120 ವರ್ಷ ಇತಿಹಾಸವಿರುವ ನೊಬೆಲ್‌ ಪುರಸ್ಕಾರ; ಇಲ್ಲಿಯವರೆಗೆ ಸಂದಿದ್ದು 23 ಮಹಿಳಾ ವಿಜ್ಞಾನಿಗಳಿಗೆ ಮಾತ್ರ!

ಆರು ವಿಭಾಗಳಲ್ಲಿ ಸ್ವೀಡಿಷ್‌ ಅಕಾಡೆಮಿಯಿಂದ ನೀಡಲಾಗುವ ನೊಬೆಲ್‌ ಪುರಸ್ಕಾರವನ್ನು ಇದುವರೆಗೂ 972 ಮಂದಿಗೆ ಲಭಿಸಿದೆ. ಇದರಲ್ಲಿ ಕೇವಲ ವಿಜ್ಞಾನ ವಿಭಾಗಗಳಲ್ಲಿ 601 ಮಂದಿಗೆ ಲಭಿಸಿದೆ. ಇದರಲ್ಲಿ ಎಷ್ಟು ಮಹಿಳೆಯರು ಈ ಗೌರವಕ್ಕೆ ಪಾತ್ರರಾಗಿದ್ದಾರೆ ಗೊತ್ತೆ?

ಈ ವರ್ಷದ ನೊಬೆಲ್‌ ಪ್ರಶಸ್ತಿಗಳು ಘೋಷಣೆಯಾದವು. ಅಕ್ಟೋಬರ್‌ 4ರಿಂದ 11ನೇ ತಾರೀಖಿನವರೆಗೆ 6 ವಿಭಾಗಗಳ ಪ್ರಶಸ್ತಿಗಳು ಘೋಷಣೆಯಾದವು. ಆದರೆ ಈ ಬಾರಿ ವಿಜ್ಞಾನದ ಮೂರೂ ವಿಭಾಗಗಳಲ್ಲಿ ಒಬ್ಬ ಮಹಿಳೆಯೂ ಪ್ರಶಸ್ತಿಗೆ ಭಾಜನರಾಗಿಲ್ಲ!

ವೈದ್ಯಕೀಯ, ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರ ವಿಭಾಗದಲ್ಲಿ ಯಾವುದೇ ಮಹಿಳಾ ಪುರಸ್ಕೃತ ಇಲ್ಲದಿರುವುದು ಚರ್ಚೆಗೆ ಗ್ರಾಸವಾಗಿದ್ದು, ಸ್ವೀಡಿಷ್‌ ಅಕಾಡೆಮಿ ಮಹಿಳೆಯನ್ನು ಸಮಾನವಾಗಿ ಕಂಡಿಲ್ಲ ಎಂಬ ಟೀಕೆಗೆ ಗುರಿಯಾಗುತ್ತಿದೆ.

ಕಳೆದ ವರ್ಷ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಭಾಗದಲ್ಲಿ ಮೂರು ಮಹಿಳಾ ವಿಜ್ಞಾನಿಗಳು ಪ್ರಶಸ್ತಿ ಪಡೆದುಕೊಂಡಿದ್ದರು. ಆದರೆ ಈ ಬಾರಿ ವಿಜ್ಞಾನದ ಪ್ರಶಸ್ತಿಗೆ ಒಬ್ಬರನ್ನೂ ಪರಿಗಣಿಸಲಾಗಿಲ್ಲ ಎಂಬುದು ವಿಜ್ಞಾನ ವಲಯದಲ್ಲಿ ಅಚ್ಚರಿ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ.

ನೂರಿಪ್ಪತ್ತು ವರ್ಷಗಳ ಇತಿಹಾಸವಿರುವ ಈ ಪ್ರಶಸ್ತಿ ಇದುವರೆಗೂ 972 ಮಂದಿಗೆ ಲಭಿಸಿದೆ. ಆದರೆ ಈ ಪೈಕಿ ಕೇವಲ 58 ಮಹಿಳೆಯರಿಗೆ ಲಭಿಸಿದೆ. ಆದರೆ ವೈದ್ಯಕೀಯ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಭಾಗದಲ್ಲಿ ಕೇವಲ 23 ಮಹಿಳೆಯರಿಗೆ ಲಭಿಸಿದೆ. ನೊಬೆಲ್‌ ಪುರಸ್ಕಾರ ಶ್ವೇತ ವರ್ಣಿಯರು, ಪುರುಷರು ಮತ್ತು ಅಮೆರಿಕನ್ನರ ಪಕ್ಷ ಪಾತಿ ಎಂಬ ಟೀಕೆಗೆ ಗುರಿಯಾಗುತ್ತಲೇ ಬಂದಿದ್ದು, ಈ ಸಂಖ್ಯೆಗಳು ಇಂತಹ ಆರೋಪಕ್ಕೆ ಪುಷ್ಟಿ ನೀಡುವಂತಿವೆ. ಈ ಬಾರಿ ಮತ್ತೊಮ್ಮೆ ಈ ಅರೋಪಕ್ಕೆ ಬಲ ಬಂದಿದೆ.

ಈ ಕುರಿತು ವಿಶ್ವ ಸಂಸ್ಥೆಯ ಮಹಿಳಾ ಅಂಗವೂ ಕೂಡ ಲಿಂಗ ಸಮಾನತೆಯ ಅತಿ ನಿಧಾನ ಪ್ರಗತಿಯ ಸೂಚಕದಂತೆ ಮಹಿಳೆಯರಿಗೆ ನೊಬೆಲ್‌ ಪ್ರಶಸ್ತಿ ಲಭಿಸಿರುವ ಸಂಖ್ಯೆಗಳು ಸ್ಪಷ್ಟವಾಗಿ ದಾಖಲಿಸುವೆ ಎಂದು ಟ್ವೀಟ್‌ ಮಾಡಿದೆ.

ನೇಚರ್‌ ಪತ್ರಿಕೆಯ ಸುದ್ದಿ ಸಂಪಾದಕಿ, ಭೌತ ವಿಜ್ಞಾನದ ಮೇಲೆ ವಿಷಯಾಸಕ್ತಿ ಹೊಂದಿರುವ ಕ್ಯಾಥರಿನ್‌ ಸ್ಯಾಂಡರ್ಸನ್‌ ಈ ಕುರಿತು ಲೇಖನ ಬರೆದಿದ್ದು, ಹಲವರ ಅಭಿಪ್ರಾಯಗಳನ್ನು ಉಲ್ಲೇಖಿಸಿದ್ದಾರೆ. ಕೆನಡಾ ದೇಶದ ಟೊರಂಟೊನ ರೈಯರ್‌ಸನ್‌ ವಿಶ್ವವಿದ್ಯಾಲಯದಲ್ಲಿ ಜೀವವಿಜ್ಞಾನಿಯಾಗಿರುವ ಇಮೊಗೆನ್‌ ಕೊ, ”ಹೆಚ್ಚು ಹೆಚ್ಚು ಪುರುಷರು ಈ ಪ್ರಶಸ್ತಿ ಪಡೆಯುವ ಮೂಲಕ ‘ಸ್ವೀಡಿಷ್‌ ಅಕಾಡೆಮಿ ವಿರುದ್ಧ ಅಸಮಾನತೆ ಕುರಿತ ಈಗ ಮುಖ್ಯವಾಹಿನಿಗೆ ಬಂದಿದೆ” ಎನ್ನುತ್ತಾರೆ. ನೊಬೆಲ್‌ ಪುರಸ್ಕಾರದ ಬಗ್ಗೆ ಮೊದಲಿದ್ದ ಉತ್ಸಾಹ ಈಗ ಕೋಪವಾಗಿ ಬದಲಾಗಿದೆ ಎಂದು ಕ್ಯಾಥರಿನ್‌ ಹೇಳುತ್ತಾರೆ. ಈ ನೊಬೆಲ್‌ ಪುರಸ್ಕಾರ ವಿಜ್ಞಾನ ಕ್ಷೇತ್ರದಲ್ಲಿ ಮೆಚ್ಚುವ ಮತ್ತು ಗುರುತಿಸುವ ವ್ಯವಸ್ಥೆಯಲ್ಲಿರುವ ದೋಷವನ್ನು ಪ್ರತಿನಿಧಿಸುತ್ತದೆ ಎಂಬುದು ಕೋ ಅವರ ಟೀಕೆ ಎಂದು ಕ್ಯಾಥರಿನ್‌ ಬರೆದಿದ್ದಾರೆ.

ಆದರೆ ನೇಚರ್‌ ಪತ್ರಿಕೆಗೆ ಪ್ರತಿಕ್ರಿಯಿಸಿರುವ ರಾಯಲ್‌ ಸ್ವೀಡಿಷ್‌ ಅಕಾಡೆಮಿ ಆಫ್‌ ಸೈನ್ಸಸ್‌ ಪ್ರಧಾನ ಕಾರ್ಯದರ್ಶಿ ಗೋರನ್‌ ಹ್ಯಾನ್ಸನ್‌, ಪ್ರಶಸ್ತಿಯ ಆಯ್ಕೆಯ ಸಮಿತಿಯು ಎಲ್ಲರನ್ನೂ ಒಳಗೊಳ್ಳುವುದಕ್ಕೆ ಅಗತ್ಯ ಕ್ರಮಗಳನ್ನು ಅನುಸರಿಸುತ್ತದೆ. ಹೆಚ್ಚು ಮಹಿಳೆಯರ ಹೆಸರುಗಳನ್ನು ನಾಮಿನೇಟ್‌ ಮಾಡಲು ಕೇಳಿಕೊಳ್ಳಲಾಗುತ್ತದೆ’ ಎಂದು ಸ್ಪಷ್ಟ ಪಡಿಸಿದ್ದರೂ, ನಾವಿನ್ನೂ ಮಾಡಬೇಕಾದ ಕೆಲಸ ಬಹಳಷ್ಟಿದೆ. ಪ್ರಗತಿಯೂ ನಿಧಾನಗತಿಯಲ್ಲಿ ಸಾಗುತ್ತಿದೆ ಎಂಬುದನ್ನು ಒಪ್ಪುತ್ತಾರೆ.

ಆದರೆ ಮಹಿಳಾ ವಿಜ್ಞಾನಿಗಳು, ಸಂಶೋಧಕರಿಗೇನು ಕೊರತೆ ಇಲ್ಲ ಎಂಬ ವಾದವೂ ಇದ್ದು, ಅಕಾಡೆಮಿಯ ಹೇಳಿಕೆಯನ್ನು ಸಂಪೂರ್ಣ ಅಲ್ಲಗಳೆಯುತ್ತದೆ. ಕ್ಯಾಥರಿನ್‌, ಲಂಡನ್ನಿನ ವೆಸ್ಟರ್ನ್‌ ವಿಶ್ವವಿದ್ಯಾಲಯದಲ್ಲಿ ಬಿಹೇವಿಯರಲ್‌ ಜೆನಿಸಿಸ್ಟ್‌ ಆಗಿರುವ ಅಮಾಂಡ ಮೊಹ್ರಿಂಗ್‌ ಅವರ ಮಾತನ್ನು ಉಲ್ಲೇಖಿಸಿದ್ದು, 1980ರ ದಶಕದಿಂದೀಚೆಗೆ ಭೌತಶಾಸ್ತ್ರದಲ್ಲಿ ಸಂಶೋಧನೆ ಮಾಡಿದವರ ಸಂಖ್ಯೆ ಹೆಚ್ಚಿದ್ದು, ಅದೇ ವಿಭಾಗದಲ್ಲಿ ನೊಬೆಲ್‌ ಪ್ರಶಸ್ತಿ ಪಡೆದವರ ಸಂಖ್ಯೆ ಯಾವ ರೀತಿಯಲ್ಲೂ ಪ್ರತಿನಿಧಿಸುವುದಿಲ್ಲ ಎಂಬ ಅಭಿಪ್ರಾಯ ದಾಖಲಿಸುತ್ತಾರೆ.

ಇಂತಹದ್ದೇ ಇನ್ನೊಂದು ಅಭಿಪ್ರಾಯ ವರ್ಜೀನಿಯಾ ವಿಶ್ವವಿದ್ಯಾಲಯದ ಖಗೋಳ ವಿಜ್ಞಾನಿ ಕೆಲ್ಸೆ ಜಾನ್‌ಸನ್‌ ಅವರದ್ದು: ” ಸ್ವೀಡಿಷ್‌ ಅಕಾಡೆಮಿ ಪ್ರಸ್ತಾಪಿಸುರವ ಕ್ರಮಗಳು ಹೇಗಿವೆ ಎಂದರೆ, ಗಾಯಕ್ಕೆ ಬ್ಯಾಂಡ್‌ ಏಡ್‌ ಹಚ್ಚುವಂತಿದೆ. ಈ ಕ್ರಮಗಳು ಸರಿಯಾದ ದಿಕ್ಕಿನಲ್ಲಿವೆಯೇ? ಬಹುಶಃ ಇರಬಹುದು. ಆದರೆ ಇಲ್ಲೊಂದು ಅಪಾಯವೂ ಇದೆ. ಜನ ಈ ಕ್ರಮಗಳು ಸೂಕ್ತವಾಗಿವೆ ಎಂದು, ಮತ್ತೆ ಎಂದಿನಂತೆ ತಮ್ಮ ವ್ಯವಹಾರಗಳಲ್ಲಿ ಮಗ್ನರಾಗುತ್ತಾರೆ. ಆದರೆ ಇದು ನಿಜಕ್ಕೂ ಅಷ್ಟು ಸರಳವಾಗಿಲ್ಲ” ಎನ್ನುತ್ತಾರೆ.

ಮಹಿಳೆಯರಿಗೇಕಿಲ್ಲ ಮನ್ನಣೆ

ನೊಬೆಲ್‌ ಪುರಸ್ಕಾರದ ಪಟ್ಟಿಯಲ್ಲಿ ಮಹಿಳೆಯರ ಹೆಸರುಗಳು, ಅದರಲ್ಲೂ ವಿಜ್ಞಾನ ವಿಭಾಗಗಳಲ್ಲಿ ಕಡಿಮೆ ಏಕೆ? ಇದಕ್ಕೆ ಮಹಿಳೆಯರನ್ನು ಶಿಕ್ಷಣ, ಮತ್ತು ವಿಜ್ಞಾನ ವೃತ್ತಿಯಿಂದ ಅವರನ್ನು ದೂರ ಉಳಿಸಿರುವುದು ಮತ್ತು ಇರುವ ಮಹಿಳೆಯರ ಸಾಧನೆಯ ಅವಗಣನೆಯೂ ಕಾರಣ ಎಂಬ ಅಭಿಪ್ರಾಯ ಹಲವರದ್ದು.

ಶತಮಾನಗಳಿಂದಲೂ ಹಲವು ಮಹಿಳೆಯರು ವಿಜ್ಞಾನ ಕ್ಷೇತ್ರಕ್ಕೆ ತಮ್ಮನ್ನು ತೆತ್ತುಕೊಂಡಿದ್ದಾರೆ. ಮಹತ್ವದ ಸಂಶೋಧನೆಗಳನ್ನು ನೀಡಿ, ಜಗತ್ತಿನ ಮಹತ್ವದ ಬದಲಾವಣೆಗೆ ಕಾರಣರಾಗಿದ್ದಾರೆ. ಇಷ್ಟಾಗಿಯೂ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಮತ್ತು ಗಣಿತ ಕ್ಷೇತ್ರದಲ್ಲಿ ಅವರನ್ನು ಹೆಚ್ಚಾಗಿ ಪ್ರಚುರ ಪಡಿಸುವುದಿಲ್ಲ. ಇಲ್ಲಿ ಪುರುಷದ್ದೇ ಮೇಲುಗೈ.

ಮಹಿಳೆಯರ ಬಗ್ಗೆ ಇರುವ ಪೂರ್ವಗ್ರಹವೇ ಪ್ರಮುಖ ಅಂಶ. ಆದರೆ ಮಹಿಳೆರ ಬೌದ್ಧಿಕ ಸಾಮರ್ಥ್ಯ ಇದಕ್ಕೆ ಕಾರಣವಲ್ಲ. ಆದರೆ ಶೈಕ್ಷಣಿಕ ನೀತಿ, ಸಾಂಸ್ಕೃತಿಕ ಹಿನ್ನೆಲೆ, ಸ್ಟಿರಿಯೋಟೈಪ್‌ಗಳು, ಆದರ್ಶ ಅಥವಾ ಮಾದರಿ ವ್ಯಕ್ತಿತ್ವಗಳ ಪರಿಚಯವಿಲ್ಲದೇ ಹೋಗುವುದು ಕಾರಣ.

ಆದರೂ ಮೂಲವಿಜ್ಞಾನವನ್ನು ಅಭ್ಯಸಿಸುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ ಎಂಬುದನ್ನು ಅಧ್ಯಯನಗಳು ಸಾಬೀತು ಮಾಡುತ್ತಿವೆ. ಅಮೆರಿಕನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫಿಸಿಕ್ಸ್‌ನ ಅಧ್ಯಯನವೊಂದರ ಪ್ರಕಾರ 1975ರಲ್ಲಿ ಭೌತಶಾಸ್ತ್ರ ಪದವಿ ಪಡೆಯುವವರ ಸಂಖ್ಯೆ 10% ಮತ್ತು ಸಂಶೋಧನೆ ಮಾಡುವವರ ಸಂಖ್ಯೆ 5% ಇತ್ತು. ಆದರೆ ಈಗ 20 % ಮಹಿಳೆಯರು ಭೌತಶಾಸ್ತ್ರ ಪದವಿ ಪಡೆಯುತ್ತಿದ್ದಾರೆ ಮತ್ತು 18% ಮಹಿಳೆಯರು ಭೌತಶಾಸ್ತ್ರದಲ್ಲಿ ಪಿಎಚ್‌ಡಿ ಅಧ್ಯಯನ ನಡೆಸುತ್ತಿದ್ದಾರೆ.

ಅರಿಜೋನಾ ಸ್ವೇಟ್‌ ಯೂನಿವರ್ಸಿಟಿಯಲ್ಲಿ ಸಾರ್ವಜನಿಕ ವ್ಯವಹಾರಗಳಲ್ಲಿ ನೈತಿಕತೆ ಕುರಿತು ಬೋಧಿಸುವ ಪ್ರಾಧ್ಯಾಪಕಿ ಮೇರಿ ಕೆ ಫೀನೇ ಅವರು ವಿಜ್ಞಾನ ಶಿಕ್ಷಣ ಮತ್ತು ಅಧ್ಯಯನದಲ್ಲಿ ಪಾಲ್ಗೊಳ್ಳುವಿಕೆ ಹೆಚ್ಚದೇ ಇರುವುದಕ್ಕೆ ಮುಖ್ಯ ಕಾರಣ, ಅಕಾಡೆಮಿಕ್‌ ವಲಯದಲ್ಲಿರುವ ಸಾಂಸ್ಥಿಕ ಅಡ್ಡಿಗಳು ಎನ್ನುತ್ತಾರೆ. ಬಹಳ ಮುಖ್ಯವಾಗಿ ಅವರು ಗುರುತಿಸುವ ಇನ್ನೊಂದು ಅಂಶ, ನಮ್ಮ ಸಾರ್ವತ್ರಿಕ ಗ್ರಹಿಕೆ. ” ನಾವೆಲ್ಲರೂ – ಸಾಮಾನ್ಯ ಜನ, ಮಾಧ್ಯಮ, ವಿಶ್ವವಿದ್ಯಾಲಯದ ಉದ್ಯೋಗಿಗಳು, ವಿದ್ಯಾರ್ಥಿಗಳು, ಪ್ರಾಧ್ಯಾಪಕರು – ಒಬ್ಬ ವಿಜ್ಞಾನಿ ಮತ್ತು ನೊಬೆಲ್‌ ಪ್ರಶಸ್ತಿ ವಿಜೇತ ಹೇಗಿರುತ್ತಾನೆ ಎಂಬ ಬಗ್ಗೆ ಕಲ್ಪಿಸಿಕೊಂಡಿದ್ದಾರೆ. ಆ ಚಿತ್ರಣವೂ ಬಹುತೇಕ ಪುರುಷ, ಶ್ವೇತ ವರ್ಣೀಯ ಮತ್ತು ಹಿರಿಯನದ್ದಾಗಿರುತ್ತದೆ”.

ಮಹಿಳೆಯ ಬಗ್ಗೆ ಇರುವ ಪೂರ್ವಗ್ರಹವನ್ನು ಮೀರುವುದು ವಿಜ್ಞಾನ ಕ್ಷೇತ್ರದಲ್ಲಿ ಅವರು ಮಾಡುತ್ತಿರುವ ಸಾಧನೆಯನ್ನು ಗುರುತಿಸುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಇದನ್ನು ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು ಮತ್ತು ಸಮಾಜ ಎಲ್ಲ ವಲಯಗಳು ಸಾಧ್ಯವಾಗಿಸಬೇಕು.

(ವಿವಿಧ ಮೂಲಗಳಿಂದ)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.