ಅಸಮಾನ ಸಂಪತ್ತಿಗೆ ಕೊಡಲಿ ಪೆಟ್ಟಾಗಲಿ ನೂತನ ತಂತ್ರಜ್ಞಾನ-1

ತಂತ್ರಜ್ಞಾನವೆನ್ನುವುದು ಧನಿಕರ ಪಕ್ಷಪಾತಿಯೂ, ಜಾಗತಿಕ ಮಾರುಕಟ್ಟೆ ಹಾಗೂ ಅರ್ಥವ್ಯವಸ್ಥೆಯ ಕೇಂದ್ರದಲ್ಲಿರುವ ಪ್ರಮುಖ ಉತ್ಪನ್ನವೂ ಆಗಿ ರೂಪುಗೊಂಡಿದೆ ಎನ್ನುವುದು

ತಂತ್ರಜ್ಞಾನದ ವಿಚಾರ ಬಂದಾಗ ನಾವು ಸಾಮಾನ್ಯವಾಗಿ ‘ಜನಸ್ನೇಹಿ’ ತಂತ್ರಜ್ಞಾನ ಎನ್ನುವ ಮಾತನ್ನು ಬಳಸುತ್ತಿರುತ್ತೇವೆ. ಜನರ ಬಳಿಗೆ ಸೇವೆ, ಸೌಕರ್ಯಗಳನ್ನು ಒಯ್ಯಲು, ಅವರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಗಳಿಗೆ ಕಾರಣವಾಗಲು ಸರ್ಕಾರಗಳು, ಸ್ವಯಂಸೇವಾ ಸಂಸ್ಥೆಗಳು ತಂತ್ರಜ್ಞಾನವನ್ನು ಸರಳವಾಗಿ ಬಳಸುವ ಮಾದರಿ ಇದು. ಇಲ್ಲಿ ಜನರ ಶ್ರಮ, ಖರ್ಚು ಎರಡೂ ಉಳಿತಾಯವಾಗುವುದರೊಟ್ಟಿಗೇ, ಮಧ್ಯವರ್ತಿಗಳ ಹಾವಳಿಯಿಲ್ಲದೆ, ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲದೆ ನಿರ್ದಿಷ್ಟ ಸೇವೆಗಳನ್ನು ಜನತೆ ಪಡೆಯುವುದು ಈ ಜನಸ್ನೇಹಿ ತಂತ್ರಜ್ಞಾನದಿಂದ ಸಾಧ್ಯವಾಗುತ್ತದೆ.

ಇದರ ಹೊರತಾಗಿ ಗಮನಿಸಿದರೆ, ಇಂದು ತಂತ್ರಜ್ಞಾನ ಖಾಸಗಿ ವಲಯದಲ್ಲಿನ ಅಗಾಧ ಬೆಳವಣಿಗೆ ಹಾಗೂ ಜಾಗತಿಕ ಮಾರುಕಟ್ಟೆಯ ವಿಫುಲ ಸಾಧ್ಯತೆಗಳ ಪರಿಣಾಮವಾಗಿ ನಮ್ಮ ದೈನಂದಿನ ಬದುಕಿನ ಪ್ರತಿನಡೆಯಲ್ಲಿಯೂ ವ್ಯಾಪಕವಾಗಿ ಹಾಸುಹೊಕ್ಕಾಗಿದೆ. ಇದು ಬೆರಳ ತುದಿಯಲ್ಲಿಯೇ ಹತ್ತು ಹಲವು ಸೌಕರ್ಯಗಳು ನಮಗೆ ಲಭ್ಯವಾಗುವಂತೆ ಮಾಡುವ ಮೂಲಕ ನಮ್ಮ ಜೀವನವನ್ನು ಊಹಿಸಲೂ ಸಾಧ್ಯವಾಗದ ಮಟ್ಟಿಗೆ ಆರಾಮದಾಯಕವಾಗಿಸಿದೆ. ತಂತ್ರಜ್ಞಾನದ ಮೇಲಿನ ನಮ್ಮ ಅವಲಂಬನೆ ಇನ್ನಿಲ್ಲದಂತೆ ಹೆಚ್ಚಿದೆ. ಎಲ್ಲರಿಗೂ ಅರಿವಿರುವ ಈ ಸತ್ಯವನ್ನು ಇಲ್ಲಿ ಹೆಚ್ಚು ವಿವರಿಸುವ ಅಗತ್ಯವಿಲ್ಲ. ಆದರೆ, ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶ, ತಂತ್ರಜ್ಞಾನವೆನ್ನುವುದು ಧನಿಕರ ಪಕ್ಷಪಾತಿಯೂ, ಜಾಗತಿಕ ಮಾರುಕಟ್ಟೆ ಹಾಗೂ ಅರ್ಥವ್ಯವಸ್ಥೆಯ ಕೇಂದ್ರದಲ್ಲಿರುವ ಪ್ರಮುಖ ಉತ್ಪನ್ನವೂ ಆಗಿ ರೂಪುಗೊಂಡಿದೆ ಎನ್ನುವುದು.

ಉತ್ಕೃಷ್ಟ ತಂತ್ರಜ್ಞಾನವೆನ್ನುವುದು ಮಾರುಕಟ್ಟೆ ಆಧರಿತ ಆರ್ಥವ್ಯವಸ್ಥೆಯಲ್ಲಿ ದುಬಾರಿ ಉತ್ಪನ್ನವಾಗಿದೆ. ಆ ಮೂಲಕ ಶ್ರೀಮಂತಿಕೆಯ ಕುರುಹಾಗಿದೆ. ಕೃತಕ ಬುದ್ಧಿಮತ್ತೆಯನ್ನು (Artificial Intelligence) ಆಧರಿಸಿ ರೂಪುಗೊಳ್ಳುತ್ತಿರುವ ಆಧುನಿಕ ತಂತ್ರಜ್ಞಾನವು ನಮ್ಮ ದೈನಂದಿನ ಜೀವನವನ್ನು ‘Smart Living’ ಆಗಿ ಪರಿವರ್ತಿಸಿದೆ. ಬೆರಳ ತುದಿಯಲ್ಲಿಯೇ ಮನೋಕಾಮನೆಗಳನ್ನು ಪೂರೈಸುತ್ತಿದೆ. ಬರುವ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಯಾಂತ್ರೀಕೃತ ಕಲಿಕೆ (Machine Learning) ಆಧರಿಸಿದ ತಂತ್ರಜ್ಞಾನ ಮನುಷ್ಯನ ಜೀವನವನ್ನು ಮತ್ತೂ ಆರಾಮದಾಯಕವಾಗಿಸಲಿದೆ. ಇದೇ ವೇಳೆ ಈ ನವನವೀನ ತಂತ್ರಜ್ಞಾನವು ಶ್ರೀಮಂತಿಕೆಯ ಕುರುಹಾಗಿ ಬೆಳೆಯುತ್ತಾ ಸಮಾಜದಲ್ಲಿನ ಸಂಪತ್ತು ಹಾಗೂ ತಂತ್ರಜ್ಞಾನದ ಕಂದರವನ್ನು ಮತ್ತಷ್ಟು ಆಳವೂ, ಅಗಲವೂ ಆಗಿಸಲಿದೆ. ಆ ಮೂಲಕ ‘ಜಾಣ ತಂತ್ರಜ್ಞಾನ’ವೆನ್ನುವುದು (Smart Technology), ‘ಹೃದಯಹೀನ’ ತಂತ್ರಜ್ಞಾನವಾಗಿಯೂ, ಧನಿಕರ, ಅಧಿಕಾರಸ್ತರ ತಂತ್ರಜ್ಞಾನವಾಗಿಯೂ ಬದಲಾಗುವ ಆತಂಕವೂ ಎದುರಾಗಿದೆ.  

ಇದನ್ನು ತಪ್ಪಿಸಿ, ತಂತ್ರಜ್ಞಾನವನ್ನು ಹೆಚ್ಚು ಜನಪರವೂ, ಬಡವರ ಪಕ್ಷಪಾತಿಯೂ ಆಗಿ ರೂಪಿಸುವುದು ಹಾಗೂ ಜನಸಾಮಾನ್ಯರ ಜೀವನದಲ್ಲಿ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣವಾಗುವ ಹಾಗೆ ಮಾಡುವುದು ನಮ್ಮ ಮುಂದಿರುವ ಸವಾಲಾಗಿದೆ. ಈ ನಿಟ್ಟಿನಲ್ಲಿ ಟಿವಿ ಹಾಗೂ ಸ್ಮಾರ್ಟ್‌ ಫೋನ್‌ಗಳು ತಂದಿರುವ ಬದಲಾವಣೆಗಳನ್ನು ನಾವು ನೋಡಿದ್ದೇವೆ. ಹಾಗಿದ್ದಾಗ್ಯೂ ಈ ಎರಡೂ ಮಾಧ್ಯಮಗಳನ್ನು ನವನಾಗರಿಕತೆ ದುಡಿಸಿಕೊಳ್ಳುತ್ತಿರುವ ಪರಿ ಹೇಳಿಕೊಳ್ಳುವಷ್ಟು ಸಕಾರಾತ್ಮಕವಾಗಿಯೇನೂ ಇಲ್ಲ ಎನ್ನುವುದನ್ನು ಇಲ್ಲಿ ಗಮನಸಿಬಹುದು. ಹಾಗಾಗಿ ಬರುವ ದಿನಗಳಲ್ಲಿ ತಂತ್ರಜ್ಞಾನದ ಮಹತ್ವದ ಬೆಳವಣಿಗೆಗಳನ್ನು ನಾವು ಜನಪರವಾಗಿಸಬೇಕೆಂದರೆ, ಮೊದಲು ತಂತ್ರಜ್ಞಾನ = ಹಣ ಎನ್ನುವ ಸಮೀಕರಣವನ್ನು ಬದಲಾಯಿಸಿ ತಂತ್ರಜ್ಞಾನ = ಸಮಾನತೆ ಎನ್ನುವ ದಿಕ್ಕಿನಲ್ಲಿ ನಮ್ಮ ಸಂಶೋಧನೆ, ಚಿಂತನೆಗಳನ್ನು ರೂಪಿಸಬೇಕಿದೆ. ಆಗ ನವ ನಾಗರಿಕತೆಗಳು ಸೃಷ್ಟಿಸುವ ಕೃತಕ ಕಂದರಗಳಿಗೆ ಲಗಾಮು ಹಾಕಲು ಸಾಧ್ಯ.

ಆಧುನಿಕ ಸಮಾಜದಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವ ಸಂಪತ್ತಿನ ಅಸಮಾನತೆಯನ್ನು ಹೋಗಲಾಡಿಸಬೇಕೆಂದರೆ ತಂತ್ರಜ್ಞಾನದ ಮೂಲಕ ಹೆಚ್ಚು ಸುಸ್ಥಿರ ಬದುಕನ್ನು ರೂಪಿಸುವುದು, ಬಹುಮುಖ್ಯವಾಗಿ ಹಣದ ಬಳಕೆಯನ್ನು ಕಡಿಮೆ ಮಾಡುವಂತಹ ಜನಸ್ನೇಹಿ ಮಾರುಕಟ್ಟೆಗಳನ್ನು, ಒಕ್ಕೂಟಗಳನ್ನು ತಂತ್ರಜ್ಞಾನದ ಮೂಲಕ ಕಟ್ಟುವುದು ಸಾಧ್ಯವಾಗಬೇಕಿದೆ. ಸುಸ್ಥಿರ ಬದುಕೆಂದರೆ ಕೇವಲ ಪ್ರಾಕೃತಿಕ ಸಂಪನ್ಮೂಲಗಳನ್ನು ಜತನದಿಂದ, ಜವಾಬ್ದಾರಿಯಿಂದ, ಪೋಲು ಮಾಡದೆ ಬಳಸುವುದು ಮಾತ್ರವೇ ಅಲ್ಲ, ಹಣದ ಮೇಲಿನ ಅವಲಂಬನೆಯನ್ನು ದಿನೇದಿನೇ ಕಡಿಮೆ ಮಾಡುವುದು ಕೂಡ ಆಗಬೇಕಿದೆ. ಮನುಷ್ಯನ ಮೂಲಭೂತ ಅವಕಶ್ಯತೆಗಳನ್ನು, ಶಿಕ್ಷಣ, ಆರೋಗ್ಯದಂತಹ ಸೇವೆಗಳನ್ನೂ ಹೆಚ್ಚು ಹಣದ ಅವಶ್ಯಕತೆಯಿಲ್ಲದೆ ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡುವ ದಿಕ್ಕಿನಲ್ಲಿ ತಂತ್ರಜ್ಞಾನದ ಸಹಾಯ ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯವಿದೆ. ಇದೆಲ್ಲ ಸರ್ಕಾರಗಳು ಇದಾಗಲೇ ಮಾಡುತ್ತಿರುವ ಕೆಲಸವಾಗಿದ್ದು, ಇದಕ್ಕೆ ತಂತ್ರಜ್ಞಾನದ ಅವಶ್ಯಕತೆ ಏಕೆ ಬೇಕು ಎನ್ನುವ ಪ್ರಶ್ನೆ ಇಲ್ಲಿ ಮೂಡಬಹುದು. ಈ ಪ್ರಶ್ನೆಗೆ ಉತ್ತರವಾಗಿ ಜಗತ್ತಿನಾದ್ಯಂತ ಇಂದು ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು, ಯೋಜನೆಗಳಿದ್ದರೂ ಸಹ ಹೇಗೆ ಮಾರುಕಟ್ಟೆ ಶಕ್ತಿಗಳು ಇವುಗಳು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗದಂತಹ ತಂತ್ರಗಾರಿಕೆಯನ್ನು ಹೆಣೆದಿವೆ ಎನ್ನುವುದನ್ನು ನಾವು ಇಲ್ಲಿ ಗಮನಿಸಬಹುದು. ಅದೇ ರೀತಿ, ಮಾರುಕಟ್ಟೆ ಶಕ್ತಿಗಳು ಸರ್ಕಾರಗಳು ಮಾಡುವ ಸಾಮಾಜಿಕ ಖರ್ಚನ್ನು ಗಣನೀಯವಾಗಿ ತಗ್ಗಿಸಬೇಕು ಎಂದು ನಿರಂತರ ಒತ್ತಡ ಹೇರುತ್ತಿದ್ದು, ಬಹುತೇಕ ಸರ್ಕಾರಗಳು ಈ ಒತ್ತಡಕ್ಕೆ ಮಣಿದಿವೆ. ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಸರ್ಕಾರವು ನಿಧಾನವಾಗಿ ಹಿಂದೆಗೆಯುತ್ತಿರುವುದನ್ನು ಸ್ಪಷ್ಟವಾಗಿ ವಿವಿಧ ವರದಿಗಳು ಗುರುತಿಸಿವೆ.

ಜಗತ್ತಿನೆಲ್ಲೆಡೆ ಮತ್ತೆ ಆರ್ಥಿಕ ಹಿಂಜರಿತದ ಭೀತಿ ಇಂದು ಎದುರಾಗಿದೆ. ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ನಿರುದ್ಯೋಗ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಹಣದ ಚಲಾವಣೆ ಎನ್ನುವುದು ನಮ್ಮ ಬದುಕಿನ ಕೇಂದ್ರದಲ್ಲಿರುವುದರಿಂದ ಹಣದ ಹರಿವು ತಗ್ಗಿದೊಡನೆಯೇ ಬದುಕು ತೂಗುಯ್ಯಾಲೆಯಾಗುವುದು ಸಾಮಾನ್ಯ ವಿದ್ಯಮಾನವಾಗಿದೆ. ದೇಹದಲ್ಲಿ ಕಸುವು, ಕೈಯಲ್ಲಿ ಕೌಶಲ, ಮಿದುಳಲ್ಲಿ ಹೊಸ ಆಲೋಚನೆಗಳಿದ್ದೂ ದೈನಂದಿನ ಬದುಕನ್ನು ಸಂಭಾಳಿಸಲು ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿ ದಿನೇದಿನೇ ದುಡಿಯುವ ವರ್ಗ ಸಿಲುಕುತ್ತಿದೆ. ಬಂಡವಾಳಶಾಹಿ ವ್ಯವಸ್ಥೆ, ಮಾರುಕಟ್ಟೆ ಆಧರಿತ ಅರ್ಥವ್ಯವಸ್ಥೆ ಆಧುನಿಕ ಬದುಕಿನಲ್ಲಿ ತಂದಿದ್ದ ಸಕಾರಾತ್ಮಕ ಬದಲಾವಣೆಗಳು ಕ್ರಮೇಣ ಕಡಿಮೆಯಾಗುತ್ತಾ ಅರ್ಥವ್ಯವಸ್ಥೆ ನಿಧಾನವಾಗಿ ಕುಸಿಯುತ್ತಿರುವುದು, ಹಿಂಜರಿಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸಂಪತ್ತಿನ ಸೃಷ್ಟಿಯ ಹೆಸರಿನಲ್ಲಿ ಬಂಡವಾಳಶಾಹಿ ವ್ಯವಸ್ಥೆ ಇನ್ನಿಲ್ಲದಂತೆ ಅಸಮಾನತೆಯನ್ನು ಸೃಷ್ಟಿಸಿದೆ. ಇದನ್ನು ಮೀರುವ ಬಗೆ ಹೇಗೆಂದು ಸಾಮಾನ್ಯ ಜನತೆಗೆ ತಿಳಿಯುತ್ತಿಲ್ಲ. ಮಾರುಕಟ್ಟೆ ವ್ಯವಸ್ಥೆ ನಿರಂತರವಾಗಿ ಸೃಷ್ಟಿಸುತ್ತಿರುವ ಕೊಳ್ಳುಬಾಕ ಸಂಸ್ಕೃತಿ ಹಾಗೂ ಉತ್ತಮ ಜೀವನಶೈಲಿಯ ಮಿಥ್ಯೆಯಿಂದಾಗಿ ಬಡ ಹಾಗೂ ಮಧ್ಯಮವರ್ಗಗಳು ಎಷ್ಟು ದುಡಿದರೂ ಮುಂದೆ ಸಾಗದಂತಹ, ತೃಪ್ತಿಪಡದಂತಹ ಕೊನೆಯಿಲ್ಲದ ಸ್ಪರ್ಧೆಯಲ್ಲಿ ಸಿಲುಕಿವೆ.

ಇದನ್ನೂ ಓದಿ| ಎಲ್ಲರನ್ನೂ ಕೆಲಸದಿಂದ ತೆಗೀತಾರಂತೆ; ಕಂಪ್ಯೂಟರ್ ಬರತ್ತಂತೆ…!

ಈ ಬಗೆಯ ಜಾಗತಿಕ ಸನ್ನಿವೇಶದಲ್ಲಿ ಪರ್ಯಾಯವೂ, ಸುಸ್ಥಿರವೂ ಆದ ಅರ್ಥವ್ಯವಸ್ಥೆಯೆಡೆಗೆ ಇಡೀ ಜಗತ್ತು ಗಮನಹರಿಯುತ್ತಿದೆ. ಸಂಪತ್ತಿನ ಸೃಷ್ಟಿಗೆ ಹೇಗೆ ಹಣದ ಹರಿವು, ಹಣದ ಕೈಬದಲಾಗುವುದು ಕಾರಣವೋ ಅದೇ ರೀತಿ ಹಣದ ಬದಲಾಗಿ ವ್ಯಕ್ತಿಯ ಶ್ರಮ ಹಾಗೂ ಆತ ನೀಡುವ ಸೇವೆಗಳ ಚಲಾವಣೆಯನ್ನು ಸಾಧ್ಯವಾಗಿಸುವ ವಿವಿಧ ಪ್ರಯತ್ನಗಳ ಬಗ್ಗೆ ಇಂದು ಗಂಭೀರ ಚಿಂತನೆಗಳು ನಡೆಯುತ್ತಿವೆ. ಹೀಗೆ ಶ್ರಮ ಹಾಗೂ ಸೇವೆಗಳ ವಿನಿಮಯವನ್ನು ಸರಕುಗಳ ವಿನಿಮಯ ಪದ್ಧತಿಗೆ (ಬಾರ್ಟರ್‌ ಸಿಸ್ಟಂ) ಇಲ್ಲಿ ಗೊಂದಲ ಮಾಡಿಕೊಳ್ಳಬಾರದು. ಸರಕುಗಳ ವಿನಿಮಯ ಪದ್ಧತಿಯಲ್ಲಿ ಕೊಳ್ಳುವವನ ಬಳಿ ಮಾರಲು ಏನಾದರೂ ವಸ್ತು ಇರಲೇಬೇಕಾಗುತ್ತದೆ. ಅಲ್ಲದೆ, ಅವನು ತನಗೆ ಬೇಕಾದ ವಸ್ತುವನ್ನು ಕೊಳ್ಳಬೇಕೆಂದರೆ ಅದನ್ನು ಮಾರುವವನನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ. ಅಷ್ಟೇ ಅಲ್ಲ ಅದನ್ನು ಮಾರುವವನಿಗೂ ಕೊಳ್ಳುವವನ ಬಳಿ ಇರುವ ವಸ್ತುವನ್ನು ಖರೀದಿ ಮಾಡುವ ಅವಶ್ಯಕತೆ ಇರಬೇಕಾಗುತ್ತದೆ. ಹಾಗಾಗಿ, ಈ ವ್ಯವಸ್ಥೆ ನಿಜಕ್ಕೂ ಮನುಕುಲದ ಇತಿಹಾಸದಲ್ಲಿ ದೊಡ್ಡಮಟ್ಟದಲ್ಲಿ ಚಾಲ್ತಿಯಲ್ಲಿತ್ತೇ ಎನ್ನುವ ಅನುಮಾನ ಸದಾಕಾಲ ಅರ್ಥಶಾಸ್ತ್ರಜ್ಞರನ್ನು ಕಾಡಿದೆ. ಈ ಬಗೆಯ ವ್ಯವಸ್ಥೆ ಸಣ್ಣಮಟ್ಟದಲ್ಲಿ ಕುಟುಂಬಗಳ ನಡುವೆ, ನೆರೆಹೊರೆಯಲ್ಲಿ ಚಾಲ್ತಿಯಲ್ಲಿ ಇರುವಂತಹದ್ದಾದರೂ ಇದುವೇ ಪುರಾತನ ನಾಗರಿಕತೆಗಳ ಬೆನ್ನಲುಬಾಗಿತ್ತು ಎನ್ನುವುದನ್ನು ಒಪ್ಪಲು ಬಹುತೇಕ ಮಂದಿ ತಯಾರಿಲ್ಲ.

%d bloggers like this: