ರಾಜ್ಯೋತ್ಸವ ವಿಶೇಷ |ಕನ್ನಡ ಬೆಳವಣಿಗೆಗೆ ತಂತ್ರಜ್ಞಾನ ಬೇಕು: ಹಿರಿಯ ತಂತ್ರಜ್ಞ ಉದಯ ಶಂಕರ ಪುರಾಣಿಕ

ಕನ್ನಡ ಮತ್ತು ಕರ್ನಾಟಕದ ಅಭಿವೃದ್ಧಿಯಲ್ಲಿ ತಂತ್ರಜ್ಞಾನ ಪಾತ್ರ ಬಹಳ ಮುಖ್ಯವಾದುದು. ಭವಿಷ್ಯದಲ್ಲಿ ಭಾಷೆಯನ್ನು ತಂತ್ರಜ್ಞಾನದ ಮೂಲಕ ಬಲಪಡಿಸುವ ಮೂಲಕ ಅದನ್ನು ಅನ್ನದ ಭಾಷೆಯನ್ನಾಗಿಯೂ ಬೆಳೆಸಬಹುದು ಎಂದು ಹಿರಿಯ ತಂತ್ರಜ್ಞ, ಲೇಖಕ, ಸಂಶೋಧಕ ಉದಯ ಶಂಕರ ಪುರಾಣಿಕ ಹೇಳಿದ್ದಾರೆ. ಟೆಕ್‌ಕನ್ನಡಕ್ಕೆ ನೀಡಿದ ಈ ವಿಶೇಷ ಸಂದರ್ಶನದಲ್ಲಿ ಕನ್ನಡ ಭಾಷೆ ಬೆಳೆಯುವ ಜೊತೆಗೆ ಜಾಗತಿಕ ಸ್ಥಾನವನ್ನು ಗಳಿಸಿಕೊಳ್ಳುವ, ಸಾಧ್ಯತೆ, ಉದ್ಯೋಗಾವಕಾಶ, ಆವಿಷ್ಕಾರಗಳಲ್ಲೂ ಕನ್ನಡತನವನ್ನು ಒಳಗೊಳ್ಳುವ ಹಲವು ಸಾಧ್ಯತೆ ಮತ್ತು ಅಗತ್ಯಗಳ ಕುರಿತು ವಿವರಿಸಿದ್ದಾರೆ.

ಉದಯ ಶಂಕರ ಪುರಾಣಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶಿಷ್ಟ ಹೆಸರು. ತಾಂತ್ರಿಕ ಆವಿಷ್ಕಾರಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿರುವ ಇವರು, ಎರಡು ದಶಕಗಳ ಕಾಲ ಕೊಡಾಕ್,ಸನ್ ಮೈಕ್ರೋಸಿಸ್ಟಂ,ಎಲ್ಪಿಡಾ, ಎಫ್.ಟಿ.ಡಿ, ಐ.ಬಿ.ಎಂ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ನಿರಂತರವಾಗಿ ಸಂಶೋಧನೆಯಲ್ಲಿ ತೊಡಗಿಸಿಕೊಂಡು ಬಂದಿರುವ ಇವರು, ಎಟಿಎಂಗಳಲ್ಲಿ ಕನ್ನಡ ಕಾಣಿಸಿಕೊಳ್ಳುವುದಕ್ಕೆ ಕಾರಣರಾದವರು. ಕನ್ನಡದಲ್ಲಿ ತಂತ್ರಾಂಶ ಅಭಿವೃದ್ಧಿ, ಕರ್ನಾಟಕ ಕುರಿತ ಪ್ರಥಮ ಕನ್ನಡ-ಇಂಗ್ಲೀಷ್ ಭಾಷೆಯ ವೆಬ್ ಸೈಟ್ ಕರ್ನಾಟಕಇನ್ಫೋ.ಕಾಂನ ನಿರ್ವಹಣೆ, ಪ್ರಾಚೀನ ಹಸ್ತಪ್ರತಿ ಸಂರಕ್ಷಣೆಗಾಗಿ ಸೂಕ್ತವಾದ ಸ್ಕ್ಯಾನರ್ ತಂತ್ರಜ್ಞಾನದ ಅಭಿವೃದ್ಧಿ, ಮೊದಲಾದ ಕೆಲಸಗಳನ್ನು ಮಾಡಿದ್ದಾರೆ. ಜೊತೆಗೇ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಆಗುಹೋಗುಗಳನ್ನು ಕುರಿತು ಕನ್ನಡ ಹಲವು ಪತ್ರಿಕೆಗಳಲ್ಲಿ ಲೇಖನ, ಅಂಕಣಗಳನ್ನು ಬರೆಯುತ್ತಿದ್ದಾರೆ.
ಪ್ರಸ್ತುತ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಆಧರಿಸಿ ಕಾರ್ಯನಿರ್ವಹಿಸುವ ಅಮೆಜಾನ್‌ನ ಅಲೆಕ್ಸಾಕ್ಕೆ ಕನ್ನಡ ಕಲಿಸುತ್ತಿದ್ದಾರೆ. ಅಂದರೆ ಅಲೆಕ್ಸಾ ಕನ್ನಡವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.
ಹತ್ತಾರು ದೇಶಗಳನ್ನು ಸುತ್ತಿ ಬಂದಿರುವರ ಇವರು, ಅಲ್ಲಿನ ಭಾಷೆಗಳಿಗೆ ಪೂರಕವಾದ ತಂತ್ರಜ್ಞಾನ ಅಭಿವೃದ್ಧಿ ಪಡಿಸಿ, ಆ ಭಾಷೆಗಳು ಸಬಲವಾಗುವಲ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ.
ಕನ್ನಡ ರಾಜ್ಯೋತ್ಸವ ಈ ಸಂದರ್ಭದಲ್ಲಿ, ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಮಹತ್ವಕಾಂಕ್ಷಿ ಭಾಷೆಯಾಗಿ, ಉದ್ಯೋಗ ನೀಡುವ ಭಾಷೆಯಾಗಿ ಬೆಳೆಸುವ ಕುರಿತು ತಮ್ಮ ಅನುಭವ ಮತ್ತು ಒಳನೋಟಗಳನ್ನು ಹಂಚಿಕೊಂಡಿದ್ದಾರೆ. ಸಾಹಿತ್ಯಕ, ಸಾಂಸ್ಕೃತಿಕ ಪ್ರಯತ್ನಗಳ ಜೊತೆಗೆ ಸಮಕಾಲೀನವಾದ ತಾಂತ್ರಿಕ ಸಾಮರ್ಥ್ಯವನ್ನು ಕಂಡುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ಕನ್ನಡ ಮತ್ತು ಕರ್ನಾಟಕ, ಭಾಷಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪ್ರಗತಿ ಕಾಣಬೇಕಾದರೆ, ತಂತ್ರಜ್ಞಾನದ ಒಳಗೊಳ್ಳುವಿಕೆ ಅತ್ಯಗತ್ಯ ಎಂದು ಉದಯ ಶಂಕರ ಪುರಾಣಿಕರು ಪ್ರತಿಪಾದಿಸಿದ್ದಾರೆ.