ವಾಹನೋದ್ಯಮದಲ್ಲೀಗ ಹೊಸ ಟ್ರೆಂಡ್ ಶುರುವಾಗಿದೆ. ವಿಶೇಷವಾಗಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಟ್ರೆಂಡಲ್ಲ, ಬದಲಾಗಿ ತಂತ್ರಗಾರಿಕೆ ಸಂಬಂಧಪಟ್ಟದ್ದು. ಏನದು ? ಮುಂದಿದೆ ಓದಿ

ಉದಾಹಣೆಗೆ ಟಾಟಾ ಸಫಾರಿ. 1998ರಲ್ಲಿ ರಸ್ತೆಗಿಳಿದಿದ್ದ ಆ ಗಾಡಿ ದೇಶದ ಪ್ರಥಮ ಸ್ವದೇಶಿ ಸ್ಪೋಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ). ಅದು ನಿಜಾರ್ಥದಲ್ಲಿ ಎಸ್‌ಯುವಿ ಆಗಿತ್ತು. ಫೋರ್ ವೀಲ್ ಡ್ರೈವ್ ಹೊಂದಿದ್ದ ಸಫಾರಿ ನುಣುಪು ರಸ್ತೆಗಳ ಆಚೆಗೂ ಛಂಗನೆ ಜಿಗಿಯಬಲ್ಲ ಜಿಗರೆ. ಕಾಲಕ್ರಮೇಣ ತಲೆಮಾರು ಬದಲಾಗುವಾಗ ಹೊಸ ಡಿಐ-ಟರ್ಬೋ ಎಂಜಿನ್ ಬಂತು, ಸಫಾರಿ ಸ್ಟಾರ್ಮ್ ಎಂಬ ಅವತಾರ ಕಂಡಿತು. 2019ರ ಕೊನೆಗೆ ನಿರ್ಗಮಿಸಿತು. ಆದರೆ 2020ರಲ್ಲಿ ಅದೇ ಹೆಸರಿನಲ್ಲಿ ಟಾಟಾ ಬಿಡುಗಡೆಗೊಳಿಸಿದ ಹೊಸ ಸಫಾರಿಗೂ ಕಳೆದ ತಲೆಮಾರಿನ ಸಫಾರಿಗೂ ಇರುವ ಸಂಬಂಧ ಗೋಕುಲಾಷ್ಠಮಿಗೂ ಇಮಾಮ್ ಸಾಬಿಗೂ ಇರುವಷ್ಟೇ.
ಈಗಿನ ಸಫಾರಿ ಕಚ್ಚಾ ರಸ್ತೆಯ ವಿಚಾರ ಹಾಗಿರಲಿ, ಫೋರ್ ವೀಲ್ ಡ್ರೈವ್ ಕೂಡ ಇಲ್ಲದ ಏಳು ಸೀಟಿನ ವಾಹನ. ಐದು ಮಂದಿಗಾಗಿ ಇರುವ ಹ್ಯಾರಿಯರ್ ಯಾವ ಪ್ಲಾಟ್ಫಾರ್ಮಿನ ಮೇಲೆ ನಿಂತಿದೆಯೋ ಅದೇ ಆಯವನ್ನು ಅಲ್ಪಸ್ವಲ್ಪ ತಿದ್ದಿ ತೀಡಿ ವಿನ್ಯಾಸ ಮಾಡಲಾದ ವಾಹನವಿದು. ಹಳೆಯ ಸಫಾರಿಗೆ ತನ್ನದೇ ಆದ ಅಭಿಮಾನಿ ವರ್ಗವಿತ್ತು. ಆದರೆ ವರ್ಗಕ್ಕೀಗ ಅಂದಿದ್ದ ಹುಚ್ಚು ಹುಮ್ಮಸ್ಸು ಸಹಜವಾಗಿಯೇ ಇಳಿದಿದೆ. ಹಾಗಿದ್ದೂ ಅಂಥದ್ದೊಂದು ವಿಶೇಷ ಅಭಿಮಾನಿ ಬಳಗವೊಂದಿತ್ತು ಎಂಬುದನ್ನೇ ಟಾಟಾದ ಇಂದಿನ ಮಾರ್ಕೆಟಿಂಗ್ ವಿಭಾಗ ಬಳಸಿಕೊಂಡು ಹೊಸ ಕಾರಿಗೆ ಹಳೆಯ ಹೆಸರಿಟ್ಟಿತು. ಒಂದು ಹಂತಕ್ಕೆ ಯಶಸ್ಸೂ ಕಂಡಿದೆ.
ಸಫಾರಿ ಪ್ರಹಸನಕ್ಕೂ ಮೊದಲೇ ಮಾರುತಿ ಸುಝುಕಿ ಬಲೆನೊ ಹೆಸರಿನಲ್ಲಿ ಇಂಥದ್ದೇ ಕರಾಮತ್ತು ನಡೆಸಿತ್ತು. 1999ರಿಂದ 2007ರ ವರೆಗೆ ಬಂದು ಹೋದ ಬಲೆನೋ ಅಷ್ಟೇನೂ ಯಶಸ್ವಿ ಕಾರು ಎಂದು ಕರೆಸಿಕೊಳ್ಳಲಿಲ್ಲ. ಆದರೆ ಅದರದ್ದೇ ಒಂದು ವರ್ಗದ ಫ್ಯಾನುಗಳಿದ್ದರು. ಹಳೆಯ ಬಲೆನೊಕ್ಕೆ ಸಂಬಂಧವೇ ಇಲ್ಲದಿದ್ದರೂ ಆರಂಭದಲ್ಲಿ ಆ ದಂತಕತೆಯನ್ನೇ ದುಡಿಸಿಕೊಳ್ಳುವ ಮೂಲಕ ಹೊಸ ಕಾರಿಗೆ ಹಳೆಯ ಹೆಸರೇ ಇರಿಸಿತು. ಅದು ಅಂದಿದ್ದ ಎಸ್ಟೀಮಿಗಿಂತ ದೊಡ್ಡ ಗಾಡಿ. ಈಗಿನದ್ದು ಬ್ರೆಜ್ಜಾದ ಪ್ಲಾಟ್ಪಾರ್ಮು.
ಹೆಚ್ಚೂಕಮ್ಮಿ ಇದೇ ಸಾಲಿಗೆ ಮುಂದೆ ಸೇರಲಿರುವ ಮತ್ತೊಂದು ವಾಹನ ಮಹೀಂದ್ರದ ಎಕ್ಸ್‌ಯುವಿ 500. 2011ರಲ್ಲಿ ರಸ್ತೆಗಿಳಿದಾಗ ಭಾರಿ ಸದ್ದು ಮಾಡಿದ್ದ ಎಕ್ಸ್‌ಯುವಿ ಈಗಾಗಲೇ ಹಳೆಯದಾಗಿದೆ. ಈಗ ಮಾರುಕಟ್ಟೆಯ ಹೊಳೆಯಲ್ಲಿ ಹೊಸ ನೀರು ಬಂದಿದೆ. ಹ್ಯೂಂಡೈ ಸಾಲದೆಂಬಂತೆ ಕಿಯಾ ಬಂದು ಕುಳಿತಿದೆ. ಹಳೆಯ ಬ್ರಿಟಿಷ್ ಬ್ರ್ಯಾಂಡ್ ಮೋರಿಸ್ ಗರಾಜ್ (ಎಂಜಿ) ಚೀನೀ ಒಡೆತನದಲ್ಲಿ ಕಾಲಿಟ್ಟಿದೆ, ಟಾಟಾ ತನ್ನ ವಿನ್ಯಾಸ ಶೈಲಿಯನ್ನೇ ಬದಲಿಸಿದೆ. ಟೊಯೋಟಾ ಒಂದು ವರ್ಗವನ್ನು ಗಟ್ಟಿಯಾಗಿ ಬಿಗಿದಪ್ಪಿದೆ. ಹಾಗಾಗಿ ಎಸ್‌ಯುವಿ ವರ್ಗದಲ್ಲಿ ಈಗ ಭರಪೂರ ಪೈಪೋಟಿ.
ಇದನ್ನು ಬೇಗನೇ ಅರಿತ ಮಹೀಂದ್ರ ತನ್ನ ಎಕ್ಸ್‌ಯುವಿ 500 ಗಾಡಿಯನ್ನು ಅಪ್ಡೇಟ್ ಮಾಡುತ್ತಿದೆ. ಆದರೆ ಹೆಸರು ಮಾತ್ರ 500 ಗೆ ಬದಲಾಗಿ 700 ಎಂದು ಇಟ್ಟಿದೆ. ಹಾಗಾಗಿ ಈಗಿನ ಎಕ್ಸ್‌ಯುವಿ 500 ಎಂಬ ಹೆಸರು ಸದ್ಯಕ್ಕೆ ತೆರೆಮರೆಗೆ ಸರಿಯಲಿದೆ. ಒಂದು ಸಣ್ಣ ವಿರಾಮದ ನಂತರ ಮತ್ತೆ ಎದ್ದು ಬರಲಿದೆ.
ಹ್ಯೂಂಡೈನ ಕ್ರೇಟಾ ಪ್ಲಾಟ್ಫಾರ್ಮ್ ಮೇಲೆಯೇ ತಯಾರಾದ ಏಳು ಆಸನಗಳ ಎಸ್‌ಯುವಿ ಅಲ್ಕಾಝಾರ್ ಅನಾವರಣದ ದಿನವೇ ಅದರ ಮೇಲಿನ ಮಾಧ್ಯಮಗಳ ಗಮನ ಕಡಿಮೆ ಮಾಡುವ ಉದ್ದೇಶದಿಂದ ಮಹೀಂದ್ರ ತನ್ನ ಎಕ್ಸ್‌ಯುವಿ 700ನ ಲೋಗೋವನ್ನು ಸಾರ್ವಜನಿಕಗೊಳಿಸಿ ತಂತ್ರಗಾರಿಕೆ ಮೆರಿಯಿತು. ಹೊಸ ಕಾರು ಮಾರುಕಟ್ಟೆಗೆ ಬರಲು ಇನ್ನೂ ಕಾಲವಿದೆ. ಆದರೆ ಲೋಗೋ ಬಿಡುಗಡೆ ಎಂದೊಂದು ಮಾರ್ಕೆಟಿಂಗ್ ಗಿಮಿಕ್ ಮಾಡಿತು.
ಮಹೀಂದ್ರದ ಸದ್ಯದ ತಂತ್ರಗಾರಿಕೆ ಏನೆಂದರೆ ಎಕ್ಸಯುವಿ 500ನ ಹೊಸ ತಲೆಮಾರಿಗೆ 700 ಹೆಸರಿನ ಕಾರಣ ಇದು ಹಳೆಯ 500ಗಿಂತ ನಿಜಕ್ಕೂ ದೊಡ್ಡದಾದ ವಾಹನ ಎಂಬುದನ್ನು ಬಿಂಬಿಸುವುದು. ಜತೆಗೆ ಹಾಲಿ ಎಕ್ಸಯುವಿ500 ಒಡೆಯರನ್ನು ಕರೆದು “ಈಗ ನಿಮ್ಮ ಸ್ಟೇಟಸ್ಸಿಗೆ ಸರಿಯಾಗಿ 700 ತೆಗೊಳಿ ಸಾರ್” ಎಂದು ಶೋರೂಮ್ ಹುಡುಗರ ಮೂಲಕ ಅಪ್‌ಗ್ರೇಡ್ ಆಸೆ ತೋರಿಸಲೂ ಸಹಾಯಕ.
ಮತ್ತೆ ಎಕ್ಸ್‌ಯುವಿ 500 2024ಕ್ಕೆ?
ಅಂದಹಾಗೆ ವಿರಾಮದ ನಂತರ ಬರುವಾಗ ಕಾರು ಸಂಪೂರ್ಣ ಬದಲಾಗಿರಲೇಬೇಕು ತಾನೆ. ಹಾಗಾಗಿ ಹೊಸ 500ನ್ನು ಮಹೀಂದ್ರ ಹಾಗೂ ಫೋರ್ಡ್ ಜಂಟಿಯಾಗಿ ಹಂಚಿಕೊಳ್ಳುವ ಪ್ಲಾಟ್ಫಾರ್ಮಿನಲ್ಲಿ ತಯಾರು ಮಾಡುವುದಾಗಿ ಈಮೊದಲು ಕಂಪನಿ ನಿಶ್ಚಯಿಸಿತ್ತು. ಆದರೆ ಫೋರ್ಡ್-ಮಹೀಂದ್ರ ಲವ್ ಸ್ಟೋರಿಗೆ ಹಲವು ವಿಘ್ನಗಳು ಉಂಟಾಗಿ ಮದುವೆ ಮುರಿದುಬಿತ್ತು. ಹಾಗಾಗಿ ಹೊಸ ಎಸ್‌ಯುವಿ ಬರುವುದು ಕೊಂಚ ತಡವಾಗುತ್ತಿದೆ. ಹೊಸ ನೆಂಟಸ್ತಿಕೆ ಬೆಳೆದು ನವೀನ ಪ್ಲಾಟ್ಪಾರ್ಮಿನಲ್ಲಿ ಬರುವ ಕಾರು ರಸ್ತೆಗಿಳಿಯಲು 2024ರ ವರೆಗೆ ಸಮಯ ಹಿಡಿಯಲಿದೆ ಎಂದು ಅಂದಾಜಿಸಲಾಗಿದೆ.
ಆಂತರಿಕವಾಗಿ ವಿ 201 ಕೋಡ್‌ನೇಮ್ ಹೊಂದಿರುವ ಮುಂಬರುವ ಎಕ್ಸ್‌ಯುವಿ 500 ಮಹೀಂದ್ರ ಕೊಂಡು ತನ್ಮದಾಗಿಸಿದ, ದಕ್ಷಿಣ ಕೊರಿಯಾ ಮೂಲದ ಸ್ಸ್ಯಾಂಗ್‌ಯಾಂಗ್‌ನ ಅಡಿಪಾಯ ಹೊಂದಿರಲಿದೆ. ಸ್ಸ್ಯಾಂಗ್‌ಯಾಂಗ್ ಟಿವೋಳಿ ಈಗಾಗಲೇ ಮಹೀಂದ್ರ ಮುದ್ರೆಯಲ್ಲಿ ಎಕ್ಸ್‌ಯುವಿ 300 ಎಂಬ ಹೆಸರಿನೊಂದಿಗೆ ಭಾರತದಲ್ಲಿದೆ. ಅದು ಯಾವ ಪ್ಲಾಟ್ಫಾರ್ಮ್ ಮೇಲೆ ತಯಾರಿಯಾಗಿದೆಯೋ ಅದನ್ನೇ ಮುಂಬರುವ 500ಗೆ ಬಳಸಲಾಗುವುದು ಎಂಬ ವಿಷಯ ಮಹೀಂದ್ರ ಕಂಪೆನಿಯ ಬಾಗಿಲ ಸಂದಿಯಿಂದ ನುಸುಳಿದೆ.
ಆದರೆ ಟಿವೋಳಿ ಅಡಿಪಾಯವನ್ನು ಥಟ್ಟನೆ ಎಕ್ಸಯುವಿಗೆ ಬಳಸಲು ಆಗದು. ಅದರ ಒಟ್ಟು ತೂಕ ಇಳಿಸುವಿಕೆ ಹಾಗೂ ವೆಚ್ಚ ಇಳಿಕೆಗಾಗಿ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಯನ್ನು ಮಹೀಂದ್ರ ಮಾಡಬೇಕಿದೆ. ಈ ಕಾರ್ಯದಲ್ಲಿ ಕಂಪನಿ ಇತ್ತೀಚಿನ ವರ್ಷಗಳಲ್ಲಿ ತನ್ನ ತೆಕ್ಕೆಗೆ ಹಾಕಿಕೊಂಡಿರುವ ಐರೋಪ್ಯ ರಾಷ್ಟ್ರದ ವಾಹನ ವಿನ್ಯಾಸ ಕಂಪನಿ ಪಿನ್ನಿನ್ಫರೀನಾ ಕೂಡ ಕೈಜೋಡಿಸಲಿದೆ. ಹಾಗಾಗಿ ಈಚೀಚಿನ ಮಹೀಂದ್ರ ಕಾರುಗಳಂತೆ ಇದು ಕೂಡ “ಏಕ ಒಡೆಯ; ಬಹುರಾಷ್ಟ್ರೀಯ” ತಯಾರಿಯ ಸೂತ್ರದಲ್ಲಿ ಮೂಡಿಬರಲಿದೆ.
ಆದರೆ ಈಗಿನ ಎಕ್ಸ್‌ಯುವಿ500ನಂತೆ ಮುಂಬರುವುದು ಸೆವೆನ್ ಸೀಟರ್ ಆಗಿರದೆ ಐದು ಆಸನಗಳ ಎಸ್‌ಯುವಿಯಾಗಲಿದೆ. ಎಸ್‌ಯುವಿ ಅನ್ನುವುದಕ್ಕಿಂತ ಎಸ್‌ಯುವಿ ರೀತಿಯ ಕಾರು ಎನ್ನಬಹುದು. ಹ್ಯುಂಡೈ ಕ್ರೇಟಾ, ಕಿಯಾ ಸೆಲ್ಟೋಸ್, ಎಂಜಿ ಹೆಕ್ಟರ್, ಟಾಟಾ ಹ್ಯಾರಿಯರ್ ಹಾಗೂ ನಿಸಾಮ್ ಕಿಕ್ಸ್‌ಗೆ ಪ್ರತಿಸ್ಪರ್ಧಿಯಾಗಲಿದೆ.
ಈಗಿನ ಎಸ್‌ಯುವಿ 300ಗಿಂತ ಗಾತ್ರದಲ್ಲಿ ಕೊಂಚ ಹಿರಿದಾಗಿದ್ದು ಐಶಾರಾಮಿತನದಲ್ಲೂ ಅದನ್ನು ಮೀರಿಸಲಿದೆ. ಮಹೀಂದ್ರದ ನಾಮಕರಣ ಸೂತ್ರಕ್ಕೆ ಹೊಂದುವಂತೆ 300 ಹಾಗೂ 700ಗಳ ಮಧ್ಯೆ ಎಕ್ಸ್‌ಯುವಿ 500 ನಿಲ್ಲಲಿದೆ. ಜತೆಗೆ 1500ಸಿಸಿಯ ಹೊಸ ಟರ್ಬೋ ಪೆಟ್ರೋಲ್ ಎಂಜಿನ್ ಕೂಡ ಜತೆಯಾಗಲಿದೆ.
ಅಂದಹಾಗೆ ತಾಂತ್ರಿಕವಾಗಿ ಇಷ್ಟು ಪದರ ಪದರವಾಗಿ ಇರುವ ಈ ವಿಚಾರವನ್ನು ಮಹೀಂದ್ರದ ಮಾರ್ಕೆಟಿಂಗ್ ವಿಭಾಗ ಹೊಸ ಕತೆ ಹೆಣೆದು ಆಲ್ ನ್ಯೂ ಎಕ್ಸ್‌ಯುವಿ ಎಂದು ಸುಲಭದಲ್ಲಿ ಅರ್ಥವಾಗುವಂತೆ ತಿಳಿಸುತ್ತಾರೆ ಬಿಡಿ, ಗ್ರಾಹಕರು ಚಿಂತಿಸಬೇಕಿಲ್ಲ.