳು ಉಪಗ್ರಹಗಳ ಜೊತೆಗೆ, ಇನ್ನು ನಾಲ್ಕು ಉಪಗ್ರಹಗಳನ್ನು ಸೇರಿಸುವ ಉದ್ದೇಶ ಹೊಂದಿರುವುದಾಗಿ ಇಸ್ರೋ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.