ಸೋಂಕಿನ ಜಾಡು ಹಿಡಿಯುವುದಕ್ಕೆ ಎಲ್ಲರೂ ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ಕರ್ನಾಟಕ ಸರ್ಕಾರವೂ ಕರೋನಾ ವಾಚ್ ಹೆಸರಿನ ಆ್ಯಪ್ ಸಿದ್ಧಪಡಿಸಿ, ಸಾರ್ವಜನಿಕಗೊಳಿಸಿದೆ. ಆದರೆ ಇದು ಈಗ ತೀವ್ರ ಟೀಕೆಗೆ ಗುರಿಯಾಗುತ್ತಿದೆ

ಕರೋನಾ ವೈರಸ್ ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಸಮರೋಪಾದಿಯಲ್ಲಿ ಪ್ರಯತ್ನ ನಡೆಸುತ್ತಿದೆ. ಆದರೆ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಮಾಡುವಲ್ಲಿ ಎದುರಾಗುತ್ತಿರುವ ಸವಾಲಿನಿಂದಾಗಿ ಸೋಂಕು ವ್ಯಾಪಕವಾಗುತ್ತಲೇ ಇದೆ.
ಇಂತಹ ಹೊತ್ತಲ್ಲಿ ಕರ್ನಾಟಕ ಸರ್ಕಾರ ಮೊಬೈಲ್ ಅಪ್ಲಿಕೇಷನ್‌ವೊಂದನ್ನು ಬಿಡುಗಡೆ ಮಾಡಿದೆ. ಕರೋನಾ ವಾಚ್ ಹೆಸರಿನ ಈ ಆ್ಯಪ್ ಸೋಂಕಿಗೆ ಒಳಗಾದವರು, ಅವರ ಪ್ರವಾಸ ಇತಿಹಾಸ, ಅವರು ಇರುವ ಸ್ಥಳ, ಸೋಂಕು ದೃಢಪಟ್ಟಿರುವ ವ್ಯಕ್ತಿರುವ ಇರುವ ಸ್ಥಳ ಇತ್ಯಾದಿ ಮಾಹಿತಿಯನ್ನು ಒದಗಿಸುತ್ತದೆ.

ಈ ಆ್ಯಪ್ ಸಮಗ್ರ ಮಾಹಿತಿಯನ್ನು ಕೊಡುವ ಉದ್ದೇಶವನ್ನು ಹೊಂದಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಕರ್ನಾಟಕ ರಾಜ್ಯ ಜಿಯೋಗ್ರಫಿಕ್ ಇನ್‌ಫಾರ್ಮೇಷನ್ ಸಿಸ್ಟಮ್ಸ್ ಮತ್ತು ರಾಜ್ಯದ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಅಭಿವೃದ್ಧಿಪಡಿಸಿರುವ ಈ ಆಪ್ ಜಿಪಿಎಸ್ ಆಧರಿಸಿ ಕಾರ್ಯನಿರ್ವಹಿಸುತ್ತದೆ.
ಮೊದಲ ಪುಟದಲ್ಲಿ ಸೋಂಕು ದೃಢಪಟ್ಟಿರುವ ವ್ಯಕ್ತಿಗಳು ಭೇಟಿ ನೀಡಿರುವ ಸ್ಥಳಗಳು, ಹತ್ತಿರದ ಆಸ್ಪತ್ರೆ ಅಥವಾ ವೈದ್ಯಕೀಯ ಸೇವೆ ಲಭ್ಯವಿರುವ ಸ್ಥಳಗೂ, ಸಂಗ್ರಹಿಸಲಾದ ಮಾಹಿತಿ ಮತ್ತು ಹೋಮ್ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳ ಮಾಹಿತಿಯನ್ನು ನೀಡುತ್ತದೆ.
ನಾಗರಿಕರು ಎಚ್ಚರವಹಿಸಲು ಹಾಗೂ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಈ ಆ್ಯಪ್ ಒದಗಿಸುವ ಮಾಹಿತಿ ಅತ್ಯಂತ ಮಹತ್ವದ್ದು. ಸೋಂಕು ದೃಢಪಟ್ಟ ವ್ಯಕ್ತಿ ಎಲ್ಲೆಲ್ಲಿ ಹೋಗಿದ್ದಾರೆ, ಯಾವ ಸಮಯದಲ್ಲಿ ಎಲ್ಲಿದ್ದರು ಎಂಬ ವಿವರಗಳನ್ನು ನೀಡುತ್ತದೆ. ಆ್ಯಪ್ ಬಳಕೆದಾರರು ಅದೇ ಸ್ಥಳ-ಸಮಯದಲ್ಲಿ ಅಲ್ಲಿದ್ದರೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ನೆರವಾಗುತ್ತದೆ. ಅಲ್ಲದೆ ಸೋಂಕಿನ ಕುರಿತು ವರದಿ ಮಾಡುವುದಕ್ಕೂ ಇದು ನೆರವಾಗುತ್ತದೆ ಎಂದು ಸರ್ಕಾರ ಹೇಳಿಕೊಂಡಿದೆ.
ಆದರೆ ಆ್ಯಪ್ ಮಾಹಿತಿ ನೀಡುವ ಭರದಲ್ಲಿ ಖಾಸಗಿತನದ ಹಕ್ಕನ್ನೇ ಉಪೇಕ್ಷೆ ಮಾಡಿದಂತೆ ತೋರುತ್ತದೆ.
ಹೋಮ್ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳ ವಿಳಾಸಗಳನ್ನು ಪ್ರಕಟಿಸಿದೆ. ಇದು ಸೋಂಕಿಗೆ ಒಳಗಾದವರ ಖಾಸಗಿತನದ ಹಕ್ಕಿಗೆ ಧಕ್ಕೆ ಉಂಟು ಮಾಡಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾದ ಟೀಕೆ ವ್ಯಕ್ತವಾಗುತ್ತಿದೆ.
ವೈದ್ಯ ವೃತ್ತಿಯಲ್ಲಿ ರೋಗಿಯ ಆರೋಗ್ಯದ ಸ್ಥಿತಿಗತಿಯನ್ನು ಕುಟುಂಬದ ಸದಸ್ಯರಿಗೆ ತಿಳಿಸಿದಕ್ಕೂ ರೋಗಿಯ ಅನುಮತಿಯನ್ನು ಪಡೆಯಬೇಕಾಗುತ್ತದೆ. ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ವೃತ್ತಿನೈತಿಕತೆಯಾಗಿರುತ್ತದೆ. ಸರ್ಕಾರ ಜನರ ಆತಂಕ ನಿವಾರಿಸುವ ಭರದಲ್ಲಿ ಸೋಂಕಿಗೆ ಒಳಗಾದವರ ಮಾಹಿತಿಯನ್ನು ಬಹಿರಂಗೊಳಿಸುವ ಮೂಲಕ ಅನುಚಿತ ಸಾಮಾಜಿಕ ವರ್ತನೆಗಳಿಗೆ ಇಂಬುಕೊಡುವಂತಾಗಿದೆ ಎಂಬ ಟೀಕೆ ಕೇಳಿಬರಲಾರಂಭಿಸಿದೆ.
ಸಾರ್ವಜನಿಕ ವಲಯದಲ್ಲಿರುವ ಅನೇಕರು ಇತ್ತೀಚೆಗೆ ಸೋಂಕಿನ ವಿವರಗಳನ್ನು ಬಚ್ಚಿಟ್ಟು ಪ್ರಯತ್ನ ಮಾಡಿದ ಸುದ್ದಿಗಳು ಕೇಳಿಬರುತ್ತಿವೆ. ಗಣ್ಯರು, ವಿದ್ಯಾವಂತರೇ ಹೀಗೆ ವರ್ತಿಸುತ್ತಿರುವಾಗ, ಸಾಮಾನ್ಯರ ಮಾಹಿತಿ ಬಹಿರಂಗವಾಗುವುದು ಅವರಿಗೆ ವ್ಯಕ್ತಿತ್ವಕ್ಕೆ, ಖಾಸಗಿತನಕ್ಕೆ ಧಕ್ಕೆ ಉಂಟು ಮಾಡುತ್ತದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಎಲ್ಲಿಯೂ ರೋಗಿ/ಸೋಂಕಿಗೆ ಒಳಗಾದ ವ್ಯಕ್ತಿಯ ಹೆಸರು ಬಹಿರಂಗವಾಗಿಲ್ಲವಾದರೂ, ವಿಳಾಸದ ವ್ಯಕ್ತಿಯ ಗುರುತಿಸುವುದು ಕಷ್ಟವಾಗದು. ಇದರಿಂದಾಗಿ ನೆರೆಹೊರೆಯವರಿಂದ ಶೋಷಣೆಗೆ ಒಳಗಾಗುವ ಸಾಧ್ಯತೆಗಳೂ ಇರುತ್ತವೆ. ಸರ್ಕಾರ ಈ ಕೂಡಲೇ ಮಾರ್ಪಾಡುವ ಮಾಡುವ ನಿಟ್ಟಿನಲ್ಲಿ ಚಿಂತಿಸಬೇಕು ಎಂಬ ಒತ್ತಡ ಕೇಳಿಬಂದಿದೆ.
ವಿಪರ್ಯಾಸವೆಂದರೆ ಈ ಆ್ಯಪ್ ನಲ್ಲಿ ರೋಗಿ/ಸೋಂಕಿತರ ವಿಳಾಸಗಳನ್ನು ನೀಡಲಾಗಿದೆ. ಆದರೆ ಮಾದರಿ ಸಂಗ್ರಹಿಸುವ ಕೇಂದ್ರಗಳ ಸಂಪರ್ಕ/ವಿಳಾಸವಿಲ್ಲ. ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿಯೂ ಇಲ್ಲ.
ಇದರ ಜೊತೆಗೆ ಆಪ್‌ನಲ್ಲಿ ಇನ್ನು ಕೆಲವು ಸಮಸ್ಯೆಗಳಿವೆ. ಈ ಆ್ಯಪ್ ಇಂಗ್ಲಿಷ್‌ನಲ್ಲಿದೆ. ಕನ್ನಡದ ಬಳಕೆದಾರರಿಗಾಗಿ ರೂಪಿಸುತ್ತಿರುವಾಗ, ಬಹುದೊಡ್ಡ ಸಂಖ್ಯೆಯ ಜನರಿಗೆ ಅನುಕೂಲವಾಗಲೆಂದೇ ರೂಪಿಸಿದ ಆ್ಯಪ್ ಇಂಗ್ಲಿಷ್‌ನಲ್ಲಿ ಮಾಡಿದ್ದು ಎಷ್ಟು ಅನುಕೂಲಕರ? ಕೇಂದ್ರ ಸರ್ಕಾರವೇ ಪ್ರಾದೇಶಿಕ ಭಾಷೆಗಳಲ್ಲಿ ಕರೋನಾ ಸೋಂಕು ಟ್ರ್ಯಾಂಕ್ ಮಾಡುವ ಮೊಬೈಲ್ ಅಪ್ಲಿಕೇಷನ್‌ಗಳನ್ನು ಬಿಡುಗಡೆ ಮಾಡುವುದಕ್ಕೆ ಸಿದ್ಧವಾಗುತ್ತಿದೆ ಎಂಬುದನ್ನು ಇಲ್ಲಿ ಗಮನಿಸಬೇಕು.
ಕರೋನಾ ವಾಚ್ ಆ್ಯಪ್ ಸಿದ್ಧಪಡಿಸಿ ಕರ್ನಾಟಕ ಸರ್ಕಾರದ ಜಾಲತಾಣದಲ್ಲಿ ಮತ್ತು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.