ನಾಗೇಶ್‌ ಹೆಗಡೆ ಅವರ ಹೊಸ ಪುಸ್ತಕ ‘ಗ್ರೇತಾ ಥನ್‌ಬರ್ಗ್‌’ ; ದೇವನೂರು ಮಹಾದೇವ ಅವರ ಮುನ್ನುಡಿ

ಸ್ವೀಡನ್‌ ಮೂಲದ ಗ್ರೇತಾ ಥನ್‌ಬರ್ಗ್‌ ಜಾಗತಿಕ ತಾಪಮಾನ ಏರಿಕೆ ವಿರುದ್ಧ ಹೋರಾಟ ನಡೆಸುತ್ತಿರುವ ಹದಿನೈದರ ಯುವತಿ. ಈಕೆಯ ಹೋರಾಟವನ್ನು ಕನ್ನಡದ ಓದುಗರಿಗೆ ಪರಿಚಯಿಸುವ ಕೃತಿಯನ್ನು ಹಿರಿಯ ಪತ್ರಕರ್ತ, ವಿಜ್ಞಾನ ಲೇಖಕ ನಾಗೇಶ್‌ ಹೆಗಡೆಯನ್ನು ಹೊರತರುತ್ತಿದ್ದಾರೆ. ಡಿಸೆಂಬರ್‌ 1ರಂದು ಈ ಕೃತಿ ಬಿಡುಗಡೆಯಾಗುತ್ತಿದೆ. ಈ ಕೃತಿಗೆ ಬರೆದ ದೇವನೂರು ಮಹಾದೇವ ಅವರ ಮುನ್ನುಡಿ ಇಲ್ಲಿದೆ

ಆಸೆಯೇ ದುಃಖಕ್ಕೆ ಕಾರಣ ಎಂಬ ಪ್ರಸಿದ್ಧ ಮಾತಿದೆ. ಇದು ಬುದ್ಧನ ನುಡಿ. ಪಾಳಿ ಭಾಷೆಯಲ್ಲಿ ಆಸೆ ಎನ್ನುವುದಕ್ಕೆ ‘ತನ್ಹಾ’ ಎಂದಿದೆ. ಸಂಸ್ಕೃತದಲ್ಲಿ ‘ತೃಷ್ಣೆ’ ಎಂದಿದೆ. ಇಂಗ್ಲೀಷ್‍ನಲ್ಲಿ ಕ್ರೇವಿಂಗ್ ಎಂದಿದೆ. ಇದನ್ನು ನೋಡಿದಾಗ ‘ಆಸೆ’ ಪದ ಸಾಲದು ಅನ್ನಿಸುತ್ತದೆ. ಇದಕ್ಕೆ ಹತ್ತಿರದ ಪದ ಹುಡುಕುತ್ತ ಕಂಡದ್ದು- ‘ದಾಹ’. ‘ದಾಹ’ ಅಂದರೆ ‘ದಹಿಸುವುದು’ ಎಂದೂ ಅರ್ಥವಂತೆ. ಸದ್ಯಕ್ಕೆ ದಾಹವೇ ದುಃಖಕ್ಕೆ ಕಾರಣ- ಎಂದಿಟ್ಟುಕೊಳ್ಳಬಹುದೇನೊ.

ಇಂದು ಭೂಮಿಯೇ ಮನುಷ್ಯನ ದಾಹಕ್ಕೆ ಸಿಲುಕಿ ದಹಿಸುತ್ತಿದೆ. ಭೂಮಿ ಬಾಯಾರಿಕೆಯನ್ನು ನೀಗಿಸಬಹುದು, ದಾಹವನ್ನಲ್ಲ. ಇಂದಿನ ಮನುಷ್ಯನ ದಾಹದಿಂದಾಗಿ ತಾಪಮಾನ ಹೆಚ್ಚಾಗಿ- ಹಿಮಗಡ್ಡೆ ಕರಗುತ್ತಿವೆ. ಸಮುದ್ರದ ಮಟ್ಟ ಏರುತ್ತಿದೆ. ಸೈಕ್ಲೋನ್‍ಗಳು ಅಪ್ಪಳಿಸುತಿವೆ. ಹುಚ್ಚು ಮಳೆ ಬರುತ್ತಿದೆ. ಭೂಮಿ ಕುಸಿಯುತ್ತಿದೆ. ಎಲ್ಲವೂ ಕೊಚ್ಚಿಹೋಗುತ್ತಿದೆ. ವಿಪರ್ಯಾಸವೆಂದರೆ ಒಂದು ಕಡೆ ಪ್ರವಾಹ. ಅದರ ಪಕ್ಕದಲ್ಲೆ ನೀರಿಲ್ಲದ ಬರ. ಬದುಕುವುದೆಂತು?

ಈಗ, ಪುಣ್ಯಕ್ಕೆ ಭೂಮಿತಾಯಿಯೇ ಸ್ವೀಡನ್‍ನ ಹದಿನಾರು ವರ್ಷದ ಬಾಲೆ ಗ್ರೇತಾ ಥನ್‍ಬರ್ಗ್‍ಳ ಮೈಮೇಲೆ ಬಂದು ನುಡಿಸಿದಂತೆ ಗ್ರೇತಾ ನುಡಿಯುತ್ತಿದ್ದಾಳೆ. ಇಂದಿನ ಹವಾಮಾನ ಸಂಕಷ್ಟಕ್ಕೆ ಕಾರಣರಾದ ಜಗತ್ತಿನ ನಾಯಕರಿಗೆ ‘ಹೌ ಡೇರ್ ಯೂ?’ ಎಂದು ಕೇಳುತ್ತಿದ್ದಾಳೆ. ಹೀಗೆ ಕೇಳುತ್ತಾ ಮೂಕ ಪೃಥ್ವಿಗೆ ಮಾತು ಕೊಟ್ಟ ಈ ಹುಡುಗಿಗೆ ಇಡೀ ಭೂಮಿಯೇ ತನ್ನ ಮನೆ ಎಂಬ ಭಾವನೆ ಇದೆ ಎಂದು ಲೇಖಕರು ಗುರುತಿಸುತ್ತಾರೆ. ನಿಜ, ತನ್ನೊಳಗೇನೆ ಸಕಲ ಜೀವಸಂಕುಲವನ್ನು ಧರಿಸಿರುವಂತೆ ಈ ಬಾಲೆ ಕಾಣುತ್ತಾಳೆ. ಆಶ್ಚರ್ಯವೆಂದರೆ, ಕೆನಡಾದ ಸೆವರ್ನ್ ಸುಝಕಿ ಕೂಡ “ನಮ್ಮದು ಐದು ನೂರು ಕೋಟಿ ಜನ, ಮೂರು ಕೋಟಿ ಜೀವ ಪ್ರಬೇಧಗಳ ಒಂದು ದೊಡ್ಡ ಕುಟುಂಬ. ರಾಷ್ಟ್ರದ ಗಡಿಗಳು ಎಷ್ಟೇ ಇದ್ದರೂ ಈ ಕುಟುಂಬ ಮಾತ್ರ ಒಂದೇ. ಅದನ್ನು ಬದಲಿಸಲು ಸಾಧ್ಯವಿಲ್ಲ. ಭೂಮಿಗೆ ಸಂಕಷ್ಟ ಬಂದರೆ ನಮಗೆಲ್ಲರಿಗೂ ಬಂದ ಹಾಗೇ. ನಮಗೆಲ್ಲರಿಗೂ ಒಂದೇ ಬಗೆಯ ನಾಳೆಗಳು ಕಾದಿವೆ. ನಾವೆಲ್ಲ ಒಂದಾದರೆ ಮಾತ್ರ ನಾಡಿನ ಭೂಮಿ ಜೀವಂತವಿರಲು ಸಾಧ್ಯ” ಎನ್ನುತ್ತಾಳೆ. ಭಾರತ ಮೂಲದ ಅಂಜಲಿ ಅಪ್ಪಾದುರೈ ಕೂಡ ಹೀಗೇಯೆ ಮಾತಾಡುತ್ತಿದ್ದಾಳೆ. ಬಾಲ್ಯಕ್ಕೆ ಮಾತ್ರ ಇಂತಹ ಧಾರಣಾಶಕ್ತಿ ಇದೆಯೆ?

ಇಂದು ಗ್ರೇತಾ ನುಡಿಗಳು ನಡೆಗಳಾಗುತ್ತಿವೆ. ಅಮೆರಿಕಾದ ರೆಡ್ ಇಂಡಿಯನ್ ಮೂಲನಿವಾಸಿಗಳು ತಮ್ಮ ಸಂಪ್ರದಾಯದಂತೆ ಗ್ರೇತಾಗೆ ಹೊಸ ಹೆಸರು ಇಡುವಾಗ “ಜಗತ್ತನ್ನು ನಿದ್ದೆಯಿಂದ ಎಬ್ಬಿಸಲೆಂದೇ ಧರೆಗಿಳಿದು ಬಂದಿದ್ದೀಯಾ. ನೀನು ‘ಧರೆಗಿಳಿದ ದೇವತೆ’ ಎಂದು ಆ ಮೂಲನಿವಾಸಿಗಳ ಆಧ್ಯಾತ್ಮ ಗುರು ಅವಳಿಗೆ ತಲೆ ಬಾಗುತ್ತಾನೆ. ಭಾರತದ ಮೂಲನಿವಾಸಿ ಕಪ್ಪು ಇಂಡಿಯನ್ನಾದ ನಾನೂ ತಲೆ ಬಾಗುತ್ತೇನೆ.

ಹೀಗೆಲ್ಲಾ ನುಡಿಯಬಹುದಾದ ನಡೆಯಬಹುದಾದ ಬಾಲಕ-ಬಾಲಕಿಯರು ಇಲ್ಲೂ ಇರಬಹುದು. ಎಲ್ಲೆಲ್ಲೂ ಇರಬಹುದು. ಅವರೀಗ ಮಾತಾಡಬೇಕಾಗಿದೆ. ಯಾಕೆಂದರೆ ಅವರು ಉಳಿಯಬೇಕಾಗಿದೆ. ಇಂದು ಕತ್ತಲ ದಾರಿಯಲ್ಲಿ ನಡೆಯುತ್ತಿರುವ ನಮಗೆ ನಾಗೇಶ ಹೆಗಡೆ ಅವರ ಈ ಪುಟ್ಟ ಪುಸ್ತಕ ಕೈದೀವಿಗೆಯಂತೆ ಬೆಳಕು ಚೆಲ್ಲುತ್ತದೆ.

ಕಳೆದ ವರ್ಷ ಹೋಮ್‌ನಲ್ಲಿ ನಡೆದ ಟೆಡ್‌ ಎಕ್ಸ್‌ ಕಾರ್ಯಕ್ರಮದಲ್ಲಿ ಗ್ರೇತಾ ತನ್ನ ಹೋರಾಟ ಕುರಿತು ಮಾಡಿದ ಭಾಷಣ

ಪುಸ್ತಕದಿಂದ ಆಯ್ದ ಕೆಲವು ಸಾಲುಗಳು

15 ವರ್ಷದ ಈ ಹುಡುಗಿ ಒಬ್ಬಂಟಿಯಾಗಿ ಧರಣಿ ಕೂತಳು. ಅವಳ ಮುಷ್ಕರವನ್ನು ಬೆಂಬಲಿಸಿ 130 ರಾಷ್ಟ್ರಗಳಲ್ಲಿ ಎಳೆಯರು ಬೀದಿಗೆ ಬಂದರು. ಬಹುತೇಕ ಮೂಕಿಯಾಗಿದ್ದ ಇವಳು-
• ಬ್ರಿಟನ್, ಫ್ರಾನ್ಸ್ ಸಂಸತ್ತಿನಲ್ಲಿ ಮಾತಾಡಿದಳು
• ಪ್ರತಿಷ್ಠಿತ ದಾವೋಸ್ ಸಮ್ಮೇಳನದಲ್ಲಿ ಮಾತಾಡಿದಳು
• ಐರೋಪ್ಯ ಸಂಸತ್ತಿನಲ್ಲಿ ಮಾತಾಡಿದಳು
• ಮಕ್ಕಳ ಕ್ಲೈಮೇಟ್ ಪ್ರಶಸ್ತಿ ಪಡೆದಳು.
• ಟೈಮ್ ಪತ್ರಿಕೆಯ ಮುಖಪುಟಕ್ಕೆ ಬಂದಳು.
• ಎಫ್‍ಆರ್‍ಎಸ್‍ಜಿಎಸ್ ಪದವಿ ಪಡೆದಳು
• ಗೌರವ ಡಾಕ್ಟರೇಟ್ ಪಡೆದಳು
• ನೊಬೆಲ್ ಪ್ರಶಸ್ತಿಗೆ ನಾಮಾಂಕಿತಗೊಂಡಳು
• ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದಳು
• ಬದಲೀ ನೊಬೆಲ್ ಪ್ರಶಸ್ತಿ ಪಡೆದಳು
ಗ್ರೇತಾ ಎಂಬ ಹುಡುಗಿಯ ಕೀರ್ತಿ ಒಂದೇ ವರ್ಷದಲ್ಲಿ ಹೀಗೆ ರಾಕೆಟ್‍ನಂತೆ ಮೇಲೇರಿತು.
ಹಡಗು ಸಂಕಟಕ್ಕೆ ಸಿಲುಕಿದ್ದಾಗ ಉರಿಬತ್ತಿ ಹಾರಿಸಿ ‘ಸಹಾಯಕ್ಕೆ ಬನ್ನಿ’ ಎಂಬ ಸಂಕೇತ ಹೊಮ್ಮಿಸಲಾಗುತ್ತದೆ. ಹಾಗೆ. ಭೂಮಿ ಸಂಕಟಕ್ಕೆ ಸಿಲುಕಿದೆ. ಪೃಥ್ವಿಮಿತ್ರರು ಇವಳನ್ನು ಮೇಲಕ್ಕೆ ಚಿಮ್ಮಿಸಿದ್ದಾರೆ.

ಗ್ರೇತಾ ಥನ್‌ಬರ್ಗ್‌ ಮಾತಿನಲ್ಲಿ ಗುಡುಗು ಮಿಂಚುಗಳು

ನೀವು ನಮ್ಮೊಂದಿಗೆ ಸೆಲ್ಫಿ ತಗೊಳ್ಳಬೇಕೆಂದು ನಾವೇನೂ ಬೀದಿಗೆ ಇಳಿದಿಲ್ಲ. ಸಂಕಟಸಮಯದಲ್ಲಿ ದೊಡ್ಡವರು ಹೇಗೆ ವರ್ಶಿಸಬೇಕೊ ಹಾಗೆ ವರ್ತಿಸಬೇಕು ಎಂದು ನಿಮ್ಮನ್ನು ಎಚ್ಚರಿಸಲು ನಾವು ಮಕ್ಕಳು ಬೀದಿಗೆ ಇಳಿದಿದ್ದೇವೆ.

-ಇಂಗ್ಲೆಂಡಿನ ಸಂಸತ್‌ ಸದಸ್ಯರಿಗೆ ಹೇಳಿದ ಮಾತು.

ನಾವು ಪಾಠದ ಸಮಯವನ್ನು ವ್ಯರ್ಥ ಮಾಡುತ್ತಿದ್ದೇವೆ೦ದು ನೀವು ಹೇಳುತ್ತೀರಲ್ಲ? ನೀವು ರಾಜಕಾರಣಿಗಳು 30 ವರ್ಷ ಏನೂ ಮಾಡದೆ ವ್ಯರ್ಥ ಸಮಯ ಕಳೆದಿದ್ದೀರಿ, ನಿಮ್ಮದೇನು ಕಡಿಮೆಯೆ!

ಇಂಗ್ಲೆಂಡಿನ ಮಾಜಿ ಪ್ರ ಧಾನಿ ತೆರೆಸಾ ಮೇ ಹೇಳಿದ ಮಾತಿಗೆ ಗ್ರೇತಾ ಕೊಟ್ಟ ತಿರುಗೇಟು.
ಪೊಲ್ಯಾಂಡ್‌ನಲ್ಲಿ ನಡೆದ ಹವಾಮಾನ ಬದಲಾವಣೆ ಕುರಿತು ಸಮಾವೇಶದಲ್ಲಿ ಗ್ರೇತಾ ಭಾಷಣ

“ಮಕ್ಕಳೆಲ್ಲ ನಿನ್ನ ಹಾಗೆ ಒಂದಾಗಿ ದನಿಯೆತ್ತಿದರೆ. ಭೂಮಿ ಉಳಿದೀತು’ ಎಂದು ಕೆಲವರು ನನಗೆ ಹೇಳುತ್ತಿದ್ದಾರೆ. ಅದು ತಪ್ಪು, ಭೂಮಿಯನ್ನು ಉಳಿಸುವಷ್ಟು ತಾಕಷ್ಟು ನಮಗಿನ್ನೂ ಬಂದಿಲ್ಲ. ನಾವಿನ್ನೂ ತೀರಾ ಚಿಕ್ಕವರು. ನಾವು ದೊಡ್ಡವರಾಗುವವರೆಗೆ ಕಾಯುತ್ತ ಕೂರಲು ಭೂಮಿಗೆ ಸಮಯವಿಲ್ಲ. ಅಧಿಕಾರದಲ್ಲಿದ್ದವರು ಈಗ ಕೆಲಸಕ್ಕೆ ತೊಡಗಬೇಕು.

-ಫೈನಾನ್ಸಿಯಲ್‌ ಟೈಮ್ಸ್‌ ಪತ್ರಿ ಕೆಗೆ ನೀಡಿದ ಸ೦ದರ್ಶನದಲ್ಲಿ

ಭೂಮಿಯ ಈ ಸಂಕಟಕ್ಕೆ ನಾವೆಲ್ಲರೂ ಕಾರಣರೆಂದು ಕೆಲವರು ಹೇಳುತ್ತಿದ್ದಾರೆ. ಅದು ಸುಳ್ಳು. ಎಲ್ಲರೂ ಕಾರಣರಲ್ಲ; ಲಾಭ ಗಳಿಕೆಯೊ೦ದೇ ಉದ್ದೇಶವಾಗಿರುವ ಕೆಲವು ಕಂಪನಿಗಳು, ಕೆಲವು ಧನಾಢ್ಯರು ಇದಕ್ಕೆ ಕಾರಣರಾಗಿದ್ದಾರೆ. ತಾವೇನು ಮಾಡುತ್ತಿದ್ದೇವೆಂಬ ಅರಿವಿದ್ದೂ ಇದ್ದೂ ತಮ್ಮ ಸ್ವಾರ್ಥವನ್ನೇ ಸಾಧಿಸುತ್ತ ಬ೦ದವರು ಇಂದಿನ ಸಂಕಟಕ್ಕೆ ಕಾರಣರಾಗಿದ್ದಾರೆ.

-ವಿಶ್ವ ಆರ್ಥಿಕ ವೇದಿಕೆಯಲ್ಲಿ

ರಾಜಕಾರಣಿಗಳು ಈಗಲೂ ಕೈಕಟ್ಟಿ ಕೂತಿದ್ದರೆ, ಮನುಷ್ಯಕುಲದ ಅತಿ ದೊಡ್ಡ ವೈಫಲ್ಯಕ್ಕೆ ಕಾರಣರಾದವರೆಂಬ ಕೀರ್ತಿ ಅವರಿಗೆ ಸಲ್ಲುತ್ತದೆ. ಭೂಚರಿತ್ರೆ ಯ ಅತಿ ದೊಡ್ಡ ಖಳನಾಯಕರು ಅವರೇ ಆಗಿರುತ್ತಾರೆ.

-ಐರೋಪ್ಯ ಆರ್ಥಿಕ ಮತ್ತು ಸಾಮಾಜಿಕ ಸಮಿತಿಯ ಸಭೆಯಲ್ಲಿ

(ಗ್ರೇತಾ ಥನ್‌ಬರ್ಗ್‌, ಡಿಸೆಂಬರ್ 1ರಂದು ಬೆಂಗಳೂರಿನ ಮಂತ್ರಿ ಮಾಲ್‌ ಸಮೀಪದ ಗ್ರೀನ್‌ಪಾಥ್‌ ಹೋಟೆಲ್‌ನಲ್ಲಿ ಬಿಡುಗಡೆಯಾಗುತ್ತಿದೆ. ಭೂಮಿ ಬುಕ್ಸ್‌ ಈ ಕೃತಿಯನ್ನು ಪ್ರಕಟಿಸಿದೆ.  124 ಪುಟಗಳ ಈ ಪುಸ್ತಕದ ಬೆಲೆ ರೂ 120. ಆಸಕ್ತರು ‘ಭೂಮಿಬುಕ್ಸ್’ 9449177628ಗೆ ವಾಟ್ಸಾಪ್ ಮಾಡಬಹುದು.)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.