ಕರೋನಾ ವೈರಸ್ ಬಹುಮುಖ್ಯ ಲಕ್ಷಣಗಳಲ್ಲಿ ಒಂದು ಉಸಿರಾಟದ ಸಮಸ್ಯೆ. ವೃದ್ಧರಿಗೆ ಸೋಂಕು ತಗುಲಿದಾಗ ಅತಿ ಹೆಚ್ಚು ಅಪಾಯಕಾರಿಯಾಗಿ ಕೆಲಸ ಮಾಡುವುದು ಇದೇ ಸಮಸ್ಯೆ. ಹಾಗಾಗಿ ಚಿಕಿತ್ಸೆ ವೇಳೆ ವೆಂಟಿಲೇಟರ್‌ಗಳು ಅತ್ಯಗತ್ಯ. ಮಹೀಂದ್ರಾ ಸಂಸ್ಥೆ ಕಡಿಮೆ ಬೆಲೆಗೆ ಪೂರೈಸಲು ಮುಂದಾಗಿದೆ

ಕರೋನಾ ಸೋಂಕು ತಗುಲಿದ ರೋಗಿಗಳ ಚಿಕಿತ್ಸೆಯಲ್ಲಿ ಬಹುತೇಕ ಸಂಜೀವಿನಿಯಂತೆ ಕಾರ್ಯ ಮಾಡುವ ವೆಂಟಿಲೇಟರ್‌ಗಳು ಅಗತ್ಯವಿದೆ. ಪ್ರಸ್ತುತ ರಾಜ್ಯದಲ್ಲೇ ವೆಂಟಿಲೇಟರ್‌ಗಳ ಪೂರೈಕೆಯಲ್ಲಿ ಗೊಂದಲ, ಕೊರತೆಯಾಗಿರುವುದು ಸುದ್ದಿಯಾಗಿದೆ. ಇದೇ ಹೊತ್ತಲ್ಲಿ ಕೈಗೆಟುಕುವ ದರದ ವೆಂಟಿಲೇಟರ್ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ.
ಕೃತಕ ಉಸಿರಾಟಕ್ಕೆ ಸಹಾಯ ಮಾಡುವ ವೆಂಟಿಲೇಟರ್‍ಗಳ ಪ್ರಸ್ತುತ ಬೆಲೆ 5 ರಿಂದ 10 ಲಕ್ಷ ರೂಪಾಯಿಗಳಿವೆ. ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿ ವೆಂಟಿಲೇಟರ್ನ ಮಾದರಿ ಸಿದ್ಧಪಡಿಸಿದ್ದು ಸಂಬಂಧಿಸಿದ ಸರಕಾರಿ ಸಂಸ್ಥೆಯ ಅನುಮತಿಯನ್ನು 2-3 ದಿನಗಳಲ್ಲಿ ನಿರೀಕ್ಷಿಸಲಾಗಿದೆ. ಮಾದರಿ ಸಿದ್ಧಪಡಿಸುವಲ್ಲಿ ಎರಡು ಸಾರ್ವಜನಿಕ ಉದ್ದಿಮೆಗಳು ತಮ್ಮ ಜತೆ ಕೈ ಜೋಡಿಸಿವೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪವನ್ ಗೋಯೆಂಕಾ ತಿಳಿಸಿದ್ದಾರೆ. ತಯಾರಿಕಾ ಸಾಮರ್ಥ್ಯ ವೃದ್ಧಿ ಮತ್ತು ಸರಳೀಕರಣದ ಉದ್ದೇಶದಿಂದ ಈಗಾಗಲೇ ವೆಂಟಿಲೇಟರ್ ತಯಾರಿಕೆಯಲ್ಲಿ ಮುಂಚೂಣೀಯಲ್ಲಿರುವ ಕಂಪನಿಯ ಜತೆ ನಮ್ಮ ಎಂಜಿನಿಯರುಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಮಾದರಿಗೆ ಹಸಿರು ನಿಶಾನೆ ಸಿಕ್ಕ ಬಳಿಕ ತಯಾರಿ ಸಾಮರ್ಥ್ಯವಿರುವ ಯಾವುದೇ ಕಂಪನಿಯೊಂದಿಗೆ ವಿನ್ಯಾಸವನ್ನು ಹಂಚಿಕೊಳ್ಳಲಾಗುವುದು ಎಂದು ಗೋಯೆಂಕಾ ಹೇಳಿದರು.
ಮಹಿಂದ್ರ ಆ್ಯಂಡ್ ಮಹೀಂದ್ರದ ಚೇರ್ಮನ್ ಆನಂದ್ ಮಹೀಂದ್ರ ತಮ್ಮ ಕಂಪನಿಯ ಒಡೆತನದಲ್ಲಿರುವ ಮಹೀದ್ರ ಹಾಲಿಡೇಸ್‍ನ ರೆಸಾರ್ಟ್‍ಗಳನ್ನು ತಾತ್ಕಾಲಿಕ ಚಿಕಿತ್ಸಾ ಕೇಂದ್ರವ್ನಾಗಿ ಪರಿವರ್ತಿಸಲಾಗುವುದು, ನಿರ್ವಹಣೆಗೆ ಅಲ್ಲಿನ ಸಿಬ್ಬಂದಿ ಸರಕಾರ/ಸೇನೆಗೆ ಸಹಕಾರ ನೀಡುತ್ತಾರೆ ಎಂದಿದ್ದಾರೆ.
1945ರಲ್ಲಿ ಸ್ಟೀಲ್ ವಹಿವಟು ನಡೆಸಲು ಸಹೋದರರಾದ ಕೆಸಿ ಮಹೀಂದ್ರ ಹಾಗೂ ಜೆಸಿ ಮಹೀಂದ್ರ ಆರಂಭಿಸಿದ ಮಹೀಂದ್ರ ಆ್ಯಂಡ್ ಮಹೀಂದ್ರ ಇಂದು ವಿಶ್ವದ ನೂರಕ್ಕೂ ಹೆಚ್ಚು ದೇಶಗಳಲ್ಲಿ ಅಸ್ಥಿತ್ವದಲ್ಲಿದೆ. ವಾಹನೋದ್ಯಮ, ವೈಮಾನಿಕ, ಕೃಷಿ -ನಿರ್ಮಾಣ – ಸೇನಾ –ಯಂತ್ರೋಪರಣಗಳ ತಯಾರಿ ಅಲ್ಲದೆ ತಂತ್ರಜ್ಞಾನ, ಹಣಕಾಸು ಹಾಗೂ ರಿಯಾಲ್ಟಿ ಕ್ಷೇತ್ರದಲ್ಲೂ ಹಬ್ಬಿರುರುವ ಕಂಪನಿ ಇಂದು 2 ಸಾವಿರ ಕೋಟಿ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿದೆ.