ಗಣೇಶಯ್ಯ ಅಗಾಧ ಸಂಶೋಧನಾ ಪ್ರತಿಭೆ, ಅದ್ಭುತ ಕತೆಗಾರ| ಒಡನಾಡಿಗಳ ಮೆಲುಕು

ಕೆ ಎನ್ ಗಣೇಶಯ್ಯ ಅವರ ನಮ್ಮ ನಡುವಿನ ಅಪೂರ್ವ ಕತೆಗಾರರು. ಇದು ಚಿರಪರಿಚಿತ ಸಂಗತಿ. ಆದರೆ ವಿಜ್ಞಾನಿಯಾಗಿ ಅವರು ಮಾಡಿದ ಕೆಲಸ ಮತ್ತು ಸಂಶೋಧನಾ ಕಾರ್ಯಗಳು ಅಗಾಧವಾದದ್ದು. ಈ ಸಂಗತಿಗಳನ್ನು ಗಣೇಶಯ್ಯನವರ ಒಡನಾಡಿಗಳು, ಅವರ ಜೊತೆ ಸಂಶೋಧನೆಯಲ್ಲಿ ಭಾಗಿಯಾದ ಇಬ್ಬರು ಸಂಶೋಧಕರು ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ

ಹೆಬ್ಬಾಳದ ಕೃಷಿ ಕಾಲೇಜಿನಲ್ಲಿ ಬಿ.ಎಸ್.ಸಿ ಕೃಷಿ ವ್ಯಾಸಂಗ ಮಾಡುತ್ತಿದ್ದಾಗ ನಮಗೆ ಅಮೇರಿಕಾದ ಕೃಷಿ ವಿ.ವಿ.ಗಳಲ್ಲಿರುವಂತೆ ಟ್ರೈಮೆಸ್ಟರ್‌ ಪದ್ದತಿ ಇತ್ತು. ಪ್ರತಿ ಕೋರ್ಸ್‌ ಬೋಧಿಸುವ ಶಿಕ್ಷಕರು ಪರೀಕ್ಷೆ ಮುಗಿದ ಮೇಲೆ ಕಡ್ಡಾಯವಾಗಿ ಉತ್ತರ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಹಿಂತಿರುಗಿಸಿ, ವಿದ್ಯಾರ್ಥಿಗಳ ಉತ್ತರಿಸುವಾಗ ಮಾಡಿರಬಹುದಾದ ತಪ್ಪುಗಳನ್ನು ತೋರಿಸುತಿದ್ದರು. ಪ್ರತಿ ಬಾರಿ ಕೋರ್ಸ್‌ ಟೀಚರ್‍ಗಳು ಉತ್ತರ ಪತ್ರಿಕೆಯ ಬಂಡಲ್ ಹಿಡಿದು ಕ್ಲಾಸ್‍ ರೂಮಿಗೆ ಬಂದೊಡನೆ ವಿದ್ಯಾರ್ಥಿಗಳ ಎದೆಯಲ್ಲಿ ಡವಡವ ಶುರು. 1983 ಜನವರಿ ತಿಂಗಳಲ್ಲಿ, ಅಂದು ‘ಪ್ಲಾಂಟ್ ಬ್ರೀಡಿಂಗ್’ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ಐಡಿ ನಂಬರ್ ಪ್ರಕಾರ ವಿತರಿಸುತ್ತಿದ್ದ ಟೀಚರ್ ನನ್ನ ಉತ್ತರ ಪತ್ರಿಕೆ ಕೊಡುವುದನ್ನು ತಡೆದು ಉಳಿದ ಎಲ್ಲರಿಗೂ ಕೊಟ್ಟರು. ನನಗೆ ಆಗಲೇ ಹೃದಯ ಕೇವಲ ಅರ್ಧದಷ್ಟು ಬಡಿಯುತ್ತಿತ್ತು. ಕೊನೆಗೆ ನನ್ನ ಪತ್ರಿಕೆಯನ್ನು ನನ್ನ ಕೈಗೆ ಕೊಟ್ಟು “wonderful answers. keep it up” ಎಂದರು. ಬಹಳಷ್ಟು ವಿದ್ಯಾರ್ಥಿಗಳಿಗೆ ಮಾರ್ಕ್ಸ್‌ಗಳು ಹೋಗಿದ್ದವು. ಆದರೆ ನನಗೆ 100 % ಮಾರ್ಕ! ಅಂದು ಆ ಟೀಚರ್ ಹೇಳಿದ ಪ್ರೋತ್ಸಾಹದ ನುಡಿಗಳು ನಾನು ಮುಂದೆ ‘ಪ್ಲಾಂಟ್ ಬ್ರೀಡಿಂಗ್’ ಶಾಖೆಯನ್ನು ಆಯ್ಕೆ ಮಾಡಿ ಡಾಕ್ಟರೇಟ್ ಪದವಿಯನ್ನು ಮುಂದುವರೆಸುವಂತೆ ಮಾಡಿತು. ಆ ಶಿಕ್ಷಕರೇ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗುರು/ ವಿಜ್ಞಾನಿಯಾಗಿದ್ದ ಡಾ. ಕೆ.ಎನ್. ಗಣೇಶಯ್ಯ.

1983ರಲ್ಲಿ ಬನ್ನೇರುಘಟ್ಟದಲ್ಲಿ ಗಣೇಶಯ್ಯ ನೇತೃತ್ವದ ತಂಡದಲ್ಲಿ ವಾಸುದೇವ್‌ ಮತ್ತು ಗೆಳೆಯರು

ಅಂದು ಶುರುವಾದ ಆ ಒಡನಾಟ ನಾಲ್ಕು ದಶಕಗಳಿಗೆ ವಿಸ್ತರಿಸಿದೆ. ಮುಂದೆ ಅವರೊಡನೆ ರಿಸರ್ಚ್‌ಗಾಗಿ ದೇಶದ ಉದ್ದಗಲಕ್ಕೂ ತಿರುಗಾಡಿ ಪಶ್ಚಿಮ ಘಟ್ಟದ ಸಸ್ಯಲೋಕದ ಕೌತುಕಗಳನೆಲ್ಲ ಅಭ್ಯಸಿಸಿದ್ದೇ ದೊಡ್ಡ ಅನುಭವ. ಕೆ.ಎನ್. ಜಿ. ಕಥೆಗಾರರಾಗಿ ರೂಪುಗೊಳ್ಳುತ್ತಾ ಹೋಗಿದ್ದೇ ಸೋಜಿಗ. ಮೊದಲಿನಿಂದಲೂ ಪುಸ್ತಕಗಳನ್ನು ಓದುವ ಗೀಳು ಕೆ.ಎನ್. ಜಿಯವರದ್ದು. ಇದುವರೆಗೂ ಸಾವಿರಾರು ಪುಸ್ತಕಗಳನ್ನು ಓದಿರಬೇಕು. ಯಾವುದೇ ಗ್ರಂಥದ ಎಲ್ಲಾ ವಿವರಗಳನ್ನು ಒಂದೇ ಓದಿಗೆ ಗ್ರಹಿಸಿ ನೆನಪಿನಲ್ಲಿಟ್ಟು ಕೊಳ್ಳುತ್ತಿದ್ದರು. ಅವರೊಟ್ಟಿಗೆ ಪ್ರವಾಸ ಕೈಗೊಳ್ಳುವಾಗ ಪುಸ್ತಕಗಳಲ್ಲಿನ ಸ್ವಾರಸ್ಯಕರ ವಿಚಾರಗಳನ್ನು ಹೇಳುತ್ತಿದ್ದರು. ಚರಿತ್ರೆಯನ್ನೇ ಬುಡಮೇಲು ಮಾಡಬಲ್ಲ ಅನೇಕ ವಿವರಗಳನ್ನು ಕಲೆ ಹಾಕಿ ಸೊಗಸಾಗಿ ವಿವರಣೆ ನೀಡುತ್ತಿದ್ದರು. ಹೀಗೆ ಅವರಲ್ಲಿನ ಒಬ್ಬ ಕಥೆಗಾರ ಮೂಡತೊಡಗಿದ್ದ. ಆ ಸಗ್ಗದ ದಿನಗಳನ್ನು ನೆನೆಯುವುದೇ ಆಹ್ಲಾದಕರ.

‘ಸಸ್ಯ ಸಗ್ಗ’ದಲ್ಲಿ ವಿಜ್ಞಾನದ ವಿದ್ಯಾರ್ಥಿಗಳಿಗೇ ತಿಳಿದಿಲ್ಲದ ಉನ್ನತಮಟ್ಟದ ಜೀವ ವಿಕಾಸದ ಪಾಠಗಳು ಇವೆ. ಮಾನವರಿಗೆ ಗೋಚರಿಸದ ಸಸ್ಯಲೋಕದ ಪ್ರಣಯದಾಟಗಳಿವೆ. ಇರುವೆಗಳು ತೋರುವ ಕೌತುಕ ಬುದ್ಧಿಮತ್ತೆಯ ನಿರೂಪಣೆ ಇದೆ. ಜೊತೆಜೊತೆ ಬೆಳೆಯುತ್ತಿದ್ದಾಗಲೇ ಸಸ್ಯ ಭ್ರೂಣಗಳು ನಡೆಸುವ ದಾಯಾದಿ ಕಲಹದ ವಿವರಗಳಿವೆ. ಪಶ್ಚಿಮ ಘಟ್ಟದ ಸಸ್ಯಖಜಾನೆಯ ಕೀಲಿ ಕೈಗಳ ವಿವರಣೆ ಇದೆ. ಹೀಗೆ ‘ಸಸ್ಯಸಗ್ಗ’ವು ಕನ್ನಡ ಪುಸ್ತಕ ಲೋಕದಲ್ಲಿ ಇನ್ನೊಂದು ಮೈಲಿಗಲ್ಲಾಗುವುದಲ್ಲಿ ಸಂಶಯವಿಲ್ಲ.

-ಡಾ.ಆರ್. ವಾಸುದೇವ, ಅರಣ್ಯಕಾಲೇಜು, ಶಿರಸಿ

ನನ್ನನ್ನು ಡಿಜಿಟಲ್‌ ಜಗತ್ತಿಗೆ ಪರಿಚಯಿಸಿದವರು ಗಣೇಶಯ್ಯ

ಬಿಎಸ್ಸಿ ಅಗ್ರಿ ಟೆಕ್‌ ಮಾಡುವುದಕ್ಕೆಂದು ಶಿವಮೊಗ್ಗದಲ್ಲಿ ಆಗತಾನೇ ಆರಂಭವಾಗಿದ್ದ ಕಾಲೇಜಿಗೆ ಸೇರಿದೆ. ಅಲ್ಲಿ ಸೈಟೊ ಜೆನೆಟಿಕ್ಸ್‌ ಪಾಠ ಮಾಡಲೆಂದು ಡಾ. ಎಸ್ ಜಿ ಹೆಗಡೆ ಎಂಬುವರು ಬಂದರು. ತುಂಬಾ ಚೆನ್ನಾಗಿ ಪಾಠ ಮಾಡುತ್ತಿದ್ದರು. ಅವರಿಂದ ನನಗೆ ಮೊದಲ ಬಾರಿಗೆ ಗಣೇಶಯ್ಯ ಮತ್ತು ಉಮಾಶಂಕರ್‌ ಅವರ ಬಗ್ಗೆ ತಿಳಿಯಿತು. ನನಗೆ ಮೊದಲಿಂದಲೂ ಸರಿಯಾದವರ ಬಳಿ, ತರಬೇತಿ ಪಡೆಯಬೇಕು ಎಂಬ ಆಸೆಯಿತ್ತು. ಎಂಎಸ್ಸಿ ಅವರ ಮಾರ್ಗವನ್ನೇ ಬೇಕೆಂದು ಆಯ್ಕೆ ಮಾಡಿಕೊಂಡೆ. ಅವರ ಬಗ್ಗೆ ಒಂದು ಅಭಿಪ್ರಾಯವೇನಿತ್ತು ಎಂದರೆ, ಗಣೇಶಯ್ಯ ಮತ್ತು ಉಮಾಶಂಕರ್‌ ತಂಡ ಒಳ್ಳೆಯ ಸಂಶೋಧನೆ ನಡೆಸುವ ತಂಡ. ಆದರೆ ಸಮಯಕ್ಕೆ ಎಂಎಸ್ಸಿ ಮುಗಿಸಲು ಆಗುವುದಿಲ್ಲ ಎಂದೆಲ್ಲಾ ಮಾತನಾಡುತ್ತಿದ್ದರು. ಅವರಿಬ್ಬರ ಕೈಯಲ್ಲಿ ಸಿಕ್ಕರೆ ಸರಿಯಾಗಿ ಕೆಲಸ ಮಾಡುತ್ತಾರೆ, ಹಿಂಡಿ ಹಿಪ್ಪೆ ಮಾಡಿಬಿಡುತ್ತಾರೆ ಎಂದೆಲ್ಲಾ ಹೇಳುತ್ತಿದ್ದರು. ಕಲಿಯುವುದಾದರೆ, ಅವರಿಂದಲೇ ಕಲಿಯಬೇಕು ಎಂದುಕೊಂಡೆ. ಸೀಡ್‌ ಅಬಾರ್ಷನ್‌ ಕುರಿತು ಸಂಶೋಧನೆ ಮಾಡಿ ಎಂಎಂಸ್ಸಿ ಮುಗಿಸಿದೆ. ಗಣೇಶಯ್ಯವರು ಬೀಜಗಳಲ್ಲಿ ಆಗುವ ಗರ್ಭಪಾತ, ಸಸ್ಯಗಳಲ್ಲೂ ಇರುವ ದಾಯಾದಿ ಮತ್ಸರ ಕುರಿತು ಅಧ್ಯಯನ ಮಾಡುತ್ತಿದ್ದರು.

ಗಣೇಶಯ್ಯ ಅವರೊಂದಿಗೆ ಮೋಹನ್‌ ತಲಕಾಲುಕೊಪ್ಪ ಮತ್ತು ಗೆಳೆಯರು

ಪಿಎಚ್‌ಡಿ ಮುಗಿಸಿ, ಕೆಲಸದ ಹುಡುಕಾಟದಲ್ಲಿದ್ದಾಗ, ಗಣೇಶಯ್ಯ ಸಿಕ್ಕು, ‘ಒಂದು ಪ್ರಾಜೆಕ್ಟ್‌ ಇದೆ, ಬರುವಿರಾ?’ ಎಂದು ಆಹ್ವಾನಿಸಿದರು. ಸಸ್ಯಗಳ ಡಾಟಾಬೇಸ್‌ ರೂಪಿಸುವ ಕೆಲಸ. ಅಶೋಕ ಟ್ರಸ್ಟ್‌ ಫಾರ್‌ ರೀಸರ್ಚ್‌ ಇನ್‌ ಎಕಾಲಜಿ ಅಂಡ್‌ ಎನ್‌ವೀರಾನ್‌ಮೆಂಟ್‌ ಅಡಿಯಲ್ಲಿ ನಡೆಯುತ್ತಿತ್ತು. ಗಣೇಶಯ್ಯ ಅವರ ಉತ್ಸಾಹ ಅಗಾಧವಾದದ್ದು. ಅವರ ಕೆಲಸದಲ್ಲಿ ಒಂದು ರಭಸ, ತೀವ್ರತೆ ಕಾಣುತ್ತಿತ್ತು. 2002ರಲ್ಲೇ ಸಸ್ಯಗಳ ಸಂಪನ್ಮೂಲ ಕುರಿತು ಡಿಜಿಟೈಸೇಷನ್‌ ಕೆಲಸ ಆರಂಭಿಸಿದವರಲ್ಲಿ ಮೊದಲಿಗರು. ತಂಡದಲ್ಲಿ ಸಮನ್ವಯಾಕಾರನಾಗಿ ಕೆಲಸ ಮಾಡಿದೆ. ಆ ಸಮಯದಲ್ಲಿ ನನಗೆ ಸಾಕಷ್ಟು ಒಳನೋಟಗಳು ಸಿಕ್ಕವು. ಗಣೇಶಯ್ಯವರಿಂದ ಸಾಕಷ್ಟು ಪ್ರಭಾವಿತನಾದೆ.

ಗಣೇಶಯ್ಯ ತಮ್ಮ ನಂತರದ ತಲೆಮಾರಿನ ವಿಜ್ಞಾನಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದರಲ್ಲಿ ದೊಡ್ಡ ಕೊಡುಗೆ ಇದೆ. ಸಾಮಾನ್ಯವಾಗಿ ಶೈಕ್ಷಣಿಕ ವಲಯದಲ್ಲಿ ತಮ್ಮ ನಂತರದ ಸಾಲನ್ನು ಸಿದ್ಧಪಡಿಸುವುದೇ ಅಪರೂಪ. ಬಹು ಹಂತದ ಸಾಲುಗಳನ್ನು ಗಣೇಶಯ್ಯ ರೂಪಿಸಿದರು. ಇದು ನಿಜಕ್ಕೂ ದೊಡ್ಡ ಸಾಧನೆ.

ಕನ್ನಡದಲ್ಲಿ ವಿಜ್ಞಾನ, ಇತಿಹಾಸ ಆಧರಿಸಿದ ಅವರು ಬರೆದ ಕತೆ, ಕಾದಂಬರಿಗಳು ಹೊಸ ಓದುಗ ವರ್ಗವನ್ನೇ ಸೃಷ್ಟಿಸಿದವು. ಅವರು ಕನ್ನಡದ ಡಾನ್‌ ಬ್ರೌನ್‌ ಎನಿಸಿಕೊಂಡರು. ಅವರು ಒಳ್ಳೆಯ ಕತೆಗಾರರು ಎಂಬುದನ್ನು ಸಂಶೋಧನೆಯ ದಿನಗಳಲ್ಲೇ ತಿಳಿದಿತ್ತು.

ಈಗ ಅವರ ಸಸ್ಯ ಸಗ್ಗ ಬರುತ್ತಿದೆ. ಗಣೇಶಯ್ಯ ಅವರು ನಾಲ್ಕು ದಶಕಗಳ ಸಸ್ಯಲೋಕದ ಸಂಶೋಧನೆಯನ್ನು ಬರೆಯುತ್ತಿರುವುದಾಗಿ ಹೇಳಿದಾಗ ಕೇಳಿ ನನಗೆ ರೋಮಾಂಚನವಾಗಿತ್ತು. ಈ ಹೊಸ ಪುಸ್ತಕ ಸಮಕಾಲೀನ ತಲೆಮಾರಿಗೆ ಮಾಹಿತಿಯನ್ನಷ್ಟೇ ಅಲ್ಲ, ಸ್ಫೂರ್ತಿಯನ್ನು ನೀಡುತ್ತದೆ.

ಡಾ. ಮೋಹನ ತಲಕಾಲುಕೊಪ್ಪ, ಕೃಷಿ ವಿಜ್ಞಾನಿ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.