ಒಮ್ಮೆ ಚಾರ್ಜ್ ಮಾಡಿದರೆ 400 ಕಿ.ಮೀ. ಓಡುವ ಎಲೆಕ್ಟ್ರಿಕ್ ವಾಹನಗಳು; ಭಾರತದಲ್ಲೂ ಕ್ಲಿಕ್ ಆಗುವವೆ?

30 ನಿಮಿಷ ಚಾರ್ಜ್ ಮಾಡಿದರೆ 250 ಕಿ.ಮೀ. ಓಡಿಸಬಹುದು. ಭಾರತಕ್ಕೆ ಬರಲಿದೆ, ಆದರೆ ಕೈಗೆಟುವುಕುವುದು ಕಷ್ಟ! ಬರೀ 200 ಬಿಡಿಭಾಗಗಳಿದ್ದರೆ ಸಾಕು, ಎಲೆಕ್ಟ್ರಿಕ್ ಕಾರು ಸಿದ್ಧ

  • ಸುಶಾಂತ್ ಬನಾರಿ

ಮೊನ್ನೆ ಮೊನ್ನೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ 2020ರ ವೇಳೆಗೆ ಯೂರೋ 6 ಕಡ್ಡಾಯ ಅಳವಡಿಕೆ ಜತೆಗೆ ಸಾಂಪ್ರದಾಯಿಕ ಇಂಧನ ವಾಹನ ಮಾರಾಟಕ್ಕಿರುವ 2030ರ ಗಡುವನ್ನೂ ನೆನಪಿಸಿದರು. ಆದರೆ ಪೆಟ್ರೋಲ್ ಡೀಸಿಲ್ ವಾಹನ ತಯಾರಿಯಿಂದ ಬ್ಯಾಟರಿ ಚಾಲಿತ ವಾಹನ ತಯಾರಿಗೆ ಉದ್ಯಮ ಒಗ್ಗಿಕೊಳ್ಳುವುದು ಸಲೀಸೇ?

ಬಹುಶಃ ಅಂದುಕೊಂಡದ್ದಕ್ಕಿಂತ ಸಲೀಸು. ಉದ್ಯಮ ಈಗಾಗಲೇ ಬಹುತೇಕ ತಯಾರಿದೆ ಎಂಬುದಕ್ಕೆ ಸುಝುಕಿ ಮುಖ್ಯಸ್ಥರ ಇತ್ತೀಚಿನ ಹೇಳಿಕೆ ಸಾಕ್ಷಿ. ತಂತ್ರಜ್ಞಾನದ ನೆಲೆಯಲ್ಲಿ ಸುಝುಕಿ ಇಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ತಯಾರಿದೆ. ಗ್ರಾಹಕರಿಂದ ಯಾವಾಗ ಬೇಡಿಕೆ‌ ಆರಂಭವಾಗುತ್ತದೋ ಆಗ ನಾವೂ ಉತ್ಪನ್ನ ತಯಾರಿಸಿರುತ್ತೇವೆ ಎಂದು ಹೇಳಿದ್ದಾರೆ.

ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 400 ಕಿ.ಮೀ. ಸಾಗಬಹುದಾದರೆ ಅದು ಹೆಚ್ಚಿನವರ ಅಗತ್ಯ ತೀರಿಸುತ್ತದೆ. ಈ ನಿಟ್ಟಿನಲ್ಲಿ ಅಮೆರಿಕದ ಟೆಸ್ಲಾ ಸೂಕ್ತ ಕಾರುಗಳನ್ನು ತಯಾರಿಸಿದೆ. ಇಂಜಿನ್ ಇಲ್ಲದೆ ಪ್ರತಿ ಚಕ್ರದ ಬಳಿಯೂ ಇಲೆಕ್ಟ್ರಿಕ್ ಮೋಟಾರ್ ಇರುವುದರಿಂದ ಪವರ್ ಅತ್ಯಧಿಕ. ಗೇರ್ ಬಾಕ್ಸ್‌ನ ಅಗತ್ಯ ಇಲ್ಲದ ಕಾರಣ ಆರಂಭದಿಂದ ಟಾಪ್ ಸ್ಪೀಡ್ ವರೆಗೆ ಯಾವುದೇ ಹಂತದಲ್ಲೂ ಅತ್ಯಧಿಕ ಟಾರ್ಕ್ ಲಭ್ಯವಿರುತ್ತದೆ. ಟೆಸ್ಲಾ ಕಾರುಗಳು ಸುಮಾರು 30 ನಿಮಿಷ ಚಾರ್ಜ್ ಮಾಡಿದಲ್ಲಿ 250 ಕಿ.ಮೀ ಪ್ರಯಾಣಿಸಬಲ್ಲಷ್ಟು ಚಾರ್ಜ್ ಆಗುತ್ತದೆ, ಸುಮಾರು 70ನಿಮಿಷಗಳಲ್ಲಿ‌ ಪೂರ್ತಿ ಚಾರ್ಜ್ ಆಗುತ್ತದೆ. ಅಂದರೆ ನಿತ್ಯ ಆಫೀಸಿಗೆ ಹೋಗುವವರು ದಿನವೂ ಚಾರ್ಜಿಗಿಡುವ ಅಗತ್ಯವಿಲ್ಲ.

ಬ್ಯಾಟರಿ ವಿಷಯದಲ್ಲಿ ಆ ಮಟ್ಟಿಗೆ ತಂತ್ರಜ್ಞಾನ ಮುಂದುವರಿದಿದೆ. ಆದರೆ ಸದ್ಯ ವೆಚ್ಚದ ಅಧಿಕವಷ್ಟೇ. ಮುಂದಿನ ವರ್ಷ ಭಾರತದಲ್ಲೂ ಲಭ್ಯವಾಗುವ ಟೆಸ್ಲಾದ ಕಿಮ್ಮತ್ತು ಏನಿದ್ದರೂ 1 ಕೋಟಿ ರೂಪಾಯಿ ಮೇಲಿನ ಮಾತು.

ಆದರೆ ವರ್ಷದಿಂದ ವರ್ಷಕ್ಕೆ ಬ್ಯಾಟರಿ ಬೆಲೆ ಗಣನೀಯ ಪ್ರಮಾಣದಲ್ಲಿ ಕುಗ್ಗುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಶೇ.60ರಷ್ಟು ಇಳಿಕೆಯಾಗಿದೆ. ಮುಂದುನ ಐದು ವರ್ಷಗಳಲ್ಲಿ ಇದು ಸದ್ಯದ ದರಕ್ಕಿಂತ ಶೇ. 60-80ಇಳಿಕೆಯಾಗುವ ನಿರೀಕ್ಷೆಯಿದೆ. ದುಬಾರಿಯಾಗಿದ್ದ ಸ್ಮಾರ್ಟ್ ಫೋನ್, ಸೋಲಾರ್ ಫಲಕಗಳ ವಿಚಾರದಲ್ಲೂ ಇದೇ ಆಗಿದ್ದಲ್ಲವೇ?

ತಯಾರಿಯಲ್ಲಿ ವ್ಯತ್ಯಾಸ

ಸಾಂಪ್ರದಾಯಿಕ ಇಂಜಿನ್ ತಯಾರಿಗೆ ಸುಮಾರು 1400 ಬಿಡಿಭಾಗ ಬೇಕಾದರೆ ಇಲೆಕ್ಟ್ರಿಕ್ ಕಾರಿನ ಮೋಟಾರ್‌ಗೆ 200 ಬಿಡಿಭಾಗ ಸಾಕು. ಅಂದರೆ ವಾಹನೋದ್ಯಮ ಮತ್ತು ಅದಕ್ಕೆ ಹೊಂದಿಕೊಂಡ ಕ್ಷೇತ್ರಗಳಿಗೆ ಭಾರಿ ಹೊಡೆತ ಎಂದು‌ ಮೇಲ್ನೋಟಕ್ಕೆ ಅನಿಸುತ್ತದೆ. ಇವತ್ತು ಜಾಗತಿಕ ಮಟ್ಟದಲ್ಲಿ ವಹಿವಾಟು ನಡೆಸುವ ವಾಹನ ಕಂಪನಿಗಳು ಭಾರತದಲ್ಲಿ ತಯಾರಿ ಘಟಕ ಹೊಂದಿವೆ. ಮಸರ್ಡೀಸ್‌ನ ಬಹುತೇಕ ವಾಹನಗಳ ಒಳಗಿರುವುದು ಪುಣೆಯಲ್ಲಿ ತಯಾರಾಗುವ ಎಂಜಿನ್‌ಗಳು.

ಸುಝುಕಿ, ಹ್ಯುಂಡೈ, ಹೋಂಡಾ, ಟೊಯೋಟಾ, ಫೋಕ್ಸ್‌ವ್ಯಾಗನ್‌‌ ಅಷ್ಟೂ ಕಂಪನಿಗಳು ಭಾರತದಲ್ಲಿ ತಯಾರಿಯಲ್ಲಿ ತೊಡಗಿವೆ ಎಂದರೆ ಇವಕ್ಕೆ ಪೂರೈಕೆ ಮಾಡುವ ಮಾರುಕಟ್ಟೆಯೂ ದೊಡ್ಡದೇ ಇದೆ. ಇವು ಹೇಗೆ ಪರಿವರ್ತನೆಯಾಗುತ್ತವೆ ಎಂಬುದನ್ನು ಕಾಲ ಹೇಳುತ್ತದೆ. ಒಂದು ಕಾಲದಲ್ಲಿ ಬೆಂಗಳೂರಿನ ಎಸ್.ಪಿ.ರೋಡಿನ ತುಂಬಾ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಮಳಿಗೆಗಳಿದ್ದವು. ಇವತ್ತು ಅದೇ ರಸ್ತೆಯ ತುಂಬಾ ಕಂಪ್ಯೂಟರು, ಮೊಬೈಲ್ ಶಾಪು.. ಒಂದು ಕಾಲದಲ್ಲಿ ನೀವು ಪೇಪರ್ ಮೇಲೆ ಅಚ್ಚಾಗಿದ್ದನ್ನು ಓದುತ್ತಿದ್ದಿರಿ. ಇವತ್ತು ಈ ಸಾಲುಗಳನ್ನು ಡಿಜಿಟಲ್ ಪರದೆ ಮೇಲೆ ಓದುತ್ತಿದ್ದೀರಿ. ಇತ್ತೀಚೆಗೆ ನಿಮಗೂ ಇದೇ ಸುಲಭವೆನಿಸಲು ಶುರುವಾಗಿದೆಲ್ಲವೇ?

ಆದ್ರೆ ಎಲ್ಲಾ ಕಡೆ ಚಾರ್ಜ್ ಮಾಡೋದು..?

ಇವತ್ತು ಅಲ್ಲಲ್ಲಿ ಬಂಕ್‌ಗಳಿವೆ. ಅಲ್ಲಿಗೆ ಹೋಗಿ ಮೂರು ನಾಲ್ಕು ನಿಮಿಷಗಳಲ್ಲಿ ಟ್ಯಾಂಕ್ ಫುಲ್ ಮಾಡಬಹುದು. ಮೇಲ್ನೋಟಕ್ಕೆ ಇದೊಂದು ಸರಳವಾದ ವಿಚಾರದಂತೆ ಕಂಡರೂ ಅದರ ಹಿಂದೆ ಬೃಹತ್ ಮೂಲಸೌಕರ್ಯ ವ್ಯವಸ್ಥೆ ಕೆಲಸ ಮಾಡುವುದು ಗಮನಕ್ಕೆ ಬರುವುದಿಲ್ಲ.

ಭೂಗರ್ಭದಿಂದ ತೆಗೆದ ತೈಲ ಆಮದು ಮಾಡಿ ಶುದ್ಧೀಕರಿಸಿ ಮತ್ತೆ ಅದನ್ನು ಮೈಲುಗಟ್ಟಲೆ ಸಾಗಿಸುವ ವ್ಯವಸ್ಥೆಗೆ ಹೋಲಿಸಿದರೆ ಅಲ್ಲಲ್ಲಿ ಖಾಸಗಿ ಚಾರ್ಜಿಂಗ್ ಸ್ಟೇಶನ್ ಅಳವಡಿಕೆ ತೀರಾ ಸುಲಭ ಸಾದ್ಯ. ಹಾಗಾಗಿ ಮುಂದಿನ ದಿನಗಳಲ್ಲಿ ಎಟಿಎಂಗಳಂತೆ ಚಾರ್ಜಿಂಗ್ ಸ್ಟೇಶನ್‌ಗಳು ಬರಬಹುದು.

ಗ್ರಾಹಕನ ಮೇಲಿನ ಪರಿಣಾಮ

ಬಹುತೇಕ 2021ರ ನಂತರ ಸದ್ಯದ ಕಾರುಗಳ ಜತೆ ಬೆಲೆಯಲ್ಲಿ ಪೈಪೋಟಿ ನಡೆಸುವ ಹಂತಕ್ಕೆ ಬ್ಯಾಟರಿ ಕಾರುಗಳು ಬರುತ್ತವೆ. ಈಗಾಗಲೇ ಬ್ಯಾಟರಿ ಚಾಲಿತ 15 ಬಸ್ಸುಗಳು ಹಿಮಾಚಲ ಪ್ರದೇಶದಲ್ಲಿ ರಸ್ತೆಗಿಳಿದಿವೆ. ಚೈನಾದ ಬಿವೈಡಿ ಕಂಪನಿಯ ಬಸ್ಸುಗಳನ್ನು ಹಿಮಾಚಲ ಸರಕಾರ ಖರೀದಿಸಿದೆ. ಒಂದು ಚಾರ್ಜ್‌ಗೆ ಸುಮಾರು 250 ಕಿ.ಮೀ. ಚಲಿಸುವ ಸಾಮರ್ಥ್ಯವಿರುವ ಕಾರಣ ಸಿಟಿ ಬಸ್ಸುಗಳಾಗಿ ಬಳಸಲು ಇವು ಹೇಳಿ ಮಾಡಿಸಿದ್ದು. ಬಿಎಂಟಿಸಿಯೂ ಬ್ಯಾಟರಿ ಚಾಲಿತ ಬಸ್ಸುಗಳನ್ನು ರಸ್ತೆಗಿಳಿಸಬೇಕಾದ ದಿನ ಬಹುಬೇಗ ಬರಲಿದೆ.

ಕಾರುಗಳ ಬೆಲೆ ಇಳಿಕೆಯಾಗಲು ಆರಂಭವಾದಂತೆ ಗ್ರಾಹಕರಿಂದ ಬೇಡಿಕೆ ಹೆಚ್ಚುತ್ತದೆ. ಇದು ಮಂಗ ತಕ್ಕಡಿಯಲ್ಲಿ ಬೆಣ್ಣೆ ತೂಗಿದ ಪರಿಣಾಮ ಉಂಟುಮಾಡಿ ಕ್ಷಿಪ್ರಗತಿಯಲ್ಲಿ ಬೆಲೆ ಇಳಿಕೆಗೆ ಕಾರಣವಾಗುತ್ತದೆ.

ಜತೆಗೆ ಬ್ಯಾಟರಿ ಕಾರುಗಳಲ್ಲಿ ಸಾಧ್ಯತೆಗಳು ಅಪಾರ. ಎಂಜಿನ್ನೇ ಇಲ್ಲದ ಕಾರಣ ಕಾರುಗಳ ಗಾತ್ರ ಕುಗ್ಗಬಹುದು. ಆದರೆ ತಾಂತ್ರಿಕತೆಯ ಮಟ್ಟಿಗೆ ಹೇಳುವುದಾದರೆ ಇವತ್ತಿನ ದಿನಗಳಲ್ಲಿ ನಿಂತು ನೋಡುವಾಗ ನಮ್ಮ ಕಲ್ಪನೆಗೂ ನಿಲುಕದ ಅನುಕೂಲಗಳು ಬ್ಯಾಟರಿ ಕಾರುಗಳಲ್ಲಿ ಬರಲಿವೆ. ಕಾರನ್ನೇ ಒಂದು ಆಪರೇಟಿಂಗ್ ಸಿಸ್ಟಂ ನಿರ್ವಹಿಸುವಾಗ ಮೊಬೈಲ್‌ನಷ್ಟೇ ಕೃತಕ ಬುದ್ಧಿಮತ್ತೆ ಕಾರುಗಳಿಗೂ ಇರಲಿದೆ‌. ಡ್ರೈವಿಂಗ್ ಸೇರಿದಂತೆ ಇತರ ಆಗುಹೋಗುಗಳ ಬಗ್ಗೆ ನಿರಂತರ ಡಾಟಾ ಸಂಗ್ರಹ ಸಾಧ್ಯವಾಗುವ ಕಾರಣ ಅದನ್ನು ನೂರು ರೀತಿ ಬಳಕೆ ಮಾಡುವ ಹೊಸ ದಾರಿಗಳೂ ತೋರಲಿವೆ. ಈ ಕಾರದಿಂದಲೇ ಇತ್ತೀಚಿನ ವರ್ಷಗಳಲ್ಲಿ ಆ್ಯಪಲ್-ಗೂಗಲ್‌ಗಳು ವಾಹನೋದ್ಯಮದತ್ತ ವಾಲಿರುವುದು.

ಉದ್ಯಮ ತಯಾರಾಗುತ್ತಿರುವ ಈಗಿನ ವೇಗ ನೋಡಿದರೆ ಬಹುಶಃ ಮುಂಬೈನಿಂದ ಬುಲೆಟ್ ಟ್ರೇನ್ ಹೊರಡುವ ಮೊದಲೇ ಚೆನ್ನೈ, ಹರಿಯಾಣ, ಪುಣೆಗಳ ಕಾರ್ಖಾನೆಗಳಿಂದ ಬ್ಯಾಟರಿ ಕಾರುಗಳು ಹೊರಬರಲಿವೆ. ನಮ್ಮಲ್ಲಿ 2030ಕ್ಕೆ ಇರುವ ಡೆಡ್‌ಲೈಲ್ ಯುರೋಪ್‌ನಲ್ಲಿ 2035. ಅಂದರೆ ಜಾಗತಿಕ ಮಟ್ಟದಲ್ಲಿ ಬ್ಯಾಟರಿ ವಾಹನ ತಯಾರಿಗೆ ಅಮೆರಿಕವಲ್ಲ, ಚೀನಾ-ಭಾರತ ತವರಾಗಲಿದೆ.