ವರ್ಷಗಳಿಂದ ಐಫೋನ್‌ಗಳು ಹ್ಯಾಕ್‌; ಆ್ಯಪಲ್‌ಗೆ ಸುಳಿವೇ ಇಲ್ಲ!

ಆ್ಯಪಲ್‌ ಎಂದರೆ ಅದು ಕೇವಲ ಶ್ರೀಮಂತಿಕೆಯ ಸಂಕೇತವಲ್ಲ, ಖಾಸಗಿತನ ಮತ್ತು ಮಾಹಿತಿ ಸುರಕ್ಷತೆಯ ಕಾರಣಕ್ಕೆ ಹೆಚ್ಚು ಬೇಡಿಕೆಯಲ್ಲಿದೆ. ಆದರೆ ಇತ್ತೀಚಿನ ಸಂಶೋಧನೆಯೊಂದು ಈ ನಂಬಿಕೆಯನ್ನು ಸುಳ್ಳು ಮಾಡಿದೆ

ಗೂಗಲ್‌ನ ಪ್ರಾಜೆಕ್ಟ್‌ ಝೀರೋನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಶೋಧಕರು ಐಫೋನ್‌ನಲ್ಲಿ ಹ್ಯಾಕರ್‌ಗಳು ಕನ್ನ ಹಾಕಲು ಸುಲಭವಾಗುವಂತಹ ಲೋಪಗಳಿವೆ ಎಂಬುದನ್ನು ಬಯಲು ಮಾಡಿದ್ದಾರೆ.

ಮಾಹಿತಿ ಸುರಕ್ಷತೆ ಮತ್ತು ಖಾಸಗಿತನವೇ ಬ್ರ್ಯಾಂಡ್‌ ಇಮೇಜಾಗಿಸಿಕೊಂಡಿದ್ದ ಆ್ಯಪಲ್‌ ಈ ಸುದ್ದಿಯಿಂದ ಆಘಾತಗೊಂಡಿದ್ದಾರೆ. ಸುಮಾರು ಮೂರು ವರ್ಷಗಳಿಂದ ಐಫೋನ್‌ ಬಳಕೆದಾರರ ಮಾಹಿತಿಗೆ, ಕೆಲವು ವೆಬ್‌ಸೈಟ್‌ಗಳ ಮೂಲಕ ಕನ್ನ ಹಾಕಲಾಗುತ್ತಿದೆ ಎಂಬುದನ್ನು ಪ್ರಾಜೆಕ್ಟ್‌ ಝೀರೋ ಸಂಶೋಧಕರು ಹೇಳಿದ್ದಾರೆ.

ಈ ಕುರಿತು ತಮ್ಮ ಬ್ಲಾಗ್‌ನಲ್ಲಿ ವಿವರಗಳನ್ನು ನೀಡಿ ಆರು ಬರಹಗಳನ್ನು ಪ್ರಕಟಿಸಿದ್ದಾರೆ.

ಇದು ಹೇಗೆ ಸಾಧ್ಯವಾಯಿತು?

ಹ್ಯಾಕರ್‌ಗಳು ರೂಪಿಸಿರುವ ವೆಬ್‌ಸೈಟ್‌ಗೆ ಐಫೋನ್‌ ಬಳಕೆದಾರ ಒಮ್ಮೆ ಭೇಟಿ ನೀಡಿದರೆ ಸಾಕು. ಬಳಕೆದಾರನ ಫೋನಿನಲ್ಲಿರುವ ಖಾಸಗಿ ಫೈಲ್‌ಗಳು, ಮೆಸೇಜ್‌ಗಳು ಅಷ್ಟೇ ಅಲ್ಲ ಲೋಕೇಷನ್‌ ಮಾಹಿತಿಗಳನ್ನು ಸಂಗ್ರಹಿಸುವುದಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊಡುತ್ತದೆ. ಸರ್ವರ್‌ ಅನ್ನು ನಿಯಂತ್ರಿಸಲು ಸಾಧ್ಯವಾದರೆ ಸಾಕು ಬಳಕೆದಾರನ ಫೋನ್‌ಮೇಲೆ ಹ್ಯಾಕರ್‌ಗಳು ದಾಳಿ ಆರಂಭಿಸುತ್ತಾರೆ. ನಂತರ ನಿಮ್ಮ ಐಫೋನ್‌ ಪ್ರತಿ ಚಟುವಟಿಕೆ ಮೇಲೆ ನಿಗಾ ಇಡುವ ಸಾಫ್ಟ್‌ವೇರ್‌ವೊಂದನ್ನು ಇನ್‌ಸ್ಟಾಲ್‌ ಮಾಡಿಬಿಡುತ್ತಾರೆ.

ಮೊದಲು ಕೇವಲ ಮಾಹಿತಿ ಕದಿಯಲೆಂದು ಆರಂಭವಾದ ಈ ದಾಳಿ, ಈಗ ಫೋನ್‌ ಮೂಲಕ ಸರ್ವರ್‌ ನಿಯಂತ್ರಿಸುವಷ್ಟು ಮುಂದೆ ಹೋಗಿದ್ದಾರೆ. ಆಶ್ಚರ್ಯದ ಸಂಗತಿ ಎಂದರೆ ಈ ಯಾವ ಬೆಳವಣಿಗೆಗಳ ಸಣ್ಣ ಸುಳಿವೂ ಉತ್ಪಾದಕರಿಗೆ, ಅಂದರೆ ಆ್ಯಪಲ್‌ ಕಂಪನಿಗೆ ಸಿಕ್ಕಿಲ್ಲ!

ಹ್ಯಾಕರ್‌ಗಳು ಇಲ್ಲೊಂದು ಜಾಣ್ಮೆಯನ್ನು ತೋರಿದ್ದಾರೆ. ಈ ಹ್ಯಾಕಿಂಗ್‌ ಸತತವಾಗಿ ನಡೆಯುವುದಿಲ್ಲ. ಆದರೆ ಒಮ್ಮೆ ಸಂಗ್ರಹಿಸಿದ ಮಾಹಿತಿಯೇ ಅಗಾಧವಾಗಿರುತ್ತದೆ ಮತ್ತು ವಾಟ್ಸಾಪ್‌ ಮುಂತಾದ ಖಾಸಗಿ ಸಂವಹನದ ಮಾಹಿತಿಗಳು ಲಭ್ಯವಾಗಿಬಿಡಬಹುದು.

ಇದು ಗೊತ್ತಾಗಿದ್ದು ಹೇಗೆ?

ಗೂಗಲ್‌ ಪ್ರಾಜೆಕ್ಟ್‌ ಝೀರೋದಲ್ಲಿರುವ ಇಯಾನ್‌ ಬೀರ್‌ ಹೇಳುವಂತೆ, ಗೂಗಲ್‌ ಥ್ರೆಟ್‌ ಅನಾಲಿಸಿಸ್‌ ಗ್ರೂಪ್‌ ಕೆಲವು ವೆಬ್‌ಸೈಟ್‌ಗಳು ಹ್ಯಾಕ್‌ ಆಗಿರುವುದನ್ನು ಗುರುತಿಸಿದ್ದವು. ಈ ಹ್ಯಾಕ್‌ ಆಗಿರುವ ವೆಬ್‌ಸೈಟ್‌ಗಳ ಮೂಲಕ ಅದಕ್ಕೆ ಭೇಟಿ ನೀಡುವ ಬಳಕೆದಾರರ ಫೋನ್‌ ಮೇಲೆ ದಾಳಿ ನಡೆಯುತ್ತಿತ್ತು. ಅಂತಹ ಐದು ವೆಬ್‌ಸೈಟ್‌ ಮತ್ತು ಐಫೋನ್‌ ಮೇಲೆ ದಾಳಿಯಾಗುತ್ತಿದ್ದ ಕ್ರಮವನ್ನು ಗುರುತಿಸಿದರು. ಆಗಲೇ ಹೇಳಿದಂತೆ, ಇಲ್ಲಿ ಯಾವುದೇ ಲಿಂಕ್‌ ಬಳಕೆಯಾಗಿರಲಿಲ್ಲ. ಕೇವಲ ವೆಬ್‌ಸೈಟ್‌ಗೆ ಭೇಟಿ ನೀಡಿದರೆ ಸಾಕು, ಐಫೋನ್‌ಗೆ ಹ್ಯಾಕರ್‌ಗಳು ನುಗ್ಗಬಹುದಿತ್ತು. ನೀವು ಐಫೋನ್‌ ಬಳಕೆದಾರರಾಗಿದ್ದು, ಆತಂಕವಿದ್ದರೆ ಒಮ್ಮೆ ರೀಸ್ಟಾರ್ಟ್‌ ಮಾಡಿ ಮತ್ತು ಲೇಟೆಸ್ಟ್‌ ಓಎಸ್‌ಗೆ ಅಪ್‌ಡೇಟ್‌ ಮಾಡಿಕೊಳ್ಳಿ.