ಇಂದು ರಾಷ್ಟ್ರೀಯ ತಂತ್ರಜ್ಞಾನ ದಿನ | ಮನುಕುಲ ಸ್ನೇಹಿ ತಂತ್ರಜ್ಞಾನ ಬೇಕು

1999ರ ಮೇ 11ರಂದು ಪೋಕ್ರಾನ್‌ನಲ್ಲಿ ಆಗಿನ ಎನ್‌ಡಿಎ ಸರ್ಕಾರ ಯಶಸ್ವಿಯಾಗಿ ಅಣು ಬಾಂಬ್‌ ಪ್ರಯೋಗ ನಡೆಸಿತು. ಈ ನೆನಪಿನಲ್ಲಿ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಪ್ರತಿ ಮೇ 11 ರಂದು ಆಚರಿಸಲಾಗುತ್ತದೆ. ತಂತ್ರಜ್ಞಾನ ಹಲವು ಆಯಾಮಗಳಲ್ಲಿ ಬೆಳೆಯುತ್ತಿರುವ ಈ ಹೊತ್ತಿನಲ್ಲಿ ಅದಕ್ಕೆ ಮಾನವೀಯ ಸ್ಪರ್ಶದ ಅಗತ್ಯವಿದೆ ಎಂಬುದನ್ನು ಈ ಹೊತ್ತಿನಲ್ಲಿ ನಮ್ಮ ಪ್ರಜ್ಞೆಯಾಗಿಸಿಕೊಳ್ಳಬೇಕಿದೆ

ದೊಡ್ಡ ಶಕ್ತಿಯೊಂದಿಗೆ ದೊಡ್ಡ ಜವಾಬ್ದಾರಿಯೂ ಬರುತ್ತದೆ ಎಂಬದೊಂದು ಮಾತಿದೆ. ಇಂದು ಅಗಾಧವಾಗಿ ಬೆಳೆದು ನಿಂತಿರುವ ತಂತ್ರಜ್ಞಾನದ ವಿಷಯದಲ್ಲಿ ಈ ಮಾತನ್ನು ಅಕ್ಷರಶಃ ಅನ್ವಯವಾಗುವಂತೆ ನೋಡಿಕೊಳ್ಳುವ ಅತ್ಯವಿದೆ ಎನ್ನಿಸುತ್ತದೆ.

ತಂತ್ರಜ್ಞಾನ ಮನುಷ್ಯನ ನೆರವಿಗೆಂದು, ಅವನ ಕಾರ್ಯಚಟುವಟಿಕೆಗಳಿಗೆ ಪೂರಕವಾಗುವ ನಿಟ್ಟಿನಲ್ಲಿ ಅಭಿವೃದ್ಧಿಗೊಂಡಿದ್ದು. ನಿರ್ದಿಷ್ಟ ಕ್ಷೇತ್ರಗಳಲ್ಲಿ ಬಳಲಿಕ್ಕೆಂದು ಬೆಳೆದ ತಂತ್ರಜ್ಞಾನ ಇಂದು ಯಾವ ಕ್ಷೇತ್ರವನ್ನು ಬಿಡದಂತೆ ಆವರಿಸಿಕೊಂಡಿದೆ.

ಕಳೆದ ಮೂವತ್ತು ವರ್ಷಗಳ ಅವಧಿಯಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿ ಬಹುಶಃ ಮನುಕುಲದ ಇತಿಹಾಸದಲ್ಲಿ ಇನ್ನೊಂದು ಆಗಿರಲಿಕ್ಕಿಲ್ಲ. ಹೀಗೆ ಹೇಳುವುದಕ್ಕೆ ಮುಖ್ಯ ಕಾರಣ ಕ್ರಾಂತಿಯ ವೇಗ. ಮನುಕುಲ ಹಲವು ಕ್ರಾಂತಿಕಾರಿ ಬದಲಾವಣೆಗಳನ್ನು ಕಂಡಿದೆ. ಅದೆಲ್ಲವೂ ಸಾಗರದ ಸುದೀರ್ಘ ಅಲೆಯೊಂದರ ಗತಿಯಲ್ಲಿ ಬಂದು ಅಪ್ಪಳಿಸಿದ್ದು. ಆದರೆ ತಂತ್ರಜ್ಞಾನ ಕ್ಷೇತ್ರದಲ್ಲಿ ಆದ ಬದಲಾವಣೆ ಸುನಾಮಿಯಂತಹದ್ದು.

ತಂತ್ರಜ್ಞಾನ- ಮಾಹಿತಿಯ ಜೋಡಿ ಪವಾಡಗಳನ್ನೇ ಮಾಡುತ್ತಾ, ಮನುಷ್ಯ ಶಕ್ತಿಶಾಲಿಯೂ ಹಾಗೂ ಅನಂತವೂ ಎಂಬ ಭಾವನೆಯನ್ನು ಗಟ್ಟಿಗೊಳಿಸುತ್ತಾ ಬಂದಿದೆ. ಆಲ್ಗರಿದಂ, ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌, ಆಗ್ಮೆಂಟೆಡ್‌ ರಿಯಾಲಿಟಿ, ವರ್ಚ್ಯುವಲ್‌ ರಿಯಾಲಿಟಿ ಎಲ್ಲವೂ ಪೂರಕ ವ್ಯವಸ್ಥೆಯನ್ನು ಸೃಷ್ಟಿಸುತ್ತಾ, ಪರ್ಯಾಯ ಆದ್ಯತೆಗಳಾಗಿವೆ.

ವೈದ್ಯಕೀಯ ಕ್ಷೇತ್ರದಲ್ಲಿ ರೋಗ ಸಾಧ್ಯತೆಯ ಭವಿಷ್ಯ ನುಡಿಯಬಲ್ಲವು, ಅತ್ಯಂತ ಸೂಕ್ಷ್ಮ, ಅಸಾಧ್ಯ ಚಿಕಿತ್ಸೆಗಳನ್ನು ನ್ಯಾನೊ ತಂತ್ರಜ್ಞಾನದ ಮೂಲಕ ಸಾಧ್ಯವಾಗಿಸಬಲ್ಲವು. ಮನೆಗಳನ್ನು ಮುದ್ರಿಸಿಕೊಡಬಲ್ಲ 3ಡಿ ಪ್ರಿಂಟರ್‌ಗಳು ಸಿದ್ಧವಾಗಿವೆ. ಒಂದು ತುದಿಯಿಂದ ಇನ್ನೊಂದು ತುದಿಯಲ್ಲಿರುವವರೊಂದಿಗೆ ಮಾತನಾಡುವ ಕ್ಷೇತ್ರವಾಗಿದ್ದ ಟೆಲಿಕಾಂ ಮಹತ್ವದ ಬದಲಾವಣೆಗಳನ್ನು ಕಂಡಿದೆ.

ಬಹುಶಃ ಈ ಬೆಳವಣಿಗೆಗಳನ್ನು ಮೊದಲೇ ಗ್ರಹಿಸಿದ್ದಾರೇನೊ ಆಲ್ಬರ್ಟ್‌ ಐನ್‌ಸ್ಟೀನ್‌, ಅದಕ್ಕೆ ಅವರು., ‘ ತಂತ್ರಜ್ಞಾನ ಬೆಚ್ಚಿ ಬೀಳಿಸುವಷ್ಟು ಮನುಕುಲವನ್ನು ದಾಟಿ ಹೋಗಿದೆ’ ಎಂದಿದ್ದರು. ಕೇವಲ ಯಾಂತ್ರಿಕ, ತಾಂತ್ರಿಕ ಅಂಶಗಳಿಂದ ಕೂಡಿದ್ದ ತಂತ್ರಜ್ಞಾನ ಭಾಷೆ, ಭಾವನೆ, ಸಂದರ್ಭಗಳನ್ನು ಅರ್ಥ ಮಾಡಿಕೊಂಡು ಸಂವಹನ ನಡೆಸುವಷ್ಟರ ಮಟ್ಟಿಗೆ ಬೆಳೆದಿರುವುದು ನಿಜಕ್ಕೂ ಬಹುದೊಡ್ಡ ಸಾಧನೆ!

ಈ ಎಲ್ಲ ಬೆಳವಣಿಗೆಗಳನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಲೇ, ಆತಂಕದ ಚೌಕಟ್ಟಿಗೆ ಬಂದು ನಿಂತಿದ್ದೇವೆ ಎನ್ನಿಸುತ್ತದೆ. ತಂತ್ರಜ್ಞಾನ ಪ್ರತಿಯೊಬ್ಬರನ್ನು ಜಗತ್ತಿನೊಡನೆ ಬೆಸೆದು, ತನ್ನ ಪಕ್ಕದಲ್ಲಿರುವವರ ಜೊತೆಗಿನ ಸಂವಹನ, ಸಂಹಜ ಸಂವಾದವನ್ನು ಕತ್ತರಿಸಿಬಿಟ್ಟಿದೆ ಎನ್ನಿಸುತ್ತದೆ. ಇದು ತಂತ್ರಜ್ಞಾನದ ಬಗ್ಗೆ ತಕರಾರಿರುವ ಪ್ರತಿಯೊಬ್ಬ ಸಹಜ ಆತಂಕ. ಆದರೆ ಕೇಳಬೇಕಾಗಿರುವ ಪ್ರಶ್ನೆಗಳು ಇನ್ನೂ ಇವೆ.

ನೀವು ಏನು ಬಯಸುತ್ತೀದ್ದೀರಿ? ಏನು ಅಂದುಕೊಳ್ಳುತ್ತಿದ್ದೀರಿ? ಯಾರೊಡನೆ ಏನು ಮಾತನಾಡುತ್ತಿದ್ದೀರಿ ಎಂಬುದನ್ನು ಅರಿತು ನಿಮ್ಮ, ಆಯ್ಕೆ, ಆಸಕ್ತಿ, ಖರೀದಿ ಎಲ್ಲವನ್ನೂ ಪ್ರಭಾವಿಸಲಾಗುತ್ತಿದೆ. ಅಂದರೆ ನಮ್ಮ ಖಾಸಗಿತನ, ನಮ್ಮ ಮಾಹಿತಿಯನ್ನು ಬಳಸಿಕೊಳ್ಳುತ್ತಿರುವ ತಂತ್ರಜ್ಞಾನ, ನಮ್ಮನ್ನೇ ಗುಲಾಮರಾಗಿಸಿಕೊಳ್ಳುತ್ತಿದೆ ಎಂದಲ್ಲವೆ? ಮಾನವ ಘನತೆಗೆ ಧಕ್ಕೆ ಉಂಟು ಮಾಡುವುದು ತಂತ್ರಜ್ಞಾನಕ್ಕೆ ಸುಲಭ ಒಪ್ಪಿತ ಸರಕೆ?

ಹೊಸ ತಂತ್ರಜ್ಞಾನವನ್ನು ರೂಪಿಸಲು ಬಯಸುವ ಸಂಸ್ಥೆ ಅಥವಾ ವ್ಯವಸ್ಥೆ ತನಗೆ ಬೇಕಾದ ಮಾಹಿತಿಯನ್ನು ತನ್ನದೇ ಇನ್ನೊಂದು ತಾಂತ್ರಿಕ ಪರಿಕಲ್ಪನೆಯೊಂದರ ಮೂಲಕ ಸಂಗ್ರಹಿಸಿ, ಹೊಸ ಪರಿಕಲ್ಪನೆಯನ್ನು ಅಭಿವೃದ್ಧಿ ಪಡಿಸಿ, ಮಾಹಿತಿ ಕೊಟ್ಟ ಜನರಿಗೆ ಮಾರುತ್ತದೆ. ಇನ್ನೊಂದೆಡೆ ಅಧಿಕಾರವನ್ನು ಶಾಶ್ವತವಾಗಿ ಹಿಡಿಯಬಯಸುವ ವ್ಯವಸ್ಥೆಗಳು ತನ್ನದೇ ನಾಗರಿಕರ ಮೇಲೆ ನಿಗಾ ಇಟ್ಟು, ಗೂಢಚಾರಿಕೆ ಮಾಡಿ, ಅವರನ್ನು ಕಟ್ಟಿ ಹಾಕುವ ಬಂಧಗಳನ್ನು ತಂತ್ರಜ್ಞಾನದ ಮೂಲಕವೇ ಸೃಷ್ಟಿಸುತ್ತದೆ.

ತಂತ್ರಜ್ಞಾನ ಉಳ್ಳವರ ಆಡುಂಬೊಲವಾಗಿದೆ. ಗೂಗಲ್‌, ಫೇಸ್‌ಬುಕ್‌ಗಳು ಇಂದು ಜಗತ್ತಿನ ಮುಕ್ಕಾಲು ಜನಸಂಖ್ಯೆಯನ್ನು ತನ್ನದೇ ಆದ ರೀತಿಯಲ್ಲಿ ಬಂಧಿಟ್ಟುಕೊಂಡಿವೆ. ತಿಳಿದೋ, ತಿಳಿಯದೆಯೋ, ಈ ಸಂಸ್ಥೆಗಳ ಷರತ್ತುಗಳಲ್ಲಿ ನಾವು ಬಂಧಿಗಳು. ಇವು ಎಷ್ಟು ಶಕ್ತಿಶಾಲಿಗಳಾಗಿ ಬೆಳೆದಿವೆ ಎಂದರೆ, ಒಮ್ಮೆ ಚಾಟಿ ಬೀಸಿ ಹೊಸ ನಿಯಮ ಜಾರಿ ಮಾಡಿದರೆ ಅದನ್ನು ಏಕಾಏಕಿ ತಿರಸ್ಕರಿಸುವುದು ಕಷ್ಟ. ನೋಡಿ ಐದು ತಿಂಗಳ ಹಿಂದೆ ಫೇಸ್‌ಬುಕ್‌, ತನ್ನದೇ ಸಂಸ್ಥೆಯ ವಾಟ್ಸ್‌ಆಪ್‌ ಖಾಸಗಿ ನೀತಿಯನ್ನು ಜಾರಿಗೊಳಿಸಿ, ಒಪ್ಪಿದರೆ ಬಳಸಬಹುದು, ಇಲ್ಲವಾದರೆ ನಿಮ್ಮ ಖಾತೆ ಡಿಲೀಟ್‌ ಮಾಡುವುದಾಗಿ ಹೇಳಿತ್ತು. ವರ್ಷಗಳ ಕಾಲ ಸಂಪರ್ಕಕ್ಕೆ ಬಳಸಿದ ಈ ಆಪ್‌ ಅನ್ನು ಏಕಾಏಕಿ ಯಾರು ತಾನೆ ಕಳೆದುಕೊಳ್ಳಬಯಸುತ್ತಾರೆ? ಹಾಗಾಗಿ ಅನೇಕರು ಷರತ್ತುಗಳಿಗೆ ಒಪ್ಪಿದ್ದರು. ಆದರೆ ಖಾಸಗಿತನದ ವಿಷಯದಲ್ಲಿ ಎದ್ದ ವಿವಾದ ಕಡೆಗೆ ಫೇಸ್‌ಬುಕ್‌ ಹಿಂದೆ ಸರಿಯುವಂತೆ ಮಾಡಿತು.

ಅಂದರೆ ಸರ್ಕಾರ, ಸಂವಿಧಾನಗಳಿರುವ ವ್ಯವಸ್ಥೆಯಲ್ಲಿ ತನ್ನ ಮೂಲಭೂತ ಹಕ್ಕುಗಳಿಗೆ ರಾಜಕೀಯವಾಗಿ ಹೋರಾಡಿದಂತೆ, ತನ್ನ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಪ್ರತಿಭಟಿಸಿದಂತೆ ಈ ಖಾಸಗಿ ಸಂಸ್ಥೆಗಳ ಅಧಿಕ ಪ್ರಸಂಗಗಳ ವಿರುದ್ಧ ಆಗಾಗ ಹೋರಾಡಬೇಕಾಗುತ್ತದೆ. ಆದರೆ ಅಂತಹ ಎಚ್ಚರವೊಂದು ಪ್ರತಿಯೊಬ್ಬ ನಾಗರಿಕನಲ್ಲೂ ಇದ್ದಾಗ ಮಾತ್ರ ಅದು ಸಾಧ್ಯವಾಗುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.

ರಾಷ್ಟ್ರೀಯ ತಂತ್ರಜ್ಞಾನವನ್ನು ಪ್ರತಿ ಮೇ 11 ರಂದು ಆಚರಿಸಲಾಗುತ್ತದೆ. ಏಕೆಂದರೆ 1999ರ ಮೇ 11ರಂದು ಪೋಕ್ರಾನ್‌ನಲ್ಲಿ ಆಗಿನ ಎನ್‌ಡಿಎ ಸರ್ಕಾರ ಯಶಸ್ವಿಯಾಗಿ ಅಣು ಬಾಂಬ್‌ ಪ್ರಯೋಗ ನಡೆಸಿತು. ಅಣುಬಾಂಬ್‌ ವಿಷಯದಲ್ಲಿ ಆಗ ಹಲವು ವಾದ-ವಿವಾದಗಳು ನಡೆದವು. ದೇಶ, ರಾಜಕೀಯ ನಿಲುವು, ವಿಶ್ವಶಾಂತಿಯ ಕಾರಣಕ್ಕೆ ಅಂದಿನ ಚರ್ಚೆಗಳು ನಡೆದಿದ್ದವು. ಅಭಿವೃದ್ಧಿ, ವಿದ್ಯುಚ್ಛಕ್ತಿ ಇತ್ಯಾದಿಗಳಿಗೆ ಅಣುಬಾಂಬಿನ ಅವಶ್ಯಕತೆಯನ್ನು ಸಮರ್ಥಿಸಿಕೊಳ್ಳಲಾಗಿತ್ತು. ಆದರೆ 21 ವರ್ಷಗಳ ಬಳಿಕ ನೋಡಿದರೆ, ತಂತ್ರಜ್ಞಾನ ದೇಶ-ರಾಜ್ಯಗಳ ವಿಷಯವಾಗಿ ಉಳಿದಿಲ್ಲ.

ಪ್ರತಿಯೊಬ್ಬ ಮನುಷ್ಯನ ತಂತ್ರಜ್ಞಾನದ ಬಿಂದು. ಅವನ ಚಟುವಟಿಕೆಗಳಲ್ಲಿ ತಂತ್ರಜ್ಞಾನ ಬಳಕೆಯಾಗುತ್ತಿದ್ದರೆ, ಇನ್ನೊಂದೆಡೆ, ಅವನೇ ಹಲವು ತಂತ್ರಜ್ಞಾನ ಪ್ರಯೋಗಗಳ ಕೇಂದ್ರವೂ ಆಗಿದ್ದಾನೆ. ಶಕ್ತಿವಂತರ, ಪಟ್ಟಭದ್ರರ ಹಿತಾಸಕ್ತಿಯ ಉದ್ದೇಶಗಳ ಪ್ರಯೋಗ ಪಶುವಾಗುವ ಬದಲು, ಮಾನವ ಘನತೆ ಎತ್ತಿ ಹಿಡಿಯುವ, ಮಾನವೀಯವೂ, ಸಹನೀಯವೂ ಆದ ಜಗತ್ತಿಗೆ ಪೂರಕವಾಗಿ ತಂತ್ರಜ್ಞಾನ ಬೆಳೆಯುವುದು ಇಂದಿನ ಅಗತ್ಯ.

ಕಡೆಯದಾಗಿ ಜಗತ್ತಿನ ಅತಿ ದೊಡ್ಡ ಟೆಕ್‌ ಸಂಸ್ಥೆಯಾಗಿ ಬೆಳೆದು ನಿಂತಿರುವ ಗೂಗಲ್‌ 2004ರಲ್ಲಿ ಒಂದು ತಾತ್ವಿಕ ನಿಲುವನ್ನು ಪ್ರಕಟಿಸಿತ್ತು. ಅದು, ‘Don’t be evil’. ಅಂದರೆ ದುಷ್ಟನಾಗಬೇಡ. ಸರ್ಚ್‌ ಎಂಜಿನ್‌, ಈಮೇಲ್‌ ಸೇರಿದಂತೆ ಹಲವು ಸೇವೆಗಳ ಮೂಲಕ ಜಗತ್ತಿನ ಅತಿ ದೊಡ್ಡ ತಂತ್ರಜ್ಞಾನ ಲೋಕದ ಶಕ್ತಿಯಾಗಿ ಬೆಳೆದ ಗೂಗಲ್‌ ಯಾವುದೇ ಕ್ಷಣದಲ್ಲೂ ತನ್ನ ನೈತಿಕ ಚೌಕಟ್ಟು ಮೀರಬಹುದು ಎಂಬ ಎಚ್ಚರದಲ್ಲಿ ತನಗೆ ತಾನೇ ಹಾಕಿಕೊಂಡ ಚೌಕಟ್ಟು ( ಅಮೆರಿಕ ಚುನಾವಣೆಯಲ್ಲಿ ಫೇಸ್‌ಬುಕ್‌ ಮಾಡಿದ ತಪ್ಪು, ಇಂತಹ ನೈತಿಕ ಚೌಕಟ್ಟು ಇಲ್ಲದ ಕಾರಣವೇ). ಇದು ಇಂದಿನ ಎಲ್ಲ ತಾಂತ್ರಿಕ ಬೆಳವಣಿಗೆಗಳಿಗೆ ಅನ್ವಯವಾಗಬೇಕು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.