ಜಿಯೋದಿಂದ ಆಯ್ತು ಕರೋನಾ ಕುರಿತ ಮಾಹಿತಿ ಸೋರಿಕೆ! ಸಿಮ್‌ಟಮ್‌ ಚೆಕ್ಕರ್‌ ಹಿಂಪಡೆದ ಟೆಲಿಕಾಂ ಸಂಸ್ಥೆ!

ಜಿಯೋ ಕಳೆದ ಏಪ್ರಿಲ್‌ನಲ್ಲಿ ಪರಿಚಯಿಸಿದ ಸಿಮ್‌ಟಮ್‌ ಚೆಕ್ಕರ್‌ ಮೊಬೈಲ್‌ ಅಪ್ಲಿಕೇಷನ್‌-ವೆಬ್‌ಸೈಟ್‌ ಅನ್ನು ಹಿಂಪಡೆದಿದೆ. ಇದಕ್ಕೆ ಕಾರಣ ಮಾಹಿತಿ ಸೋರಿಕೆ! ಲಕ್ಷಾಂತರ ಬಳಕೆದಾರರ ಮಾಹಿತಿಯ ರಕ್ಷಣೆ ಸೂಕ್ತ ರಕ್ಷಣಾ ಕ್ರಮ ಅನುಸರಿಸದ ಜಿಯೋ ಈಗ ಟೀಕೆಗೆ ಗುರಿಯಾಗಿದೆ

ಕಳೆದವಾರ ಫೇಸ್‌ಬುಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ರಿಲಯನ್ಸ್‌ ಸಂಸ್ಥೆಯ ಅಂಗ ಸಂಸ್ಥೆ ಜಿಯೋ ವಾಟ್ಸ್‌ಆಪ್‌ ಮೂಲಕ ಅಗತ್ಯವಸ್ತುಗಳನ್ನು ಆರ್ಡರ್‌ ಮಾಡುವ ಜಿಯೋ ಮಾರ್ಟ್‌ ಸೇವೆಯನ್ನು ಪ್ರಯೋಗ ಮಾಡುತ್ತಿದೆ. ಇಂಥ ಇನ್ನಷ್ಟು ಸೇವೆಗಳನ್ನು ತರಲು ಭರದ ಸಿದ್ಧತೆಯಲ್ಲಿದೆ ಕೂಡ.

ಭಾರತದ ಅತಿ ದೊಡ್ಡ ಬಳಕೆದಾರರನ್ನು ಹೊಂದಿರುವ ಈ ನೆಟ್‌ವರ್ಕ್‌ಗೆ ಬಳಕೆದಾರರೇ ಬಂಡವಾಳ. ಈ ದೊಡ್ಡ ಬಳಕೆದಾರರ ಬಳಗವೇ ಬಲ. ಹಾಗಾಗಿ ಹೊಸ ಹೊಸ ಸೇವೆಗಳನ್ನು ಆರಂಭಿಸಿ, ಉದ್ಯಮವನ್ನು ಬೆಳೆಸುತ್ತಿದೆ. ಇಂಥದ್ದೇ ಒಂದು ಪ್ರಯೋಗ ಲಾಕ್‌ಡೌನ್‌ ಸಂದರ್ಭದಲ್ಲಿ ನಡೆಸಿತು. ಅದರ ಹೆಸರು ಸಿಮ್‌ಟಮ್‌ ಚೆಕ್ಕರ್‌.

ಕರೋನಾ ಸೋಂಕಿನ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದ, ಸೋಂಕಿನ ಲಕ್ಷಣಗಳನ್ನು ಗುರುತಿಸಲಾಗದವರಿಗೆ ಮಾಹಿತಿ ನೀಡುವ, ಸ್ವತಃ ಪರೀಕ್ಷಿಸಿಕೊಳ್ಳುವುದಕ್ಕೆ ಅನುಕೂಲವಾಗಲಿ ಎಂದು ಸಿಮ್ಟಮ್‌ ಚೆಕ್ಕರ್‌ ಮೊಬೈಲ್‌ ಅಪ್ಲಿಕೇಷನ್‌ ಮತ್ತು ವೆಬ್‌ತಾಣವನ್ನು ಬಿಡುಗಡೆ ಮಾಡಿತು. ಅಂದರೆ ಅಲ್ಲಿ ಪಟ್ಟಿ ಮಾಡಿರುವ ಲಕ್ಷಣಗಳ ಮೂಲಕ ಬಳಕೆದಾರರ ತನಗೆ ಸೋಂಕು ಇರಬಹುದೆ, ಇಲ್ಲವೆ ಎಂಬುದನ್ನು ಕಂಡುಕೊಳ್ಳುವುದಕ್ಕೆ ನೆರವಾಗುವ ಸೇವೆ ಇದು.

ಈ ಆಪ್‌ ಅಥವಾ ವೆಬ್‌ ಸೈಟ್‌ ಎಲ್ಲ ರೀತಿಯ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುವಂಥದ್ದು. ಬಳಕೆದಾರ ಹೆಸರು, ಫೋನ್‌ ನಂಬರ್‌, ಬಳಕೆ ಮಾಡಿದ ಬ್ರೌಸರ್‌, ಆಪರೇಟಿಂಗ್‌ ಸಿಸ್ಟಮ್‌, ಬಳಕೆದಾರರ ಲೋಕೇಷನ್‌ (ಕೆಳಗಿನ ಚಿತ್ರ ಗಮನಿಸಿ) ಮುಂತಾದ ತಾಂತ್ರಿಕ ಮಾಹಿತಿಯ ಜೊತೆಗೆ ವಯಸ್ಸು, ಲಿಂಗ, ಮುಂತಾದ ಜೈವಿಕ ಮಾಹಿತಿಯೂ ಇದು ಪಡೆದುಕೊಂಡಿತ್ತು. ಅದರೆ ಈ ಆಪ್‌ನಲ್ಲಿ ಯಾವುದೇ ಸುರಕ್ಷತೆಯ ಕ್ರಮಕೈಗೊಳ್ಳದ ಕಾರಣ, ಬಳಕೆದಾರರ ಎಲ್ಲ ಮಾಹಿತಿ ಸುಲಭವಾಗಿ ಎಲ್ಲರಿಗೂ ಲಭ್ಯವಾಗುತ್ತಿದೆ!

ಈ ಕುರಿತು ವರದಿ ಪ್ರಕಟಿಸಿರುವ ಟೆಕ್‌ ಕ್ರಂಚ್‌, ಈ ಆಪ್‌ ಮತ್ತು ವೆಬ್‌ಸೈಟ್‌ನ ಬಳಕೆದಾರರು ಭಾರತದಲ್ಲಷ್ಟೇ ಅಲ್ಲ, ಉತ್ತರ ಅಮೆರಿಕ, ಇಂಗ್ಲೆಂಡ್‌ನಲ್ಲಿ ಇರುವುದನ್ನು ತಿಳಿಸಿದೆ. ಈ ವರದಿ ಪ್ರಕಟವಾದ ಕೂಡಲೇ, ಜಿಯೋ ಸಂಸ್ಥೆ ಮೊಬೈಲ್ ಅಪ್ಲಿಕೇಷನ್‌ ಅನ್ನು ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಿದೆ. ವೆಬ್‌ತಾಣವನ್ನು ನಿಷ್ಕ್ರಿಯಗೊಳಿಸಿದೆ.

ಲಕ್ಷಾಂತರ ಬಳಕೆದಾರರು ಈ ಆಪ್‌ ಮತ್ತು ವೆಬ್‌ಸೈಟ್‌ ಬಳಸಿದ್ದು, ಅವರ ಮಾಹಿತಿ ಈಗ ಮುಕ್ತವಾಗಿರುವುದು ಖಾಸಗಿತನ, ಮಾಹಿತಿ ಸುರಕ್ಷತೆಯ ಆತಂಕವನ್ನು ಹುಟ್ಟು ಹಾಕಿದೆ. ಹಾಗೆಯೇ ಜಿಯೋ ಮುಂದಿನ ಯೋಜನೆಗಳ ವಿಷಯದಲ್ಲಿ ಗಂಭೀರ ಪ್ರಶ್ನೆಯೊಂದನ್ನು ಹುಟ್ಟು ಹಾಕಿದೆ. ಜಿಯೋ ಮಾರ್ಟ್‌ ಗ್ರಾಹಕರ ಅನುಕೂಲಕ್ಕಾಗಿ ವಾಟ್ಸ್‌ ಆಪ್‌ ಮೂಲಕ ವಹಿವಾಟು ನಡೆಸಲು ಉದ್ದೇಶಿಸಿದೆ. ಸಂಪೂರ್ಣ ಖಾಸಗಿ ವ್ಯಕ್ತಿ-ವ್ಯಕ್ತಿ ನಡುವಿನ ಸಂಭಾಷಣೆಗೆಂದು ಮೀಸಲಾದ ವಾಟ್ಸ್‌ಆಪ್‌ ವ್ಯಾಪಾರ ಉದ್ದೇಶಕ್ಕೆ ಬಳಕೆಯಾದರೆ, ಬಳಕೆದಾರ ಮಾಹಿತಿ ಎಷ್ಟು ಸುರಕ್ಷಿತ?

ಫೇಸ್‌ಬುಕ್‌ ಮೂಲಕ ಜಿಯೋ ಭಾರತದ ವಿವಿಧ ಮಾರುಕಟ್ಟೆಗಳಲ್ಲಿ ದೊಡ್ಡ ಆಟಗಾರನಾಗಿ ಚಾಚಿಕೊಳ್ಳುವ ಉತ್ಸಾಹದಲ್ಲಿದೆ. ಈ ಸಂಸ್ಥೆಗೆ ಬಳಕೆದಾರರ ಬಗ್ಗೆ ಎಷ್ಟು ಕಾಳಜಿ, ಎಷ್ಟು ಜವಾಬ್ದಾರಿ ಇದೆ ಎಂಬುದೇ ಪ್ರಶ್ನೆ!

ಟೆಕ್‌ ಕನ್ನಡ ಹಿಂದಿನ ವರದಿಯೊಂದರಲ್ಲಿ ಉಲ್ಲೇಖಿಸಿದಂತೆ, ಎರಡು ದೈತ್ಯ ಸಂಸ್ಥೆಗಳು ಕೈ ಜೋಡಿಸಿದಾಗ, ಸಾಮಾನ್ಯನೊಬ್ಬನ ಹಕ್ಕು, ಸ್ವಾತಂತ್ರ್ಯಗಳು ಗಾಳಿಗೆ ತೂರುವಷ್ಟು ದುಷ್ಟವಾಗುವ ಸಾಧ್ಯತೆಯನ್ನು ಉಪೇಕ್ಷಿಸುವಂತಿಲ್ಲ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.