ಇಲೆಕ್ಟ್ರಿಕ್‌ ವಾಹನಗಳ ಚಾರ್ಜಿಂಗ್‌ ಕೇಂದ್ರ ಸ್ಥಾಪಿಸಲು ಲೈಸೆನ್ಸ್‌ ಅಗತ್ಯವಿಲ್ಲ!

ಪೆಟ್ರೋಲ್‌, ಡೀಸೆಲ್ ಬೆಲೆ ಏರಿಕೆಯಿಂದ ಬೇಸತ್ತಿರುವ ಜನರು ಎಲೆಕ್ಟ್ರಿಕ್‌ ವಾಹನಗಳ ಖರೀದಿಸುವತ್ತ ಮುಖ ಮಾಡಿದ್ದಾರೆ. ಇಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ನಾಲ್ಕು ತಾಸು ಚಾರ್ಜ್‌ ಮಾಡಿದರೆ ಸುಮಾರು 80-120 ಕಿ.ಮೀವರೆಗೆ ಸಲೀಸಾಗಿ ಓಡಿಸಬಹುದು. ಪೆಟ್ರೋಲ್‌ ಖರ್ಚಿನ ಶೇ.70ರಷ್ಟು ಹಣ ಉಳಿಕೆಯಾಗುವುದಲ್ಲದೆ ಇಲೆಕ್ಟ್ರಿಕ್ ವಾಹನಗಳ ನಿರ್ವಹಣೆ ವೆಚ್ಚವೂ ಕಡಿಮೆ.

ಹಣ ಉಳಿಸುವ ಇಂತಹ ಅವಕಾಶವಿದ್ದರೂ ಜನರು ಇಲೆಕ್ಟ್ರಿಕ್‌ ವಾಹನಗಳನ್ನು ಖರೀದಿಸುವುದಕ್ಕೆ ಹಿಂಜರಿಯುತ್ತಿದ್ದಾರೆ. ಕಾರಣ, ಸಾರ್ವಜನಿಕ ಸ್ಥಳಗಳಲ್ಲಿ ಚಾರ್ಜಿಂಗ್‌ ಪಾಯಿಂಟ್‌ಗಳು ಇಲ್ಲದೇ ಇರುವುದು. ಈ ಸಮಸ್ಯೆಗೆ ಪರಿಹಾರವಾಗಿ ಇಲೆಕ್ಟ್ರಿಕ್‌ ವಾಹನಗಳಿಗೆ ಹೆಚ್ಚಿನ ಚಾರ್ಜಿಂಗ್‌ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿ ಕೇಂದ್ರ ಇಂಧನ ಸಚಿವಾಲಯವು ನಿಯಮಗಳನ್ನು ಸರಳೀಕರಿಸಿದ್ದು ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಪರವಾನಗಿ ಇಲ್ಲದೇ ಸಾರ್ವಜನಿಕ ಬಳಕೆಗೆ ಜಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಬಹುದು. ಅದರೆ ತಾಂತ್ರಿಕ ಸುರಕ್ಷತೆ, ಕಾರ್ಯಕ್ಷಮತೆಯ ಹಾಗೂ ಗುಣಮಟ್ಟದ ವಿಷಯದಲ್ಲಿ ನಿಯಮಗಳನ್ನು ಅನುಸರಿಸಬೇಕು ಎಂದು ನಿರ್ದೇಶಿಸಲಾಗಿದೆ. ಇಲೆಕ್ಟ್ರಿಕ್‌ ವಾಹನಗಳನ್ನು ಚಾರ್ಜ್ ಮಾಡಲು ಬಳಸುವ ವಿದ್ಯುತ್‌ಗೆ ಮನೆ ಬಳಕೆಗೆ ಪಾವತಿಸುವ ಶುಲ್ಕವೇ ಅನ್ವಯವಾಗಲಿದೆ.

‘ಸಾರ್ವಜನಿಕ ಸಂಸ್ಥೆ ಅಥವಾ ಸರ್ಕಾರದ ಬಳಿ ಲಭ್ಯವಿರುವ ಜಾಗವನ್ನು ಚಾರ್ಜಿಂಗ್ ಕೇಂದ್ರ ಸ್ಥಾಪನೆಗೆ ಆದಾಯ ಹಂಚಿಕೆಯ ಆಧಾರದ ಮೇಲೆ ನೀಡಬಹುದು. ಚಾರ್ಜಿಂಗ್ ಕೇಂದ್ರ ಸ್ಥಾಪಿಸುವ ಕಂಪನಿಯು ಜಾಗದ ಮಾಲಿಕರಿಗೆ ಪ್ರತಿ ಕಿಲೋವ್ಯಾಟ್ಗೆ 1 ರೂಗಳಂತೆ ಹಣವನ್ನು ಪಾವತಿಸಬೇಕು. ಈ ಹಂಚಿಕೆ ಆದಾಯವನ್ನು ಮೂರು ತಿಂಗಳಿಗೊಮ್ಮೆ ಪಾವತಿಸಬೇಕು. ಒಪ್ಪಂದವನ್ನು ಆರಂಭಿಕ ಹಂತದಲ್ಲಿ 10 ವರ್ಷಗಳ ಅವಧಿಗೆ ಮಾಡಿಕೊಳ್ಳಬಹುದಾಗಿದೆ.

‘ಜನವರಿ 14, 2022ರಂದು ಇಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡುವ ಮೂಲಸೌಕರ್ಯಕ್ಕಾಗಿ ಪರಿಷ್ಕೃತ ಮಾರ್ಗಸೂಚಿ ಹಾಗೂ ಮಾನದಂಡಗಳನ್ನು ಕೇಂದ್ರ ಇಂಧನ ಸಚಿವಾಲಯ ಪ್ರಕಟಿಸಿದೆ. ಮಾರ್ಗಸೂಚಿಯ ಸಂಪೂರ್ಣ ವಿವರಗಳನ್ನು https://powermin.gov.in/en/content/electric-vehicle ನಿಂದ ಪಡೆಯಬಹುದು.

ಈ ಮಾರ್ಗಸೂಚಿಗಳು ಸಮಗ್ರವಾಗಿದ್ದು, ವೈಯಕ್ತಿಕ ಮಾಲಿಕರು ಮತ್ತು ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ಗಳ ನಿರ್ಮಾಣವು ನಿಬಂಧನೆಗಳನ್ನು ಒಳಗೊಂಡಿದೆ’ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.