ಇಂದಿಗೂ ಜಗತ್ತಿನಲ್ಲಿ ಅತಿ ಹೆಚ್ಚು ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳಿರುವುದು ಮೈಕ್ರೋಸಾಫ್ಟ್ ಕಂಪನಿಯದ್ದು. ಸ್ಮಾರ್ಟ್‌ಫೋನ್ ಜಗತ್ತಿಗೂ ಕಾಲಿಟ್ಟಿತಾದರೂ ಯಶ ಕಂಡಿದ್ದು ಅತ್ಯಲ್ಪ. ಆದರೆ ಮೈಕ್ರೋಸಾಫ್ಟ್ ಈಗ ಬಿಡುಗಡೆಗೆ ಸಜ್ಜು ಮಾಡುತ್ತಿರುವ ಹೊಸ ಸಾಧನ, ಹೊಸ ಅನುಭವವನ್ನಷ್ಟೇ ಅಲ್ಲ, ಹೊಸದೊಂದು ಅಧ್ಯಾಯ ಬರೆಯಲಿದೆ ಎನ್ನುತ್ತಿದೆ

ಸರ್ಫೇಸ್ ಡ್ಯುಯೊ
ಇದು ಮೈಕ್ರೋಸಾಫ್ಟ್‌ನವರ ಹೊಸ ಮೊಬೈಲ್ ಸಾಧನ. ಇದು ಬಿಡುಗಡೆಯಾಗಲು ಇನ್ನು ಕೆಲವು ತಿಂಗಳುಗಳಿದೆ. ಆದರೆ ಈಗಾಗಲೇ ಅಚ್ಚರಿ, ಬೆರಗು ಮತ್ತು ಕುತೂಹಲಗಳನ್ನು ಹುಟ್ಟಿಸಿದೆ. ಎರಡು ಪರದೆಗಳ ಈ ಸಾಧನ ಆಂಡ್ರಾಯ್ಡ್ ಓಎಸ್ ಹೊಂದಿದೆ. ಇದೂ ಸ್ಯಾಮ್‌ಸಂಗ್‌ಫೋಲ್ಡ್ ಮಾದರಿಯ ಮಡಿಚಬಹುದಾದ ಸಾಧನ.
ಆದರೆ ಇದು ಫೋನಲ್ಲ ಎನ್ನುವುದು ಮೈಕ್ರೋಸಾಫ್ಟ್‌ನ ಚೀಫ್ ಪ್ರಾಡಕ್ಟ್ ಆಫಿಸರ್ ಪನೋಸ್ ಪನೇ ಅವರ ಅಭಿಪ್ರಾಯ. ಮೋಲ್‌ಸ್ಕಿನ್ ನೋಟ್‌ಬುಕ್ ಅನ್ನು ಹೋಲುವ 5.6 ಇಂಚಿನ ಎರಡು ಪರದೆಗಳನ್ನು ಹೊಂದಿರುವ ಈ ಫೋನ್ ಇತರೆ ಫೋನ್‌ಗಳಂತೆ ಸುಲಭವಾಗಿ ಜೇಬಿನಲ್ಲಿಟ್ಟುಕೊಳ್ಳುವಂತಿದೆ. ಆದರೆ ಇದು ಬರೀ ಫೋನ್ ಅಲ್ಲ, ಇದು ಮೊಬೈಲ್ ಸಾಧನಗಳ ಪೈಕಿ ಇದು ಹೊಸದಾದ ವಿಭಾಗವನ್ನೇ ಸೃಷ್ಟಿ ಮಾಡಲಿದೆ ಎನ್ನುತ್ತಾರೆ ಪನೇ.

ವಿಂಡೋಸ್ ತನ್ನದೇ ಆಪರೇಟಿಂಗ್ ಸಿಸ್ಟಮ್ ಬಳಸುವ ಬದಲು ಆಂಡ್ರಾಯ್ಡ್‌ಗೆ ಮೊರೆ ಹೋಗಿದೆ! ಕಾಲ್‌ಕಾಂ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್, ಆಂಡ್ರಾಯ್ಡ್ 9 ಪೈ ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬರಲಿರುವ ಫೋನ್ ವಿಶಿಷ್ಟ ಅನುಭವ ನೀಡಲಿದೆ ಮೈಕ್ರೋಸಾಫ್ಟ್ ಹೇಳುತ್ತಿದೆ.
ವಿಂಡೋಸ್ 90ರ ದಶಕದಲ್ಲಿ ಪಾಕೆಟ್ ಗಾತ್ರದ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಪರಿಚಯಿಸಿತ್ತು. ಇದೇ ಪಾಕೆಟ್ ಪಿಸಿ ಓಎಸ್‌ಗೂ ಮೂಲ. ಇದೇ ನಂತರ ವಿಂಡೋಸ್ ಮೊಬೈಲ್ ಆಗಿ ರೂಪಾಂತರವಾಯಿತು. ಪಾಮ್ ಟ್ರಿಯೊ, ಎಚ್‌ಟಿಸಿ, ಸ್ಯಾಮ್‌ಸಂಗ್ ಒಮ್ನಿಯಾ ಪ್ರೊಗಳು ಇದೇ ಓಎಸ್ ಆಧರಿಸಿ ಕಾರ್ಯನಿರ್ವಹಿಸಿದವು. ಆದರೆ ಐಫೋನ್ ಮತ್ತು ಆಂಡ್ರಾಯ್ಡ್‌ಗಳು ಹೊರಬಂದ ನಂತರ ಮೈಕ್ರೋಸಾಫ್ಟ್ ಹಿನ್ನಡೆಯಾಯಿತು. ಪುನಃ 2010 ಮತ್ತು 2013 ರಲ್ಲಿ ವಿಂಡೋಸ್ ಓಎಸ್‌ನಲ್ಲಿ ಬದಲಾವಣೆಗಳೊಂದಿಗೆ ನೋಕಿಯಾ ಫೋನ್‌ನಲ್ಲಿ ಲಭ್ಯವಾಯಿತು. ಆದರೆ ಇದು ಮೈಕ್ರೋಸಾಫ್ಟ್‌ಗೆ ಹೆಮ್ಮೆಯ ಪ್ರಯೋಗವಾಗಲಿಲ್ಲ. 2017ರ ಜುಲೈನಲ್ಲಿ ವಿಂಡೋಸ್ ಫೋನ್‌ಗೆ ಬೆಂಬಲಿಸುವುದನ್ನು ನಿಲ್ಲಿಸಿತು.
ಆಪ್‌ರೇಟಿಂಗ್ ಸಿಸ್ಟಮ್ ಯಾವುದು ಎಂಬುದು ಮುಖ್ಯವೇ ಅಲ್ಲ ಎಂಬುದು ಸತ್ಯನಾಡೆಲ್ಲಾ ಅವರ ಅಭಿಪ್ರಾಯ. ಸರ್ಫೇಸ್ ಡ್ಯುವೋ ಕುರಿತು ವೈರ್ಡ್ ಪತ್ರಿಕೆಯೊಂದಿಗೆ ಮಾತನಾಡಿದಾಗ ಅವರು ಹೇಳಿರುವುದು, ” ಆಪರೇಟಿಂಗ್ ಸಿಸ್ಟಮ್ ಈಗ ಮುಖ್ಯವಾದ ಅಂಶವೇ ಅಲ್ಲ. ಮೊಬೈಲ್ ಅಪ್ಲಿಕೇಷನ್‌ನ ಮಾಡೆಲ್ ಮತ್ತು ಬಳಕೆದಾರರ ಅನುಭವ ಮುಖ್ಯ” ಎಂದಿದ್ದಾರೆ.
ಈಗ ಸರ್ಫೇಸ್ ಡ್ಯುಯೊ ಮೂಲಕ ಪ್ರಯೋಗ ಮಾಡಲು ಹೊರಟಿರುವ ಮೈಕ್ರೋಸಾಫ್ಟ್ ಟ್ಯಾಬ್ಲೆಟ್-ಫೋನ್ ಬಳಕೆಗಳ ಅನುಭವವನ್ನು ಇದೊಂದೇ ಸಾಧನದಲ್ಲಿ ಕೊಡಲಿದೆ. ಕೆಳಗಿರುವ ವಿಡಿಯೋವನ್ನು ಒಮ್ಮೆ ನೋಡಿ, ಈ ಸಾಧನ ಹೇಗಿರಲಿದೆ ಎಂಬುದನ್ನು ತಿಳಿಯಬಹುದು.
360 ಡಿಗ್ರಿ ತಿರುಗಬಲ್ಲ ಈ ಸಾಧನದಲ್ಲಿ ಸೆಲ್ಫಿ ಕ್ಯಾಮೆರಾ ಮಾತ್ರ ಇರಲಿದೆ. ಈಗಾಗಲೇ ಎರಡೂವರೆ ವರ್ಷಗಳ ಕಾಲ ಈ ಸಾಧನದ ವಿನ್ಯಾಸ ಮತ್ತು ತಾಂತ್ರಿಕತೆಗೆ ಮೈಕ್ರೋಸಾಫ್ಟ್ ವಿನಿಯೋಗಿಸಿದ್ದು, ಮಾರುಕಟ್ಟೆಗೆ ಬರುವ ಹೊತ್ತಿಗೆ ಮತ್ತಷ್ಟು ಹೊಸ ಫೀಚರ್‌ಗಳನ್ನು ಒಳಗೊಳ್ಳಬಹುದು ಎನ್ನಲಾಗಿದೆ.
ಮೈಕ್ರೋಸಾಫ್ಟ್ ಈಗಾಗಲೇ ನಮ್ಮಲ್ಲಿರುವ ಸ್ಮಾರ್ಟ್‌ಫೋನಿನ ಕಲ್ಪನೆಯನ್ನು ಒಡೆದು ಹಾಕುವುದನ್ನೇ ಆದ್ಯತೆಯಾಗಿಸಿಕೊಂಡು ಸರ್ಫೇಸ್ ಡ್ಯುಯೊವನ್ನು ಯೋಜಿಸಿದೆ. ಡ್ಯುವೊದ ಎರಡು ಪರದೆಗಳು ಪ್ರತ್ಯೇಕವಾಗಿ ಅಥವಾ ಒಂದೇ ಆಗಿ ಕಾರ್ಯನಿರ್ವಹಿಸಬಲ್ಲವು. ಎರಡು ಪರದೆಗಳಿದ್ದರೂ, ಇದು ಸ್ಯಾಮ್‌ಸಂಗ್ ಮಾದರಿ ಎರಡು ಪರದೆಗಳ ಸ್ಮಾರ್ಟ್‌ಫೋನ್‌ನಂತೆ ಅಲ್ಲ ಎಂದು ಮೈಕ್ರೋಸಾಫ್ಟ್ ಸ್ಪಷ್ಟಪಡಿಸುತ್ತಲೇ ಇದೆ.
2020ರ ಏಪ್ರಿಲ್-ಮೇ ಸಮಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದ್ದು, ಮೈಕ್ರೋಸಾಫ್ಟ್ ಎಲೆಕ್ಟ್ರಾನಿಕ್ ಸಾಧನಗಳ ವಿಭಾಗದಲ್ಲಿ ಹೊಸ ಅಲೆ ಎಬ್ಬಿಸುವ ಉತ್ಸಾಹದಲ್ಲಿದೆ.