ಸಂದರ್ಶನ| ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಹಿಂದುಳಿಯಲು ಸಾಹಿತಿಗಳೇ ಪ್ರಮುಖ ಕಾರಣ: ಪವನಜ

ವಿಕಿಪೀಡಿಯ ಎರಡು ದಶಕಗಳನ್ನು ಪೂರೈಸಿದೆ. ಮುಕ್ತ ಆನ್‌ಲೈನ್‌ ವಿಶ್ವಕೋಶವಾಗಿ, ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದೇ ಇದರ ಮೂಲ ಕಲ್ಪನೆ. ಇಂಗ್ಲಿಷ್‌ನಲ್ಲಿ ಆರಂಭವಾದ ಈ ತಾಣವು ಕನ್ನಡವೂ ಸೇರಿದಂತೆ ಜಗತ್ತಿನ 309 ಭಾಷೆಗಳಲ್ಲಿ ಲಭ್ಯವಿದೆ. ಈ ಸಂದರ್ಭದಲ್ಲಿ ಕನ್ನಡದ ವಿಕಿಪೀಡಿಯಾ ಸಂಪಾದಕರಾಗಿ ಸೇವೆಸಲ್ಲಿಸುತ್ತಿರುವ ಯು ಬಿ ಪವನಜ ಟೆಕ್‌ಕನ್ನಡದೊಂದಿಗೆ ಕನ್ನಡ ವಿಕಿಪೀಡಿಯ ಕುರಿತು ಮಾತನಾಡಿದ್ದಾರೆ

ಯು ಬಿ ಪವನಜ, ಕನ್ನಡದಲ್ಲಿ ತಂತ್ರಜ್ಞಾನ ಬರವಣಿಗೆಯ ಮೂಲಕ ಚಿರಪರಿಚಿತರು. ಮುಂಬಯಿಯ ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಯಾಗಿ ಹಲವು ವರ್ಷ ದುಡಿಮೆ. ತೈವಾನ್‌ನಲ್ಲಿ ಉನ್ನತ ಸಂಶೋಧನೆ. ಗಣಕ ಮತ್ತು ಕನ್ನಡದ ತುಡಿತ ಹೆಚ್ಚಾಗಿ ವಿಜ್ಞಾನಿ ಕೆಲಸಕ್ಕೆ ರಾಜಿನಾಮೆಯಿತ್ತು ಬೆಂಗಳೂರಿಗೆ ಆಗಮನ. ಹಲವು ಕಂಪೆನಿಗಳಲ್ಲಿ ಕೆಲಸ. ಮೈಕ್ರೋಸಾಫ್ಟ್ ಕಂಪೆನಿಗೆ ಭಾರತೀಯ ಭಾಷೆಗಳಿಗೆ ಅದರಲ್ಲೂ ಮುಖ್ಯವಾಗಿ ಕನ್ನಡದ ಸಲಹೆಗಾರ. ಬೆಂಗಳೂರಿನ ದಿ ಸೆಂಟರ್ ಫಾರ್ ಇಂಟರ್‌ನೆಟ್ ಆಂಡ್ ಸೊಸೈಟಿ ಮೂಲಕ ಭಾರತೀಯ ಭಾಷೆಗಳ ವಿಕಿಪೀಡಿಯಕ್ಕೆ ಕೆಲಸ. ಕರಾವಳಿ ವಿಕಿಮೀಡಿಯನ್ಸ್ ಸ್ಥಾಪಕ ಕಾರ್ಯದರ್ಶಿಯಾಗಿದ್ದಾರೆ.

ಕನ್ನಡದಲ್ಲಿ ವಿಕಿಪೀಡಿಯನ್ನು ಕಟ್ಟುವ ಕೆಲಸದಲ್ಲಿ ಸಕ್ರಿಯರಾಗಿರುವ ಇವರು ರಾಜ್ಯದಾದ್ಯಂತ ಪ್ರವಾಸ ನಡೆಸಿ, ವಿಕಿಪೀಡಿಯ ಕಾರ್ಯಾಗಾರವನ್ನು ನಡೆಸುತ್ತಿದ್ದಾರೆ. ವಿಕಿಪೀಡಿಯ ಎರಡನೆಯ ದಶಕವನ್ನು ಪೂರೈಸುತ್ತಿರುವ ಹೊತ್ತಲ್ಲಿ ಟೆಕ್‌ ಕನ್ನಡದ ಜೊತೆಗೆ ಡಿಜಿಟಲ್‌ ಲೋಕದಲ್ಲಿ ಕನ್ನಡದ ಸ್ಥಾನ, ವಿಕಿಪೀಡಿಯ, ಆನ್‌ಲೈನ್‌ನಲ್ಲಿ ಕನ್ನಡ ಬಳಕೆ ಕುರಿತು ಮಾತನಾಡಿದ್ದಾರೆ.

ನೆರೆಯ ಭಾಷೆಗಳಿಗೆ ಹೋಲಿಸಿದರೆ ಡಿಜಿಟಲ್ ಲೋಕದಲ್ಲಿ ಕನ್ನಡ ಭಾಷೆಯ ಸ್ಥಾನವೇನು?

ನೆರೆಯ ಭಾಷೆಗಳು ಎಂದರೆ ತೆಲುಗು, ತಮಿಳು, ಮಲಯಾಳಂ, ಮರಾಠಿ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಈ ಎಲ್ಲ ಭಾಷೆಗಳೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹುತೇಕ ಒಂದೇ ರೀತಿಯಲ್ಲಿವೆ. ಆದರೂ ತಮಿಳು ಕನ್ನಡಕ್ಕಿಂತ ತಕ್ಕ ಮಟ್ಟಿಗೆ ಮುಂದೆ ಇದೆ. ತಮಿಳಿನವರು ತಮಿಳು ತಂತ್ರಾಂಶ, ಡಿಜಿಟಲೀಕರಣ, ವಾಸ್ತವೋಪಮ ಅಕಾಡೆಮಿ ಇತ್ಯಾದಿಗಳಿಗೆಂದೇ ಒಂದು ಪೂರ್ತಿ ಕಟ್ಟಡವನ್ನೇ ಮೀಸಲಿಟ್ಟಿದ್ದಾರೆ. ಅದಕ್ಕಾಗಿ ಹಣವನ್ನೂ ಮೀಸಲಿಟ್ಟಿದ್ದಾರೆ. ಮಲಯಾಳಂನವರು ಮುಕ್ತ ತಂತ್ರಾಂಶ ಕ್ಷೇತ್ರದಲ್ಲಿ ಕನ್ನಡಕ್ಕಿಂತ ಮುಂದೆ ಇದ್ದಾರೆ. ಇಂಗ್ಲಿಷ್ ಭಾಷೆಗೆ ಹೋಲಿಸಿದರೆ ಭಾರತದ ಎಲ್ಲ ಭಾಷೆಗಳೂ ತುಂಬ ಹಿಂದೆ ಇವೆ ಎಂದೇ ಹೇಳಬಹುದು.

‌ಡಿಜಿಟಲ್ ಲೋಕದಲ್ಲಿ ಕನ್ನಡದ ಜ್ಞಾನ ಸಂಪನ್ಮೂಲ ತಾಣಗಳನ್ನು ಪರಿಣಾಮಕಾರಿಯಾಗಿ ರೂಪಿಸಲು ಯಾಕೆ ಆಗಿಲ್ಲ?

ಇಚ್ಛಾಶಕ್ತಿಯ ಕೊರತೆ. ಕನ್ನಡವನ್ನು ಉಳಿಸುವ ಬೆಳೆಸುವ ಹೊಣೆಗಾರಿಕೆಯನ್ನು ತಮ್ಮ ಮೇಲೆ ತಾವೇ ಹೇರಿಕೊಂಡ ಹಲವರು, ಸಂಘ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಮಾಡಬೇಕಾದ ಕೆಲಸವನ್ನು ಮಾಡುತ್ತಿಲ್ಲ. ಕೆಲವೇ ಕೆಲವು ಆಸಕ್ತ ಸ್ವಯಂಸೇವಕರಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಉಳಿದು ಬೆಳೆಯುತ್ತಿದೆ. ಕನ್ನಡದ ಸಾಹಿತಿಗಳು, ಪ್ರಾಧ್ಯಾಪಕರು ಈ ಕ್ಷೇತ್ರದಲ್ಲಿ ಮಾಡಬೇಕಾದ ಕೆಲಸಗಳನ್ನು ಮಾಡುತ್ತಿಲ್ಲ. ವಿ.ವಿ.ಗಳಲ್ಲಿ ಇಂದಿಗೂ xyz ಅವರ ಕಥೆಗಳಲ್ಲಿ ಮಹಿಳೆ, xyz ತಾಲೂಕಿನ ಲೇಖಕರ ಕಥೆಗಳಲ್ಲಿ ಹೆಣ್ಣಿನ ಚಿತ್ರಣ, xyz ಅವರ ನಾಟಕಗಳಲ್ಲಿ ತಲ್ಲಣ, ಇತ್ಯಾದಿ ಸಂಶೋಧನೆಗಳಲ್ಲಿ ನಿರತರಾಗಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾಷಾ ಸಂಬಂಧಿ ಮಾಡಬೇಕಾದ ಸಂಶೋಧನೆಗಳು ಧಂಡಿಯಾಗಿವೆ. ಅವನ್ನು ಎಲ್ಲೋ ಒಂದೆರಡು ಕಡೆ, ಗಣಕ ವಿಜ್ಞಾನಿಗಳು ಮಾಡುತ್ತಿದ್ದಾರೆಯೇ ವಿನಾ ಕನ್ನಡ ಸಂಶೋಧಕರು ತಮ್ಮ ಪಿಎಚ್‌ಡಿಗಾಗಿ ಮಾಡುತ್ತಿಲ್ಲ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಹಿಂದುಳಿದಿರಲು ಕನ್ನಡ ಸಾಹಿತಿಗಳೇ ಪ್ರಮುಖ ಕಾರಣ. ಕನ್ನಡವನ್ನು ಉಳಿಸುವವರು ಇವರೇ, ಇವರಿಂದಲೇ ಕನ್ನಡ ಉಳಿದು ಬೆಳಯುತ್ತಿರುವುದು ಎಂದು ಎಲ್ಲ ಕಡೆ ಅವರನ್ನೇ ಆರಾಧಿಸುವುದೂ ಒಂದು ದೊಡ್ಡ ಕಾರಣ. ಯಾಕೆಂದರೆ ನಿಜವಾಗಿ ಕನ್ನಡ ಉಳಿದು ಬೆಳೆಯಲು ಎಲೆಯ ಮರೆಯ ಕಾಯಿಯಂತೆ ಕೆಲಸ ಮಾಡುತ್ತಿರುವವರಿಗೆ ಯಾವ ಪ್ರೋತ್ಸಾಹ ಪ್ರಶಸ್ತಿಗಳೂ ಇಲ್ಲ.

‌ವಿಕಿಪೀಡಿಯ ದ್ವಿದಶಮಾನೋತ್ಸವ ಆಚರಿಸುತ್ತಿದೆ. ಜ್ಞಾನ ಹರಡುವಲ್ಲಿ ವಿಕಿಪೀಡಿಯ ಈ ದೀರ್ಘ ಅವಧಿಯಲ್ಲಿ ತಂದ ಬದಲಾವಣೆ ಏನು? ಅದರ ಶಕ್ತಿ ಮತ್ತು ಮಿತಿಗಳನ್ನು ಹೇಳಬಹುದೆ?

ವಿಕಿಪೀಡಿಯ ಒಂದು ಮುಕ್ತ ಮತ್ತು ಸ್ವತಂತ್ರ ವಿಶ್ವಕೋಶ. ಇದು ಜನರಿಂದ ಜನರಿಗಾಗಿ ಜನರೇ ನಡೆಸುವ ಒಂದು ವ್ಯವಸ್ಥೆ. ಇದು ಅಂತರಜಾಲದಲ್ಲಿದೆ. ಇದನ್ನು ನಡೆಸುತ್ತಿರುವುದು ವಿಕಿಮೀಡಿಯ ಫೌಂಡೇಶನ್ ಎಂಬ ಸರಕಾರೇತರ ಸಂಸ್ಥೆ. ಇಂಗ್ಲಿಷ್ ವಿಕಿಪೀಡಿಯ ಜನವರಿ 15, 2001ರಲ್ಲಿ ಪ್ರಾರಂಭವಾಯಿತು. ಇಂದು ಇಂಗ್ಲಿಷ್ ವಿಕಿಪೀಡಿಯದಲ್ಲಿ 60 ಲಕ್ಷಕ್ಕಿಂತ ಹೆಚ್ಚು ಲೇಖನಗಳಿವೆ. ವಿಕಿಪೀಡಿಯವು ಅಂತರಜಾಲದಲ್ಲಿರುವ ಜಾಲತಾಣಗಳಲ್ಲಿ 5ನೆ ಅತಿ ಜನಪ್ರಿಯ ಜಾಲತಾಣವಾಗಿದೆ. ಯಾರೇ ಆಗಲಿ ಯಾವುದೇ ಮಾಹಿತಿಯನ್ನು ಹುಡುಕಲು ಬಳಸುವ ಜಾಲತಾಣ ವಿಕಿಪೀಡಿಯ.

ಸಾಮಾನ್ಯವಾಗಿ ಜನರು ಮಾಹಿತಿಯನ್ನು ಹುಡುಕಲು ಗೂಗ್ಲ್ ಬಳಸುತ್ತಾರೆ. ಗೂಗ್ಲ್‌ನಲ್ಲಿ ಒಂದು ವಿಷಯವನ್ನು ಹುಡುಕಿದಾಗ ಸಾಮಾನ್ಯವಾಗಿ ಮೊದಲ ಫಲಿತಾಂಶ ವಿಕಿಪೀಡಿಯದಲ್ಲಿ ಆ ವಿಷಯದ ಬಗೆಗಿನ ಲೇಖನ ಆಗಿರುತ್ತದೆ. ವಿಕಿಪೀಡಿಯವು ಎಲ್ಲರಿಗೂ ಎಲ್ಲ ಕಾಲಕ್ಕೂ ಲಭ್ಯ. ಗಣಕ ಅಥವಾ ಸ್ಮಾರ್ಟ್‌ಫೋನ್ ಹಾಗೂ ಅಂತರಜಾಲ ಸಂಪರ್ಕ ಇರುವ ಯಾರು ಬೇಕಾದರೂ ವಿಕಿಪೀಡಿಯವನ್ನು ಬಳಸಬಹುದು. ವಿಕಿಪೀಡಿಯಕ್ಕೆ ಯಾರು ಬೇಕಾದರೂ ಸಂಪಾದಕರಾಗಬಹುದು. ಇದರಲ್ಲಿ ಪ್ರಧಾನ ಸಂಪಾದಕ, ಉಪ ಸಂಪಾದಕ ಇತ್ಯಾದಿ ಹುದ್ದೆಗಳಿಲ್ಲ. ನೀವು ಬರೆದ ಲೇಖನವನ್ನು ಯಾರೋ ಒಬ್ಬರು ಅನುಮೋದಿಸುವ ಅಗತ್ಯ ಇಲ್ಲಿಲ್ಲ. ಒಬ್ಬರು ಬರೆದ ಲೇಖನವನ್ನು ಇನ್ನೊಬ್ಬರು ತಿದ್ದಿ ಇನ್ನಷ್ಟು ಮಾಹಿತಿ ಸೇರಿಸಬಹುದು, ತಪ್ಪುಗಳಿದ್ದಲ್ಲಿ ಸರಿಪಡಿಸಬಹುದು. ಯಾರು ಬೇಕಾದರೂ ತಿದ್ದಬಹುದು ಎಂಬುದು ಒಂದು ರೀತಿಯ ಮಿತಿಯೂ ಹೌದು. ಇದರಿಂದಾಗಿ ಕೆಲವೊಮ್ಮೆ ಲೇಖನಗಳ ಗುಣಮಟ್ಟ ಕಡಿಮೆಯಾಗುವುದೂ ಇದೆ.

ಸಾಮಾನ್ಯವಾಗಿ ಯಾವ ವಿಕಿಪೀಡಿಯ ಸಮುದಾಯ ಜಾಗೃತವಾಗಿಲ್ಲವೋ ಅಂತಹ ಭಾಷೆಯ ವಿಕಿಪೀಡಿಯದಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೆಲವು ವಿಷಯಗಳ ಬಗ್ಗೆ ಬರೆಯಲು ಆ ಭಾಷೆಯ ವಿಕಿಪೀಡಿಯ ಸಂಪಾದಕ ಸಮುದಾಯದಲ್ಲಿ ಯಾರಿಗೂ ಆಸಕ್ತಿ ಮತ್ತು ಪರಿಣತಿ ಇಲ್ಲದಿದ್ದಲ್ಲಿ ಆ ವಿಷಯದ ಬಗ್ಗೆ ಲೇಖನಗಳು ಕಡಿಮೆ ಇರುತ್ತವೆ. ಇದು ಇನ್ನೊಂದು ಮಿತಿ ಎನ್ನಬಹುದು.

ವಿಕಿಪೀಡಿಯ ಸಂಸ್ಥೆಯ ಸಹ ಸಂಸ್ಥಾಪಕ ಜಿಮ್ಮ ವೇಲ್ಸ್‌ ವಿಕಿಪೀಡಿಯ ಇತಿಹಾಸವನ್ನು ಪರಿಚಯಿಸುವ ಭಾಷಣ

‌ವಿಕಿಪೀಡಿಯ ಜಗತ್ತಿನ ಹಲವು ಭಾಷೆಗಳಲ್ಲಿ ಲಭ್ಯವಾಗಿದೆ. ಭಾರತೀಯ ಭಾಷೆಗಳಲ್ಲೂ ಮಾಹಿತಿ ಪೂರೈಸುತ್ತಿದೆ. ಆದರೆ ಇತರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ ವಿಕಿಪೀಡಿಯಾದಲ್ಲಿ ಹೆಚ್ಚು ಲೇಖನಗಳಿಲ್ಲ. ಯಾಕೆ?

ವಿಕಿಪೀಡಿಯವು ಭಾರತದ 24 ಭಾಷೆಗಳಲ್ಲಿ ಲಭ್ಯವಿದೆ. 23ನೆಯ ಭಾಷೆಯಾಗಿ ತುಳು ಸೇರಿಕೊಂಡಿದೆ. ಕನ್ನಡ ವಿಕಿಪೀಡಿಯ 2003ರಲ್ಲಿ ಪ್ರಾರಂಭವಾಯಿತು. ಸದ್ಯ ಅದರಲ್ಲಿ ಸುಮಾರು 26,000 ಲೇಖನಗಳಿವೆ. ಕನ್ನಡಿಗರು ಎಂದಿನಂತೆ ಸೋಮಾರಿಗಳು ಮತ್ತು ಅಭಿಮಾನಶೂನ್ಯರು. ನಮಗ್ಯಾಕೆ ಎನ್ನುವುದು ಕನ್ನಡಿಗರ ವೇದವಾಕ್ಯ. ಕನ್ನಡದಲ್ಲಿ ಕಥೆ, ಕವನ, ಕಾದಂಬರಿ ಬರೆದರೆ ಸಿಗುವ ಹೊಗಳಿಕೆ, ಪ್ರಶಸ್ತಿ, ಶಾಲು ಸನ್ಮಾನಗಳು ವಿಕಿಪೀಡಿಯದಲ್ಲಿ ಬರೆದರೆ ದೊರೆಯುವುದಿಲ್ಲ. ಬರೆಯುವ ಹಪಾಹಪಿ ಇರುವ ಕೆಲವರಿಗೆ ಇದೂ ಒಂದು ಕಾರಣ ಇರಬಹುದು. ವಿಕಿಪೀಡಿಯಕ್ಕೆ ಬರೆದರೆ ಹಣ ದೊರೆಯುವುದಿಲ್ಲ ಮಾತ್ರವಲ್ಲ ಯಾವುದೇ ಸನ್ಮಾನ ಪ್ರಶಸ್ತಿಗಳು ದೊರೆಯುವುದಿಲ್ಲ. ಲೇಖನದಲ್ಲಿ ನಮ್ಮ ಹೆಸರು ಕೂಡ ಹಾಕುವಂತಿಲ್ಲ ಎಂದರೆ ನಮಗೆ ಬರೆಯಲು ಉತ್ಸಾಹ ಹೇಗೆ ಬರಬೇಕು ಎಂದು ಒಬ್ಬ ಖ್ಯಾತ ಲೇಖಕರು ನನ್ನಲ್ಲಿ ಅಲವತ್ತುಕೊಂಡಿದ್ದಾರೆ.

ವಿಕಿಪೀಡಿಯಕ್ಕೆ ಬರೆಯುವುದೆಂದರೆ ನಿಜವಾದ ಸಮಾಜಸೇವೆ. ಅದನ್ನು ಮಾಡಲು ಮನಸ್ಸು ಬೇಕಷ್ಟೆ. ಕಾಲೇಜುಗಳಲ್ಲಿ ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳಿಗೆ ಕನ್ನಡ ವಿಕಿಪೀಡಿಯಕ್ಕೆ ಲೇಖನ ಬರೆಯಲು ಪ್ರೋತ್ಸಾಹಿಸಬೇಕು. ಹಾಗೆ ಬರೆದುದಕ್ಕೆ ಅಂಕವನ್ನೂ ನೀಡಬಹುದು. ಇದಕ್ಕೆ ವಿಕಿಪೀಡಿಯ ಶಿಕ್ಷಣ ಯೋಜನೆ ಎನ್ನುತ್ತಾರೆ. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಮೂಡುಬಿದಿರೆಯ ಆಳ್ವಾಸ್ ಕಾಲೇಜು, ಬೆಂಗಳೂರಿನ ಕ್ರೈಸ್ಟ್ ವಿ.ವಿ.ಗಳಲ್ಲಿ ಇದು ಈಗಾಗಲೇ ಚಾಲನೆಯಲ್ಲಿದೆ. ಇತರೆ ಕಾಲೇಜುಗಳು ಕೂಡ ತಮ್ಮ ಲ್ಲಿ ಪ್ರಾರಂಭಿಸಬಹುದು. ಕನ್ನಡ ಹೋರಾಟಗಾರರೂ ವಿಕಿಪೀಡಿಯಕ್ಕೆ ಕೊಡುಗೆ ನೀಡುತ್ತಿಲ್ಲ. ಕನ್ನಡ ಅಧ್ಯಾಪಕರಂತೂ, ಬೆರಳೆಣಿಕೆಯಷ್ಟು ಮಂದಿಯನ್ನು ಹೊರತು ಪಡಿಸಿದರೆ, ಕನ್ನಡ ವಿಕಿಪೀಡಿಯದಿಂದ ತುಂಬ ದೂರ ಇದ್ದಾರೆ. ಕನ್ನಡ ಸಾಹಿತಿಗಳು, ಸಂಶೋಧಕರು ಮತ್ತು ಅಧ್ಯಾಪಕರು ಕನ್ನಡ ವಿಕಿಪೀಡಿಯಕ್ಕೆ ಕೊಡುಗೆ ನೀಡಬೇಕು.

‌ವಿಕಿಪೀಡಿಯಾ ಕನ್ನಡದ ಸಂಪನ್ಮೂಲ ವ್ಯಕ್ತಿಯಾಗಿ ಜವಾಬ್ದಾರಿ ಹೊತ್ತ ಮೇಲೆ ನೀವು ಎದುರಿಸಿದ ಸವಾಲುಗಳೇನು?

ವಿಕಿಪೀಡಿಯ ಕನ್ನಡ ಸಂಪನ್ಮೂಲ ವ್ಯಕ್ತಿ ಎಂಬ ಜವಾಬ್ದಾರಿ ಅಥವಾ ಹುದ್ದೆ ಇಲ್ಲ. ಅದನ್ನು ಯಾರು ಬೇಕಾದರೂ ಮಾಡಬಹುದು. 2004ರಿಂದಲೇ ನಾನು ವಿಕಿಪೀಡಿಯ ಸಂಪಾದನೆ ಮಾಡುತ್ತಿದ್ದೇನೆ. 2013ರಲ್ಲಿ ನಾನು ಬೆಂಗಳೂರಿನಲ್ಲಿರುವ ಸೆಂಟರ್ ಫಾರ್ ಇಂಟರ್‌ನೆಟ್ ಆಂಡ್ ಸೊಸೈಟಿ ಎಂಬ ಒಂದು ಸರಕಾರೇತರ ಸಂಸ್ಥೆಗೆ ಸೇರಿದೆ. ಭಾರತದಲ್ಲಿ ವಿಕಿಪೀಡಿಯವನ್ನು ಬೆಳೆಸಲು ಅವರಿಗೆ ವಿಕಿಮೀಡಿಯ ಫೌಂಡೇಶನ್‌ನಿಂದ ಧನಸಹಾಯ ಬರುತ್ತಿದೆ. 2016ರ ತನಕ ನಾನು ಉದ್ಯೋಗಿಯಾಗಿ ವಿಕಿಪೀಡಿಯವನ್ನು ಬಾರತದಲ್ಲಿ (ಕನ್ನಡ ಸಹಿತ) ಬೆಳೆಸಲು ಶ್ರಮಿಸಿದೆ. ಆ ಉದ್ಯೋಗವನ್ನು ಬಿಟ್ಟ ನಂತರವೂ ನಾನು ಯಾವುದೇ ಸಂಬಳವಿಲ್ಲದೆ ವಿಕಿಪೀಡಿಯವನ್ನು ಬೆಳೆಸಲು ಶ್ರಮಿಸುತ್ತಿದ್ದೇನೆ. ಕನ್ನಡಿಗರನ್ನು ಪ್ರೋತ್ಸಾಹಿಸಲು ತುಂಬ ಕಷ್ಟ ಪಡಬೇಕು. ಆದರೂ ಹಲವರು ವಿಕಿಪೀಡಿಯಕ್ಕೆ ಸಂಪಾದಕರಾಗಿ ಕೊಡುಗೆ ನೀಡಲು ಪ್ರಾರಂಬಿಸಿದ್ದಾರೆ. ಕನ್ನಡ ಭಾಷೆ ಉಳಿದು ಬೆಳೆಯಲು ವಿಕಿಪೀಡಿಯವೂ ಅಗತ್ಯ ಎಂಬುದನ್ನು ಹಲವರು ಅರ್ಥ ಮಾಡಿಕೊಂಡಿದ್ದಾರೆ. ಕರಾವಳಿ ವಿಕಿಮೀಡಿಯನ್ಸ್ ಎಂಬ ತಂಡವನ್ನು ಹುಟ್ಟುಹಾಕಿ ಕನ್ನಡ, ತುಳು ಮತ್ತು ಕೊಂಕಣಿ ಭಾಷೆಯ ವಿಕಿಪೀಡಿಯ ಮತ್ತು ಇತರೆ ವಿಕಿಮೀಡಿಯ ಯೋಜನೆಗಳಿಗೆ ಕೆಲಸ ಮಾಡುತ್ತಿದ್ದೇವೆ. ಹಲವು ಯೋಜನೆಗಳು ಚಾಲನೆಯಲ್ಲಿವೆ. ಕನ್ನಡ ವಿಕಿಪೀಡಿಯಕ್ಕೆ 2013ರಲ್ಲಿ 345 ಸಂಪಾದಕರಿದ್ದರು. ಈಗ ಸುಮಾರು 3350b ಸಂಪಾದಕರಿದ್ದಾರೆ. ಸುಮಾರು 150 ಮಂದಿ ಸಕ್ರಿಯರಾಗಿದ್ದಾರೆ (ಡಿಸೆಂಬರ್ 2019). ಯಾವುದೇ ಲಾಭವಿಲ್ಲದೆ ಕೆಲಸ ಮಾಡಬೇಕು ಎಂದರೆ ಜನರನ್ನು ಆ ಕೆಲಸಕ್ಕೆ ತರಲು ತುಂಬ ಕಷ್ಟ ಪಡಬೇಕು. ಆದರೂ ಇದು ನಡೆಯುತ್ತಿದೆ. ನಾನಲ್ಲದಿದ್ದರೆ ಇನ್ಯಾರಾದರೂ ಇದನ್ನು ಮುಂದಕ್ಕೆ ನಡೆಸುತ್ತಾರೆ. ಕನ್ನಡ ಅಷ್ಟು ಸುಲಭದಲ್ಲಿ ನಶಿಸುವ ಭಾಷೆಯಲ್ಲ.

‌ಪ್ರಸ್ತುತ ಕನ್ನಡ ವಿಕಿಪೀಡಿಯದಲ್ಲಿ ಎಷ್ಟು ಲೇಖನಗಳು ಅಪ್ ಡೇಟ್ ಆಗುತ್ತವೆ?

ಕನ್ನಡ ವಿಕಿಪೀಡಿಯದಲ್ಲಿ ಸದ್ಯ ಸುಮಾರು 26,000 ಲೇಖನಗಳಿವೆ. ಡಿಸೆಂಬರ್ 2019ರಲ್ಲಿ ಸುಮಾರು 6000 ಸಂಪಾದನೆಗಳಾಗಿವೆ. ಸುಮಾರು 2000 ಪುಟಗಳು ತಿದ್ದಲ್ಪಟ್ಟಿವೆ. 2000 ಹೊಸ ಲೇಖನಗಳು ಸೇರಿಸಲ್ಪಟ್ಟಿವೆ ಎಂದು ಅರ್ಥವಲ್ಲ. ಕನ್ನಡ ವಿಕಿಪೀಡಿಯವು ಜನವರಿ 2020ರಲ್ಲಿ 63 ಲಕ್ಷ ಸಲ ತೆರೆಯಲ್ಪಟ್ಟಿದೆ. 63 ಲಕ್ಷ ಸಲ ಜನರು ವಿಕಿಪೀಡಿಯಕ್ಕೆ ಭೇಟಿ ನೀಡಿದ್ದಾರೆ ಎಂದರೆ ಅವರು ಯಾವುದೋ ಮಾಹಿತಿಗಾಗಿ ಅಲ್ಲಿ ಭೇಟಿ ನೀಡಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕು. ಆದರೆ ಅವರಿಗೆ ದೊರೆಯುತ್ತಿರುವುದು 26000 ಲೇಖನ ಮಾತ್ರ.

‌ವಿಕಿಪೀಡಿಯವನ್ನು ಜನರ ಬಳಿ ಒಯ್ಯಲು ಕಾರ್ಯಾಗಾರಗಳನ್ನು ಆಯೋಜಿಸುತ್ತಿದ್ದೀರಿ. ಇದುವರೆಗೆ ಎಷ್ಟು ಕಾರ್ಯಾಗಾರಗಳಾಗಿವೆ? ಎಷ್ಟು ಫಲ ನೀಡಿವೆ?

ಸುಮಾರು 300ಕ್ಕಿಂತಲೂ ಹೆಚ್ಚು ಕಾರ್ಯಾಗಾರಗಳಾಗಿವೆ. ಇವುಗಳಲ್ಲಿ ಹಲವು ಉತ್ತಮ ಫಲ ನೀಡಿವೆ. ಈ ಕಾರ್ಯಾಗಾರಗಳ ಉದ್ದೇಶ ವಿಕಿಪೀಡಿಯಕ್ಕೆ ಸಂಪಾದಕರನ್ನು ಸೇರಿಸುವುದು, ಇರುವ ಸಂಪಾದಕರನ್ನು ಬಲಪಡಿಸುವುದು ಮತ್ತು ಹೊಸ ಲೇಖನಗಳನ್ನು ಸೇರಿಸುವುದು. ಹೀಗೆ ಹೊಸದಾಗಿ ಸಂಪಾದಕರಾದವರಲ್ಲಿ ಕೆಲವರು ಸಂಪಾದನೆಯನ್ನು ಮುಂದುವರೆಸುತ್ತಾರೆ. ಸ್ವಲ್ಪ ಸಮಯ ಮುಂದುವರೆಸಿ ಬಿಟ್ಟುಬಿಡುವವರೂ ಇದ್ದಾರೆ. ಹಲವು ವಿಷಯಾಧಾರಿತ ಸಂಪಾದನೋತ್ಸವಗಳನ್ನು ನಡೆಸಿದ್ದೇವೆ. ಇವುಗಳ ಫಲಿತಾಂಶ ಉತ್ತಮವಾಗಿದೆ. ನಾನು ಗಮನಿಸಿದಂತೆ ಆಗಾಗ ಇಂತಹ ಕಾರ್ಯಕ್ರಮಗಳು ನಡೆಯುತ್ತಿರಬೇಕು. ಆಗ ಒಂದು ಸಮುದಾಯ ಬೆಳೆಯುತ್ತದೆ. ಜೊತೆ ವಿಕಿಪೀಡಿಯವೂ ಬೆಳೆಯುತ್ತದೆ.

‌ಕನ್ನಡ ಡಿಜಿಟಲ್ ಹೆಚ್ಚು ಶ್ರೀಮಂತವಾಗಿಸಲು ಏನಾಗಬೇಕಿದೆ? ಯಾರ ಪಾಲ್ಗೊಳ್ಳುವಿಕೆ ಮುಖ್ಯ?

ಈ ಪ್ರಶ್ನೆಗೆ ಉತ್ತರವನ್ನು ಈಗಾಗಲೇ ಮೇಲಿನ ಕೆಲವು ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ನೀಡಿದ್ದೇನೆ. ಮುಖ್ಯವಾಗಿ ಕನ್ನಡ ಸಾಹಿತಿಗಳು ಮತ್ತು ಪ್ರಾಧ್ಯಾಪಕರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಲು ಕೆಲಸ ಮಾಡಬೇಕು. ಈಗ ಮತ್ತು ಮುಂದಿನ ದಿನಗಳಲ್ಲಿ ಎಲ್ಲವೂ ಮಾಹಿತಿ ತಂತ್ರಜ್ಞಾನವನ್ನೇ ಅವಲಂಬಿಸುವ ಕಾರಣ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಅಳವಡಿಕೆ ಮತ್ತು ಬಳಕೆ ಅತೀ ಮುಖ್ಯವಾಗಿದೆ. ಕನ್ನಡ ಅಧ್ಯಾಪಕರ ಜವಾಬ್ದಾರಿ ಇಲ್ಲಿ ಅತಿ ಹೆಚ್ಚು ಮತ್ತು ಮುಖ್ಯ. ಸಾಹಿತಿಗಳೂ ಈ ಬಗ್ಗೆ ಗಮನ ಹರಿಸಿ ಕೆಲಸ ಮಾಡಬೇಕು. ಸಾಹಿತ್ಯ ಸಮ್ಮೇಳನಗಳಲ್ಲಿ ಕೇವಲ ಕಥನ ಸಾಹಿತ್ಯ ಬರೆಯುವವರಿಗೆ ಮಾತ್ರ ಮಣೆ ಹಾಕಿ ಅವರನ್ನೇ ಮೆರವಣಿಗೆ ಮಾಡುವ ಪರಿಪಾಠ ನಿಲ್ಲಬೇಕು. ವಿಷಯಸಾಹಿತ್ಯ ತಯಾರಿಸುವವರಿಗೂ ಮನ್ನಣೆ ಸನ್ಮಾನ ದೊರೆಯಬೇಕು.

ಸರಕಾರದ ಜವಾಬ್ದಾರಿಯೂ ದೊಡ್ಡದಿದೆ. ಹಲವು ಉಪಯುಕ್ತ ತಂತ್ರಾಂಶ ಮತ್ತು ಭಾಷಾ ಸಂಶೋಧನೆಗೆ ಬೇಕಾದ ಮೂಲಭೂತ ಸವಲತ್ತುಗಳ ತಯಾರಿ ಮಾಡಬೇಕು. ಮಾಹಿತಿ ತಂತ್ರಜ್ಞಾನವನ್ನು ಬಳಸಿ ಕನ್ನಡ ಭಾಷಾ ಸಂಶೋಧನೆ (natural language processing) ಮಾಡುವವರಿಗೆ ಸರಕಾರ ಅನುದಾನ ನೀಡಬೇಕು. ಅಂತಹ ಕಾಲೇಜುಗಳಿಗೆ ವಿಶೇಷ ಅನುದಾನ ನೀಡಬೇಕು. ಸರಕಾರ, ವಿಶ್ವವಿದ್ಯಾಲಯ, ಅಕಾಡೆಮಿ, ಸಾಹಿತ್ಯ ಪರಿಷತ್ತುಗಳು ತಮ್ಮ ಎಲ್ಲ ಪುಸ್ತಕಗಳನ್ನು ಮುಕ್ತ ಪರವಾನಿಗೆಯಲ್ಲಿ (creative commons license) ಬಿಡುಗಡೆ ಮಾಡಬೇಕು. ಆಗ ಅವುಗಳನ್ನು ಕನ್ನಡ ವಿಕಿಸೋರ್ಸ್‌ಗೆ ಸೇರಿಸಬಹುದು ಹಾಗೂ ಆ ಮೂಲಕ ಕನ್ನಡ ವಿಕಿಪೀಡಿಯವನ್ನು ಶ್ರೀಮಂತಗೊಳಿಸಬಹುದು. ಮೈಸೂರು ವಿ.ವಿ. ಈಗಾಗಲೆ ತನ್ನ ವಿಶ್ವಕೋಶದ ಎಲ್ಲ 14 ಸಂಪುಟಗಳನ್ನು ಮುಕ್ತ ಪರವಾನಿಗೆಯಲ್ಲಿ ಬಿಡುಗಡೆ ಮಾಡಿದೆ. ಇದರಿಂದಾಗಿ ಕನ್ನಡ ವಿಕಿಸೋರ್ಸ್‌ನಲ್ಲಿ 14000 ಲೇಖನಗಳು ಬಂದಿವೆ. ಅವುಗಳನ್ನು ಬಳಸಿ ಕನ್ನಡ ವಿಕಿಪೀಡಿಯದಲ್ಲಿ ಸುಮಾರು 3000 ಲೇಖನಗಳನ್ನು ಸಂಮೃದ್ಧಗೊಳಿಸಲಾಗಿದೆ. ಆದರೆ ಕನ್ನಡದಲ್ಲಿ ಇದು ತನಕ ಬಂದಿರುವ ಅಗಾಧ ಸಾಹಿತ್ಯಕ್ಕೆ ಹೋಲಿಸಿದರೆ ಇದು ಏನೇನೂ ಸಾಲದು.

ಜನಸಾಮಾನ್ಯರೂ ಕನ್ನಡ ವಿಕಿಪೀಡಿಯಕ್ಕೆ ಸಂಪಾದನೆ ಮಾಡಬಹುದು, ಮಾಡಬೇಕು. ವಿಕಿಪೀಡಿಯವನ್ನು ಸಂಪಾದನೆ ಮಾಡಲು ಕನ್ನಡ ಭಾಷೆಯಲ್ಲಿ ಡಿಗ್ರಿ ಮಾಡಿವರು, ಅಧ್ಯಾಪಕರು, ಸಾಹಿತಿಗಳೇ ಆಗಬೇಕಾಗಿಲ್ಲ. ಕನ್ನಡ ಭಾಷೆ ಗೊತ್ತಿರುವ ಯಾರು ಬೇಕಾದರೂ ಮಾಡಬಹುದು. ಎಲ್ಲರೂ ಸೇರಿ ಮಾಹಿತಿ ತಂತ್ರಜ್ಞಾನವನ್ನು ಬಳಸಿ ಕನ್ನಡವನ್ನು ಉಳಿಸಿ ಬೆಳೆಸಲು ಕೆಲಸ ಮಾಡಬೇಕು.

One thought on “ಸಂದರ್ಶನ| ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಹಿಂದುಳಿಯಲು ಸಾಹಿತಿಗಳೇ ಪ್ರಮುಖ ಕಾರಣ: ಪವನಜ

  1. ತುಂಬ ಉತ್ತಮ ವಿವರಣೆ. ತಂತ್ರಜ್ಞಾನಕ್ಕೋರ್ವರೇ ಪವನಜ. ಕೆಲವು ಸತ್ಯಗಳನ್ನು ಪವನಜ ಹೇಳಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.