ಭಾರತದ ಡಿಜಿಟಲ್ ಲೋಕವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಮುಂದಿನ 5 ರಿಂದ 7 ವರ್ಷಗಳಲ್ಲಿ ಸುಮಾರು 70000 ಕೋಟಿ ರೂಗಳನ್ನು ಹೂಡಿಕೆ ಮಾಡುವುದಾಗಿ ತಿಳಿಸಿದ ಗೂಗಲ್, ಇದರ ಮೊದಲ ಕಂತು ಎಂಬಂತೆ ರಿಲಯನ್ಸ್ ಮಾಲೀಕತ್ವದ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನಲ್ಲಿ 4.5 ಬಿಲಿಯನ್ ಡಾಲರ್ (ರೂ. 33,737 ಕೋಟಿ) ಹೂಡಿಕೆ ಮಾಡಿದೆ. ಈಗಾಗಲೇ ಭಾರತೀಯ ಟೆಲಿಕಾಂ ಲೋಕದಲ್ಲಿ ಪಾರುಪತ್ಯವನ್ನು ಸ್ಥಾಪಿಸಲು ಹಂತ ಹಂತವಾಗಿ ಸಾಗುತ್ತಿರುವ ಜಿಯೋಗೆ ಇದು ಇನ್ನಷ್ಟು ಬಲವನ್ನು ತುಂಬಲಿದೆ.
ಜಿಯೋ ಪ್ಲಾಟ್‌ಫಾರ್ಮ್ಸ್ ಶೇ 7.73 ರಷ್ಟು ಪಾಲನ್ನು ಪಡೆದುಕೊಂಡಿರುವ ಗೂಗಲ್, ಈ ವಾರದ ಆರಂಭದಲ್ಲಿ ಘೋಷಿಸಲಾದ ಗೂಗಲ್ ಫಾರ್ ಇಂಡಿಯಾ ಡಿಜಿಟೈಸೇಶನ್ ಫಂಡ್‌ನ ಮೊದಲ ಹೂಡಿಕೆ ಇದು ಎಂದು ತಿಳಿಸಿದೆ. ಇದು ಮುಂದಿನ ಐದು ರಿಂದ ಏಳು ವರ್ಷಗಳಲ್ಲಿ ಈಕ್ವಿಟಿ ಹೂಡಿಕೆಗಳು, ಪಾಲುದಾರಿಕೆಗಳು ಮತ್ತು ಕಾರ್ಯಾಚರಣೆ, ಮೂಲಸೌಕರ್ಯ ಮತ್ತು ಪರಿಸರ ವ್ಯವಸ್ಥೆಯ ಹೂಡಿಕೆಗಳ ಮಿಶ್ರಣದಿಂದ ಭಾರತದ ಡಿಜಿಟಲ್ ಆರ್ಥಿಕತೆಯನ್ನು ವೇಗಗೊಳಿಸುವ ಗುರಿಯನ್ನು ಗೂಗಲ್ ಹೊಂದಿದೆ.
ಈ ಒಪ್ಪಂದದ ಮೂಲಕ ಗೂಗಲ್ ಮತ್ತು ಜಿಯೋ ಎರಡು ಒಟ್ಟಾಗಿ ಭಾರತದಲ್ಲಿ ಕೈಗೆಟುಕುವ ದರದಲ್ಲಿ 5G ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ.
ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಮತ್ತು ಪ್ಲೇ ಸ್ಟೋರ್‌ಗೆ ಉತ್ತಮಗೊಳಿಸುವಿಕೆ ಜೊತೆಗೆ ಎಂಟ್ರಿ ಲೆವೆಲ್ ನ ಸ್ಮಾರ್ಟ್‌ಫೋನ್ ಅನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲು ಗೂಗಲ್ ಮತ್ತು ಜಿಯೋ ಪ್ಲಾಟ್‌ಫಾರ್ಮ್‌ಗಳು ವಾಣಿಜ್ಯ ಒಪ್ಪಂದ ಮಾಡಿಕೊಂಡಿವೆ ಎಂದು ತಿಳಿದುಬಂದಿದೆ.
ನಾವು ಭಾರತದಲ್ಲಿ ಲಕ್ಷಾಂತರ ಬಳಕೆದಾರರು ಸ್ಮಾರ್ಟ್‌ಫೋನ್‌ಗಳ ಮಾಲೀಕರಾಗಲು ಸಾಧ್ಯ ಎಂಬುದನ್ನು ಮಾಡಿ ತೋರಿಸಲಿದ್ದೇವೆ ಎಂದು ಗೂಗಲ್ ತಿಳಿಸಿದೆ. ಇದರ ಮೂಲಕ ಭಾರತದ ಡಿಜಿಟಲ್ ಆರ್ಥಿಕತೆಯನ್ನು ಉತ್ತಮಪಡಿಸುವುದಾಗಿ ಹೇಳಿದೆ.
ಈ ಸಹಭಾಗಿತ್ವವು ಭಾರತದ ಡಿಜಿಟಲೀಕರಣದಲ್ಲಿ ಮಹತ್ವದ ಪಾತ್ರವನ್ನು ವಹಿಸಲಿದ್ದು, ಅರ್ಧ ಬಿಲಿಯನ್‌ಗಿಂತಲೂ ಹೆಚ್ಚು ಭಾರತೀಯರಿಗೆ ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳಲು ಸಹಾಯ ಮಾಡಲಿದೆ. ಭಾರತದಲ್ಲಿ ಬಹುಪಾಲು ಜನರಿಗೆ ಇನ್ನೂ ಇಂಟರ್ನೆಟ್ ಪ್ರವೇಶವಿಲ್ಲ ಮತ್ತು ಇನ್ನೂ ಕಡಿಮೆ ಜನರು ಸ್ಮಾರ್ಟ್‌ಫೋನ್ ಹೊಂದಿದ್ದಾರೆ ಇದನ್ನು ಹೋಗಲಾಡಿಸುವುದೇ ಈ ಸಹಭಾಗಿತ್ವದ ಉದ್ದೇಶವಾಗಿದೆ ಎಂದು ಜಿಯೋ ಮಾಲೀಕ ಮುಖೇಶ್ ಅಂಬಾನಿ ತಿಳಿಸಿದ್ದಾರೆ.