ಬೆಂಗಳೂರು ಐಟಿ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ಜಗತ್ತಿನ ವಿವಿಧ ಭಾಗ ತಂತ್ರಜ್ಞರು, ಉದ್ಯಮಿಗಳು ಬಂದು ನವೋದ್ಯಮಿಗಳಿಗೆ ಚಾಲನೆ ನೀಡುತ್ತಿದ್ದಾರೆ. ಆದರೆ ಕನ್ನಡಿಗರೇ ಇಂಥ ಪ್ರಯತ್ನ ಮಾಡಿದ ಉದಾಹರಣೆಗಳಿವೆಯೇ? ಕೇರಳಿಗರಿಂದ ಈ ನಿಟ್ಟಿನಲ್ಲಿ ಒಂದಿಷ್ಟು ಕಲಿಯುವುದಿದೆ

ಬೆಂಗಳೂರು ಸ್ಟಾರ್ಟಪ್‌ಗಳ ಜಾಗತಿಕ ಹಬ್ ಎಂದು ಬೀಗುತ್ತದೆ. ಆದರೆ ಈ ವಿಚಾರದಲ್ಲಿ ಪಕ್ಕದ ಕೇರಳದಿಂದ ಕಲಿಯಬೇಕಾದ ವಿಚಾರಗಳಿವೆ. ಸ್ಟಾರ್ಟಪ್ ಪಾಲಿಸಿಗಳನ್ನು ಎಲ್ಲಾ ರಾಜ್ಯಗಳೂ ಹೊಂದಿವೆ, ಆದರೆ ಅದಕ್ಕೂ ಮೊದಲೇ ಬೆಂಗಳೂರು ಮಾಹಿತಿ ತಂತ್ರಜ್ಞಾನದ ಕೇಂದ್ರವಾಗಿದ್ದ ಕಾರಣ ಸ್ಟಾರ್ಟಪ್‌ಗಳಿಗೆ ಬೇಕಾದ ವಾತಾವರಣವಿದೆ. ಭಾರತದ ವಿವಿಧ ರಾಜ್ಯಗಳಲ್ಲಿ ಕಲಿತ ಹುಡುಗರ ಐಡಿಯಾಗಳು ಬೆಂಗಳೂರಿನಲ್ಲಿ ಫಲಿಸುತ್ತವೆ. ಫ್ಲಿಪ್‌ಕಾರ್ಟ್, ಓಲಾ ಆರಂಭವಾದದ್ದು ಬೆಂಗಳೂರಿನಲ್ಲೇ ನಿಜ, ಆದರೆ ಕನ್ನಡಿಗರಿಂದಲೇ? ಇದನ್ನು ಕನ್ನಡಿಗರಲ್ಲದವರು ಮಾಡಿದರು ಎಂದು ಬೆರಳು ತೋರಿಸುತ್ತಿರುವುದಲ್ಲ, ಬದಲಾಗಿ ಕನ್ನಡಿಗರು ಅದರ ಸ್ಥಾಪಕರಲ್ಲ ಎಂಬ ಸಣ್ಣ ಸೂಕ್ಷ್ಮವನ್ನು ಗಮನಿಸುವುದಷ್ಟೇ.
ಆದರೆ ಕೇರಳದ ಸ್ಟಾರ್ಟಪ್‌ಗಳ ಪೈಕಿ ಅಲ್ಲಿಯ ಮಣ್ಣಿನ ವಾಸನೆಯಿದೆ.
ಇಲ್ಲಿನ ಪುಟ್ಟ ಊರುಗಳಲ್ಲಿ ಈಗಷ್ಟೇ ಯೌವನಕ್ಕೆ ಕಾಲಿಟ್ಟ ಹುಡುಗ ಹುಡುಗಿಯರು ಹೊಸ ಐಡಿಯಾದ ಹಿಂದೆ ಬೀಳಲು ತವಕಿಸುವುದು ಕಾಣುತ್ತದೆ. ಅವರಿಗೆ ತೀರಾ ಜಾಗತಿಕ ವಿದ್ಯಮಾನಗಳ ಬಗೆಗಿನ ಕುತೂಹಲಕ್ಕಿಂತ ಹೆಚ್ಚು ಅವರ ತಲೆಯ ಮೇಲಿನ ಸೂರ್ಯನ ಬಗ್ಗೆ ಹೆಚ್ಚು ಆಸಕ್ತಿಯಿದೆ.
ನೀರು ಶುದ್ಧೀಕರಣಕ್ಕೆ ಕೇರಳದಲ್ಲಿ ಪಾರಂಪರಿಕವಾಗಿ ಬಳಕೆ ಮಾಡುವ ಕೆಲ ಮೂಲಿಕೆಗಳ ‘ರೆಡಿ ಟು ಯೂಸ್’ ಮಾತ್ರೆಗಳು, ಬಾಟಲಿಯೊಳಗೇ ನೀರು ಶುದ್ಧೀಕರಿಸುವ ಫಿಲ್ಟರ್, ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಇಂಟರ್ನೆಟ್ ಆಫ್ ಥಿಂಗ್ಸ್ ಆಧರಿತ ಸೂತ್ರಗಳು, ಚರಂಡಿ-ಮ್ಯಾನ್ ಹೋಲ್ ಶುಚಿಗೊಳಿಸಲು ರೋಬಾಟ್, ದೇಸಿ ಅಡುಗೆ ಮಾಡಲು ರೋಬೋಟ್ ತಯಾರಿಯ ಉತ್ಸಾಹ, ಶಿಕ್ಷಣಕ್ಕೂ ಕಟ್ಟಡ ನಿರ್ಮಾಣಕ್ಕೂ ವರ್ಚುವಲ್ ರಿಯಾಲಿಟಿ(VR), ಕ್ಲಿಷ್ಟ ಅನಾರೋಗ್ಯಗಳ ಸುಧಾರಣೆ, ಅಂಗವೈಕಲ್ಯದ ಸಮಸ್ಯೆಯಿರುವವರಿಗೆ ಸಮಾಜದಲ್ಲಿ ಒಗ್ಗಿಕೊಳ್ಳಲು ಅನುಕೂಲವಾಗಲು ಅದೇ ವಿಆರ್ ಬಳಕೆ – ಇಂಥ ನವ್ಯೋದ್ಯಮಗಳು ತಮ್ಮ ಸುತ್ತಲಿನ ಸಮಸ್ಯೆಗಳಿಗೆ ತಮ್ಮಮಟ್ಟದಲ್ಲೇ ಪರಿಹಾರ ಕಾಣಲು ಹೊರಟಿರುವಂಥವು.
ಮಲಯಾಳಿ ಮನಸ್ಸುಗಳೇ ಹಾಗೆ, ಸರಕಾರಗಳ ಸವಲತ್ತು-ಪ್ರೋತ್ಸಾಹಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಾರೆ ಜನ. ಆಡಳಿತದೊಂದಿಗೆ ಜನರ ಪ್ರತಿಕ್ರಿಯೆಗಳು ಇತರೆಡೆಗಿಂತ ಹೆಚ್ಚು. ಎಲ್ಲಾ ರಾಜ್ಯಗಳಲ್ಲೂ ಸ್ಟಾರ್ಟಪ್ ಪಾಲಿಸಿಗಳಿವೆ. ಆದರೆ ಕೇರಳದಲ್ಲಿ ಅದರ ಯಶಸ್ಸು ಹೆಚ್ಚು ಕಾಣುತ್ತದೆ. ಹಾಗೆ ನೋಡಿದರೆ ಬಹುರಾಷ್ಟ್ರೀಯ ಕಂಪನಿಗಳಿಗೆ ಕೇರಳ ಅಷ್ಟಾಗಿ ಹಿಡಿಸುವ ತಾಣವಲ್ಲ, ಇಲ್ಲಿನ ಮಂದಿಗೂ ಪ್ರವಾಸಿಗರ ಹೊರತಾದ ಮಲ್ಟಿನ್ಯಾಶನಲ್‌ಗಳ ಜತೆಗೆ ಸರಿಹೋಗುವುದಿಲ್ಲ. ಉತ್ತರ ಭಾರತೀಯ ಸಂಸ್ಕೃತಿಯ ಜತೆಗೇ ಕೂಡುನಡೆ ಮಾಡಲಾರದ ಮಂದಿ ಸ್ಟಾರ್ಟಪ್ ವಿಚಾರದಲ್ಲಿ ಮಾಡುತ್ತಿರುವ ಕೆಲಸಗಳು ಮಾತ್ರ ಗಮನಾರ್ಹ. ಬೆಂಗಳೂರು-ಹೈದರಾಬಾದ್‌ನಲ್ಲಿರುವಂತೆ ಐಟಿ ವಲಯದ ಕಾರ್ಪೋರೇಟ್ ಸಂಸ್ಕೃತಿ ತಿರುವನಂತಪುರದಲ್ಲಿ ಇಲ್ಲ. ಕಾಲ್ ಸೆಂಟರ್‌ಗಳು ಬೆಂಗಳೂರಲ್ಲಿ ಸಾಲು ಸಾಲು ತೆರೆಯುವಾಗ ಕೇರಳದ ಮಂದಿ ಕೆಲಸಕ್ಕೆ ಓಡೋಡಿ ಬರುತ್ತಿದ್ದರು.
ಮಾಹಿತಿ ತಂತ್ರಜ್ಞಾನದಲ್ಲಿ ಕೇರಳ ಮೊದಲ ಬಸ್ಸನ್ನು ಮಿಸ್ ಮಾಡಿಕೊಂಡಿತ್ತು. ಖಾಸಗಿ ಕಂಪನಿಗಳಿಗೆ ಪೂರಕವಾಗಿಲ್ಲದ ಕಾನೂನುಗಳಿದ್ದ ಕಾಲದಲ್ಲಿ ಇಲ್ಲಿ ಕ್ರಾಂತಿಗಳದ್ದೇ ಹವಾ. ಕ್ರಾಂತಿಯ ಹೊರತು ಬದುಕು ಕಟ್ಟಿಕೊಳ್ಳುವವರು ಊರು ಬಿಟ್ಟು ದುಡಿಯಲು ಹೋಗುತ್ತಿದ್ದರು. ಆದರೆ ಬದಲಾದ ಕಾಲದಲ್ಲಿ ಹೊಸ ಮನಸ್ಸುಗಳು ಹೊರಹೋಗುವ ಮೊದಲು ತಮ್ಮ ಸುತ್ತ ನೋಡಲು ಆರಂಭಿಸಿವೆ. ಇದಕ್ಕೆ ಮುಖ್ಯ ಕಾರಣ ಕೇರಳದ ಶಿಕ್ಷಣ. ವಿಶೇಷವೆಂದರೆ ವೃತ್ತಿಪರ ಶಿಕ್ಷಣಕ್ಕಿಂತ ಹೆಚ್ಚು ಕೇರಳದಲ್ಲಿ ಉತ್ತಮವಾಗಿರುವ ಪ್ರಾಥಮಿಕದಿಂದ ಪದವಿ ವರೆಗಿನ ಶಿಕ್ಷಣ.
ಎಲ್ಲಾ ರಾಜ್ಯಗಳಲ್ಲೂ ಸ್ಟಾರ್ಟಪ್ ಪಾಲಿಸಿ ಎಂಬುದಿದೆ. ಆದರೆ ಕೇರಳ ರಾಜ್ಯದಲ್ಲಿ ಶೈಕ್ಷಣಿಕ ಬೆನ್ನೆಲುಬು ಗಟ್ಟಿ ಇರುವ ಕಾರಣದಿಂದ ಸ್ಟಾರ್ಟಪ್‌ಗಳು ಶಾಲಾ ಕಾಲೇಜು ಮಟ್ಟದಲ್ಲೇ ಬೆಳಕಿಗೆ ಬರುತ್ತವೆ. ಅಥವಾ ಆ ವಯಸ್ಸಲ್ಲೇ ಮಕ್ಕಳು ಸ್ಟಾರ್ಟಪ್ ಏನು, ಹೇಗೆ ಎಂಬ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಕೈ ಹಿಡಿದು ನಡೆಸುವ ಕಾರ್ಯಕ್ರಮಗಳನ್ನು ಸರಕಾರಗಳು ಮಾಡಬಹುದು, ಆದರೆ ಕೈ ಹಿಡಿದು ನಡೆಸೆನ್ನನು ಎಂದು ಕೈ ಮುಂದೊಡ್ಡುವವರು ಸಮಾಜದಿಂದಲೇ ಬರಬೇಕಷ್ಟೆ. ಅದಕ್ಕಾಗಿ ಬೇಕಾಗಯವುದು ದೊಡ್ಡ ಹೂಡಿಕೆಯ ವೃತ್ತಿಪರ ಕಾಲೇಜುಗಳಲ್ಲ. ಅ, ಆ, ಇ, ಈಯನ್ನು ಸರಿಯಾಗಿ ಕಲಿಸುವ ವ್ಯವಸ್ಥೆ.
ಸರಕಾರಿ ಮಟ್ಟದಲ್ಲೂ ಕೇರಳದಲ್ಲಿ ಊರಲ್ಲಿಲ್ಲದ ವಿಶೇಷ ಕಾನೂನು-ನಿಯಮಗಳನ್ನೇನೂ ತಂದಿಲ್ಲ. ಕೇರಳ ಸರ್ಕಾರ ತಿರುವನಂತಪುರ ಹಾಗೂ ಕೊಚ್ಚಿಯಲ್ಲಿ ಎರಡು ಇನ್ನೋವೇಶನ್ ಹಬ್‌ಗಳನ್ನು ಮಾಡಿದೆ. ಫ್ಯಾಬ್‌ಲ್ಯಾಬ್ ಎಂದು ಕರೆಯಲ್ಪಡುವ ಈ ಹಬ್‌ಗಳ ಅಡಿಯಲ್ಲಿ ಹಲವು ಮಿನಿ ಫ್ಯಾಬ್ ಲ್ಯಾಬ್‌ಗಳು ಕಾಲೇಜು ಹಾಗೂ ಹೈಸ್ಕೂಲು ಹಂತದಲ್ಲಿವೆ. ಇವುಗಳ ಮೂಲಕ ವಿದ್ಯಾರ್ಥಿಗಳು ಸಣ್ಣ ವಯಸ್ಸಿನಿಂದಲೇ ಸ್ಟಾರ್ಟಪ್ ಜಗತ್ತಿಗೆ ತಾವಾಗಿ ತೆರೆದುಕೊಳ್ಳುತ್ತಾರೆ.
ಈ ಮಕ್ಕಳಿಗೆ ಜಾಗತಿಕ ವಿದ್ಯಮಾನಗಳ ಬಗೆಗೆ ಆಸಕ್ತಿಯಿಲ್ಲ, ತಮ್ಮ ಸಮಸ್ಯೆ ಪರಿಹಾರಕ್ಕೆ ಜಾಗತಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಿದ್ದಾರೆ. ನಾವು ನಮ್ಮ ಮಕ್ಕಳಿಗೆ ಕನ್ನಡದಲ್ಲಿ ಪಾಠ ಮಾಡಬೇಕೋ ಇಂಗ್ಲೀಷಲ್ಲಿ ಮಾಡಬೇಕೋ ಎಂಬ ಚರ್ಚೆಯಲ್ಲಿಯೇ ಇನ್ನೂ ತೀರ್ಮಾನಕ್ಕೆ ಬಂದಿಲ್ಲ. ಅತ್ತ ಮಲಯಾಳಿ ಇಂಗ್ಲೀಷನ್ನೂ ಮಲಯಾಳದಲ್ಲೇ ಮಾತಾಡುತ್ತಾ ಮುನ್ನುಗ್ಗುತ್ತಿದ್ದಾನೆ.