ಕಾಡಿನ ವಿಸ್ಮಯಗಳನ್ನು ಬಿಚ್ಚಿಡುವ ವನ್ಯವಿಜ್ಞಾನ ಪತ್ರಿಕೆ ಕಾನನಕ್ಕೆ ಹತ್ತು ವರ್ಷ!

ಕಾಡಿನ ಮೌನದಂತೆ ಸದ್ದೇ ಇಲ್ಲದೆ, ದಶಕ ಕಾಲ ವನ್ಯಲೋಕದ ಅನುಭವಗಳನ್ನು, ವಿಸ್ಮಯಗಳನ್ನು, ಸ್ವಾರಸ್ಯಗಳನ್ನು ಕಟ್ಟಿಕೊಡುತ್ತಾ ಬಂದಿರುವ ಈ ಪತ್ರಿಕೆ, ಹೊಸ ರೂಪ, ಹೊಸ ಹುರುಪಿನಲ್ಲಿ ಓದುಗರನ್ನು ತಲುಪಲು ಸಿದ್ಧವಾಗುತ್ತಿದೆ

‎”ನನಗೂ ಕಾಡಿಗೂ ಇರುವ ಸಂಬಂಧ ನನ್ನ ತಂದೆ, ತಾಯಿ, ಹೆಂಡತಿ, ಮಕ್ಕಳ ಜೊತೆ ಇರುವ ಸಂಬಂಧದಂತೆ ವಿವರಿಸಲಸಾಧ್ಯವಾದಷ್ಟು ನಿಗೂಢವಾದದ್ದು”

”ಸಮಾಜವಾದ ಮನುಷ್ಯರೆಲ್ಲರಲ್ಲೂ ಸಮಾನತೆಯನ್ನು ಬೋಧಿಸಿದ್ದರೆ ಇಕಾಲಜಿ ಇಡೀ ವಿಶ್ವದ ಸರ್ವಚರಾಚರ ವಸ್ತುಗಳೂ ಸಮಾನ, ಮುಖ್ಯ ಎಂದು ಸಾಕ್ಷ್ಯಾಧಾರಗಳ ಸಮೇತ ತೋರಿಸಿಕೊಡುತ್ತಿದೆ”

ಕನ್ನಡ ಸಾಹಿತ್ಯಕ್ಕೆ ವಿಜ್ಞಾನ, ಪರಿಸರ ಸೇರಿದಂತೆ ಹತ್ತು ಹಲವು ಹೊಸ ವಿಚಾರಗಳನ್ನು ಪರಿಚಿಯಿಸಿದ ಪೂರ್ಣ ಚಂದ್ರ ತೇಜಸ್ವಿ ಅವರ ಆಪ್ತರು, ಅಭಿಮಾನಿಗಳಿಂದ ಕಾಡಿನ ಸಂತ ಎಂದು ಕರೆಸಿಕೊಂಡಿದ್ದರು.

ವನ್ಯಲೋಕದ ವಿಸ್ಮಯಗಳನ್ನು ಕನ್ನಡದಲ್ಲಿ ಅವರಂತೆ ವೈಯಕ್ತಿಕ ಅನುಭವಗಳ ಮೂಲಕ ಸ್ವಾರಸ್ಯಕರವಾಗಿ ಕಟ್ಟಿಕೊಟ್ಟ ಇನ್ನೊಬ್ಬ ಕನ್ನಡ ಸಾಹಿತಿ ಸಿಗುವುದಿಲ್ಲ. ಅವರು ಹೇಳಿದ ಮೇಲಿನ ಎರಡು ಮಾತುಗಳು ನಮ್ಮ ಮತ್ತು ವನ್ಯಲೋಕದ ನಂಟನ್ನು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವನ್ನು ಸ್ಪಷ್ಟವಾಗಿ ಹೇಳುತ್ತದೆ.

ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆ, ಜಾಗತಿಕ ತಾಪಮಾನ, ವ್ಯಾಪಕವೂ ತೀವ್ರವೂ ಆಗುತ್ತಿರುವ ಮಾಲಿನ್ಯ ಮನುಕುಲಕ್ಕಷ್ಟೇ ಅಲ್ಲದೆ, ಇಡೀ ಭೂಮಿಗೆ ಅಪಾಯವನ್ನು ತಂದೊಡ್ಡುತ್ತಿದೆ. ಇಂತಹ ದಿನಗಳಲ್ಲಿ ನಮಗೆ ಕಾಡಿನ ಪರಿಸರ, ಅಲ್ಲಿನ ಜೀವಿಗಳ ಬಗ್ಗೆ ತಿಳಿವು ಅತ್ಯಗತ್ಯ. ಸಹಬಾಳ್ವೆ ಎಂಬುದು ಮನುಷ್ಯ ಮನುಷ್ಯನ ನಡುವೆ ಅಷ್ಟೇ ಅಲ್ಲದೆ, ಮನುಷ್ಯ ಮತ್ತು ವನ್ಯಜೀವಿಗಳ ಹೇಗೆ ಸಾಧ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.

ಇಂತಹದ್ದೇ ಒಂದು ಪ್ರಯತ್ನ ಒಂದೂವರೆ ದಶಕದ ಹಿಂದೆ ಉತ್ಸಾಹಿಗಳಿಂದ ಶುರುವಾಯಿತು. ಅದೇ ವರ್ಲ್ಡ್‌ಲೈಫ್‌ ಕನ್ಸರ್ವೇಷನ್‌ ಗ್ರೂಪ್‌. ಇದು ಶಿಕ್ಷಕರು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿ, ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಇರುವ ಮೂವತ್ತು ಆಸಕ್ತರು ಹುಟ್ಟು ಹಾಕಿದ ಗುಂಪು. ವನ್ಯಜೀವಿಗಳು, ಅವುಗಳ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದ ಈ ಗುಂಪು 2010ರ ಡಿಸೆಂಬರ್‌ನಲ್ಲಿ ‘ಕಾನನ’ ಹೆಸರಿನ ಇ ಮಾಸಿಕವನ್ನು ಆರಂಭಿಸಿತು.

ಕೆಲ ಸಂಘ-ಸಂಸ್ಥೆಗಳ ಸಹಾಯದಿಂದ ಸ್ವಲ್ಪ ದಿನಗಳ ಕಾಲ ಮುದ್ರಣ ಪ್ರತಿಗಳನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸುತ್ತಲಿನ ಕೆಲ ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸಲಾಯಿತು. ಮುದ್ರಣ ಪ್ರತಿಯು ಸದ್ಯಕೆ ಧನ ಸಹಾಯ ಇಲ್ಲದೆ ನಿಂತಿದೆ. ಆದರೆ ‘ಇ ಪತ್ರಿಕೆಯ’ ರೂಪದಲ್ಲಿ ಪ್ರತಿ ತಿಂಗಳು ಪ್ರಕಟವಾಗುತ್ತಿದೆ.

ಕಾಡು, ಕಾಡಿನ ಕತೆಗಳು, ವನ್ಯವಿಜ್ಞಾನ, ಕೀಟಲೋಕ, ಕೃಷಿ, ಜೀವವಿಜ್ಞಾನ, ವನ್ಯಜೀವಿ ಛಾಯಾಚಿತ್ರ, ಪರಿಸರಕ್ಕೆ ಸಂಬಂಧಪಟ್ಟ ಕವನಗಳು, ಪ್ರವಾಸ ಕತೆಗಳು, ವರ್ಣಚಿತ್ರಗಳು ಮತ್ತು ಪರಿಸರಕ್ಕೆ ಸಂಬಂಧ ಪಟ್ಟ ನೂರಾರು ಲೇಖನಗಳು ಈ ಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ. ಕೆ ಎನ್‌ ಅಶ್ವಥ ಅವರ ಸಂಪಾದಕತ್ವದಲ್ಲಿ ಪ್ರತಿ ಸಂಚಿಕೆ ರೂಪುಗೊಳ್ಳುತ್ತಿದೆ. ಶಂಕರಪ್ಪ, ವಿಪಿನ್‌ ಬಾಳಿಗ ಸೇರಿದಂತೆ ಎಲ್ಲ ಸದಸ್ಯರು ಪ್ರತಿ ತಿಂಗಳು ವಿಷಯ ಕೇಂದ್ರಿತ ಸಂಚಿಕೆಯನ್ನು ರೂಪಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ದಶಮಾನೋತ್ಸವದ ಹಿನ್ನೆಲೆಯಲ್ಲಿ ಓದುಗರಿಗೆ ಅನುಕೂಲವಾಗಲೆಂದು ಕಾನನದ ಅಧಿಕೃತ ವೆಬ್‌ ಸೈಟ್‌ ಅನ್ನು ಅಭಿವೃದ್ಧಿಪಡಿಸುತ್ತಿದ್ದು ಮೂರು ತಿಂಗಳಲ್ಲಿ ಲಭ್ಯವಾಗಲಿದೆ. ಇದುವರೆಗೂ ಪ್ರಕಟವಾಗಿರುವ ಎಲ್ಲ ಸಂಚಿಕೆಗಳು ಇಲ್ಲಿವೆ. ಆಸಕ್ತರು ನೋಡಬಹುದು.

ದಶಮಾನೋತ್ಸವದ ಹಿನ್ನೆಲೆಯಲ್ಲಿ ಕಾನನದ ತಂಡ ‘ಜೀವಾಂಕುರ’ ವಿಶೇಷ ಸಂಚಿಕೆಯನ್ನು ಹೊರತರುತ್ತಿದ್ದು ಮುದ್ರಿತ ಹಾಗೂ ಇ ಬುಕ್ ರೂಪದಲ್ಲಿ ಲಭ್ಯವಾಗಲಿದೆ.

One thought on “ಕಾಡಿನ ವಿಸ್ಮಯಗಳನ್ನು ಬಿಚ್ಚಿಡುವ ವನ್ಯವಿಜ್ಞಾನ ಪತ್ರಿಕೆ ಕಾನನಕ್ಕೆ ಹತ್ತು ವರ್ಷ!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.