ರೆನೊ ಕ್ವಿಡ್‌ಗೆ ಮಾರುತಿಯಿಂದ ಪ್ರತಿಸ್ಪರ್ಧಿ, ಎಸ್‌ಪ್ರೆಸ್ಸೋ

ಆಟೋ ಮೊಬೈಲ್‌ ಕ್ಷೇತ್ರದ ಏರಿಳಿತಗಳ ನಡುವೆಯೂ ಮಾರುಕಟ್ಟೆ ಹೊಸ ವಾಹನಗಳು ಬರುತ್ತಿವೆ. ಹಣ, ಸೌಕರ್ಯ ಎಲ್ಲ ದೃಷ್ಟಿಗಳಿಂದಲೂ ಸ್ಪರ್ಧೆ ಒಡ್ಡುವಂತೆ ಹೊಸತನದೊಂದಿಗೆ ಮಾರುಕಟ್ಟೆಗೆ ಕಾಲಿಡುತ್ತಿವೆ. ಈಗ ಮಾರುತಿ ಅಂಥದ್ದೇ ಒಂದು ಹೊಸ ಮಾಡೆಲ್‌ನೊಂದಿಗೆ ಸುದ್ದಿ ಮಾಡುತ್ತಿದೆ.

ಕೆಫೆಗಳಲ್ಲಿ‌ಸಿಗುವ ಸ್ಟ್ರಾಂಗ್ ಕಾಫಿಯ ಹೆಸರು ಎಕ್ಸ್ಪೆಸ್ಸೋ, ಮಾರುತಿ ಸುಝುಕಿ ಸ್ಟ್ರಾಂಗ್ ಕಾಫಿ ಪ್ಲೇವರಿನಲ್ಲಿ ರಸ್ತೆಗಿಳಿಸಿರುವ ಎಸ್‌ಯುವಿ ಶೈಲಿಯ ಸಣ್ಣ ಕಾರು ಎಸ್ ಪ್ರೆಸ್ಸೋ. ಇದುವರೆಗೆ ಇರದಿದ್ದ ರೆನೋ ಕ್ವಿಡ್‌ಗೆ ನೇರ ಪ್ರತಿಸ್ಪರ್ಧಿ ಇದೀಗ ಎಸ್ ಪ್ರೆಸ್ಸೋ ಹೆಸರಿನಲ್ಲಿ ಮಾರುತಿ ಸುಝುಕಿ ಶೋರೂಮುಗಳಿಗೆ ನುಗ್ಗಿವೆ.

₹3.69 ಲಕ್ಷ ಶೋರೂಂ ಬೆಲೆಯೊಂದಿಗೆ ಆರಂಭವಾಗುವ ಎಸ್ ಪ್ರೆಸ್ಸೋದ ಎಎಂಟಿ ಅಟೋಮ್ಯಾಟಿಕ್ ಶ್ರೇಣಿ ₹4.68 ಲಕ್ಷ ದಿಂದ ₹4.91 ಲಕ್ಷಗಳವರೆಗೆ ಇದೆ. 68 ಬಿಎಚ್‌ಪಿ ಹಾಗೂ 90ಎನ್‌ಎಂ ಟಾರ್ಕ್ ಉತ್ಪಾದಿಸುವ ಕೆ10ಬಿ ೧ ಲೀಟರ್ ಎಂಜಿನ್ ಬಿಎಸ್6 ಅಧಿನಿಯಮಗಳನ್ನು ಪಾಲಿಸುತ್ತದೆ. ಇದೇ ಪೆಟ್ರೋಲ್ ಎಂಜಿನ್ ಮುಂದಿನ ದಿನಗಳಲ್ಲಿ ಆಲ್ಟೋ ಕೆ10, ಸೆಲೆರಿಯೋ ಹಾಗೂ ವ್ಯಾಗನ್ ಆರ್‌ಗೆ ಶಕ್ತಿ ನೀಡಲಿದೆ. 

180 ಮಿಲಿಮೀಟರ್ ಗ್ರೌಂಡ್ ಕ್ಲಿಯರೆನ್ಸ್ ಇರುವ ಎಸ್ ಪ್ರಸ್ಸೋ 3565 ಎಂಎಂ ಉದ್ದ ಮತ್ತು 1520 ಎಂಎಂ ಅಗಲವಿದ್ದು ಕೇವಲ 767 ಕೆಜಿ ತೂಗುತ್ತದೆ. ವ್ಹೀಲ್ ಬೇಸ್ 2380 ಎಂಎಂ ಆಗಿದ್ದು ಚಕ್ರಗಳ ಗಾತ್ರ 165/70 ಆರ್14. 

ಮಾರುತಿ ಪಾಲಿಗೆ ಹೊಸ ರೀತಿಯ ಡ್ಯಾಶ್, ಸಂಪೂರ್ಣ ಡಿಜಿಟಲ್ ಸ್ಪೀಡೋಮೀಟರ್ ಮತ್ತು 240 ಲೀ. ಹಿಂಬದಿ ಸ್ಥಳಾವಾಕಾಶ ವಿಶೇಷವಾಗಿದೆ. ಉಳಿದಂತೆ ಅತ್ಯುನ್ನತ ಶ್ರೇಣಿಯಲ್ಲಿ ಎಬಿಎಸ್, ಪಾರ್ಕಿಂಗ್ ಸೆನ್ಸಾರ್, 7 ಇಂಚಿನ್ ಟಚ್ ಸ್ಕ್ರೀನ್ ಇನ್ಫೋಟೇನ್ಮೆಂಟ್ ಅಲ್ಲದೆ ಇನ್ನಷ್ಟು ಆಪ್ಷನ್ ಪ್ಯಾಕೇಜ್‌ಗಳಿವೆ. ಎಆರ್‌ಎಐ (ಭಾರತೀಯ ವಾಹನೋದ್ಯಮ ನಿಯಂತ್ರಣಾ ಪ್ರಾಧಿಕಾರ) ನಿಯಮಾವಳಿ ಅನುಸಾರ ಪರೀಕ್ಷಾರ್ಥ ಮೈಲೇಜ್ ಲೀಟರಿಗೆ 21.7 ಕಿಮೀ ಎನ್ನಲಾಗಿದೆ‌.