ವಾಹನೋದ್ಯಮಕ್ಕೆ ಕರೋನಾ ಸಂಕಷ್ಟ: ಮಹೀಂದ್ರ ಸಾಕ್ಷಿ?

ಕರೋನಾ ಸೋಂಕು ಜಾಗತಿಕವಾಗಿ ಎಲ್ಲ ಉದ್ಯಮಗಳಿಗೆ ಭಾರಿ ಪೆಟ್ಟು ನೀಡುತ್ತಿದೆ. ಇದರಲ್ಲಿ ವಾಹನೋದ್ಯಮ ಈಗಾಗಲೇ ನರಳಲು ಆರಂಭಿಸಿದೆ. ದೇಶದ ಪ್ರತಿಷ್ಠಿತ ಸಂಸ್ಥೆ ಮಹೀಂದ್ರ ಮಾರ್ಚ್‌ ತಿಂಗಳ ವಹಿವಾಟಿನಲ್ಲಿ ಶೇ.88ರಷ್ಟು ಕುಸಿತ ಕಂಡಿರುವುದು ಇದಕ್ಕೆ ಸಾಕ್ಷಿ

ಕರೋನಾ ಸಂಕಷ್ಟ ವಿವಿಧ ವಲಯಗಳಲ್ಲಿನ ಉದ್ಯಮಗಳನ್ನು ಆಪೋಶನ ತೆಗೆದುಕೊಳ್ಳಲು ಸಜ್ಜಾಗಿ ನಿಂತಿದೆ. ದುರಾದೃಷ್ಟವಶಾತ್ ಇದರ ಮೊದಲ ಸುದ್ದಿ ಭಾರತದಿಂದಲೇ ಹೊರಬಿದ್ದಿದೆ. ಮಹೀಂದ್ರ ಆ್ಯಂಡ್ ಮಹೀಂದ್ರ ಒಡೆತನದಲ್ಲಿರುವ ದಕ್ಷಿಣ ಕೊರಿಯಾ ಮೂಲದ ಸ್ಸಾಂಗ್‍ಯಾಂಗ್ ಮೋಟಾರ್‍ನ ಪುನಶ್ಚೇತನಕ್ಕೆ 423 ದಶಲಕ್ಷ ಡಾಲರ್ ಹೂಡಿಕೆ ಮಾಡಲು ಕಳೆದ ತಿಂಗಳು ತೆಗೆದುಕೊಂಡಿದ್ದ ತನ್ನ ನಿರ್ಧಾರದಿಂದ ಮಹೀಂದ್ರ ಸದ್ಯಕ್ಕೆ ಹಿಂದೆ ಸರಿದಿದೆ. ಮಾರ್ಚ್‍ ತಿಂಗಳಲ್ಲಿ ಭಾರತದಲ್ಲಿ ಕಂಪನಿಯ ಮಾರಾಟ ಶೇ.88ರಷ್ಟು ಕುಸಿತ ಕಂಡಿರುವುದು ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ.

ಮಹೀಂದ್ರ ತನ್ನ ಜಾಗತಿಕ ಜಾಲ ವಿಸ್ತರಿಸುವ ಸಲುವಾಗಿ ದಕ್ಷಿಣ ಕೊರಿಯದ ವಾಹನ ತಯಾರಿಕಾ ಕಂಪನಿ ಸ್ಸಾಂಗ್‍ಯಾಂಗ್‍ನ ಶೇ. 75ರಷ್ಟು ಪಾಲನ್ನು 2011ರಲ್ಲಿ ಖರೀದಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಇಟಲಿ ಮೂಲದ ವಾಹನ ವಿನ್ಯಾಸ ಕಂಪನಿ ಪಿನ್ನಿನ್‍ಫೆರಿನ ಮತ್ತು ಪಿಜೋ ಸ್ಕೋಟರ್ಸನ್ನು ಮಹೀಂದ್ರ ಖರೀದಿಸಿದ್ದು ಪ್ರಸ್ತುತ ಅವೆರಡೂ ಸಂಪೂರ್ಣ ಮಹೀಂದ್ರ ಒಡೆತನದಲ್ಲಿವೆ.

ಮಹೀಂದ್ರ ಹೆಸರಿನಲ್ಲಿ ಭಾರತದಲ್ಲಿ ಕಳೆದ ವರ್ಷ ರಸ್ತೆಗಿಳಿದ ಯಶಸ್ವಿ ಕಾರು ಎಕ್ಸ್‍ಯುವಿ300 ಮೂಲತಃ ಟಿವೋಳಿ ಹೆಸರಿನಲ್ಲಿ ಸ್ಸಾಂಗ್‍ಯಾಂಗ್ ಮಾರಾಟ ಮಾಡುತ್ತಿದ್ದ ಮಿನಿ ಎಸ್‍ಯುವಿ. ಮಹೀಂದ್ರ ಅಲ್ಟುರಾಸ್ ಜಿ4 ಮೂಲತಃ ಸ್ಸಾಂಗ್‍ಯಾಂಗ್‍ನ ರೆಕ್ಸ್‍ಟಾನ್. ಖರೀದಿ ಸಂದರ್ಭದಲ್ಲೇ ನಷ್ಟದಲ್ಲಿದ್ದ ಸ್ಸಾಂಗ್‍ಯಾಂಗ್‍ ಪುನಶ್ಚೇತನಕ್ಕೆ ಮಹೀಂದ್ರ ಈ ಹಿಂದೆಯೇ ಹೂಡಿಕೆ ಮಾಡಿದ್ದರೂ ಕೊರಿಯಾದ ಮೂಲದ ಈ ಕಂಪನಿ ಲಾಭದತ್ತ ಸಾಗಲು ಮತ್ತಷ್ಟು ಬಂಡವಾಳ ಬಯಸಿತ್ತು.

2015ರಲ್ಲಿ ಮಾರುಕಟ್ಟೆ ಪ್ರವೇಶಿಸಿ ಕೊರಿಯಾ ಹಾಗೂ ಐರೋಪ್ಯ ರಾಷ್ಟ್ರಗಳಲ್ಲಿ ಸ್ಸಾಂಗ್‍ಯಾಂಗ್‍ ಟಿವೋಳಿ ಯಶ ಕಂಡಿತ್ತು. ಆದರೆ ಅಲ್ಲಿಂದ ನಂತರ ಕಂಪನಿಯ ಯಾವುದೇ ಕಾರುಗಳು ಹೇಳಿಕೊಳ್ಳುವ ಯಶ ಕಂಡಿಲ್ಲ.

ಮಾರುಕಟ್ಟೆಯಲ್ಲಿ ಯಶಸ್ಸು ಕಾಣಬೇಕಾದರೆ ನಿರಂತರ ಹೊಸ ವಿನ್ಯಾಸಗಳನ್ನು ಆವಿಷ್ಕರಿಸುವುದು ವಾಹನ ಕಂಪನಿಗಳಿಗೆ ಅತ್ಯಗತ್ಯ. ಹೊಸ ಕಾರುಗಳು ಲಾಭದಾಯಕ ಅನಿಸಿಕೊಳ್ಳಬೇಕಾದರೆ ನಿರೀಕ್ಷಿತ ಸಂಖ್ಯೆಯಲ್ಲಿ ಮಾರಾಟ ಆಗಬೇಕು. ಆಗಷ್ಟೇ ಮತ್ತೆ ಹೊಸ ಕಾರುಗಳಿಗೆ ಹೂಡಿಕೆ ಮಾಡುವುದು ಕಂಪನಿಗಳಿಗೆ ಸಾಧ್ಯವಾಗುತ್ತದೆ, ಇಲ್ಲವಾದಲ್ಲಿ ನಷ್ಟದ ವಿಷ ವರ್ತುಲದೊಳಕ್ಕೆ ಕಂಪನಿ ಬೀಳುತ್ತದೆ ಎಂಬುದು ಈ ಉದ್ಯಮದ ವಾಸ್ತವ.

ವಾಸ್ತವದಲ್ಲಿ ಸ್ಸಾಂಗ್‍ಯಾಂಗ್‍ನಿಂದ ಆದ ನಷ್ಟವನ್ನು ಹೊಟ್ಟೆಗೆ”ಹಾಕಿಕೊಳ್ಳುವ ಸಾಮರ್ಥ್ಯ ಮಹೀಂದ್ರ ಆ‍್ಯಂಡ್‍ ಮಹೀಂದ್ರ ಕಂಪನಿಗೆ ಇದೆ. ಆದರೆ ಜಾಗತಿಕವಾಗಿ ವಿಸ್ತರಿಸಿರುವ ಕರೋನಾ ಸಂಕಷ್ಟದ ಈ ದಿನಗಳಲ್ಲಿ ಮಹೀಂದ್ರದಿಂದ ಹೊರಬಿದ್ದ ಈ ಸುದ್ದಿ ಮುಂದಿನ ಕೆಟ್ಟ ಆರ್ಥಿಕ ಸನ್ನಿವೇಶದ ಮುನ್ನೋಟ ಎಂಬುದು ತಜ್ಞರ ಅಂಬೋಣ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: