ನೆಹರು ಜನ್ಮದಿನ ವಿಶೇಷ| ಈಗ ದೇಶಕ್ಕೆ ತುರ್ತಾಗಿ ಬೇಕಾಗಿರುವುದು ನೆಹರು ಪ್ರತಿಪಾದಿಸಿದ ವೈಜ್ಞಾನಿಕ ಮನೋಧರ್ಮ

ಇಂದು ನೆಹರು ಜನ್ಮದಿನ. ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಆಧುನಿಕ ಭಾರತಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನದ ಅಡಿಗಲ್ಲು ಹಾಕಿದ ನೆಹರು, ವಿವೇಕಯುತ ಸಮಾಜವೊಂದರ ನಿರ್ಮಾಣಕ್ಕೆ ವಿಜ್ಞಾನದ ಅಗತ್ಯವನ್ನು ಒತ್ತಿ ಹೇಳಿದ್ದರು. ಅವರ ಆ ಆಶಯಗಳನ್ನು ಕ್ರಿಯಾರೂಪಕ್ಕೆ ತರುವುದು ಇಂದಿನ ತುರ್ತು

ಹಸಿವು ಮತ್ತು ಬಡತನ, ಸ್ವಚ್ಛತೆಯ ಕೊರತೆ ಮತ್ತು ಅನಕ್ಷರತೆ, ಮೂಢನಂಬಿಕೆ ಮತ್ತು ಜಡ್ಡುಗಟ್ಟಿದ ಸಂಪ್ರದಾಯ ಮತ್ತು ಪರಂಪರೆ, ವ್ಯರ್ಥವಾಗುತ್ತಿರುವ ಅಗಾಧ ಸಂಪನ್ಮೂಲ ಅಥವಾ ಹಸಿದವರಿರುವ ಶ್ರೀಮಂತ ದೇಶ, ಈ ಎಲ್ಲ ಸಮಸ್ಯೆಗಳಿಗೆ ಏಕೈಕ ಪರಿಹಾರ ವಿಜ್ಞಾನ. ಯಾರು ತಾನೇ ಇಂದು ವಿಜ್ಞಾನವನ್ನು ಉಪೇಕ್ಷೆ ಮಾಡುತ್ತಾರೆ? ಪ್ರತಿ ತಿರುವಿನಲ್ಲೂ ನಾವು ಅದರ ನೆರವನ್ನು ಪಡೆದುಕೊಳ್ಳಬೇಕಾಗಿದೆ. ವಿಜ್ಞಾನಕ್ಕೆ ಮತ್ತು ವಿಜ್ಞಾನದೊಂದಿಗೆ ಸ್ನೇಹ ಮಾಡಿಕೊಂಡವರದ್ದೇ ಭವಿಷ್ಯ.
ಹೀಗೆ ಹೇಳಿದ್ದರು ಪಂಡಿತ್‌ ಜವಾಹರ್‌ ಲಾಲ್‌ ನೆಹರು. ಭಾರತವನ್ನು ಆಧುನಿಕತೆ ಒಯ್ಯುವುದಕ್ಕೆ ಬೇಕಾದ ಎಲ್ಲ ಮುನ್ನೋಟವನ್ನು ಹೊಂದಿದ್ದವರು ನೆಹರು.

ಪರಂಪರೆಯ ಹೆಸರಿನಲ್ಲಿ ವ್ಯಾಪಿಸುತ್ತಿರುವ ಹುಸಿ ವಿಜ್ಞಾನ, ಸುಳ್ಳು ಸತ್ಯಗಳನ್ನು ಸ್ಪಷ್ಟವಾಗಿ ನೋಡಲಾಗದ ವಿವೇಚನಾ ರಹಿತ ಮನಸ್ಥಿತಿ, ಅವೈಜ್ಞಾನಿಕ ಮತ್ತು ಅವೈಚಾರಿಕ ಅಧಿಕಾರಗಳನ್ನು ನಮ್ಮನ್ನು ಆಳುತ್ತಿರುವಾಗ ನೆಹರು ಬಿತ್ತಿ ವಿಚಾರವಾದಿ, ವೈಜ್ಞಾನಿಕ ಪರಂಪರೆಯೊಂದರ ತುರ್ತು ಕಾಡುತ್ತದೆ.

1946ರಲ್ಲಿ ಮೊದಲ ಬಾರಿಗೆ ‘ಸೈಂಟಿಫಿಕ್‌ ಟೆಂಪರ್‌’ ಎಂಬ ಪದ ಪುಂಜವನ್ನು ಪ್ರಯೋಗಿಸಿದ್ದು ನೆಹರೂ ಅವರೇ. ನಾಡಿನ ಅಭ್ಯುದಯದಲ್ಲಿ ವಿಜ್ಞಾನ ಪಾತ್ರ ಎಷ್ಟು ಮಹತ್ವದ ಎಂಬುದು ಸ್ಪಷ್ಟವಾಗಿ ತಿಳಿದಿತ್ತು.

ಅವರು, ”ವಿಜ್ಞಾನ ಮತ್ತು ತಂತ್ರಜ್ಞಾನಗಳು ಮನುಕುಲವನ್ನು ಎಲ್ಲ ಹೊರೆಗಳಿಂದ ಮುಕ್ತವಾಗಿಸಿದೆ ಮತ್ತು ಹೊಸ ದೃಷ್ಟಿಕೋನವನ್ನು ಮತ್ತು ಅಗಾಧ ಶಕ್ತಿಯನ್ನು ನೀಡಿವೆ. ಈ ಶಕ್ತಿಯನ್ನು ಎಲ್ಲ ಒಳಿತಿನ ಕೆಲಸಗಳಿಗೆ ಬಳಸಿಕೊಳ್ಳಬಹುದು. ನಮ್ಮ ಕ್ರಿಯೆಗಳನ್ನು ವಿವೇಕ ಆಳಿದರೆ ಮಾತ್ರ. ಒಂದು ವೇಳೆ ಜಗತ್ತು ಭ್ರಾಂತ ಅಥವಾ ಮೂರ್ಖವಾಗಿದ್ದರೆ, ದೊಡ್ಡ ಪ್ರಗತಿಗಳು ಮತ್ತು ಸಾಧನೆಗಳು ಅದರ ಹಿಡಿತದಲ್ಲಿ ಇಲ್ಲದೇ ಹೋದರೆ ಅದು ಸ್ವಯಂ ನಾಶವಾಗಬಹುದು” ಎಂಬ ಪ್ರಜ್ಞೆ ಹೊಂದಿದ್ದರು. ಈ ಎಚ್ಚರದಲ್ಲಿ ಅವರು ಕಟ್ಟಿಸಿದ ವಿಜ್ಞಾನ ಸಂಶೋಧನಾ ಸಂಸ್ಥೆಗಳು ಇಂದು ಬೆಳೆದು ನಿಂತಿರುವುದನ್ನು ನೋಡುತ್ತಿದ್ದೇವೆ.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಕೌನ್ಸಿಲ್‌ ಆಫ್‌ ಸೈಂಟಿಫಿಕ್‌ ಅಂಡ್‌ ಇಂಡಸ್ಟ್ರೀಯಲ್‌ ರೀಸರ್ಚ್‌, ಇಸ್ರೋ ಸೇರಿದಂತೆ ಅದೆಷ್ಟು ವಿಜ್ಞಾನ ಮತ್ತು ತಂತ್ರಜ್ಞಾನ ಅಧ್ಯಯನ, ಸಂಶೋಧನೆಯ ಸಂಸ್ಥೆಗಳು ತಲೆ ಎತ್ತಿದವು ಎಂಬುದನ್ನು ನೋಡುತ್ತಿದ್ದೇವೆ.

”ಸತ್ಯ ಹಾಗೂ ಹೊಸ ಜ್ಞಾನಕ್ಕಾಗಿ ಹುಡುಕಾಟ, ಯಾವುದನ್ನೇ ಆಗಲಿ, ಪರೀಕ್ಷಿಸಿಕೊಳ್ಳದೆ ಒಪ್ಪಿಕೊಳ್ಳುವುದನ್ನು ನಿರಾಕರಿಸುವುದು, ಹೊಸ ಸಾಕ್ಷ್ಯಗಳ ಆಧಾರದ ಮೇಲೆ ಹಿಂದಿನ ಒಪ್ಪಿತ ವಿಚಾರಗಳನ್ನು ಬದಲಿಸುವ ಸಾಮರ್ಥ್ಯ, ಪೂರ್ವಗ್ರಹಿತವಾದ ಸಿದ್ಧಾಂತಗಳ ಬದಲು ಖಚಿತ ವಾಸ್ತವಾಂಶಗಳನ್ನು ನಂಬುವುದು ಮತ್ತು ಕಠಿಣ ಶಿಸ್ತಿನ ಮನಸ್ಸು, ವೈಜ್ಞಾನಿಕ ಮನೋಧರ್ಮವನ್ನು ಬೆಳೆಸುವುದಕ್ಕೆ ಬೇಕೆಂದು ನೆಹರೂ ಹೇಳಿದ್ದರು.

ಇದೇ ಕಾರಣಕ್ಕೆ ಅವರು ಸಂವಿಧಾನದಲ್ಲಿ ತಿದ್ದುಪಡಿ ತಂದರು.
ನಿಮಗೆ ಅಚ್ಚರಿಯಾಗಬಹುದು, ಇಡೀ ಜಗತ್ತಿನಲ್ಲಿ ‘ಮಾನವೀಯತೆಯಲ್ಲಿ ವೈಜ್ಞಾನಿಕ ಧರ್ಮ’ವನ್ನು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯ ಎಂದು (ಆರ್ಟಿಕಲ್‌ 51ಎ) ಸಂವಿಧಾನದಲ್ಲಿ ಸೇರ್ಪಡೆ ಮಾಡಿದ ದೇಶ ಭಾರತ ಎನಿಸಿಕೊಂಡಿತು. ಇದಕ್ಕೆ ಕಾರಣಪುರುಷ ಕೂಡ ನೆಹರೂ ಅವರೇ.

ಕೇಂಬ್ರಿಡ್ಜ್‌ನಲ್ಲಿ ವ್ಯಾಸಂಗ ಮಾಡಿದ ನೆಹರು ಆ ಕಾಲದ ಪ್ರಸಿದ್ಧ ವಿಜ್ಞಾನಿಗಳಾಗಿದ್ದ ಜೇಮ್ಸ್‌ ಜೀನ್ಸ್‌ ಆರ್ಥರ್‌ ಎಡಿಂಗ್ಟನ್‌ ಸೇರಿದಂತೆ ಅನೇಕರ ಒಡನಾಟ ಗಳಿಸಿದ್ದು. ಈ ಅವಧಿಯಲ್ಲಿ ಅವರು ಮಸ್ಸಾಚುಸೆಟ್ಸ್‌ ತಾಂತ್ರಿಕ ಸಂಸ್ಥೆಯ ಮಾದರಿಯಲ್ಲಿ ಭಾರತದಲ್ಲೂ ತಾಂತ್ರಿಕ ಸಂಸ್ಥೆಗಳನ್ನು ಕಟ್ಟಬೇಕೆಂದು ಬಯಸಿದರು. ಅದರ ಫಲವೇ ಐದು ಐಐಟಿಗಳು ತಲೆ ಎತ್ತಿದ್ದು.

ಅಷ್ಟೇ ಅಲ್ಲ ಆ ಕಾಲದ ಹೆಮ್ಮೆಯ ವಿಜ್ಞಾನಿಗಳಾದ, ಸರ್‌ ಸಿ ವಿ ರಾಮನ್‌, ಹೋಮಿ ಜಹಾಂಗಿರ್‌ ಬಾಬಾ, ಸತೀಶ್‌ ಧವನ್‌, ಶಾಂತಿ ಸ್ವರೂಪ್‌ ಭಟ್ನಾಗರ್‌ ಅವರಗಳನ್ನು ಎಲ್ಲ ಪ್ರತಿಷ್ಠಿತ ವಿಜ್ಞಾನ-ತಂತ್ರಜ್ಞಾನಗಳ ಸಂಸ್ಥೆಗಳ ನೇತೃತ್ವವಹಿಸಿಕೊಳ್ಳುವಂತೆ ಮಾಡಿದರು.

ಬಾಬಾ ಆಟೋಮಿಕ್‌ ರೀಸರ್ಚ್‌ ಸೆಂಟರ್‌, ಫಿಸಿಕಲ್‌ ರೀಸರ್ಚ್‌ ಲ್ಯಾಬೊರೆಟರಿ ಸ್ಥಾಪನೆಯಾಗಿದ್ದಷ್ಟೇ ಅಲ್ಲ, ಭಾರತದ ಅಭಿವೃದ್ಧಿಶೀಲ ಪ್ರಯತ್ನದಲ್ಲಿ ಹೊಸ ಹುರುಪು, ಕಸುವು ತುಂಬಿದವು.

ನಾವು ಈಗ ಕೊರೊನಾದಂತಹ ಮಹಾಸೋಂಕಿನ ಆತಂಕದಲ್ಲಿದ್ದೇವೆ. 1953ರಲ್ಲಿ ಇಷ್ಟೇ ತೀವ್ರವಾದ ಸೋಂಕನ್ನು ನೆಹರು ನೇತೃತ್ವದ ಆಡಳಿತ ಎದುರಿಸಿತ್ತು. ಮಲೆಯೇರಿಯಾ, ಸಿಡುಬು, ಲಕ್ಷಕ್ಕೂ ಹೆಚ್ಚು ಜೀವಗಳನ್ನು ಬಲಿತೆಗೆದುಕೊಂಡಿತ್ತು. ಈ ಸಾವಿನ ಪ್ರಮಾಣವನ್ನು ಸಾವಿರಕ್ಕೆ ಇಳಿಸುವಲ್ಲಿ ನೆಹರೂ ಆಡಳಿತ ಯಶಸ್ವಿಯಾಗಿತ್ತು. ನಂತರದ ದಿನಗಳಲ್ಲಿ ಪಂಚವಾರ್ಷಿಕ ಯೋಜನೆಗಳಲ್ಲಿ ಸಾಂಕ್ರಾಮಿಕಗಳ ನಿಯಂತ್ರಣಕ್ಕೆ ನಿರ್ದಿಷ್ಟ ಕಾರ್ಯಕ್ರಮಗಳನ್ನು ರೂಪಿಸಲಾಯಿತು.

ವಿಜ್ಞಾನದ ಮೇಲೆ ನೆಹರೂ ಅವರಿಗೆ ಎಂತಹ ನಂಬಿಕೆ ಎಂದರೆ, ಮಗಳು ಇಂದಿರಾ ಅವರಿಗೆ ಪತ್ರ ಬರೆಯುತ್ತಾ, ‘ ಸ್ವಚ್ಚತೆ ಮತ್ತು ಆರೋಗ್ಯ ಮತ್ತು ರೋಗಗಳ ವಿರುದ್ಧ ಹೋರಾಡಿ ಗೆಲ್ಲುವ ಸಾಧ್ಯತೆ ವಿಜ್ಞಾನವನ್ನು ಅವಲಂಬಿಸಿದೆ’ ಎಂದು ಹೇಳಿದ್ದರು.

ಅಷ್ಟೇ ಅಲ್ಲ, ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಲ್‌ ಮೆಂಟಲ್ ರೀಸರ್ಚ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿಜ್ಞಾನಿಗಳು ಮತ್ತು ವಿಜ್ಞಾನಾಸಕ್ತ ಸಭಿಕರನ್ನು ಉದ್ದೇಶಿಸಿ ಮಾತನಾಡಿದ್ದ ನೆಹರು, ”ವಿಜ್ಞಾನಕ್ಕೆ ಯಾಕಿಷ್ಟು ಒತ್ತು ನೀಡಲಾಗುತ್ತಿದೆ ಎಂದು ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ. ಯಾಕಿಷ್ಟು ಹಣ ಖರ್ಚು ಮಾಡಲಾಗುತ್ತಿದೆ, ಯಾಕೆ ನಾನು ದೆಹಲಿಯಿಂದ ಇಲ್ಲಿಯವರೆಗೆ ಬಂದೆ ಎಂಬುದನ್ನು ತಿಳಿದಿರಲಿಕ್ಕಿಲ್ಲ. ದೊಡ್ಡ ದೇಶಗಳು ತುಂಬಾ ಶಕ್ತಿಶಾಲಿಯಾಗಿವೆ. ಆದರೆ ನಮ್ಮ ದೇಶ ಬಡ ದೇಶವಾಗಿಯೇ ಉಳಿದಿದೆ. ಈಗ ಸ್ವತಂತ್ರವಾಗಿರುವ ನಮ್ಮ ದೇಶವನ್ನು ಸಬಲಗೊಳಿಸಬೇಕೆಂಬುದು ಬಯಸುವುದಾದರೆ, ನಾವು ಬಲಿಷ್ಠವಾದ ತಳಪಾಯವನ್ನು ಹಾಕಬೇಕು. ಅದರಿಂದ ಮೂಲ ಸಂಗತಿಗಳನ್ನು ಕಲಿಯುವುದಕ್ಕೆ ಸಾಧ್ಯವಾಗುತ್ತದೆ.ಇದು ತಕ್ಷಣವೇ ಫಲಿತಾಂಶವನ್ನು ನೀಡದಿರಬಹುದು, ಆದರೆ ಅಂತಿಮವಾಗಿ ದೇಶವನ್ನು ಉನ್ನತಿಯಲ್ಲಿ ಫಲಿಫಲಿಸುತ್ತದೆ” ಎಂದಿದ್ದರು.

ಚರಂಡಿಯಿಂದ ನೇರವಾಗಿ ಗ್ಯಾಸ್‌ ಉತ್ಪತ್ತಿ ಮಾಡುವ, ಇಬ್ಬನಿಯಿಂದ ನೀರು, ವಿದ್ಯುತ್‌ ಉತ್ಪಾದಿಸುವ, ಹವಾಮಾನ ವೈಪರೀತ್ಯ ಗಂಭೀರ ಸಮಸ್ಯೆಯೇ ಅಲ್ಲವೆನ್ನುವ ನಮ್ಮನ್ನು ಆಳುವ ನಾಯಕರಿರುವ ಈ ಕಾಲದಲ್ಲಿ ನೆಹರು ಅವರ ಆಲೋಚನೆ, ಯೋಜನೆ, ಕಾರ್ಯಕ್ರಮಗಳು ಎಷ್ಟು ಮಹತ್ವದ್ದವು ಎಂಬುದನ್ನು ನೆನಪಿಸುತ್ತವೆ.

ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಅತ್ಯಂತ ಸಂಕೀರ್ಣವಾಗುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ನಮ್ಮನ್ನು ಆಳುವವರ ಆದ್ಯತೆಗಳು ಮತ್ತು ನಾಗರಿಕರಾದ ನಾವುಗಳು ಕೇಳಬೇಕಾದ ಪ್ರಶ್ನೆಗಳು ಯಾವುವು ಎಂಬುದು ಗೋಜಲಾಗಿದೆ. ಆದರೆ ವಿವೇಚನಾಶೀಲ ನಾಯಕನಿಗೆ ಇಂಥ ಹೊತ್ತಲ್ಲಿ ಅನ್ನಿಸುವುದೇ ಬೇರೆ, ”ಹಸಿದ ಗಂಡು ಅಥವಾ ಪುರುಷನ ಪಾಲಿಗೆ ಸತ್ಯವೆಂಬುದು ಅರ್ಥಹೀನವಾದದ್ದು. ಅವನಿಗೆ ಆಹಾರ ಬೇಕು. ಹಸಿದವನಿಗೆ ದೇವರೂ ಅರ್ಥಹೀನ. ಭಾರತ ಇಂದು ಹಸಿದಿದೆ ಮತ್ತು ಈಗ ಸತ್ಯ ಮತ್ತು ದೇವರಂತಹ ಸೂಕ್ಷ್ಮ ಸಂಗತಿಗಳ ಬಗ್ಗೆ ಮಾತನಾಡುವುದು ವ್ಯಂಗ್ಯವೆನಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಹೊಂದಿರಲೇಬೇಕಾದ, ಅವರಿಗೆ ಅತ್ಯಗತ್ಯವಾದ, ಬಟ್ಟೆ, ಸೂರು, ಶಿಕ್ಷಣ, ಆರೋಗ್ಯ ಪೂರೈಸಬೇಕು. ನಾವಿದನ್ನು ಮಾಡಿದ ಮೇಲೆ ದೇವರ ಬಗ್ಗೆ ಆಲೋಚಿಸಬಹುದು, ಹಾಗಾಗಿ ವಿಜ್ಞಾನ ಈ ನಿಟ್ಟಿನಲ್ಲಿ ಯೋಚಿಸಬೇಕು ಮತ್ತು ಕ್ರಿಯಾಶೀಲವಾಗಬೇಕು” ಎಂದಿದ್ದರು.

ನೆಹರು ಅವರಿಗೆ ವಿಜ್ಞಾನ ಎಂಬುದು ಸತ್ಯವಾಗಿ ನಡೆಸುವ ವ್ಯಕ್ತಿಗತವಾದ ಹುಡುಕಾಟವಾಗಿರಲಿಲ್ಲ. ಸಮುದಾಯದ ಕೆಲಸವಾಗಿತ್ತು. ಮತ್ತು ಅದು ನಿರಂತರವಾಗಿ ನಡೆಯಬೇಕಾದ ಚಟುವಟಿಕೆಯಾಗಿತ್ತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.