ಅಸಭ್ಯವಾಗಿ ವರ್ತಿಸುವ ಗಂಡಸರಿಗೆ ಜಪಾನಿ ಸೀಲ್‌; ಅರ್ಧಗಂಟೆಯಲ್ಲಿ ಸೋಲ್ಡ್‌ ಔಟ್‌

ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ಬಸ್‌, ಟ್ರೇನ್‌ ಮುಂತಾದವುಗಳಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ ಸುದ್ದಿಗಳನ್ನು ಕೇಳುತ್ತಲೇ ಇರುತ್ತವೆ. ಅಂಥವರಿಗೆ ಪಾಠ ಕಲಿಸಲು ಒಂದು ಸೀಲ್‌ ಸಿದ್ಧವಾಗಿದೆ

ಕೆಲವು ತಿಂಗಳುಗಳ ಹಿಂದೆ ಕನ್ನಡ ಕವಯತ್ರಿಯೊಬ್ಬರು ರಾತ್ರಿ ಬಸ್‌ ಪ್ರಯಾಣ ಮಾಡುವಾಗ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿದ ಘಟನೆಯನ್ನು ಹಂಚಿಕೊಂಡಿದ್ದರು. ಆ ವ್ಯಕ್ತಿ ಕ್ಷಣದಲ್ಲೇಆತನಿಗೆ ತಕ್ಕ ಪಾಠ ಕಲಿಸಿದ್ದೂ ಅಲ್ಲದೆ, ಸರ್ಕಾರಿ ಸಾರಿಗೆ ಸಂಸ್ಥೆ ಇಂಥ ಸಂದರ್ಭಗಳನ್ನು ಎದುರಿಸಲು ಸೂಕ್ತ ಕ್ರಮಕ್ಕೂ ಆಗ್ರಹಿಸುವ ಕೆಲಸ ಮಾಡಿದ್ದರು. ನಿಜಕ್ಕೂ ಇದು ಶ್ಲಾಘನೀಯ ಕೆಲಸ.

ಆದರೆ ಎಷ್ಟೋ ಸಂದರ್ಭಗಳಲ್ಲಿ ಇಂಥ ಪ್ರಕರಣಗಳನ್ನು ಅನೇಕ ಮಹಿಳೆಯರು ವರದಿ ಮಾಡದೆ ಸುಮ್ಮನಾಗಿ ಬಿಡುತ್ತಾರೆ. ಮುಜುಗರ, ಅವಮಾನಗಳ ಭೀತಿಯಿಂದಾಗಿ ಸಹಿಸಿಕೊಂಡು ಬಿಡುತ್ತಾರೆ. ಅಲ್ಲದೇ ಇಂಥ ಪ್ರಕರಣಗಳು ಅದೆಷ್ಟು ಸಂಖ್ಯೆಯಲ್ಲಿ ನಡೆಯುತ್ತವೆ ಎಂದರೆ, ಸಹಿಸಿಕೊಂಡು ಬಿಡುವುದೇ ಸರಿ ಎಂದು ಅನೇಕ ಹೆಣ್ಣು ಮಕ್ಕಳು ಭಾವಿಸುತ್ತಾರೆ. ಇದು ಕೇವಲ ನಮ್ಮದೇಶದ ಕತೆಯಷ್ಟೇ ಅಲ್ಲ.

ಜಪಾನಿನಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸುವ ಶೇಕಡ 50ರಷ್ಟು ಮಹಿಳೆಯರು ಪುರುಷರ ಅಸಭ್ಯ ವರ್ತನೆಗೆ ಗುರಿಯಾಗುತ್ತಿದ್ದಾರೆ. ಇದು ಇಲ್ಲಿ ದಶಕಗಳ ಸಮಸ್ಯೆ. ಇದೊಂದು ಚರ್ಚೆಯಾಗಿ ಪರಿಣಮಿಸಿದ ಫಲವಾಗಿ, ಜಪಾನೀನ ಶಾಚಿಹತ ಸಂಸ್ಥೆ ಅದೃಶ್ಯ ಇಂಕ್‌ ಇರುವ ಸೀಲ್‌ವೊಂದನ್ನು ತಯಾರಿಸಿ, ಇತ್ತೀಚೆಗೆ ಪರೀಕ್ಷಾರ್ಥ ಬಿಡುಗಡೆ ಮಾಡಿತ್ತು. ಅರ್ಧ ಗಂಟೆಯಲ್ಲಿ 500 ಸ್ಟಾಂಪ್‌ಗಳು ಮಾರಾಟವಾದವಂತೆ.

ಏನಿದು ಸ್ಟಾಂಪ್‌?

ಪುಟ್ಟದಾದ ಈ ಸ್ಟ್ಯಾಂಪ್‌ನಲ್ಲಿ ವಿಶಿಷ್ಟವಾದ ಇಂಕ್‌ ಇರುತ್ತದೆ. ಇದನ್ನು ಅಸಭ್ಯವಾಗಿ ಮುಟ್ಟುವ ವ್ಯಕ್ತಿಯ ಕೈ ಮೇಲೆ ಒತ್ತಿದರೆ ಮುಂಗೈನ ಗುರುತು ಮೂಡುತ್ತದೆ. ಬೆಳಕಿನಲ್ಲಿ ಕಾಣದ ಈ ಸ್ಟ್ಯಾಂಪ್‌ ಗುರುತು, ಕತ್ತಲಲ್ಲಿ ಹೊಳೆಯುತ್ತದೆ. ತಪ್ಪು ಮಾಡಿದವನನ್ನು ಗುರುತಿಸಲು ಮತ್ತು ತಪ್ಪು ಮಾಡಲು ಮುಂದಾದ ವ್ಯಕ್ತಿಗೆ ಸಣ್ಣ ಆಘಾತ ಉಂಟು ಮಾಡಲು ಈ ಸ್ಟ್ಯಾಂಪ್‌ ನೆರವಾಗುತ್ತಿದೆ.

ಶಾಚಿಹತ, ”ಈ ಸ್ಟ್ಯಾಂಪ್‌ ಅನ್ನು ಪರಿಚಿಯಿಸಿರುವುದು ಸಮಸ್ಯೆಗೆ ಪರಿಹಾರವೆಂದಲ್ಲ. ತಪ್ಪು ಮಾಡಲು ಮುಂದಾಗುವವರಲ್ಲಿ ಹೆದರಿಕೆ ಉಂಟು ಮಾಡುವ ಪ್ರಯತ್ನ. ಒಂದು ವೇಳೆ ತಪ್ಪೆಸಗಿದ ವ್ಯಕ್ತಿ ಸ್ಟ್ಯಾಂಪ್‌ ಗುರುತಿನೊಂದಿಗೆ ಸಿಕ್ಕಿಬಿದ್ದಿರೆ ಪೊಲೀಸರು ಗುರುತನ್ನು ಸಾಕ್ಷ್ಯವಾಗಿ ಪರಿಗಣಿಸಲು ಸಾಧ್ಯವಿದೆ” ಎಂದು ಹೇಳಿದ್ದಾರೆ.

ಜಪಾನಿನ ದೊಡ್ಡ ಸಮಸ್ಯೆ

ಲಿಂಗ ಸಮಾನತೆಯ ವಿಷಯದಲ್ಲಿ ವರ್ಲ್ಡ್‌ ಎಕನಾಮಿಕ್‌ ಫೋರಂ ಸೂಚಿಯಲ್ಲಿ 140ದೇಶಗಳ ಪೈಕಿ 110 ನೇ ಸ್ಥಾನದಲ್ಲಿದೆ ಜಪಾನ್‌. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವುದು ಸಾಮಾನ್ಯ ಸಮಸ್ಯೆ. ಇದನ್ನು ತಡೆಯಲು ಸ್ಥಳೀಯ ಆಡಳಿತ ಏನೆಲ್ಲಾ ಮಾಡಿದೆ, ಆದರೂ ಕಡಿಮೆಯಾಗಿಲ್ಲ.

ಮೆಟ್ರೋಗಳಲ್ಲಿ ಪ್ರತ್ಯೇಕ ಕಾರ್‌ಗಳು, ಅಸಭ್ಯವಾಗಿ ಮುಟ್ಟಿದಾಗ ಕಿರುಚಿಕೊಳ್ಳುವಂತ ಮೊಬೈಲ್‌ ಅಪ್ಲಿಕೇಷನ್‌ಗಳು. ಹೀಗೆ ಹಲವು.. ಆದರೂ ಸಮಸ್ಯೆ ತಹಬಂದಿಗೆ ಬಂದಿಲ್ಲ. ಕಳೆದ ಮೇನಲ್ಲಿ ವೈದ್ಯರೊಬ್ಬರು, ಹಾಗೆ ಮುಟ್ಟಲು ಬರುವ ಗಂಡಸರ ಕೈಗೆ ಸೇಫ್ಟಿ ಪಿನ್‌ನಿಂದ ಚುಚ್ಚಬೇಕು ಎಂದು ಟ್ವೀಟ್‌ ಮಾಡಿದ್ದು ವೈರಲ್‌ ಆಗಿತ್ತು. ಅದಕ್ಕೆ ವಿವಿಧ ರೀತಿಯ ಪ್ರತಿಕ್ರಿಯೆಗಳು ಬಂದಿದ್ದವು.

ಈ ಹಿನ್ನೆಲೆಯಲ್ಲಿ ಸ್ಟೇಷನರಿ ಸಂಸ್ಥೆ ಶಾಚಿಹತ ಸಂಸ್ಥೆ ವಿಶೇಷ ಸ್ಟ್ಯಾಂಪ್‌ ಒಂದನ್ನು ರೂಪಿಸಿ ಬಿಡುಗಡೆ ಮಾಡಿತು.