ವಿಶ್ವವಿದ್ಯಾಲಯಗಳು, ಸಂಶೋಧನಾ ಕೇಂದ್ರಗಳು, ಸರ್ಕಾರದ ಉನ್ನತ ಮಟ್ಟದ ಸಂಶೋಧನಾ ಪ್ರಯೋಗಾಲಯಗಳಲ್ಲಿ ಮಹಿಳಾ ವಿಜ್ಞಾನಿಗಳ ಸಂಖ್ಯೆ ವಿರಳವೆಂದೇ ಹೇಳಬಹುದು. ವಿಜ್ಞಾನದಲ್ಲಿ ತೊಡಗಿಸಿಕೊಂಡವರೇ ಕಡಿಮೆಯೆಂದ ಮೇಲೆ ವಿಜ್ಞಾನ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿರುವವರ ಸಂಖ್ಯೆ ಕೇಳಬೇಕೆ, ಇನ್ನೂ ವಿರಳ.

“ ಆಡು ಮುಟ್ಟದ ಸೊಪ್ಪಿಲ್ಲ” ಎನ್ನುವ ಜನಪ್ರಿಯ ಗಾದೆಯಂತೆ ಮಹಿಳೆ ಕಾಲಿಡದ ಕ್ಷೇತ್ರವೇ ಇಲ್ಲ. ಸಾಮಾಜಿಕ, ರಾಜಕೀಯ, ಶಿಕ್ಷಣ, ಆರ್ಥಿಕತೆ, ವ್ಯವಹಾರ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ. ಭಾರಿ ವಾಹನಗಳ ಚಾಲನೆಯಿಂದ ಹಿಡಿದು ಸೂಪರ್ ಸಾನಿಕ್ ವಿಮಾನವನ್ನು ಏಕಾಂಗಿಯಾಗಿ ಚಲಾಯಿಸುವುದರಲ್ಲಿ ಯಶಸ್ವಿಯಾಗಿದ್ದಾಳೆ. ‘ಮಹಿಳೆಯರು ಕಮಾಂಡರ್ ಸೇನೆಯಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಬಹುದು’ ಎಂದು ಇತ್ತೀಚಿಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದರಿಂದ ಮಹಿಳೆ ಮತ್ತೊಂದು ಯಶಸ್ಸಿನ ಗುರಿ ಏರಲು ಸಿದ್ದಳಾಗುತ್ತಿದ್ದಾಳೆ. ಏನಿವತ್ತು ಮಹಿಳಾ ದಿನಾಚರಣೆ ಅಲ್ವಲ್ಲಾ, ಆದರೂ ಮಹಿಳೆಯರ ಗುಣಗಾನ ಅಂತೀರಾ? ಇವತ್ತು ಫೆಬ್ರವರಿ 28, ರಾಷ್ಟ್ರೀಯ ವಿಜ್ಞಾನ ದಿನಾಚರಣೆ. ಪ್ರತೀ ವರ್ಷವೂ ವಿಜ್ಞಾನ ದಿನಾಚರಣೆಗೆ ಒಂದು ಧ್ಯೇಯವಾಕ್ಯವಿರುತ್ತದೆ, ಅದರಂತೆ ಈ ವರ್ಷದ ಧ್ಯೇಯವಾಕ್ಯ, “ವಿಜ್ಞಾನದಲ್ಲಿ ಮಹಿಳೆಯರು ”.
ವಿಜ್ಞಾನ ಕ್ಷೇತ್ರಕ್ಕೆ ಮಹಿಳೆಯರ ಪಾದಾರ್ಪಣೆ ನೆನ್ನೆ ಮೊನ್ನೆಯದಲ್ಲ, ಸ್ವಾತಂತ್ರ ಪೂರ್ವದಲ್ಲೇ ಇತ್ತು. 1944 ರಲ್ಲಿ ಭಾರತೀಯ ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದ ಮೊದಲ ಭಾರತೀಯ ಮಹಿಳೆ, ಆಸೀಮ ಚರ್ಟಜಿಯಿಂದ ಹಿಡಿದು ಇಂದಿನ ಭಾರತದ ಕ್ಷಿಪಣಿ ಮಹಿಳೆಯೆಂದೇ ಖ್ಯಾತರಾದ ಡಾ. ಟೆಸ್ಸಿ ಥಾಮಸ್ ರವರೆಗೂ ಅನೇಕ ಮಹಿಳೆಯರು ವಿಜ್ಞಾನ ಕ್ಷೇತ್ರಕ್ಕೆ ತಮ್ಮದೇ ಆದ ಅಪೂರ್ವ ಕೊಡುಗೆಯನ್ನು ನೀಡಿದ್ದಾರೆ.
ಪ್ರಶಸ್ತಿಗಳ ಬಗ್ಗೆ ಹೇಳೋದಾದರೆ, ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ನೀಡುವ ಅತ್ಯುನ್ನತ ಪ್ರಶಸ್ತಿಯಾದ ”ಶಾಂತಿ ಸ್ವರೂಪ ಭಟ್ನಾಗರ್ ಪ್ರಶಸ್ತಿ”ಯನ್ನು ಇಲ್ಲಿಯವರೆಗೆ 542 ಪುರುಷರಿಗೆ ಮತ್ತು 18 ಮಹಿಳೆಯರಿಗೆ ನೀಡಲಾಗಿದೆ.
ಭಾರತ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಪ್ರಕಟಗೊಳಿಸಿರುವ ವರದಿ 2018-19 ರನ್ವಯ ಭಾರತದಾದ್ಯಂತ ವಿಜ್ಞಾನದಲ್ಲಿ ಪದವಿ ಶಿಕ್ಷಣಕ್ಕೆ ದಾಖಲಾದ ಮಹಿಳೆಯರ ಸಂಖ್ಯೆ 24,04,015 (ಇಪ್ಪತ್ನಾಲ್ಕು ಲಕ್ಷದ ನಾಲ್ಕು ಸಾವಿರದ ಹದಿನೈದು ಮಂದಿ), ಸ್ನಾತಕೋತ್ತರ ಪದವಿಗೆ ದಾಖಲಾದ ಮಹಿಳೆಯರ ಸಂಖ್ಯೆ 3,72,455 (ಮೂರು ಲಕ್ಷದ ಎಪ್ಪತ್ತೆರಡು ಸಾವಿರದ ನಾಲ್ಕು ನೂರ ಐವತ್ತೈದು ಮಂದಿ). ಮುಂದುವರೆದು ಮೂಲ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿಗೆ ದಾಖಲಾದ ಸಂಖ್ಯೆ ಕೇವಲ 21,524 (ಇಪ್ಪತ್ತೊಂದು ಸಾವಿರದ ಐದುನೂರ ಇಪ್ಪತ್ನಾಲ್ಕು ಮಂದಿ).

ಶಿಕ್ಷಣ ಪೂರ್ಣಗೊಳಿಸಿದ ನಂತರ ಬಹುಪಾಲು ಮಹಿಳೆಯರು ಶಾಲಾ-ಕಾಲೇಜುಗಳಲ್ಲಿ ಶಿಕ್ಷಕಿಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ವಿಶ್ವವಿದ್ಯಾಲಯಗಳು, ಸಂಶೋಧನಾ ಕೇಂದ್ರಗಳು, ಸರ್ಕಾರದ ಉನ್ನತ ಮಟ್ಟದ ಸಂಶೋಧನಾ ಪ್ರಯೋಗಾಲಯಗಳಲ್ಲಿ ಮಹಿಳಾ ವಿಜ್ಞಾನಿಗಳ ಸಂಖ್ಯೆ ವಿರಳವೆಂದೇ ಹೇಳಬಹುದು. ವಿಜ್ಞಾನದಲ್ಲಿ ತೊಡಗಿಸಿಕೊಂಡವರೇ ಕಡಿಮೆಯೆಂದ ಮೇಲೆ ವಿಜ್ಞಾನ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿರುವವರ ಸಂಖ್ಯೆ ಕೇಳಬೇಕೆ, ಇನ್ನೂ ವಿರಳ.
ಇದನ್ನೆಲ್ಲ ಗಮನಿಸಿದಾಗ ಅನ್ನಿಸಿದ್ದು, ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಕಡಿಮೆಯೇನಿಲ್ಲ ಆದರೆ ಈ ಸಂಖ್ಯೆ ಡಾಕ್ಟರೇಟನ್ನು ಪಡೆದ ನಂತರ ವೃತ್ತಿಯನ್ನು ಆಯ್ದುಕೊಳ್ಳುವಾಗ ವಿಫಲವಾಗುತ್ತಿದೆ. ಇದನ್ನು Leaky pipeline of women in Science ಎನ್ನುತ್ತಾರೆ. ಸಂಶೋಧನಾ ವೃತ್ತಿಯು ಅತೀ ಹೆಚ್ಚಿನ ಸಮಯ, ಆಳವಾದ ಜ್ಞಾನ, ಸ್ಪರ್ಧಾತ್ಮಕತೆ, ಸಮರ್ಪಣಾ ಮನೋಭಾವವನ್ನು ಬಯಸುತ್ತದೆ.
ಮಹಿಳೆಯು ವೃತ್ತಿಗೆ ಸೇರುವ ಮತ್ತು ಸಂಸಾರವನ್ನು ಹೊಂದುವ ಸಮಯ ಹೆಚ್ಚು ಕಡಿಮೆ ಒಂದೇ ಆಗಿದ್ದು, ವೃತ್ತಿಗಿಂತ ಸಂಸಾರದ ಆಯ್ಕೆಯನ್ನು ಮಾಡುವಲ್ಲಿ ಪೋಷಕರ, ಸಮಾಜದ ಒತ್ತಡವೂ ಹೆಚ್ಚು ಇರಬಹುದು ಮತ್ತು ಮಕ್ಕಳನ್ನು ಹೊಂದುವ Biological clock pressure ಮಹಿಳೆಗೆ ಮಾತ್ರ ನಿರ್ಧಿಷ್ಟ ಸಮಯಕ್ಕೆ ಸೀಮಿತವಾಗಿದೆ. ನಂತರ ಮನೆಯಲ್ಲಿ ಮಕ್ಕಳ ಜವಬ್ದಾರಿ ಸಂಪೂರ್ಣ ಮಹಿಳೆಯದೇ ಅನ್ನುವ ಮನಸ್ಥಿತಿ ಇವರೆವಿಗೂ ಪ್ರಸ್ತುತವಾಗಿರುವುದು. ಇದಕ್ಕೆ ಪೂರಕವೆಂಬಂತೆ ಆಸ್ಟ್ರೇಲಿಯಾದ ಜನಪ್ರಿಯ ರಸಾಯನತಜ್ಞೆಯಾದ ರೀತ ಕಾರ್ನ್ ಪೋರ್ತ್ (ನೊಬೆಲ್ ಪ್ರಶಸ್ತಿ ವಿಜೇತರ ಪತ್ನಿ ಮತ್ತು ಸಹೋದ್ಯೋಗಿ) ಒಮ್ಮೆ ಹೇಳ್ತಾರೆ, “ I found it easier to put Chemistry out of my mind when I was at Home than to put our children out of my mind when I was in the Lab”.
ಈ ಕ್ಷೇತ್ರದಲ್ಲಿನ ಲಿಂಗ ಅಸಮಾನತೆಗೆ ಇನ್ನೊಂದು ಮುಖ್ಯ ಕಾರಣ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಮಹಿಳೆಯರಿಗೋಸ್ಕರವೇ ರೂಪಿಸಿರುವ ಅವಕಾಶಗಳ ಬಗ್ಗೆ, ಜಾರಿಯಲ್ಲಿರುವ ಯೋಜನೆಗಳ ಬಗ್ಗೆ ಸಮಾಜದಲ್ಲಿ ಕಡಿಮೆ ಜಾಗೃತಿ ಇರುವುದು.
ಈ ವರ್ಷದ ಧ್ಯೇಯವಾಕ್ಯವು ಅರ್ಥಪೂರ್ಣವಾಗಬೇಕೆಂದರೆ ವಿಜ್ಞಾನ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆಯನ್ನು ಹೆಚ್ಚಿಸಬೇಕು. ಇದಕ್ಕೆ ಪರಿಹಾರೋಪಾಯಗಳನ್ನು ನೋಡುವುದಾದರೆ, ಸದರಿ ಕ್ಷೇತ್ರದಲ್ಲಿ ತರಬೇತಿಗೊಂಡ ಮಹಿಳೆಯರನ್ನು ಅದೇ ಕ್ಷೇತ್ರದಲ್ಲಿ ಮುಂದುವರೆಯುವಂತಹ ಆಕರ್ಷಕ ಯೋಜನೆಗಳನ್ನು ರೂಪಿಸಬಹುದು. ಎಲ್ಲ ಸಂಶೋಧನಾ ಕೇಂದ್ರಗಳಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಡೇ ಕೇರ್ ಸೆಂಟರ್ ಗಳನ್ನು ರೂಪಿಸಿದಾಗ ಮಹಿಳಾ ವಿಜ್ಞಾನಿಗಳು ಕೆಲಸದಲ್ಲಿ ಹೆಚ್ಚಿನ ಸಮಯವನ್ನು ವ್ಯಯಿಸಲು ಮತ್ತು ಮಕ್ಕಳು ಹತ್ತಿರದಲ್ಲಿದ್ದಾರೆಂದು ನಿಶ್ಚಿಂತತೆಯಿಂದ ಕೆಲಸ ನಿರ್ವಹಿಸಬಲ್ಲರು. ಮಹಿಳೆಯರಲ್ಲಷ್ಟೇ ಅಲ್ಲದೇ ಅವರ ಪೋಷಕರು, ಕುಟುಂಬದವರು ಹಾಗೂ ಸಹೋದ್ಯೋಗೆಗಳೆಲ್ಲರಿಗೂ ಜಾಗೃತಿಯನ್ನು ಮೂಡಿಸಬಹುದಾಗಿದೆ. ಅಲ್ಲದೇ ಭಾರತೀಯ ಮಹಿಳಾ ವಿಜ್ಞಾನಿಗಳ ಜೀವನಗಾಥೆಯನ್ನೊಳಗೊಂಡ ಪುಸ್ತಕಗಳನ್ನು ಎಲ್ಲಾ ಗ್ರಂಥಾಲಯಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಇಡಬಹುದಾಗಿದ್ದು, ಇದರಿಂದ ವಿಧ್ಯಾರ್ಥಿನಿಯರನ್ನು ಪ್ರೇರೇಪಿಸಿದಂತಾಗುವುದು. ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳವನ್ನು ತಪ್ಪಿಸುವ ರೀತಿಯಲ್ಲಿ ವ್ಯವಸ್ಥೆಯನ್ನು ಕೈಗೊಳ್ಳಬೇಕಾಗಿದೆ.