ಆತ್ಮನಿರ್ಭರತೆಗೆ ಪ್ರಾಣ ಸಂಕಟ: ಭಾರತದ ಈ ಫೋನ್ ಖರೀದಿಸಿದರೇ ನಷ್ಟ- ಬಿಟ್ಟರೂ ಕಷ್ಟ..!

ಚೀನಾ ವಸ್ತುಗಳು ಬೇಡ ನಮಗೆ, ಭಾರತೀಯ-ಸ್ವದೇಶಿ ಉತ್ಪನ್ನಗಳನ್ನು ಬಳಕೆ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದವರಿಗೆ ಈಗ ಪ್ರಾಣ ಸಂಕಟ ಶುರುವಾಗಿದೆ. ಭಾರತೀಯ ಮೂಲದ ಕಂಪನಿಗಳು ಸ್ಮಾರ್ಟ್‌ಫೋನ್‌ ಲಾಂಚ್ ಮಾಡಿದರೆ ಖರೀದಿಸುತ್ತೇವೆ ಎಂದವರಿಗೆ ಈಗ ಬಿಡುಗಡೆಯಾಗಿರುವ ಭಾರತೀಯ ಫೋನ್ ಅನ್ನು ಖರೀದಿಸಿದರೆ ನಷ್ಟ, ಬಿಟ್ಟರೇ ಯಾರು ಏನು ಅಂದುಕೊಳ್ಳುತ್ತಾರೋ ಎನ್ನುವ ಕಷ್ಟ ಎದುರಾಗಿದೆ.

ಭಾರತೀಯ ಮೂಲದ ಲಾವಾ ಕಂಪನಿ Z61 ಪ್ರೋ ಎನ್ನುವ ಸ್ಮಾರ್ಟ್‌ಫೋನ್‌ವೊಂದನ್ನು ಬಜೆಟ್ ಬೆಲೆಯಲ್ಲಿ ಲಾಂಚ್ ಮಾಡಿದೆ. ಅದುವೇ ಬೆಲೆಗೆ ತಕ್ಕಂತೆ ಚಿಕ್ಕದಾಗಿದೆ. ಕೈನಲ್ಲಿ ಚೀನಾ ಪೋನ್ ಹಿಡಿದುಕೊಂಡು ಚೀನಾ ಆಪ್ ಡಿಲೀಟ್ ಮಾಡಿ, ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎನ್ನುವವರು ಈಗ ಚೀನಾ ಫೋನ್ ಅನ್ನು ಬಿಸಾಕಿ ಈ ಆತ್ಮನಿರ್ಭರತೆಯ ಫೋನ್‌ ಅನ್ನು ಬಳಸಲು ಶುರು ಮಾಡಬಹುದು.

5.45 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರುವ ಲಾವಾ Z61 ಪ್ರೋ ಸ್ಮಾರ್ಟ್‌ಫೋನ್ ರೂ. 5,774 ಗಳಿಗೆ ಮಾರಾಟವಾಗಲಿದೆ. 720 x 1,440 p ಗುಣಮಟ್ಟದ ಡಿಸ್‌ಪ್ಲೇಯನ್ನು ಹೊಂದಿರುವುದರೊಂದಿಗೆ ಮುಂಭಾಗದಲ್ಲಿ 5MP ಕ್ಯಾಮೆರಾ, ಹಿಂಭಾಗದಲ್ಲಿ 8 MP ಹಿಂಭಾಗದ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಫೇಸ್‌ಲಾಕ್ ವ್ಯವಸ್ಥೆಯನ್ನು ಇದರಲ್ಲಿ ಕಾಣಬಹುದು. 

1.6 GHz ವೇಗದ ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ 2 GB RAM ಸಹ ಇದರಲ್ಲಿದೆ, ಆಂಡ್ರಾಯ್ಡ್‌ ಗೋನಲ್ಲಿ ಕಾರ್ಯನಿರ್ವಹಿಸುವ ಈ ಪೋನ್ 16 GB  ಇಂಟರ್ನಲ್ ಮೊಮೊರಿಯೊಂದಿಗೆ 4G VoLTE ಸಹ ಹೊಂದಿದೆ. ಈ ಸ್ಮಾರ್ಟ್‌ಫೋನ್ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ದೊರೆಯಲಿದೆ.

ಇದನ್ನು ನೋಡಿ: ಬಡ ದೇಶಗಳಿಗೆ ಸಹಾಯ ಮಾಡುವ ಮುಖವಾಡ ತೊಟ್ಟ ದೈತ್ಯ ಟೆಕ್ ಕಂಪನಿಗಳ ಮೊದಲ ಹೆಜ್ಜೆ…!

ಕಳೆದ ಕೆಲವು ದಿನಗಳಿಂದ ಆತ್ಮನಿರ್ಭರತೆಯ ಬಗ್ಗೆ ಮಾತನಾಡುತ್ತಿದ್ದವರಿಗೆ ಹೇಳಿ ಮಾಡಿಸಿದ ಹಾಗೇ ಭಾರತದಲ್ಲಿಯೇ ತಯಾರಾದ ಪೋನ್ ಇದಾಗಿದೆ. ಆದರೆ ಇವರ್ಯಾರು ಸಹ ಈ ಫೋನ್ ಅನ್ನು ಖರೀದಿಸುವುದಿಲ್ಲ ಎನ್ನುವುದರಲ್ಲಿ ಎರಡು ಮಾತಿಲ್ಲ. ವೇಗದ, ದೊಡ್ಡದಾದ, ಉತ್ತಮ ಕ್ಯಾಮೆರಾ ಹೊಂದಿರುವ ಮತ್ತು ರಂಗರಾಗಿರುವ ಚೀನಾ ಫೋನ್‌ ಬಳಸುತ್ತಿದ್ದವರಿಗೆ ಇದು ಸರಿ ಹೊಂದುವುದೇ ಇಲ್ಲ.

ಒಂದು ವೇಳೆ ಈ ಫೋನ್ ಖರೀದಿ ಮಾಡಿದರು ಸಹ ಚೀನಾ ವಸ್ತುವನ್ನು ಖರೀದಿಸಿದಂತೆಯೇ ಸರಿ. ಕಾರಣ ಈ ಫೋನ್ ನ ಹಲವು ಪ್ರಮುಖ ಭಾಗಗಳು ತಯಾರಾಗಿ ಆಮದಾಗಿರುವುದು ಚೀನಾದಿಂದಲೇ. ಇದೊಂತರ ‘ಅತ್ತ ದರಿ, ಇತ್ತ ಪುಲಿ’ ಎನ್ನುವಂತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.