ಡಿಎನ್‌ಎ ಸೀಕ್ವೆನ್ಸಿಂಗ್‌ಗೆ ಕ್ರಾಂತಿಕಾರಿ ತಂತ್ರಜ್ಞಾನ; ಭಾರತೀಯ ಶಂಕರ್‌ ಸೇರಿ ಇಬ್ಬರಿಗೆ ಪ್ರತಿಷ್ಠಿತ ಮಿಲೇನಿಯಂ ಟೆಕ್ನಾಲಜಿ ಪ್ರಶಸ್ತಿ

ಜೀವವಿಕಾಸವನ್ನು ಅರ್ಥ ಮಾಡಿಕೊಳ್ಳುವಲ್ಲಿ ಡಿಎನ್‌ಎ ಸೀಕ್ವೆನ್ಸಿಂಗ್‌ ಮಹತ್ವ ಪಾತ್ರ ವಹಿಸಿದೆ. ಆದರೆ ಸೀಕ್ವೆನ್ಸಿಂಗ್‌ ಸಾಮರ್ಥ್ಯ ಹೆಚ್ಚಿಸುವ ಮೂಲಕ ದೊಡ್ಡ ಪ್ರಮಾಣದ ಯೋಜನೆಗೆ ಪೂರಕವಾಗುವಂತೆ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಇಬ್ಬರು ವಿಜ್ಞಾನಿಗಳಿಗೆ ಪ್ರಶಸ್ತಿ ಲಭಿಸಿದೆ.

ಕ್ರಾಂತಿಕಾರಿಯಾದ ಡಿಎನ್‌ಎ ಸೀಕ್ವೆನ್ಸಿಂಗ್‌ ( ಡಿಎನ್‌ಎಯಲ್ಲಿರುವ ಬೇಸ್‌ಗಳಾದ ಅಡಿನೈನ್‌, ಗಾನೈನ್‌, ಸೈಟೊಸೈನ್‌ ಮತ್ತು ಥೈಮೈನ್‌ಗಳ ಕ್ರಮವನ್ನು ನಿರ್ಧರಿಸುವ ಪ್ರಕ್ರಿಯೆ)ತಂತ್ರವನ್ನು ಅಭಿವೃದ್ಧಿ ಪಡಿಸಿದ ಭಾರತೀಯ ಮೂಲದ ಸರ್‌ ಶಂಕರ್‌ ಬಾಲಸುಬ್ರಮಣಿಯನ್‌ ಮತ್ತು ಇಂಗ್ಲೆಂಡಿನ ಸರ್‌ ಡೇವಿಡ್‌ ಕ್ಲೀನರ್‌ಮನ್‌ ಅವರಿಗೆ 2020ರ ಮಿಲೇನಿಯಂ ಟೆಕ್ನಾಲಜಿ ಪ್ರಶಸ್ತಿ ಲಭಿಸಿದೆ.

ಮಿಲೇನಿಯಂ ಟೆಕ್ನಾಲಜಿ ಪ್ರಶಸ್ತಿ ವಿಶ್ವದ ಅತ್ಯಂತ ಪ್ರತಿಷ್ಠಿತ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಪ್ರಶಸ್ತಿಯಾಗಿದ್ದು, ಟೆಕ್ನಾಲಜಿ ಅಕಾಡೆಮಿ ಫಿನ್‌ಲೆಂಡ್‌ ಈ ಪ್ರಶಸ್ತಿಯನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ನೀಡುತ್ತದೆ.

ಭಾರತೀಯ ಮೂಲದವರಾದ ಶಂಕರ್‌ ಬಾಲಸುಬ್ರಮಣಿಯನ್‌ ಹಾಗೂ ಡೇವಿಡ್‌ ಕ್ಲೀನರ್‌ಮನ್‌ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದ ರಸಾಯನಶಾಸ್ತ್ರಜ್ಞರು. ಈ ಇಬ್ಬರು ಅಭಿವೃದ್ಧಿಪಡಿಸಿದ ಸೊಲೆಕ್ಸಾ ಇಲ್ಯುಮಿನಾ ಡಿಎನ್‌ಎ ಸೀಕ್ವೆನ್ಸಿಂಗ್‌ ತಂತ್ರಜ್ಞಾನ ಅತ್ಯಾಧುನಿಕವಾಗಿದ್ದು, ಜೀವವನ್ನು ಅರ್ಥಮಾಡಿಕೊಳ್ಳುವ ಸಾಧ್ಯತೆಯನ್ನು ಹೆಚ್ಚಿಸಿದೆ. ವೇಗದ, ನಿಖರತೆ, ಕಡಿಮೆ ವೆಚ್ಚದ ಹಾಗೂ ದೊಡ್ಡ ಪ್ರಮಾಣದ ಜೀನೋಮ್‌ ಸೀಕ್ವಿನ್ಸಿಂಗ್‌ ಪ್ರಕ್ರಿಯೆಗೆ ಅನುಕೂಲಕರವಾಗಿರುವ ಈ ತಂತ್ರಜ್ಞಾನ ಕ್ರಾಂತಿಕಾರಿ ಬೆಳವಣಿಗೆ ಎಂದು ತಜ್ಞರು ಗುರುತಿಸಿದ್ದಾರೆ.

ಈ ಇಬ್ಬರೂ ಕೂಡಿ 1998ರಲ್ಲಿ ಸೊಲೆಕ್ಸಾ ಹೆಸರಿನ ಕಂಪನಿ ಆರಂಭಿಸಿದ್ದು ಈ ವಿನೂತನ ತಂತ್ರಜ್ಞಾನ ಜಾಗತಿಕವಾಗಿ ಲಭ್ಯವಾಗಬೇಕೆಂದು ಶ್ರಮಿಸುತ್ತಿದ್ದಾರೆ. 100000 ಜೀನೋಮ್ಸ್‌ ಪ್ರಾಜೆಕ್ಟ್‌, ಇಂಟರ್‌ನ್ಯಾಷನಲ್‌ ಕ್ಯಾನ್ಸರ್‌ ಜೀನೋಮ್‌ ಪ್ರಾಜೆಕ್ಟ್‌ ಮತ್ತು ಜೀನೋಮ್‌ ಏಷ್ಯಾ 100ಕೆ ಹೆಸರಿನ ಬೃಹತ್‌ ಪ್ರಾಜೆಕ್ಟ್‌ಗಳಲ್ಲಿ ಈ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಈ ಸಂಸ್ಥೆ ಪ್ರತಿ ವರ್ಷ ಒಂದು ಲಕ್ಷ ಜೀನೋಮ್‌ಗಳ ಸೀಕ್ವೆನ್ಸ್‌ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.