ಅಸಲಿಗೆ, ದೇಶವನ್ನು ಉದ್ಧರಿಸಲು ‘ಅಪನಗದೀಕರಣ’ದಂತಹ (ಡಿಮಾನೆಟೈಸೇಷನ್) ಸಾಮೂಹಿಕ ಕೊಲೆಗಡುಕ ಸಮಾನ ಕ್ರಮ ಕೈಗೊಳ್ಳುವುದಕ್ಕಿಂತಲೂ ಇಂತಹ ವ್ಯವಸ್ಥೆಗಳನ್ನು ಪ್ರೋತ್ಸಾಹಿಸುವುದು ಸಮಾಜದಲ್ಲಿ ಮೌಲ್ಯಗಳ ಮರು ಸ್ಥಾಪನೆಗೆ ಒತ್ತು ನೀಡುವುದಲ್ಲದೆ ಆದರ್ಶಯುತ ಸಮಾಜದ ನಿರ್ಮಾಣದೆಡೆಗೆ ಇರಿಸುವ ದಿಟ್ಟ ಹೆಜ್ಜೆಯಾಗುತ್ತದೆ

ಅದೇನೇ ಇರಲಿ, ವಿಷಯಕ್ಕೆ ಮರಳುವುದಾದರೆ, ಈ ಹಿಂದೆ ಹಾಗೂ ಇಂದಿಗೂ ಜಗತ್ತಿನಾದ್ಯಂತ ಅನೇಕ ದೇಶಗಳಲ್ಲಿ ಆಸಕ್ತ ಸಮೂಹಗಳು ಹಣದ ಚಲಾವಣೆಗೆ ಹೊರತಾದ ‘ಸ್ಥಳೀಯ ವಿನಿಮಯ ವ್ಯಾಪಾರ ಪದ್ಧತಿ’ಗಳನ್ನು (Local Exchange Trading System) ಅನುಸರಿಸುತ್ತಿವೆ. ‘LETS’ ಎನ್ನುವ ಸಂಕ್ಷಿಪ್ತಾಕ್ಷರಗಳ ಮೂಲಕವೇ ಈ ಪದ್ಧತಿಯನ್ನು ಗುರುತಿಸಲಾಗುತ್ತದೆ. ಈ ಪದ್ಧತಿಯ ವಿಶೇಷವೆಂದರೆ ಇಲ್ಲಿ, ವ್ಯಕ್ತಿಯೊಬ್ಬ ತಾನು ನೀಡಬಹುದಾದ ಸೇವೆಯನ್ನು ಈ ವ್ಯವಸ್ಥೆಯ ನಿರ್ವಹಣೆಯನ್ನು ಮಾಡುವ ಸ್ಥಳೀಯ ಸಮೂಹದಲ್ಲಿ ನೊಂದಾಯಿಸಿರುತ್ತಾನೆ. ಆತ ನೀಡುವ ಸೇವೆಗೆ ಸಾಮಾನ್ಯವಾಗಿ ಗಂಟೆಗೆ ಇಂತಿಷ್ಟು ಎಂದು ಮೌಲ್ಯಾಂಕಗಳನ್ನು ನಿಗದಿಪಡಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ‘ಟೈಮ್ ಡಾಲರ್’ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಮೇಲೆ ಹೇಳಿದ ಸಮೂಹದಲ್ಲಿ ಸಂಗೀತ ಶಿಕ್ಷಕರೊಬ್ಬರಿದ್ದರೆ ಅವರು ತಮ್ಮ ಸಮೂಹದೊಳಗೆ ಅಗತ್ಯವಿರುವವರಿಗೆ ಪಾಠ ಹೇಳಿಕೊಡುವ ಮೂಲಕ ಅಥವಾ ಸಂಗೀತ ಕಚೇರಿ ನೀಡುವ ಮೂಲಕ ಗಂಟೆಗೆ ಇಂತಿಷ್ಟು ಎಂದು ಮೌಲ್ಯಾಂಕಗಳನ್ನು ಪಡೆಯುತ್ತಾರೆ. ಹೀಗೆ ಸೇವೆಯನ್ನು ನೀಡಿದ್ದು, ಪಡೆದದ್ದು ಈ ವ್ಯವಸ್ಥೆಯನ್ನು ನಿರ್ವಹಿಸುತ್ತಿರುವ ಸ್ಥಳೀಯ ಸಮೂಹದಲ್ಲಿ ದಾಖಲಾಗಿರುತ್ತದೆ. ಸೇವೆಯನ್ನು ನೀಡಿದವರು, ಪಡೆದವರು ಇದಕ್ಕಾಗಿ ನಿರ್ದಿಷ್ಟ ನಮೂನೆಯ ರಸೀತಿಯೊಂದನ್ನು ವಿನಿಮಯ ಮಾಡಿಕೊಂಡಿರುತ್ತಾರೆ. ಇದು ಈ ವ್ಯವಸ್ಥೆಯನ್ನು ನಿರ್ವಹಿಸುತ್ತಿರುವ ಒಕ್ಕೂಟದ ಸರ್ವರ್ ನಲ್ಲಿ ಅಥವಾ ಮೂಲ ದಾಖಲಾತಿ ಪುಸ್ತಕಗಳಲ್ಲಿ ದಾಖಲಾಗಿರುತ್ತದೆ. ಹೀಗೆ ಸೇವೆಯನ್ನು ನೀಡಿದ ಸಂಗೀತ ಶಿಕ್ಷಕ ತನಗೆ ಯಾವುದಾದರೂ ಸೇವೆ ಬೇಕಾದಾಗ ಅದನ್ನು ಈ ಸಮೂಹವು ನಿರ್ವಹಿಸುವ ಅಂತರ್ಜಾಲ ತಾಣ ಅಥವಾ ಇನ್ನಾವುದೇ ವೇದಿಕೆ/ಮಾಧ್ಯಮದ ಮೂಲಕ ತನ್ನ ಸಮೂಹಕ್ಕೆ ತಿಳಿಸಬಹುದು. ಉದಾಹರಣೆಗೆ ಸಂಗೀತ ಶಿಕ್ಷಕ ತನ್ನ ಮನೆಯ ಕೊಳಾಯಿಗಳನ್ನು ದುರಸ್ತಿ ಮಾಡಿಸಿ ಕೊಳ್ಳಬೇಕೆಂದರೆ ಆಗ ಈ ಕುರಿತು ಸಮೂಹಜಾಲದಲ್ಲಿ ಕೋರಬಹುದು. ಅವರಿಗೆ ಅಗತ್ಯವಾದ ಸೇವೆಯನ್ನು ನೀಡುವವರು ಸಮೂಹದಲ್ಲಿದ್ದರೆ ಅವರು ಸಂಗೀತ ಶಿಕ್ಷಕರನ್ನು ಸಂಪರ್ಕಿಸಿ ಆ ವ್ಯವಸ್ಥೆಯನ್ನು ನೀಡುವ ಮೂಲಕ ತಾವು ನಿಗದಿಪಡಿಸಿರುವ ಮೊತ್ತದ ಮೌಲ್ಯಾಂಕಗಳನ್ನು ಪಡೆಯುತ್ತಾರೆ. ಹೀಗೆ ಸೇವೆ ಪಡೆದುದಕ್ಕಾಗಿ ಸಂಗೀತ ಶಿಕ್ಷಕರ ಖಾತೆಯಲ್ಲಿ ಜಮೆಯಾಗಿದ್ದ ಮೌಲ್ಯಾಂಕಗಳಲ್ಲಿ ಕಡಿತವಾಗುತ್ತವೆ.
ಇಲ್ಲಿ ಒಂದು ಪ್ರಶ್ನೆ ಉದ್ಭವಿಸಬಹುದು. ಹೀಗೆ ಸೇವೆ ಪಡೆಯಲು ತಮ್ಮ ಖಾತೆಯಲ್ಲಿ ಮೌಲ್ಯಾಂಕಗಳನ್ನು ಹೊಂದಿರುವುದು ಅಗತ್ಯವೇ ಎಂದು? ಖಂಡಿತವಾಗಿಯೂ ಇಲ್ಲ. ಹಾಗೇನಾದರೂ ಮಾಡಿದರೆ ಅದು ಮತ್ತೊಂದು ಬಗೆಯಲ್ಲಿ ಹಣದ ಚಲಾವಣೆಯ ಮಾದರಿಯನ್ನೇ ಅನುಕರಿಸುವಂತಾಗುತ್ತದೆ. ಹಾಗಾಗಿಯೇ, ಈ ವ್ಯವಸ್ಥೆಯಡಿಯಲ್ಲಿ ಧನಾತ್ಮಕ ಮೌಲ್ಯಾಂಕಗಳು, ಋಣಾತ್ಮಕ ಮೌಲ್ಯಾಂಕಗಳು ಎನ್ನುವ ವಿಂಗಡಣೆಯಷ್ಟೇ ಇರುತ್ತದೆ. ಸಮೂಹದಲ್ಲಿರುವ ಯಾರೆಲ್ಲರೂ ಎಷ್ಟು ಅಂಕಗಳನ್ನು ಗಳಿಸಿದ್ದಾರೆ, ಯಾರಿಗೆಲ್ಲಾ ಏನು ಸೇವೆಯನ್ನು ನೀಡಿದ್ದಾರೆ ಎನ್ನುವುದು ಪಾರದರ್ಶಕವಾಗಿ ಲಭ್ಯವಿರುತ್ತದೆ. ಇದು ಸಮೂಹಕ್ಕೆ ಪ್ರತಿಯೊಬ್ಬ ವ್ಯಕ್ತಿಯೂ ಏನು ಕೊಡುಗೆ ನೀಡಿದ್ದಾನೆ ಎನ್ನುವುದರ ದಾಖಲೆಯೂ ಆಗಿರುತ್ತದೆ. ಇಲ್ಲಿ ವಿಶ್ವಾಸ, ಕಾಳಜಿ, ಸೇವಾ ಮನೋಭಾವ ಹಾಗೂ ಬಹುಮುಖ್ಯವಾಗಿ ಸಹಕಾರದ ತತ್ವವೇ ಜೀವಾಳ. ಒಬ್ಬ ಮನುಷ್ಯ ಹೆಚ್ಚು ಧನಾತ್ಮಕ ಅಂಕಗಳನ್ನು ಹೊಂದಿದ್ದಾನೆ ಎಂದರೆ ಅದು ತನ್ನ ಸುತ್ತಣ ಸಮಾಜದ ಒಳಿತಿಗೆ ಆತ ನೀಡಿರುವ ಸೇವೆಯ ದಾಖಲೆಯಾಗಿರುತ್ತದೆ. ಹೆಚ್ಚಿನ ಮೌಲ್ಯಾಂಕಗಳು ಎನ್ನುವುದು ವ್ಯಕ್ತಿಯ ಬಾಹ್ಯ ಶ್ರೀಮಂತಿಕೆಯನ್ನಲ್ಲದೆ ಅವನ ಹೃದಯ ಸಂಪನ್ನತೆಯನ್ನು ತೋರಿಸುತ್ತದೆ. ಅದೇ ರೀತಿ ಋಣಾತ್ಮಕ ಅಂಕಗಳು ಒಂದೋ ಅದನ್ನು ಪಡೆಯುತ್ತಿರುವ ವ್ಯಕ್ತಿ ನಿಜಕ್ಕೂ ಕಷ್ಟದಲ್ಲಿದ್ದಾನೆ ಎನ್ನುವುದನ್ನು ತೋರಿಸುತ್ತದೆ, ಇಲ್ಲವೇ, ಅತ ಮಹಾನ್ ಮೈಗಳ್ಳ ಹಾಗೂ ಸ್ವಾರ್ಥಿ ಎನ್ನುವುದನ್ನು ಸಮೂಹಕ್ಕೆ ಸಾರುತ್ತದೆ. ಇದನ್ನು ಪತ್ತೆ ಹಚ್ಚುವುದು ಸಮೂಹಕ್ಕೆ ಕಷ್ಟವೇನೂ ಆಗಿರುವುದಿಲ್ಲ. ಮೈಗಳ್ಳರು ನಿಧಾನವಾಗಿ ಸಮೂಹದ ಅವಗಣನೆಗೆ ಈಡಾದರೆ, ಕಷ್ಟದಲ್ಲಿರುವವರಿಗೆ ಯಾವುದೇ ಪ್ರತಿಫಲಾಪೇಕ್ಷೆಗಳಿಲ್ಲದೆ ಸಮೂಹದಲ್ಲಿರುವ ಹೆಚ್ಚಿನ ಮಂದಿ ಸೇವೆಯನ್ನು ನೀಡುವುದು ಸಾಧ್ಯವಾಗುತ್ತದೆ. ಆ ಮೂಲಕ ಅಗತ್ಯವಿರುವವರಿಗೆ ಸಮೂಹವು ಸ್ಪಂದಿಸಿದಂತಾಗುತ್ತದೆ.
ಹಾಗಾದರೆ, ಹೀಗೆ ಸೇವೆ ನೀಡುವ ಮೂಲಕ ಹೆಂಡತಿಮಕ್ಕಳನ್ನು ಸಾಕಲು ಸಾಧ್ಯವೇ? ಕೌಟುಂಬಿಕ ಜವಾಬ್ದಾರಿ ನಿರ್ವಹಣೆ ಸಾಧ್ಯವೇ? ಇದರಿಂದ ಕಾಳುಕಡಿ ಲಭ್ಯವಾಗುತ್ತವೆಯೇ? ಕಾರು, ಸೈಟು, ಬಂಗಲೆ ಕೊಳ್ಳಬಹುದೇ? ಅಂಗಡಿಗಳಲ್ಲಿ ಈ ಮೌಲ್ಯಾಂಕಗಳನ್ನು ಚಲಾವಣೆ ಮಾಡಿ ವಸ್ತುಗಳನ್ನು ಕೊಂಡು ತರಬಹುದೇ? ಎನ್ನುವ ಪ್ರಶ್ನೆಗಳು ಮೂಡಬಹುದು. ಇದೆಲ್ಲಾ ಆಗದ, ಹೋಗದ ಸಂಗತಿ ಎಂದು ಮೂಗು ಮುರಿಯಬಹುದು. ಆದರೆ, ಇದು ಖಂಡಿತವಾಗಿಯೂ ನಮ್ಮ ಜಿಡಿಪಿಯನ್ನು ಬೇರೆಯದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಬಲ್ಲದು.
ಅಸಲಿಗೆ, ದೇಶವನ್ನು ಉದ್ಧರಿಸಲು ‘ಅಪನಗದೀಕರಣ’ದಂತಹ (ಡಿಮಾನೆಟೈಸೇಷನ್) ಸಾಮೂಹಿಕ ಕೊಲೆಗಡುಕ ಸಮಾನ ಕ್ರಮ ಕೈಗೊಳ್ಳುವುದಕ್ಕಿಂತಲೂ ಇಂತಹ ವ್ಯವಸ್ಥೆಗಳನ್ನು ಪ್ರೋತ್ಸಾಹಿಸುವುದು ಸಮಾಜದಲ್ಲಿ ಮೌಲ್ಯಗಳ ಮರು ಸ್ಥಾಪನೆಗೆ ಒತ್ತು ನೀಡುವುದಲ್ಲದೆ ಆದರ್ಶಯುತ ಸಮಾಜದ ನಿರ್ಮಾಣದೆಡೆಗೆ ಇರಿಸುವ ದಿಟ್ಟ ಹೆಜ್ಜೆಯಾಗುತ್ತದೆ. ಹಣದ ಚಲಾವಣೆಯನ್ನೇ ಮಿತಗೊಳಿಸಿದರೆ, ಹಣದ ಮೇಲಿನ ಅವಲಂಬನೆಯನ್ನೇ ಕಡಿಮೆ ಮಾಡಿಕೊಂಡರೆ ಕಪ್ಪುಹಣದ ಕ್ರೋಢೀಕರಣವಾಗಲಿ, ಸಂಪತ್ತಿನ ಅಸಮಾನತೆಯಾಗಲಿ ನಿಧಾನವಾಗಿ ಕರಗುತ್ತದೆಯಲ್ಲವೇ? ಒಂದು ದೇಶದ ಜಿಡಿಪಿ ಅಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನಲ್ಲದೆ, ಅಲ್ಲಿನ ಜನತೆಯ ಶ್ರಮವನ್ನು ಗುರುತಿಸುವ ಮಾನದಂಡವಾದರೆ ಆಗ ಈ ದೇಶದಲ್ಲಿ ಈವರೆಗೆ ನಾವು ಆದರಿಸದೆ ಉಳಿದ ಶ್ರಮಕ್ಕೆ ತಾನಾಗಿಯೇ ಮೌಲ್ಯ ಬರುತ್ತದೆ ಅಲ್ಲವೇ? ಜೀವನ ಪರ್ಯಂತ ನಾಲ್ಕು ಗೋಡೆಯಲ್ಲಿ ಬಂಧಿಯಾಗಿ ಗಂಡ, ಮನೆ, ಮಕ್ಕಳ ಜವಾಬ್ದಾರಿಯನ್ನು ನಿರ್ವಹಿಸುವ, ಹೊಲಮನೆಗಳಲ್ಲಿ ಪ್ರತಿಫಲದ ಅಪೇಕ್ಷೆಗಳೇ ಇಲ್ಲದಂತೆ ದುಡಿಯುವ ಈ ದೇಶದ ಸ್ತ್ರೀಯರ ಶ್ರಮವನ್ನು ಇಂತಹ ಮೌಲ್ಯಾಂಕಕ್ಕೆ ಪರಿಗಣಿಸಿ ಅದಕ್ಕಾಗಿ ಆಕೆಗೆ ವಿಶೇಷ ಸಬ್ಸಿಡಿ, ಸವಲತ್ತುಗಳನ್ನು ನೀಡುವುದು ಒಂದು ಅರ್ಥವ್ಯವಸ್ಥೆಯ ಜವಾಬ್ದಾರಿಯಲ್ಲವೇ? ಅದೇ ರೀತಿ, ಮಲದ ಗುಂಡಿಗಳಲ್ಲಿ ಅನಾಥವಾಗಿ ಸಾವನ್ನಪ್ಪಿದ ಸಫಾಯಿ ಕರ್ಮಚಾರಿಗಳ ಶ್ರಮವನ್ನು ಕೆಲ ನೂರರ ನೋಟುಗಳಲ್ಲಿ ಅಳೆಯುವ ಈ ಸಮಾಜಕ್ಕೆ ಆತನ ಶ್ರಮವನ್ನು ಅಗಾಧವಾಗಿ ಗೌರವಿಸುವ, ಅವನಿಗೆ ಜೀವನಪರ್ಯಂತ ಆಶ್ರಯವಾಗುವ ವಿಶೇಷ ಮೌಲ್ಯಾಂಕಗಳನ್ನು ನೀಡಲು ಸಾಧ್ಯವಿಲ್ಲವೇ? (ಇದರರ್ಥ ಮಲಹೊರುವ ಪದ್ಧತಿ ಜೀವಂತವಾಗಿರಬೇಕೆಂಬುದು ಖಂಡಿತ ಅಲ್ಲ.)
ದೇಶಭಕ್ತಿ, ಮೌಲ್ಯಗಳ ಬಗ್ಗೆ ಪುಂಖಾನುಪುಂಖವಾಗಿ ಬೊಗಳೆ ಬೀಡುವ ವೀರರು ಇಂತಹ ನಿಜ ಸುಧಾರಣೆಗಳೆಡೆಗೆ ಏಕೆ ಗಮನಹರಿಸುವುದಿಲ್ಲ! ಒಂದಂತೂ ನಿಜ, ಈ ಬಗೆಯ ಮೌಲ್ಯಾಂಕವನ್ನು ಪಾರದರ್ಶಕವಾಗಿ ದಾಖಲಿಸುವ ಪ್ರಯತ್ನಗಳಿಗೆ ಮುಂದಾದರೆ ಹಾಗೂ ಅದನ್ನು ಅರ್ಥವ್ಯವಸ್ಥೆಯಲ್ಲಿ ಸರಕು, ಸರಂಜಾಮು, ಸೇವೆಗಳಿಗೆ ವಿನಿಮಯ ಮಾಡಿಕೊಳ್ಳುವುದು ಸಾಧ್ಯವಾದರೆ ರಚನಾತ್ಮಕ ಉತ್ಪಾದಕತೆ ಎನ್ನುವುದು ಹಾಗೂ ಸಾಮುದಾಯಿಕ ಬದ್ಧತೆ ಎನ್ನುವುದು ತಾನೇತಾನಾಗಿ ನಿರ್ಮಾಣವಾಗುತ್ತದೆ. ವ್ಯಕ್ತಿಯ ಅಂತಸ್ತನ್ನು ಆತನ ಬಳಿ ದುರ್ಮಾರ್ಗದಿಂದ ಸೇರಿದ ಸಂಪತ್ತಿನ ಕ್ರೋಢೀಕರಣದಿಂದ ಅಳೆಯುವುದು ತಪ್ಪುತ್ತದೆ. ಬದಲಿಗೆ, ಆತನ ಮೌಲ್ಯವನ್ನು ಗುರುತಿಸುವ ಮೌಲ್ಯಾಂಕಗಳ ಮೂಲಕ ಲಂಚಕೋರರು, ದಲ್ಲಾಳಿಗಳು, ದಗಾಬಾಜಿಗಳು, ಕೊಲೆಗಡುಕರನ್ನು ಆದರಿಸುವ ಬದಲಿಗೆ ನಿಜ ಪುರುಷೋತ್ತಮರನ್ನು ಗೌರವಿಸಿದಂತಾಗುತ್ತದೆ. ಇಂತಹ ಕ್ರಮಗಳು ಜಗತ್ತಿನ ಯಾವುದೇ ದೇಶದ ಭವಿಷ್ಯವನ್ನು ರಚನಾತ್ಮಕವಾಗಿ ಬದಲಾಯಿಸಬಲ್ಲವು.
ಇದನ್ನೂ ಓದಿ | ಅಸಮಾನ ಸಂಪತ್ತಿಗೆ ಕೊಡಲಿ ಪೆಟ್ಟಾಗಲಿ ನೂತನ ತಂತ್ರಜ್ಞಾನ-1
ಹೀಗೆ ಮೌಲ್ಯಾಂಕಗಳನ್ನು ಅರ್ಥವ್ಯವಸ್ಥೆಯಲ್ಲಿ ಪ್ರೋತ್ಸಾಹಿಸುವ ಕೆಲಸಕ್ಕೆ ಸಮುದಾಯಗಳು ಮುಂದಾದರೆ ಕೆಲಸಕ್ಕಾಗಿ ಸರ್ಕಾರಗಳು, ಖಾಸಗಿ ಸಂಸ್ಥೆಗಳತ್ತಲೇ ದಿಟ್ಟಿಸುವ ಬದಲಿಗೆ ಸಮುದಾಯದೊಳಗೆ ಸೇವೆಯನ್ನು ಮಾಡುತ್ತಲೇ ಮೌಲ್ಯಾಂಕಗಳ ಚಲಾವಣೆಯ ಮೂಲಕ ಘನತೆಯ ಬದುಕು ಕಟ್ಟಿಕೊಳ್ಳುವುದು ಸಾಧ್ಯವಾಗುತ್ತದೆ. ಇದು ಹಣದ ಚಲಾವಣೆಯನ್ನು, ಅಗತ್ಯವನ್ನು ಸಂಪೂರ್ಣವಾಗಿ ತಡೆಯುವುದಿಲ್ಲವಾದರೂ, ಹಣಕ್ಕೆ ಪರ್ಯಾಯವಾಗಿ ಮೌಲ್ಯಗಳ ವಿನಿಮಯಕ್ಕೆ ಕಾರಣವಾಗುತ್ತದೆ. ನಿರ್ಗುಣವೂ, ಧನದಾಹಿ, ಅಧಿಕಾರದಾಹಿಗಳ ಪಕ್ಷಪಾತಿಯೂ ಆಗಿರುವ, ಉಪದ್ರವಕಾರಿಯಾಗಿ ಪರಿಣಮಿಸಿರುವ ಹಣದ ಬದಲಿಗೆ ಸುಗುಣ ಸಂಪನ್ನವಾದ ಮೌಲ್ಯಾಂಕಗಳು ಸಮಾಜಕ್ಕೆ ಹೊಸ ದಿಕ್ಕನ್ನು ನೀಡಬಲ್ಲವು. ಇಂದು ಜಗತ್ತಿನ ವಿವಿಧೆಡೆ ಹೀಗೆ ಮೌಲ್ಯಾಂಕಗಳ ಮೂಲಕ ಶ್ರಮ, ಸೇವೆಗಳನ್ನು ಗುರುತಿಸುವ ಹಾಗೂ ಪ್ರತಿಫಲವನ್ನು ನೀಡುವ ವ್ಯವಸ್ಥೆಯ ನಿರ್ಮಾಣಕ್ಕೆ ಹೆಚ್ಚು ಆಸಕ್ತಿ ಕಂಡುಬರುತ್ತಿದೆ. ‘ಸಾಮುದಾಯಿಕ ವಿನಿಮಯ ವ್ಯವಸ್ಥೆ’ (Community Exchange System) ನೀಡುವ ವೇದಿಕೆಗಳು ಅಂತರ್ಜಾಲ ತಾಣದಲ್ಲಿ ಲಭ್ಯವಾಗುತ್ತಿವೆ. ಇದೆಲ್ಲವನ್ನೂ ಹೆಚ್ಚು ಪಾರದರ್ಶಕವಾಗಿಸಲು, ಸುಳ್ಳು ಸೇವೆಗಳನ್ನು ನೀಡುವ ಮೂಲಕ ಸುಳ್ಳು ಮೌಲ್ಯಾಂಕಗಳನ್ನು ಪಡೆಯಲು ಸಾಧ್ಯವಾಗದೆ ಇರುವಂತೆ ಗಮನಿಸುವ ಸಲುವಾಗಿ ‘ಬ್ಲಾಕ್ ಚೈನ್’ (Blockchain) ತಂತ್ರಜ್ಞಾನವನ್ನು ಬಳಸುವ ನಿಟ್ಟಿನಲ್ಲಿ ಅನೇಕ ಸಮಾನಮನಸ್ಕ ಸಂಘಟನೆಗಳು ಕೆಲಸ ಮಾಡುತ್ತಿವೆ. ಬ್ಲಾಕ್ ಚೈನ್ ತಂತ್ರಾಂಶವೆನ್ನುವುದು, ಯಾವುದೇ ಬಗೆಯ ವ್ಯವಹಾರದ ವಿನಿಮಯಗಳನ್ನು ಸಂಬಂಧಪಟ್ಟ ಎಲ್ಲರಿಗೂ ಏಕಕಾಲದಲ್ಲಿಯೇ ಲಭ್ಯವಿರುವಂತೆ ಮಾಡುವ ವಿಕೇಂದ್ರೀಕೃತಗೊಂಡ ಸಾರ್ವಜನಿಕ ಡಿಜಿಟಲ್ ದಾಖಲಾತಿ ನಿರ್ವಹಣೆ ವ್ಯವಸ್ಥೆಯಾಗಿದೆ. ಇಲ್ಲಿ ಲೆಕ್ಕಗಳನ್ನು, ವಹಿವಾಟುಗಳನ್ನು, ಸರಕಿನ ಚಲನೆಯನ್ನು ಒಬ್ಬರು ಮತ್ತೊಬ್ಬರ ಗಮನಕ್ಕೆ ಬರದಂತೆ ತಿದ್ದುವುದು, ಬದಲಿಸುವುದು ಸಾಧ್ಯವಿರುವುದಿಲ್ಲ. ಇದು ಬಹುಮುಖ್ಯವಾಗಿ ದಲ್ಲಾಳಿಗಳಿಗೆ, ಅಕ್ರಮ ದಾಸ್ತಾನುಗಾರರಿಗೆ, ಬೇಡಿಕೆಯನ್ನು ಹೆಚ್ಚಿಸುವ, ಕುಸಿಯುವಂತೆ ಮಾಡುವ ಕಪ್ಪುಮಾರುಕಟ್ಟೆಯ ಕಲಿಗಳಿಗೆ ಕೊಡಲಿ ಪೆಟ್ಟು ನೀಡಲಿದೆ. ಉತ್ಪಾದಕರು, ವಿತರಕರು, ಮಾರಾಟಗಾರರು, ಗ್ರಾಹಕರು ಹೀಗೆ ಎಲ್ಲರೂ ಒಂದು ಉತ್ಪನ್ನದಿಂದ ಯಾವ ಯಾವ ಹಂತದಲ್ಲಿ ಏನೇನು ಲಾಭ ಪಡೆದರು ಎನ್ನುವುದನ್ನು ನಿರ್ದಿಷ್ಟವಾಗಿ ಈ ತಂತ್ರಜ್ಞಾನ ಆಧರಿಸಿದ ವೇದಿಕೆಗಳು ತಿಳಿಸಲಿವೆ. ಇದು ಮುಂದಿನ ದಿನಗಳಲ್ಲಿ ಉತ್ಪಾದಕ ಹಾಗೂ ಗ್ರಾಹಕರ ನಡುವೆ ಗಟ್ಟಿ ಸೇತುವೆಯಾಗಿ ಪರಿಣಮಿಸಲಿದ್ದು ದಲ್ಲಾಳಿಗಳನ್ನು ನಿಧಾನವಾಗಿ ಬದಿಗೆ ಸರಿಸುವ ಮೂಲಕ ಈ ಇಬ್ಬರಿಗೂ ಅನುಕೂಲಕರವಾಗಿ ಪರಿಣಮಿಸಲಿದೆ. ಇದಾಗಲೇ ಬ್ಲಾಕ್‌ಚೈನ್ ಆಧರಿಸಿ ಪರ್ಯಾಯ ಅರ್ಥವ್ಯವಸ್ಥೆಯನ್ನು ಕಟ್ಟುವ ‘ಹಾಲೋಚೈನ್’ (Halochain) ರೀತಿಯ ವೇದಿಕೆಗಳು ಸಿದ್ಧಗೊಂಡಿವೆ. ತಂತ್ರಜ್ಞಾನವನ್ನು ಆಧುನಿಕ ಸಮಾಜ, ನವನಾಗರಿಕತೆ ಹೀಗೆ ಬಳಸಿದಾಗ ಮಾತ್ರವೇ ಮನುಕುಲದ ನೈಜ ಏಳಿಗೆ ಸಾಧ್ಯ.