ಮ್ಯಾನ್‌ಹೋಲ್‌ ಸ್ವಚ್ಛ ಮಾಡಲು ಬಂತು ಬ್ಯಾಂಡಿಕೂಟ್‌ ಎಂಬ ರೊಬೊಟ್‌; ಕೇರಳ ಯುವ ತಂಡದ ನವೀನ ಆವಿಷ್ಕಾರ

ಮ್ಯಾನ್‌ಹೋಲ್‌ ಸ್ವಚ್ಛ ಮಾಡಲು ಇಂದಿಗೂ ಕಾರ್ಮಿಕರೇ ಬಳಕೆಯಾಗುವುದು ಮತ್ತು ದುರಂತ ಕಾಣುವುದು ಸುದ್ದಿಯಾಗುತ್ತಲೇ ಇದೆ. ಈ ಅನ್ಯಾಯದ ಸಾವುಗಳನ್ನು ತಡೆಯಲು ತಂತ್ರಜ್ಞಾನ ನೆರವಿಗೆ ಬರುತ್ತಿದೆ. ಕೇರಳದ ಸ್ಟಾರ್ಟಪ್‌ ಒಂದು ಮ್ಯಾನ್‌ ಹೋಲ್‌ ಸ್ವಚ್ಛ ಮಾಡುವ ರೊಬೊಟ್‌ ಸಿದ್ಧಪಡಿಸಿದೆ

”ಮ್ಯಾನ್‌ಹೋಲ್‌ ಸ್ವಚ್ಛಗೊಳಿಸಲು ಹೋಗಿ ಉಸಿರುಕಟ್ಟಿ ಸತ್ತ ಕಾರ್ಮಿಕರು”
ಇಂಥ ಸುದ್ದಿಗಳು ಆಗಾಗ ಓದುತ್ತಲೇ ಇರುತ್ತವೆ. ಸಾಮಾಜಿಕ ತಾರತಮ್ಯ, ವೃತ್ತಿ ಸುರಕ್ಷತೆ ಎಲ್ಲ ವಿಷಯಗಳಲ್ಲೂ ಅನ್ಯಾಯವನ್ನು ಎದುರಿಸುವ ಈ ಕಾರ್ಮಿಕರು ಅನಾರೋಗ್ಯ, ಅವಘಡಗಳಿಂದ ಸಾವನ್ನಪ್ಪಿದ ಉದಾಹರಣೆಗಳೇ ಹೆಚ್ಚು.

ಭಾರತದಲ್ಲಿ ಮ್ಯಾನ್ಯುಯಲ್‌ ಸ್ಕ್ಯಾವೇಜಿಂಗ್‌ ಅಪರಾಧ. ಆದರೆ ಇಂದಿಗೂ ಪೌರಕಾರ್ಮಿಕರು ಮ್ಯಾನ್‌ಹೋಲ್‌ಗೆ ಇಳಿದು ಸ್ವಚ್ಛ ಮಾಡುತ್ತಲೇ ಇದ್ದಾರೆ. ಇದನ್ನು ತಪ್ಪಿಸಬಹುದೆಂದು ಕೇರಳದ ಜೆನ್‌ರೊಬೊಟಿಕ್‌ ಇನ್ನೋವೇಷನ್‌ ಹೇಳುತ್ತಿದೆ. ಇತ್ತೀಚೆಗೆ ಅಭಿವೃದ್ಧಿ ಪಡಿಸಿದ ರೊಬೊಟ್‌ ಮ್ಯಾನ್‌ಹೋಲ್‌ ಸ್ವಚ್ಛ ಕಾರ್ಯದಲ್ಲಿ ಸಮರ್ಥವಾಗಿ ಬಳಕೆಯಾಗುತ್ತದೆ ಎಂಬುದನ್ನು ಸಾಬೀತು ಪಡಿಸಿದೆ.

ಬ್ಯಾಂಡಿಕೂಟ್‌ ಹೆಸರಿನ ಈ ರೊಬೊಟಿಕ್‌ ಸ್ಕ್ಯಾವೇಂಜರ್‌ ಇತ್ತೀಚೆಗೆ ಕೇರಳದಲ್ಲಿ ನಡೆದ ಕೇರಳ ಸ್ಟಾರ್ಟಪ್‌ ಸಮಿಟ್‌ , ಹಡಲ್‌ ಕೇರಳದಲ್ಲಿ ಪ್ರದರ್ಶನಗೊಂಡಿತು. ಅಪಾರ ಮೆಚ್ಚುಗೆಯನ್ನು ಗಳಿಸಿದ ಈ ರೊಬೊಟಿಕ್‌ನ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು ಮುಂದಾಗಿದ್ದು, ಟಾಟಾ ಬ್ರಾಬೊ ಅವರೊಂದಿಗೆ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದೆ.

ಮನುಷ್ಯರು ಮ್ಯಾನ್‌ಹೋಲ್‌ ಸ್ವಚ್ಛ ಮಾಡುವುದನ್ನು ತಪ್ಪಿಸಲೆಂದೇ ನಿರ್ಮಿಸಲಾದ ಈ ರೊಬೊಟ್‌ ಅನ್ನು ಹೆಚ್ಚಿನ ಗುಣಮಟ್ಟದೊಂದಿಗೆ ಅಭಿವೃದ್ಧಿಪಡಿಸಿ, ಎಲ್ಲೆಡೆ ಮನುಷ್ಯರ ಬದಲು ರೊಬೊಟ್‌ ಬಳಸುವಂತೆ ಮಾಡಬೇಕೆಂಬ ಆಶಯದೊಂದಿಗೆ ಜೆನ್‌ರೊಬೊಟಿಕ್ಸ್‌ ಸಂಸ್ಥೆ ಶ್ರಮಿಸುತ್ತಿದೆ.

ನಾಲ್ಕು ವರ್ಷಗಳ ಹಿಂದೆ ಆರಂಭವಾದ ಜೆನ್‌ರೊಬೊಟಿಕ್‌ ಇನ್ನೋವೇಷನ್ಸ್‌, ವಿಶ್ವದಲ್ಲೇ ಮೊದಲ ಬಾರಿಗೆ ಯಂತ್ರಗಳಿಂದ ಮ್ಯಾನ್‌ಹೋಲ್‌ ಸ್ವಚ್ಛಗೊಳಿಸುವ ಆಲೋಚನೆಯನ್ನು ಸಾಕಾರ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿಮಲ್‌ ಗೋವಿಂದ್‌ ಎಂಕೆ, ರಶಿದ್‌ ಕೆ, ಅರುಣ್‌ಜಾಜ್‌ ಮತ್ತು ನಿಖಿಲ್‌ ಸೇರಿ ಆರಂಭಿಸಿದ ಜೆನ್‌ ರೊಬೊಟಿಕ್ಸ್‌ ಸಂಸ್ಥೆಯು ರೊಬೊಟಿಕ್ಸ್‌ ಮತ್ತು ಆಟೊಮೇಷನ್‌ ಕ್ಷೇತ್ರದಲ್ಲಿ ನವೀನ ಪ್ರಯೋಗ ಮಾಡುವ ಉದ್ದೇಶದೊಂದಿಗೆ ಕಾರ್ಯಾರಂಭ ಮಾಡಿತು. ಇದೇ ಸಂದರ್ಭದಲ್ಲಿ ಕೊಳಿಕ್ಕೋಡ್‌ನಲ್ಲಿ ಮ್ಯಾನ್‌ಹೋಲ್‌ ಸ್ವಚ್ಛ ಮಾಡಲು ಹೋದ ಕಾರ್ಮಿಕರು ಅಸುನೀಗಿದರು.

ಚಿತ್ರಕೃಪೆ : electronicsforu.com

ಸಾಮಾಜಿಕ ಸಮಸ್ಯೆಗಳಿಗೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂಬ ಕಾಳಜಿ ಇದ್ದ ಜೆನ್‌ರೊಬೊಟಿಕ್ಸ್‌ ರೊಬೊಟ್‌ ಬಳಸಿ ಮ್ಯಾನ್‌ ಸ್ವಚ್ಛ ಮಾಡುವ ಆಲೋಚನೆಯನ್ನು ಕಾರ್ಯರೂಪಕ್ಕೆ ತರಲು ಕೆಲಸ ಆರಂಭಿಸಿದರು.

ಕೇರಳ ಸ್ಟಾರ್ಟಪ್‌ ಮಿಷನ್‌ ಮತ್ತು ಕೇರಳ ಜಲ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ತಮ್ಮ ಸಂಶೋಧನೆ ಮತ್ತು ಯೋಜನೆಯನ್ನು ಕುರಿತು ವಿವರಿಸಿದರು. ಜೊತೆಗೆ ಜೆನ್‌ರೊಬೊಟಿಕ್ಸ್‌ ತಂಡಕ್ಕೆ ಮ್ಯಾನ್‌ಹೋಲ್‌ಗಳ ಸಂಖ್ಯೆ, ಸ್ವರೂಪ, ಅವುಗಳನ್ನು ಸ್ವಚ್ಛ ಮಾಡುವ ಕುರಿತ ಮಾಹಿತಿಯೂ ಲಭಿಸಿತು.

ಈ ಮಾಹಿತಿಗಳನ್ನು ಆಧರಿಸಿ 2017ರಲ್ಲಿ ಮೊದಲ ಬ್ಯಾಂಡಿಕೂಟ್‌ ಸಿದ್ಧಪಡಿಸಲಾಯಿತು. ಹಲವು ಪರೀಕ್ಷೆ, ಸುಧಾರಣೆಗಳ ಬಳಿಕ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಅವರ ಮುಂದೆ ಪ್ರಾತ್ಯಕ್ಷಿಕೆ ನೀಡಲಾಯಿತು. ಅಪಾರ ಮೆಚ್ಚುಗೆಯನ್ನು ಗಳಿಸಿದ ಈ ಮಾದರಿಯನ್ನು ವಾಣಿಜ್ಯ ಉದ್ದೇಶಗಳಿಗೆಂದು ಉತ್ಪಾದಿಸುವುದಕ್ಕೆ ನಿರ್ಧರಿಸಲಾಯಿತು. ಅದರಂತೆ 2018ರ ಫೆಬ್ರವರಿಯಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಕೇರಳದಲ್ಲಿ ಬ್ಯಾಂಡಿಕೂಟ್‌ ರೊಬೊಟ್‌ ಅನ್ನು ಬಳಸಲಾಯಿತು. ಅದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಬ್ಯಾಂಡಿಕೂಟ್‌ ವಾಟರ್‌ಪ್ರೂಫ್‌, ನೈಟ್‌ವಿಷನ್‌ ಕ್ಯಾಮೆರಾ ಇರುವ ರೊಬೊಟ್‌. ಇದು 4ಕೆ ರೆಸಲ್ಯುಷನ್‌ ವಿಡಿಯೋ ಮತ್ತು ಫೋಟೋಗಳನ್ನು ಸೆರೆಹಿಡಿದು ರವಾನಿಸುತ್ತದೆ. ನೀರಿನೊಳಗಿದ್ದರೂ ಸಮರ್ಥವಾಗಿ ಸಂವಹನ ನಡೆಸುತ್ತದೆ. ಇದರಲ್ಲಿರುವ ಸೆನ್ಸಾರ್‌, ಮ್ಯಾನ್‌ಹೋಲ್‌ ವಿಸ್ತೀರ್ಣ, ಅದರೊಳಗಿರುವ ಪದಾರ್ಥಗಳು, ರಾಸಾಯನಿಕಗಳು, ತೇವಾಂಶ, ಉಷ್ಣಾಂಶ ಎಲ್ಲವನ್ನು ಗ್ರಹಿಸುವ ಸಾಮರ್ಥವನ್ನು ಹೊಂದಿದೆ. ರೊಬೊಟ್‌ ಕೈಗಳು 5 ರಿಂದ 360ಡಿಗ್ರಿ ಕೋನದಲ್ಲಿ ಚಾಚಿಕೊಳ್ಳಬಲ್ಲವು. ರೊಬೊಟ್‌ಗೆ ಜೋಡಿಸಲಾಗಿರುವ ಬಕೆಟ್‌ 18 ಲೀಟರ್‌ನಷ್ಟು ತ್ಯಾಜ್ಯವನ್ನು ಹೊರಬಲ್ಲದು. ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ತಂತ್ರಜ್ಞಾನ ಆಧರಿಸಿ ಕೆಲಸ ಮಾಡುವ ಈ ರೊಬೊಟ್‌ ಅನ್ನು ನ್ಯಾನೊ ಕಾರ್ಬನ್‌ ಫೈಬರ್‌ ಬಳಸಿ ನಿರ್ಮಿಸಲಾಗಿದೆ. ಹಾಗಾಗಿ ಯಾವುದೇ ಹಾನಿಕಾರ ಅನಿಲ ಮತ್ತು ರಾಸಾಯನಿಕಗಳಿಂದ ಈ ಯಂತ್ರ ಹಾಳಾಗುವುದಿಲ್ಲ.

ತಂತ್ರಜ್ಞಾನದ ಪ್ರಾಥಮಿಕ ಜ್ಞಾನವಿಲ್ಲದ ವ್ಯಕ್ತಿಯೂ ಸುಲಭವಾಗಿ ಇದನ್ನುನಿರ್ವಹಿಸುವಷ್ಟು ಸರಳವಾಗಿದೆ ಎಂದು ಜೆನ್‌ರೊಬೊಟಿಕ್ಸ್ ತಂಡ ಹೇಳುತ್ತದೆ. ಕೇರಳ ಜೊತೆಗೆ ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ಬ್ಯಾಂಡಿಕೂಟ್‌ಅನ್ನು ಪ್ರಯೋಗಾರ್ಥ ಬಳಸಲಾಗುತ್ತಿದೆ. 25 ಲೀಟರ್‌ ತ್ಯಾಜ್ಯವನ್ನು ಎತ್ತಬಲ್ಲ ಬಕೆಟ್‌, ಸ್ಕ್ರೀನ್‌ ಟ್ರೇನಿಂಗ್‌ ಅಪ್ಲಿಕೇಷನ್‌ ಇರುವ ಕಂಟ್ರೋಲ್‌ ಪ್ಯಾನೆಲ್‌ ಒಳಗೊಂಡ ಬ್ಯಾಂಡಿಕೂಟ್‌ 2.0ವನ್ನು ಪರಿಚಯಿಸುವುದಕ್ಕೆ ಜೆನ್‌ರೊಬೊಟಿಕ್ಸ್‌ ತಂಡ ಸಜ್ಜಾಗಿದೆ.

ಮಹತ್ವಕಾಂಕ್ಷೆ ಹೊಂದಿರುವ ಈ ಸಂಸ್ಥೆ 2020ರ ಹೊತ್ತಿಗೆ ಭಾರತವನ್ನು ಮನುಷ್ಯರಿಂದ ಮ್ಯಾನ್‌ಹೋಲ್‌ ಸ್ವಚ್ಛ ಮಾಡಿಸುವ ಪದ್ಧತಿಯನ್ನೇ ಇಲ್ಲವಾಗಿಸಬೇಕೆಂಬ ಗುರಿ ಇಟ್ಟುಕೊಂಡಿದೆ.
ಈಗ ಭಾರತದ ಮೊದಲ ದೇಶಿ ರೊಬೊಟ್‌ ಉತ್ಪಾದನಾ ಸಂಸ್ಥೆಯಾದ, ಟಾಟಾ ಬ್ರಾಬೊ ಮಾಲೀಕತ್ವದ ಬ್ರಾಬೊ ರೊಬೊಟಿಕ್ಸ್‌ ಅಂಡ್‌ ಆಟೋಮೇಷನ್‌ ಲಿಮಿಟೆಡ್‌ ಜೊತೆಗೆ ಬ್ಯಾಂಡಿಕೂಟ್‌ ಉತ್ಪಾದನೆಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಸಾಮಾಜಿಕ ಸಮಸ್ಯೆಗಳಿಗೆ ತಂತ್ರಜ್ಞಾನದ ಸ್ಪರ್ಶ ದೊಡ್ಡ ಬದಲಾವಣೆಯನ್ನು ತರಬಲ್ಲದು ಎಂಬುದಕ್ಕೆ ಈ ಆವಿಷ್ಕಾರ ಒಂದು ಉತ್ತಮ ನಿರ್ದಶನ.