ಇನ್ನಿಲ್ಲ ಜಿಯೋ ಕರೆಗಳು ಉಚಿತ, ಬೆಲೆ ತೆರಲೇಬೇಕು, ಇದು ಖಚಿತ!

ಡಾಟಾಕ್ಕಾಗಿ ರೀಚಾರ್ಜ್ ಮಾಡಿದಾಗ ಹೊರಹೋಗುವ ಕರೆಗಳು ಉಚಿತ ಎಂದು ಗ್ರಾಹಕರಿಗೆ ಮಾಡಿದ್ದ ವಾಗ್ದಾನವನ್ನು ಜಿಯೋ ಇಂದಿನಿಂದ ಮುರಿದಿದೆ. ಜಿಯೋದಿಂದ ಇತರೆ ನೆಟ್‌ವರ್ಕ್‌ಗಳಿಗೆ ಮಾಡುವ ಕರೆಗಳಿಗೆ ಶುಲ್ಕ ವಿಧಿಸಲಾಗುವುದು‌ ಎಂದು ರಿಲಯನ್ಸ್‌‌ ಹೇಳಿದೆ. ಈ ಮೂಲಕ ಟ್ರಾಯ್ ಸಮ್ಮುಖದಲ್ಲಿ ನಡೆಯುತ್ತಿದ್ದ ಟೆಲಿಕಾಂ ಸೇವಾದಾರರ ಕದನ ಇದೀಗ ಅಂತರ್ವಲಯದಿಂದ ಹೊರಬಿದ್ದಿದೆ

ಮೊಬೈಲ್ ಸೇವಾದರ ಕಂಪನಿ ಮತ್ತೊಂದು ಕಂಪನಿಯ ಸಂಖ್ಯೆಗೆ ಮಾಡಲಾದ ಕರೆಗಳಿಗೆ ಅಂತರ್ನಿವಹಣಾ ಶುಲ್ಕ ಪಾವತಿಸಬೇಕು. ಉದಾಹರಣೆಗೆ ಜಿಯೋದಿಂದ ಏರ್‌ಟೆಲ್‌ಗೆ ಕರೆ ಹೋಗುವಾಗ ಪ್ರತಿ ನಿಮಿಷಕ್ಕೆ 6 ಪೈಸೆಯಂತೆ ಏರ್ಟೆಲ್‌ಗೆ ಜಿಯೋ ಶುಲ್ಕ ಪಾವತಿಸಬೇಕು.

ಇದು ಜಿಯೋ ಕಂಪನಿ ಹೊಸ ವರಸೆ. ಅಗ್ಗದ ಇಂರ್ಟನೆಟ್, ಉಚಿತ ಕೆರಗಳ ಆಮಿಷವೊಡ್ಡಿ, ಲಕ್ಷಾಂತರ ಗ್ರಾಹಕರನ್ನು ಗಳಿಸಿದ, ಈಗ ಶುಲ್ಕ ವಿಧಿಸಲು ಹೊರಟಿರುವುದು ಚರ್ಚೆಗೆ ಗ್ರಾಸವಾಗಿದೆ.

ಅಂತರ್ನಿರ್ವಹಣಾ ಶುಲ್ಕ ತಪ್ಪಿಸುವ ಉದ್ದೇಶದಿಂದ ಬೇರೆ ನೆಟ್ವರ್ಕ್‌ಗಳಿಗೆ ಕರೆ‌ಮಾಡಿದ ಸಂದರ್ಭ ಕೇವಲ ಒಂದು ಬಾರಿ ರಿಂಗ್ ಆಗಿ ಕರೆ ಕಡಿತವಾಗುವಂತೆ ಜಿಯೋ ತಂತ್ರ ಹೂಡಿದೆ. ಮತ್ತೆ ಅತ್ತಕಡೆಯಿಂದ ಕರೆ ಬರುವಂತೆ ಮಿಸ್ಡ್ ಕಾಲ್ ನೀಡುವುದು ಜಿಯೋದ ಉದ್ದೇಶ. ಈ ಮೂಲಕ ಅಂತರ್ನಿವಹಣಾ ಶುಲ್ಕದಿಂದ ತಪ್ಪಿಸಿಕೊಳ್ಳಲು ಜಿಯೋ ವಾಮಮಾರ್ಗ ಹೂಡಿದೆ ಎಂದು ಇತ್ತೀಚೆಗೆ ಏರ್‌ಟೆಲ್ ಮತ್ತು ವೋಡಾಫೋನ್ ಭಾರತೀಯ ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರಕ್ಕೆ (ಟ್ರಾಯ್) ದೂರು ಸಲ್ಲಿಸಿದ್ದವು.

ಇದಕ್ಕೆ ಪ್ರತಿಕ್ರಿಯೆಯಾಗಿ ಜಿಯೋನಿಂದ ಇತರೆ ನೆಟ್ವರ್ಕ್‌ಗಳಿಗೆ ಹೋಗುವ ಕರೆಗಳನ್ನು ಪ್ರಾಧಿಕಾರದ ನಿಯಮಾನುಸಾರದ ಕನಿಷ್ಠ ಅವಧಿ 25 ಸೆಕೆಂಡುಗಳಿಗೆ ನಿಗದಿಗೊಳಿಸಿತ್ತು. ನಂತರದಲ್ಲಿ ಏರ್‌ಟೆಲ್ ಹಾಗೂ ವೋಡಾಫೋನ್ ಕೂಡ ಜಿಯೋಗೆ ಕರೆಮಾಡಿದ ಸಂದರ್ಭ ರಿಂಗ್ ಅವಧಿಯನ್ನು 25 ಸೆಕೆಂಡುಗಳಿಗೆ ಮಿತಿಗೊಳಿಸಿವೆ.

ಬೇರೆ ನೆಟ್ವರ್ಕ್ ಕರೆಗಾಗಿ ಪ್ರತ್ಯೇಕ ವೋಚರ್

ಡಾಟಾಗಾಗಿ ರೀಚಾರ್ಜ್ ಮಾಡಿದಾಗ ಕರೆಗಳು ಸಂಪೂರ್ಣ ಉಚಿತ ಎಂದು ಮಾರುಕಟ್ಟೆ ಪ್ರವೇಶಿವಾಗ ಜಿಯೋ ಹೇಳಿತ್ತು. ಆದರೆ ಇದೀಗ ಕರೆಗೆ ಶುಲ್ಕ ವಿಧಿಸಿ ಅದೇ ಪ್ರಮಾಣದ ಡಾಟಾವನ್ನು ನೀಡುವ ಮೂಲಕ ಗ್ರಾಹಕನ ಪಾಲಿಗೆ ಸಮತೋಲನ ಕಾಪಾಡಿಕೊಳ್ಳಲಾಗುವುದು ಎಂದು ಕಂಪನಿ ಹೇಳಿದೆ. ಅದಕ್ಕಾಗಿ ₹10ರಿಂದ ₹100ರ ವರೆಗಿನ ವಿಶೇಷ ರೀಚಾರ್ಜ್ ವೋಚರ್‌ಗಳನ್ನು ಬಿಡುಗಡೆ ಮಾಡಲಾಗಿದೆ.

ಈ ಮೂಲಕ ಅಂತರ್ನಿರ್ವಹಣಾ ಶುಲ್ಕದ ರೂಪದಲ್ಲಿ ಏರ್‌ಟೆಲ್ ಹಾಗೂ ವೋಡಾಫೋನ್‌ಗೆ ಪಾವತಿಸಲಾದ ₹13,500 ಕೋಟಿಯ ಹೊರೆಯನ್ನು ಜಿಯೋ ತನ್ನ ಗ್ರಾಹಕರ ತಲೆಗೆ ಹಂಚಿದೆ.

ಈ ಕ್ರಮ ತಾತ್ಕಾಲಿಕ ಎಂಬುದಾಗಿಯೂ ಜಿಯೋ ತಿಳಿಸಿದೆ. ಇತರೆ ಕಂಪನಿಗಳ ಜತೆಗಿನ ವಿವಾದ ಟ್ರಾಯ್ ಸಮ್ಮುಖದಲ್ಲಿ ಇತ್ಯರ್ಥವಾಗುವ ವರೆಗೆ ಮಾತ್ರ ಎನ್ನಲಾಗಿದೆ. ಆದರೆ ವಿವಾದ ಇತ್ಯರ್ಥಕ್ಕೆ ಎಷ್ಟು ಸಮಯ ಹಿಡಿಯಲಿದೆ ಎಂಬ ಬಗ್ಗೆ ಜಿಯೋ ಸ್ಪಷ್ಟ ಚಿತ್ರಣ ನೀಡಿಲ್ಲ.