ದಶಕಗಳ ಬಳಿಕ ಮತ್ತೆ ಶುಕ್ರಗ್ರಹದ ಅಧ್ಯಯನಕ್ಕೆ ಯೋಜನೆ ಹಮ್ಮಿಕೊಂಡ ನಾಸಾ

1978ರ ಬಳಿಕ ಮೊದಲ ಬಾರಿಗೆ NASA ತನ್ನ ರೋಬೋಟಿಕ್ ಯೋಜನೆಗೆ ಶುಕ್ರಗ್ರಹವನ್ನು ಆಯ್ಕೆ ಮಾಡಿಕೊಂಡಿದೆ. ನಾಸಾದ ಹೊಸ ಆಡಳಿತ ಅಧಿಕಾರಿಯಾಗಿರುವ ಬಿಲ್ ನೆಲ್ಸನ್ ಅವರು ಹೇಳಿರುವ ಪ್ರಕಾರ ಗ್ರಹಮಂಡಲದ ಅತ್ಯಂತ ಬಿಸಿ ಗ್ರಹವಾಗಿರುವ ಶುಕ್ರಗ್ರಹದ ಅಧ್ಯಯನಕ್ಕಾಗಿ ಎರಡು ರೊಬೋಟಿಕ್ ಯೋಜನೆಗಳನ್ನು ಜಾರಿಗೆ ತರಲಾಗುವುದು

ಭೂಮಿಯ ಅತೀ ಹತ್ತಿರದ ಗ್ರಹವಾದ ಶುಕ್ರಗ್ರಹ ಬಹುಶಃ ಅತೀ ಹೆಚ್ಚಾಗಿ ನಿರ್ಲಕ್ಷ್ಯಕ್ಕೆ ಒಳಗಾದ ಗ್ರಹವೆನ್ನಬಹುದು. ಕಳೆದ ಹಲವು ದಶಕಗಳಿಂದ ಈ ಗ್ರಹದ ಕುರಿತು ವಿಸ್ತೃತವಾದ ಅಧ್ಯಯನಗಳು ನಡೆದಿಲ್ಲ. ಮಂಗಳನ ಅಂಗಳಕ್ಕೆ ಇಳಿದ ಬಳಿಕ, ಚಂದಿರನ ಕುಳಿಗಳನ್ನು ಅಧ್ಯಯನ ನಡೆಸಿದ ಬಳಿಕ, ಕೊನೆಗೂ ಶುಕ್ರಗ್ರಹದ ಅಧ್ಯಯನಕ್ಕೆ ಶುಕ್ರದೆಸೆ ಕೂಡಿಬಂದಿದೆ.

1978ರ ಬಳಿಕ ಮೊದಲ ಬಾರಿಗೆ NASA ತನ್ನ ರೋಬೋಟಿಕ್ ಯೋಜನೆಗೆ ಶುಕ್ರಗ್ರಹವನ್ನು ಆಯ್ಕೆ ಮಾಡಿಕೊಂಡಿದೆ. ನಾಸಾದ ಹೊಸ ಆಡಳಿತ ಅಧಿಕಾರಿಯಾಗಿರುವ ಬಿಲ್ ನೆಲ್ಸನ್ ಅವರು ಹೇಳಿರುವ ಪ್ರಕಾರ ಗ್ರಹಮಂಡಲದ ಅತ್ಯಂತ ಬಿಸಿ ಗ್ರಹವಾಗಿರುವ ಶುಕ್ರಗ್ರಹದ ಅಧ್ಯಯನಕ್ಕಾಗಿ ಎರಡು ರೊಬೋಟಿಕ್ ಯೋಜನೆಗಳನ್ನು ಜಾರಿಗೆ ತರಲಾಗುವುದು.

“ಈ ಎರಡು ಅಧ್ಯಯನಗಳು ಶುಕ್ರಗ್ರಹ ಸೀಸವನ್ನೂ ಕರಗಿಸುವಂತಹ ನರಕವಾಗಿ ಏಕೆ ರೂಪುಗೊಂಡಿತು ಎಂಬುದರ ಕುರಿತು ಅಧ್ಯಯನ ನಡೆಸಲಿವೆ,” ಎಂದು ನೆಲ್ಸನ್ ಹೇಳಿದ್ದಾರೆ.

ಡಾ’ವಿಂಚಿ ಎಂಬ ಒಂದು ಯೋಜನೆಯು ಶುಕ್ರಗ್ರಹದ ಸುತ್ತಲು ಹಬ್ಬಿಕೊಂಡಿರುವ ದಟ್ಟವಾದ ಮೋಡಗಳ ಅಧ್ಯಯನ ನಡೆಸಲಿದೆ. ಇದರೊಂದಿಗೆ ಈ ಗ್ರಹದಲ್ಲಿ ಎಂದಾದರು ಸಮುದ್ರ ಇತ್ತೇ? ಇಲ್ಲಿ ಜೀವ ಸಂಕುಲವಿತ್ತೇ ಎಂಬುದನ್ನೂ ಪತ್ತೆ ಹಚ್ಚಲು ಯತ್ನಿಸಲಿದೆ. ಗ್ರಹದ ಸುತ್ತಲೂ ಇರುವ ಅನಿಲವನ್ನು ಅಳೆಯಲು ಒಂದು ಸಣ್ಣ ವ್ಯೋಮ ನೌಕೆಯನ್ನು ಶುಕ್ರಗ್ರಹ ವಾತಾವರಣದ ಒಳಗೆ ಕಳುಹಿಸಲಾಗುತ್ತದೆ.

ವೆರಿಟಸ್ ಎಂದು ಕರೆಯಲ್ಪಡುವ ಇನ್ನೊಂದು ಯೋಜನೆಯು, ಕಲ್ಲಿನಿಂದಾವೃತವಾದ ಶುಕ್ರಗ್ರಹದ ಮೇಲ್ಮೈ ಕುರಿತ ಅಧ್ಯಯನ ನಡೆಸಲಿದೆ.

“ಅತಿಯಾದ ಇಂಗಾಲದ ಡೈ ಆಕ್ಸೈಡ್’ನಿಮದ ಕೂಡಿರುವ ಶುಕ್ರಗ್ರಹದ ವಾತಾರವಣದ ಕುರಿತು ಈ ಎರಡು ಯೋಜನೆಗಳು ಹೆಚ್ಚಿನ ಮಾಹಿತಿಯನ್ನು ನೀಡಲಿವೆ. ಶುಕ್ರಗ್ರಹದ ಕುರಿತು ನಮಗೆ ತುಂಬಾ ಕಡಿಮೆ ಮಾಹಿತಿ ಲಭ್ಯವಿದೆ. ಈ ಯೋಜನೆಯು, ಹೊಸ ಗ್ರಹವನ್ನು ಕಂಡುಹುಡುಕಿದ ಅನುಭವ ನೀಡಲಿದೆ,” ಎಂದು ನಾಸಾ ವಿಜ್ಞಾನಿ ಟಾಮ್ ವ್ಯಾಗ್ನರ್ ಹೇಳಿದ್ದಾರೆ.

ನಾಸಾ ಅನ್ವೇಷಣಾ ಯೋಜನೆಯ ಅಡಿಯಲ್ಲಿ ಪ್ರತಿ ಯೋಜನೆಯು ತಲಾ 500 ಮಿಲಿಯನ್ ಡಾಲರ್ ಅನುದಾನವನ್ನು ಪಡೆಯಲಿದೆ. ಈ ಯೋಜನೆಯು 2028-2030ರ ವೇಳೆಗೆ ಜಾರಿಯಾಗಲಿದೆ. ಒಂದರ್ಥದಲ್ಲಿ ಇದು ಶುಕ್ರಗ್ರಹದ ದಶಕವೆಂದೇ ಹೇಳಬಹುದು.

ಈ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದ್ದರಿಂದ ಇತರ ಎರಡು ಯೋಜನೆಗಳಾದ ಗುರುಗ್ರಹದ ಉಪಗ್ರಹವಾದ ‘ಐಒ’ ಮತ್ತು ನೆಪ್ಚೂನ್ ಗ್ರಹದ ಉಪಗ್ರಹವಾದ ‘ಟ್ರೈಟನ್’ ಕುರಿತ ಅಧ್ಯಯನವನ್ನು ಕೈಬಿಡಲಾಗಿದೆ.

ಅಮೇರಿಕಾ ಮತ್ತು ಈ ಹಿಂದೆ ಇದ್ದಂತಹ ಸೋವಿಯತ್ ಯೂನಿಯನ್, ಶುಕ್ರಗ್ರಹದ ಅಧ್ಯಯನವನ್ನು ಕೈಗೊಂಡಿದ್ದರು. 1962ರಲ್ಲಿ ನಾಸಾ’ದ ಮರಿನೇರ್ 2 ಶುಕ್ರಗ್ರಹ ಸುತ್ತ ಯಶಸ್ವಿಯಾಗಿ ಗಿರಕಿ ಹೊಡೆದಿತ್ತು. 1970ರಲ್ಲಿ ಸೋವಿಯತ್’ನ ವೆನೇರಾ 7 ಶುಕ್ರಗ್ರಹದ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿತ್ತು. 1989ರಲ್ಲಿ ನಾಸಾ ಮತ್ತೆ ತನ್ನ ವ್ಯೋಮ ನೌಕೆಯಾದ ಮಗೆಲ್ಲಾನ್ ನೌಕೆಯನ್ನು ಶುಕ್ರಗ್ರಹ ಕಕ್ಷೆಯ ಒಳಗೆ ಕಳುಹಿಸಿತ್ತು. ಕೊನೆಯ ಬಾರಿಗೆ ಯುರೋಪ್ ಬಾಹ್ಯಾಕಾಶ ಸಂಸ್ಥೆಯು 2006ರಲ್ಲಿ ಶುಕ್ರಗ್ರಹದ ಅಧ್ಯಯನವನ್ನು ಮಾಡಲು ತನ್ನ ನೌಕೆಯನ್ನು ಕಳುಹಿಸಿತ್ತು.

ಈಗ ಮತ್ತೆ ಶುಕ್ರಗ್ರಹದ ಅಧ್ಯಯನ ನಡೆಸಲು ನಾಸಾ ತೀರ್ಮಾನಿಸಿದ್ದು ನಾವು ಅತಿ ಕಡಿಮೆ ತಿಳಿದುಕೊಂಡಿರುವ ಭೂಮಿಯ ನೆರೆಯ ಗ್ರಹದ ಕುರಿತು ಅಚ್ಚರಿಯ ಮಾಹಿತಿಗಳು ಲಭ್ಯವಾಗಬಹುದು ಎಂಬ ಆಶಾಭಾವನೆ ಮೂಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: