ಸರ್ಕಾರ ಸಾರ್ವಜನಿಕರ ಮಾಹಿತಿಯನ್ನು ಮಾರುವುದಕ್ಕೆ ಸಿದ್ಧವಾಗಿದೆಯೇ ? ಇತ್ತೀಚೆಗ ಕರ್ನಾಟಕ ಸರ್ಕಾರ ಪ್ರಕಟಿಸಿರುವ ಮುಕ್ತ ದತ್ತಾಂಶ ನೀತಿ ಇದೇ ಪ್ರಶ್ನೆಯನ್ನು ಹುಟ್ಟುಹಾಕಿದೆ. ರಾಜ್ಯದ ಜನತೆಯ ಮಾಹಿತಿಯನ್ನು ಆದಾಯ ಮೂಲವನ್ನಾಗಿಸಿಕೊಳ್ಳಲು ಹೊರಟಿದೆ.
ವಿವಿಧ ಇಲಾಖೆಗಳ ಮೂಲಕ ಸಂಗ್ರಹಿಸಲಾಗಿರುವ ಮಾಹಿತಿಯನ್ನು ಸಾರ್ವಜನಿಕರು, ಸಂಶೋಧಕರು, ಎನ್‌ಜಿಒಗಳು ಹಾಗೂ ನವೋದ್ಯಮಿಗಳಿಗೆ ಉಚಿತವಾಗಿ ನೀಡಲಿದೆ. ಆದರೆ ಕೆಲವು ಮೌಲ್ಯಯುತ ನಿರ್ದಿಷ್ಟ ದತ್ತಾಂಶ ಖರೀದಿಗೂ ಲಭ್ಯ ಇವೆ. ಈ ನಿರ್ದಿಷ್ಟ ದತ್ತಾಂಶ ಮಾರಿ ಸಂಬಂಧಪಟ್ಟ ಇಲಾಖೆಗಳ ಅದಾಯ ಗಳಿಸಲಿದೆ.
ತೆಲಂಗಾಣ, ಒಡಿಷಾ, ಸಿಕ್ಕಿಂ ಮತ್ತು ಪಂಜಾಬ್ ರಾಜ್ಯಗಳ ನಂತರ ಐದನೆ ರಾಜ್ಯವಾಗಿ ಕರ್ನಾಟಕವು ಈ ನೀತಿಯನ್ನು ಅನುಷ್ಠಾನಕ್ಕೆ ತರುತ್ತಿದೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಯೋಜನಾ ನಿರ್ದೇಶಕ ಎಚ್.ಎಂ. ಶ್ರೀವ್ಯಾಸ್ ‘ಪ್ರತಿಯೊಂದು ಇಲಾಖೆಯಲ್ಲೂ ಅಪಾರ ಪ್ರಮಾಣದಲ್ಲಿ ಡಿಜಿಟಲ್ ದತ್ತಾಂಶ ಸೃಷ್ಟಿ ಆಗುತ್ತಿದೆ. ವಿವಿಧ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಸೇವೆಗಳ ಮಾಹಿತಿಗಳನ್ನು ಇಲಾಖೆಗಳಿಗೆ ಹೋಗಿ ಕಾಗದದ ಮೂಲಕ ಪಡೆಯುವುದರ ಬದಲಿಗೆ ಡಿಜಿಟಲ್ ರೂಪದಲ್ಲಿ ಪಡೆಯುವುದಕ್ಕೆ ಈ ವ್ಯವಸ್ಥೆ ರೂಪಿಸಲಾಗಿದೆ’ ಎಂದು ಹೇಳಿದ್ದಾರೆ.
ಯಾವ ರೀತಿಯ ಡೇಟಾ ಲಭ್ಯವಿದೆ?
* ವೈಯಕ್ತಿಕ ಡೇಟಾ: ಇದು ವ್ಯಕ್ತಿಯನ್ನು ಗುರುತಿಸಬಹುದಾದ ಮಾಹಿತಿಯನ್ನು ಸೂಚಿಸುತ್ತದೆ. ಇದರಲ್ಲಿ ವೈಯಕ್ತಿಕ ಹೆಸರು, ವಿಳಾಸ, ಪ್ಯಾನ್, ಆಧಾರ್, ಡ್ರೈವಿಂಗ್ ಲೈಸೆನ್ಸ್ ಮತ್ತು ಇತರ ರೀತಿಯ ಐಡಿಗಳು, ಧರ್ಮದ ವಿವರ. ಇದನ್ನು ಹಂಚಿಕೊಳ್ಳಲು ಅವಕಾಶವಿಲ್ಲ
* ವೈಯಕ್ತಿಕವಲ್ಲದ ಡೇಟಾ: ಇದು ಅನಾಮಧೇಯ ಮಾಹಿತಿ/ಡೇಟಾ. ಇವುಗಳನ್ನು ಬಳಸಿ ಯಾವುದೇ ವ್ಯಕ್ತಿಯನ್ನು ಗುರುತಿಸಲು ಮತ್ತು ವೈಯಕ್ತಿಕ ಮಾಹಿತಿ ಪಡೆಯಲು ಅಸಾಧ್ಯ.
* ಹಂಚಿಕೊಳ್ಳಬಹುದಾದ ಡೇಟಾ: ಸಾರ್ವಜನಿಕ ಬಳಕೆಗೆ ಲಭ್ಯವಿರುವ ಡೇಟಾ, ಋಣಾತ್ಮಕ ಡೇಟಾ ಪಟ್ಟಿಯ ವ್ಯಾಪ್ತಿಗೆ ಒಳಪಡದ ಮತ್ತು ಸೂಕ್ಷ್ಮವಲ್ಲದ ಮಾಹಿತಿಗಳು
* ಸೂಕ್ಷ್ಮ ಮಾಹಿತಿ: ಗೌಪ್ಯತೆಯ ಕಾನೂನುಗಳು, ಕೇಂದ್ರ ಮತ್ತು ರಾಜ್ಯ ಕಾನೂನು ಮತ್ತು ನಿಯಮಗಳಿಂದ ನಿಯಂತ್ರಿಸಲ್ಪಡುವ ಡೇಟಾ. ಇವುಗಳನ್ನು ಹಂಚಿಕೊಳ್ಳುವುದಿಲ್ಲ
* ನಿರ್ಬಂಧಿತ ಮಾಹಿತಿ: ಯಾವುದೇ ಜೀವಕ್ಕೆ ಅಪಾಯ ಅಥವಾ ಸಾರ್ವಜನಿಕ ಆಸ್ತಿಗಳ ನಷ್ಟ ಅಥವಾ ನಿರ್ಣಾಯಕ ಮೂಲ ಸೌಕರ್ಯಗಳಿಗೆ ಧಕ್ಕೆ ಉಂಟು ಮಾಡುವ ಮಾಹಿತಿ ಹಂಚಿಕೊಳ್ಳುವುದಿಲ್ಲ.
ಈ ಮೇಲಿನ ರೀತಿಯಲ್ಲಿ ವರ್ಗೀಕರಿಸಲಾಗಿರುವ ಮಾಹಿತಿಯನ್ನು ಭಾರತದಲ್ಲಿ ನೊಂದಾಯಿಸಿಕೊಂಡಿರುವ ಸಂಸ್ಥೆಗಳು, ಕಾರ್ಪೋರೇಟ್ ಸಂಸ್ಥೆಗಳು, ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳು ಇಲಾಖೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಮಾಹಿತಿ ಖರೀದಿಸಬಹುದು. ಈ ಡೇಟಾಕ್ಕೆ ಶುಲ್ಕವನ್ನು ಸಂಬಂಧಿಸಿದ ಇಲಾಖೆಯೇ ನಿರ್ಧರಿಸುತ್ತದೆ.
ಇಲಾಖೆಗಳ ಡೇಟಾವನ್ನು ಖರೀದಿಸುವ ಅವಕಾಶವನ್ನು ವಿಪುಲವಾಗಿ ಬಳಸಿಕೊಳ್ಳಲಿರುವುದು ಖಾಸಗಿ ಸಂಸ್ಥೆಗಳು. ಡೇಟಾವನ್ನು ವಿವಿಧ ರೀತಿಯಲ್ಲಿ ವರ್ಗೀಕರಿಸಿ, ಖಾಸಗಿತನವನ್ನು ಕಾಯುವ ಭರವಸೆಯನ್ನು ಈ ನೀತಿ ಪ್ರಕಟಿಸಿದೆಯಾದರೂ ಯಾವ ಪ್ರಮಾಣದಲ್ಲಿ ಬದ್ಧತೆ ತೋರಲಿದೆ ಎಂಬುದನ್ನು ಸ್ಪಷ್ಟಪಡಿಸುವುದಿಲ್ಲ.
ಸಾರ್ವಜನಿಕ ಸೇವೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಂತೆ ಕಾಣಿಸುವ ಈ ನಡೆಯ ಬಗ್ಗೆ ತಜ್ಞರಲ್ಲಿ ಭಿನ್ನಾಭಿಪ್ರಾಯಗಳಿವೆ. ಮೂಲಭೂತವಾಗಿ ಈ ನೀತಿ ರೂಪಿಸುವ ಅವಧಿಯಲ್ಲಿ ಸಾರ್ವಜನಿಕ ಚರ್ಚೆ, ಸಮಾಲೋಚನೆ ನಡೆದ ವಿವರಗಳು ಲಭ್ಯವಿಲ್ಲ.
ಡೇಟಾವನ್ನು ಖಾಸಗಿ-ಖಾಸಗಿಯಲ್ಲದ ಮಾಹಿತಿ ಎಂದು ವರ್ಗೀಕರಿಸಿದ್ದರೂ, ಖಾಸಗಿತನಕ್ಕೆ ಧಕ್ಕೆಬರುವ ವಿಷಯದಲ್ಲಿ ಸರ್ಕಾರದ ಯಾವುದೇ ರೀತಿಯ ಖಚಿತ ಕ್ರಮದ ಬಗ್ಗೆ ವಿವರವಿಲ್ಲ. ವ್ಯಕ್ತಿ ಅಥವಾ ಸಂಸ್ಥೆಯ ಯಾವುದೇ ರೀತಿಯ ಮಾಹಿತಿ, ಅದಕ್ಕೆ ಬೆಸೆದುಕೊಂಡ ಇನ್ನೊಂದು ಮಾಹಿತಿಯನ್ನು ಪಡೆಯುವುದಕ್ಕೆ ದಾರಿಯಾಗುವ ಈ ಕಾಲದಲ್ಲಿ ಗೌಪ್ಯತೆ, ಖಾಸಗಿತನ ಸದಾಕಾಲ ದಾಳಿಗೆ ತುತ್ತಾಗುವ ಸಾಧ್ಯತೆ ಇದ್ದೇ ಇದೆ.
ಸರ್ಕಾರ, ತನ್ನ ಸೇವೆಗಳನ್ನು ಸಮರ್ಥಗೊಳಿಸಲು, ದಕ್ಷ ರೀತಿಯಲ್ಲಿ ಅನುಷ್ಠಾನಗೊಳಿಸಲು ಖಾಸಗಿ ಪಾಲುದಾರರನ್ನು ಒಳಗೊಳ್ಳುವ ನಿಟ್ಟಿನಲ್ಲಿ ಮಾಹಿತಿ ಬಳಸಿಕೊಳ್ಳುವ ಕಲ್ಪನೆ ಯೋಗ್ಯವಾದದ್ದು. ಆದರೆ ಖಾಸಗಿ ಸೇವೆಗಳನ್ನು, ವಾಣಿಜ್ಯೋದ್ದೇಶಗಳನ್ನು ಈಡೇರಿಸುವುದಕ್ಕೆ ಸರ್ಕಾರಿ ಡೇಟಾ ಬಳಸಲು ಸಿಗುವ ಈ ಅವಕಾಶ ಖಾಸಗಿತನ ಉಲ್ಲಂಘಿಸುವುದಕ್ಕೆ ಅವಕಾಶ ಮಾಡಿಕೊಡುತ್ತದೆ ಎಂಬ ಕಾಳಜಿಯನ್ನು ಅನೇಕರು ವ್ಯಕ್ತಪಡಿಸುತ್ತಿದ್ದಾರೆ.
ಎಲ್ಲ ಇಲಾಖೆಗಳ ಡೇಟಾವನ್ನು ಒಂದು ವೇದಿಕೆ ತರಲು ಸರ್ಕಾರ ಇಚ್ಚಿಸಿದೆ. ಇದು ಸೈಬರ್ ಸೆಕ್ಯುರಿಟಿ ಅಪಾಯಗಳನ್ನು ಹೆಚ್ಚಿಸುತ್ತದೆ. ಇನ್ನೊಂದೆಡೆ ಖಾಸಗಿ ಮಾಹಿತಿ ರಕ್ಷಣಾ ಮಸೂದೆಯನ್ನು ಜಾರಿಗೆ ಇರುವುದೂ ಕೂಡ ಮಾಹಿತಿಯ ದುರ್ಬಳಕೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.