ಸೌರವ್ಯೂಹದಾಚೆಗೆ ಇರುವ ಗ್ರಹವನ್ನು ಗುರುತಿಸಿದ ಕಾರಣಕ್ಕೆ ಡಿಡಿಯರ್ ಕ್ವೆಲಾಜ್ ಅವರೊಂದಿಗೆ ಇತ್ತೀಚೆಗೆ ನೊಬೆಲ್ ಪುರಸ್ಕಾರಕ್ಕೆ ಭಾಜನರಾದ ಮೈಕೆಲ್ ಮೇಯರ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ! ಭೂಮಿಗೆ ಪರ್ಯಾಯವಾದ ಗ್ರಹವೊಂದು ಕಂಡುಕೊಳ್ಳುವ ಉತ್ಸಾಹದ ಪ್ರಯತ್ನ ಒಂದೆಡೆ ನಡೆಯುತ್ತಿದ್ದರೆ, ಮೇಯರ್ ಅವರ ಹೇಳಿಕೆ ನಮ್ಮನ್ನು ಆಲೋಚನೆಗೆ ಹಚ್ಚುವಂತಿದೆ

ಜಗತ್ತಿನ ಕೆಲವು ದೈತ್ಯ ಟೆಕ್ ಕಂಪನಿಗಳು, ಚಂದ್ರನಿಗೆ ಎಲಿವೇಟರ್ ಜೋಡಿಸುವ ಯೋಚನೆಯಲ್ಲಿದ್ದರೆ, ಇನ್ನು ಕೆಲವು ಕಂಪನಿಗಳು ಕ್ಷೀರಪಥದಾಚೆಗೆ, ಸೌರಮಂಡಲದಂತಹ ವ್ಯವಸ್ಥೆ ಇರಬಹುದು, ಅಲ್ಲೆಲ್ಲಾದರೂ ಭೂಮಿಯನ್ನು ಹೋಲುವ ಗ್ರಹ ಸಿಗಬಹುದು ಎಂದು ಹುಡುಕಾಡಲು ಹೊರಟಿದ್ದಾರೆ. ಹಾಗೇನಾದರೂ ಸಿಕ್ಕರೆ, ಅಲ್ಲಿಗೆ ಹೋಗಿಬಿಡಬಹುದು ಎಂಬ ಸರಳ ತರ್ಕ. ಆದರೆ ಹೀಗಾಗಲೂ ಸಾಧ್ಯವೇ?
ಸೌರವ್ಯೂದಾಚೆಗೆ ಮೊದಲ ಗ್ರಹವನ್ನು ಗುರುತಿಸಿ, ಇತ್ತೀಚೆಗೆ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಪಡೆದ ಮೈಕೆಲ್ ಮೇಯರ್ ‘ಹಾಗೆಲ್ಲಾ ಆಗಲು ಸಾಧ್ಯವೇ ಇಲ್ಲ. ಅದೊಂದು ಹುಚ್ಚು ಆಲೋಚನೆ” ಎಂದಿದ್ದಾರೆ!
ಮ್ಯಾಡ್ರಿಡ್‌ನಲ್ಲಿ ನಡೆಯುತ್ತಿದ್ದ ವಿಜ್ಞಾನ ಸಮಾವೇಶವೊಂದರಲ್ಲಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ, ಮೈಕೆಲ್ ಮೇಯರ್, ಮನುಷ್ಯ ಭೂಮಿಯಾಚೆಗೆ ಹೋಗಿ ವಲಸೆ ಹೋಗುವುದೇ ಅವಾಸ್ತಾವಿಕದ ಕಲ್ಪನೆ ಎಂದು ಹೇಳಿದ್ದಾರೆ.
ಅವರ ತರ್ಕವಿಷ್ಟೇ. ಸೌರವ್ಯೂಹದಾಚೆಗೆ ಮನುಷ್ಯ ವಲಸೆ ಹೋಗಬೇಕೆಂದಾದರೆ ಲಕ್ಷಾಂತರ ವರ್ಷ ಪ್ರಯಾಣ ಮಾಡಬೇಕಾಗುತ್ತದೆ. ಇದು ಸಾಧ್ಯವೇ? ನಾವು ಕಂಡುಕೊಂಡಿರುವ ಈ ಗ್ರಹಗಳು ನಮ್ಮ ಕಲ್ಪನೆಗೂ ನಿಲುಕದಷ್ಟೂ ದೂರ ಇವೆ ಎನ್ನುತ್ತಾರೆ. ಒಂದು ವೇಳೆ ಈ ವಿಷಯದಲ್ಲಿ ಆಶಾವಾದಿಗಳಾಗಿದ್ದರೆ, ಹಾಗೇ ಮನುಷ್ಯ ಜೀವಿಸಬಹುದಾದ ಗ್ರಹಗಳು ಹತ್ತು ಹನ್ನೆರಡು ಜ್ಯೋತಿರ್ವರ್ಷಗಳಷ್ಟು ದೂರವಿದ್ದರೆ, ಅದೂ ಅತಿ ದೂರವಲ್ಲವೆಂದು ಭಾವಿಸಬಹುದು’ ಎಂದು ಹೇಳಿದ್ದಾರೆ. ಆದರೆ ಅವರು ಈಗಿರುವ ಭೂಮಿಯನ್ನೇ ಹೇಗೆ ಉಳಿಸಿಕೊಳ್ಳುತ್ತೇವೆ ಎಂಬುದು ನಮ್ಮ ಆದ್ಯತೆಯಾಗಬೇಕು ಎಂದು ಎಚ್ಚರಿಸಿದ್ದಾರೆ.
ನಮ್ಮ ಭೂಮಿಯನ್ನು ಜೋಪಾನ ಮಾಡಿಕೊಳ್ಳಬೇಕಾಗಿದೆ. ಇದು ಸುಂದರವೂ ಇಂದಿಗೂ ಮನುಷ್ಯನ ಸುಗಮವಾಗಿ ಜೀವಿಸಬಹುದಾಗಿದೆ. ಇದನ್ನು ಕಾಪಾಡಿಕೊಳ್ಳುವತ್ತ ನಮ್ಮ ಪ್ರಯತ್ನವಿರಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಮೇಯರ್ ಮತ್ತು ಕ್ವೆಲಾಜ್ 1995ರಲ್ಲಿ ದಕ್ಷಿಣ ಫ್ರಾನ್ಸ್‌ನಲ್ಲಿರುವ ಹಾಟೆ ಪ್ರೊವೆನ್ಸ್ ಅಬ್ಸರ್ವೇಟರಿಯಲ್ಲಿ ಕೂತು 51ಪೆಗಾಸಿ ಬಿ ಎಂಬ ಗ್ರಹವನ್ನು ಗುರುತಿಸಿದರು. ನಮ್ಮ ಗುರುಗ್ರಹವನ್ನು ಹೋಲುವ ಇದು ಅನಿಲದಿಂದ ತುಂಬಿದ ಗೋಳ. ಅಲ್ಲಿಂದ ಇಲ್ಲಿಯವರೆಗೆ ಸುಮಾರು ನಾಲ್ಕು ಸಾವಿರ ಸೌರವ್ಯೂಹದಾಚೆಗಿನ ಕಾಯಗಳನ್ನು ಗುರುತಿಸಿದ್ದು, ಇದರಲ್ಲಿ 1900 ಗ್ರಹಗಳೆಂದು ಗುರುತಿಸಲಾಗಿದೆ.
‘ಭೂಮಿಯ ಮೇಲೆ ಇನ್ನು ಬದುಕಲು ಸಾಧ್ಯವಿಲ್ಲ, ನಾವು ವಾಸಿಸಬಹುದಾದ ಇನ್ನೊಂದು ಗ್ರಹಕ್ಕೆ ಹೋಗೋಣ’ ಎಂಬ ಹೇಳಿಕೆಯನ್ನೇ ನಾವು ಅಳಿಸಿ ಹಾಕಬೇಕಾಗಿದೆ ಎಂಬುದು ಮೇಯರ್ ಅವರ ಅಭಿಪ್ರಾಯ.
ಬಹಳ ವರ್ಷಗಳಿಂದ ವಿಶ್ವದಲ್ಲಿ ನಮ್ಮಂತಹದ್ದೇ ಜಗತ್ತುಗಳು ಇರಬಹುದೆ ಎಂಬ ತಾತ್ವಿಕ ಪ್ರಶ್ನೆ ಬಹಳ ಕಾಲದಿಂದ ಚರ್ಚೆಯಲ್ಲಿದೆ. ಈ ಪ್ರಶ್ನೆಯಿಂದ ಪ್ರೇರಿತದ ಮೇಯರ್ ಮತ್ತು ಕ್ವೆಲಾಜ್ ಸತತ ಅಧ್ಯಯನ ವೀಕ್ಷಣೆಯಿಂದ ಭೂಮಿಯನ್ನು ಹೋಲುವ ಗ್ರಹವನ್ನು ಅಧ್ಯಯನ ಮಾಡಲು ಸಾಧ್ಯವೆಂಬುದನ್ನು ಕಂಡುಕೊಂಡರು.
ಕೋಟ್ಯಂತರ ವರ್ಷಗಳಷ್ಟು ದೂರದಲ್ಲಿರುವ ಈ ಗ್ರಹಗಳಲ್ಲಿ ಜೀವವಿದೆಯೇ ಎಂಬುದನ್ನು ಕಂಡುಕೊಳ್ಳಬೇಕಾದ್ದು ಮುಂಬರುವ ತಲೆಮಾರಿನ ಜವಾಬ್ದಾರಿ. ಇದು ಸಾಧ್ಯವಾಗುವುದು ಜೀವವಿದೆಯೇ ಎಂದು ಪತ್ತೆ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವ ಮೂಲಕ ಸಾಧ್ಯ ಎಂದು ಮೇಯರ್ ಹೇಳಿದ್ದಾರೆ.
ಇದನ್ನೂ ಓದಿ |ಸೌರವ್ಯೂಹಾದಚೆಗಿನ ಗ್ರಹಗಳ ಪತ್ತೆ, ವಿಶ್ವದ ವಿಕಾಸದ ಹಾದಿ ಗುರುತಿಸಿದ ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರ ನೊಬೆಲ್
ಹೊಸತನ್ನು ಕಂಡುಕೊಳ್ಳುವ ಅತ್ಯುತ್ಸಾಹ, ಅಗಾಧ ಕಲ್ಪನೆ, ತಂತ್ರಜ್ಞಾನದ ಮೇಲಿನ ಅತಿಯಾದ ನಂಬಿಕೆ ಮನುಕುಲದ ಅಗಾಧ ಶಕ್ತಿಯ ಬಗ್ಗೆ ಹೆಮ್ಮೆ ಹುಟ್ಟಿಸುತ್ತಾದರೂ, ಇರುವ ಭೂಮಿಯನ್ನು ಉಳಿಸುವ ಹೊಣೆಗಾರಿಕೆ, ಆ ಎಚ್ಚರಿಕೆಯ ಅಗತ್ಯವೂ ಇದೆ ಎಂಬುದನ್ನು ಮೇಯರ್ ಅವರ ನಿಲುವು ಸ್ಪಷ್ಟವಾಗಿ ಧ್ವನಿಸುತ್ತದೆ.
ಹಣ, ಜ್ಞಾನ ಮತ್ತು ತಂತ್ರಜ್ಞಾನ ಶಕ್ತಿಯನ್ನು ಹೊಂದಿರುವ ಅನೇಕ ಸಿರಿವಂತರು ಈ ರೀತಿಯ ವೈಜ್ಞಾನಿಕ ಸಾಧನೆಯಲ್ಲಿ ಮೇಲುಗೈ ಸಾಧಿಸುವ ಮಹತ್ವಕಾಂಕ್ಷೆಯಿಂದ ದುಡಿಯುತ್ತಿರುವುದು, ಮನುಕುಲಕ್ಕೆ ಯಾವ ರೀತಿ ನೆರವಾಗಬಲ್ಲದು ಎಂಬುದು ಅಸ್ಪಷ್ಟ. ಆದರೆ ಇರುವುದನ್ನು ಉಳಿಸಿಕೊಳ್ಳುವ ನಿಟ್ಟಿನ ಪ್ರಯತ್ನ ಇಡೀ ಮನುಕುಲ ಮತ್ತು ಭೂಮಿಯನ್ನು ಹೆಚ್ಚು ಹೆಚ್ಚು ಸುಸ್ಥಿರವಾಗಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.