ಎಚ್ಚರ, ಕೊರೊನಾ ವೈರಸ್‌ ಹೆಸರಿನಲ್ಲಿ ನಿಮ್ಮ ಮೊಬೈಲ್‌ಗೆ ಬರುತ್ತಿವೆ ಮಾಲ್‌ವೇರ್‌ಗಳು!

ಕರೋನಾ ವೈರಸ್‌ ಈಗ ಜನರನ್ನು ಬೆಚ್ಚಿ ಬೀಳಿಸಿದೆ. ಕೇರಳದಲ್ಲಿ ಸೋಂಕು ಪತ್ತೆಯಾದ ಆತಂಕ ಹೆಚ್ಚಾಗಿದೆ. ಜನರಲ್ಲಿ ಇನ್ನು ಸ್ಪಷ್ಟ ಮಾಹಿತಿ ಇರದ ಈ ಹೊತ್ತಿನಲ್ಲಿ, ಅವರ ಭಯವನ್ನು ಮಾಹಿತಿ ಕದಿಯುವವರು ಬಳಸಿಕೊಳ್ಳುತ್ತಿದ್ದಾರೆ. ಈ ಮೇಲ್‌, ಡಾಕ್ಯುಮೆಂಟ್‌ ರೂಪದಲ್ಲಿ ಮಾಲ್‌ವೇರ್‌ಗಳನ್ನು ಹರಿಯಬಿಡುತ್ತಿದ್ದಾರೆ

ಗಂಭೀರ ಉಸಿರಾಟದ ಸಮಸ್ಯೆ, ನ್ಯುಮೊನಿಯಾಕ್ಕೆ ಕಾರಣವಾಗುತ್ತಿರುವ ಕೊರೊನಾ ವೈರಸ್‌ ಈಗ ಜಗತ್ತಿನ ನಿದ್ರೆಗೆಡಿಸಿದೆ. ಚೀನಾದಲ್ಲಿ ಪತ್ತೆಯಾದ ಈ ವೈರಸ್‌ ಇದುವರೆಗೂ 25 ಬಲಿತೆಗೆದುಕೊಂಡಿದೆ ಎಂದು ವರದಿಗಳು ಹೇಳುತ್ತವೆ. ಕೇರಳದಲ್ಲಿ ಸೋಂಕು ಪತ್ತೆಯಾಗಿದ್ದು, ಕರ್ನಾಟಕದಲ್ಲಿ ಮುನ್ನೆಚ್ಚರಿಕೆಯನ್ನು ವಹಿಸಲಾಗುತ್ತಿದೆ.

ಹೀಗೆ ಆತಂಕ ಹರಡಿರುವ ಕೊರೊನಾ ವೈರಸ್‌ ಬಗ್ಗೆ ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲ. ವೈರಸ್‌ ಬಂದಿರುವುದು ಹೇಗೆ ತಿಳಿಯುತ್ತದೆ? ಏನು ಮಾಡಬೇಕು? ಚಿಕಿತ್ಸೆ ಏನು? ಎಷ್ಟು ಅಪಾಯಕಾರಿ ಎಂಬ ಪ್ರಶ್ನೆಗಳು ಸಾಮಾನ್ಯ ಜನರಿಗೆ ಇದ್ದೇ ಇದೆ. ಇಂಥ ಅವಕಾಶವನ್ನು ಬಳಸಿಕೊಂಡಿರುವ ಹ್ಯಾಕರ್‌ಗಳು ಮಾಲ್‌ವೇರ್‌, ರಾನ್ಸಮ್‌ವೇರ್‌ಗಳನ್ನು ಹರಿಬಿಡುತ್ತಿದ್ದಾರೆ!

ಆಂಟಿ ವೈರಸ್‌ ಸಂಸ್ಥೆ ಕ್ಯಾಸ್ಪರ್‌ಸ್ಕಿ ಈ ಕುರಿತು ಪ್ರಕಟಣೆಯೊಂದನ್ನುನೀಡಿದ್ದು, ಕೊರೊನಾ ವೈರಸ್‌ ಕುರಿತು ಮಾಹಿತಿ ನೀಡುವ ಸೋಗಿನಲ್ಲಿ ಹ್ಯಾಕರ್‌ಗಳು ಟ್ರೋಜನ್‌ಗಳನ್ನು, ಮಾಲ್‌ವೇರ್‌ಗಳನ್ನು ಹರಿಯಬಿಡುತ್ತಿದ್ದಾರೆ. ಕೊರೊನಾ ವೈರಸ್‌ ಕುರಿತು ಮಾಹಿತಿ ನೀಡುವ ಯಾವುದೇ ವರ್ಡ್‌, ಪಿಡಿಎಫ್‌ ಡಾಕ್ಯುಮೆಂಟ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಡಿ. ಅಪರಿಚಿತ ಮೇಲ್‌ಗಳಿಂದ ಬರುವ ಯಾವುದೇ ವಿಡಿಯೋ ಲಿಂಕ್‌ ಕ್ಲಿಕ್ ಮಾಡಬೇಡಿ” ಎಂದು ಎಚ್ಚರಿಸಿದೆ.

ಕೊರೊನಾ ವೈರಸ್‌ ಜಾಗತಿಕವಾಗಿ ಅತಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯವಾದ್ದರಿಂದ, ಅದರ ಬಗ್ಗೆ ಭಯಮಿಶ್ರಿತ ಕುತೂಹಲ ಎಲ್ಲರಲ್ಲೂ ಇದೆ. ಈ ಸಂದರ್ಭವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಸೈಬರ್‌ ಅಪರಾಧಿಗಳು ಮಾಹಿತಿ ಕದಿಯಲು ಈ ತಂತ್ರವನ್ನು ಬಳಸುತ್ತಿದ್ದಾರೆ. ಈ ಮಾಲ್‌ವೇರ್‌ಗಳು ನಿಮ್ಮ ಕಂಪ್ಯೂಟರ್‌ ಅಥವಾ ಮೊಬೈಲ್‌ನಲ್ಲಿರುವ ದಾಖಲೆಗಳನ್ನು, ನಕಲು ಮಾಡಬಹುದು, ಕದಿಯಬಹುದು, ನಿಮ್ಮ ಸಾಧನವನ್ನು ಸಂಪೂರ್ಣ ನಿಷ್ಕ್ರಿಯಗೊಳಿಸಬಹುದು.

ಪ್ರಮುಖವಾಗಿ ಈ ಕೆಳಗಿನ ಮಾಲ್‌ವೇರ್ ಮತ್ತು ಟ್ರೋಜನ್‌ ಫೈಲ್‌ಗಳು ಹರಿದಾಡುತ್ತಿವೆ.

  • Worm.VBS.Dinihou.r,
  • Worm.Python.Agent.
  • UDS:DangerousObject.Multi.Generic,
  • Trojan.WinLNK.Agent.gg,
  • Trojan.WinLNK.Agent.ew,
  • HEUR:Trojan.WinLNK.Agent.gen,
  • HEUR:Trojan.PDF.Badur.b.

ಸಾಮಾನ್ಯರಿಗೆ ಈ ರೀತಿಯ ಫೈಲ್‌ಗಳನ್ನು ಗುರುತಿಸುವುದು ಕಷ್ಟ. ಹಾಗಾಗಿ ನಿಮಗೆ ಬರುವ ಮೇಲ್‌ನಲ್ಲಿರುವ ಅಟ್ಯಾಚ್‌ಮೆಂಟ್‌ ಫೈಲ್‌ನೇಮ್‌ನ ಕೊನೆಯಲ್ಲಿ .exe ಎಂದು ಅಥವಾ .lnk ಎಂದು ಇದೆಯೇ ಗಮನಿಸಿ. ಒಂದು ವೇಳೆ ಇದೆಯಾದರೆ ಮಾಲ್‌ವೇರ್‌ ಆಗಿರುತ್ತದೆ. ಈ ಫೈಲ್‌ಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್‌ ಮಾಡಬೇಡಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.