ಸೈಫೈ ಸಿನಿಮಾ | ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುವ ‘ಆಕ್ಸಿಜನ್’

3ಡಿ ಪಿರಾನ್ಹಾ, ಕ್ರಾಲ್‌ನಂತಹ ಥ್ರಿಲ್ಲರ್‌ಗಳನ್ನು ಕೊಟ್ಟ ಫ್ರೆಂಚ್‌ ನಿರ್ದೇಶಕ ಅಲೆಕ್ಸಾಂಡರ್‌ ಅಯಾ ವಿಶಿಷ್ಟವಾದ ಸೈಫೈ ಥ್ರಿಲ್ಲರ್‌ ಆಕ್ಸಿಜನ್‌ ಅನ್ನು ನೀಡಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿರುವ ಈ ಚಿತ್ರ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ

ಶವದ ಪೆಟ್ಟಿಗೆಯಂತಹ ಕ್ಯಾಬಿನು. ಸ್ವಲ್ಪ ಕೈ ಕಾಲು ಚಾಚುವಷ್ಟು ಜಾಗವಿದೆ. ಕೂಗಿದರೂ, ಸದ್ದು ಮಾಡಿದರೂ ಪ್ರತಿಕ್ರಿಯೆಯಿಲ್ಲ. ತಾನು ಎಲ್ಲಿದ್ದೀನಿ ಎಂಬುದು ಗೊತ್ತಿಲ್ಲ. ಇದರ ಜೊತೆಗೆ ಕ್ಯಾಬಿನಿನೊಳಗೆ ಪೂರೈಕೆಯಾಗುತ್ತಿರುವ ಆಮ್ಲಜನಕದ ಪ್ರಮಾಣ ಕ್ಷಣ ಕ್ಷಣಕ್ಕೂ ಕುಸಿಯುತ್ತಿದೆ!

ಅಲೆಕ್ಸಾಂಡರ್‌ ಅಯಾ ನಿರ್ದೇಶನದ ಫ್ರೆಂಚ್‌ ಸೈಫೈ ಚಿತ್ರ, ‘ಆಕ್ಸಿಜನ್‌ ‘ ಹೀಗೆ ಕ್ಷಣಕ್ಷಣದ ಥ್ರಿಲ್‌ನೊಂದಿಗೆ ಉಸಿರು ಬಿಗಿ ಹಿಡುದು ನೋಡುವಂತೆ ಮಾಡುತ್ತದೆ.

ಒಂದು ಗಂಟೆ ನಲವತ್ತು ನಿಮಿಷಗಳಲ್ಲಿ ಅಲ್ಲಲ್ಲಿ ಕೆಲವು ಪಾತ್ರಗಳು ಬಂದು ಹೋಗುತ್ತಾವಾದರೂ ಇಡೀ ಚಿತ್ರದಲ್ಲಿ ನಿಮಗೆ ಕಾಣಿಸುವುದು ಡಾ. ಎಲಿಝಬೆತ್‌ (ಆಕೆಯ ಕ್ಲೋನ್‌). ಮೆಲಾನಿ ಲಾರೆನ್‌ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಮನೋಜ್ಞವಾಗಿ ನಟಿಸಿದ್ದಾರೆ.

12 ವರ್ಷಗಳ ನಂತರ ಎಚ್ಚರಗೊಳ್ಳುವ ಮಹಿಳೆಗೆ ತಾನು ಯಾರು? ಎಲ್ಲಿದ್ದೇನೆ ಎಂಬುದೇ ಗೊತ್ತಾಗುವುದಿಲ್ಲ. ಹೈಟೆಕ್‌ ಶವಪೆಟ್ಟಿಗೆಯಂತೆ ಕಾಣುವ ಕ್ರೈಯೊ ಯೂನಿಟ್‌ನಲ್ಲಿರುವ ಆಕೆಯೊಂದಿಗೆ ಮಾತನಾಡುವುದಕ್ಕಿರುವುದು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಆಧರಿಸಿ ಕಂಪ್ಯೂಟರ್‌ ಮಿಲೊ.

ಆಕಸ್ಮಿಕವಾಗಿ ಎಚ್ಚರಗೊಳ್ಳುವ ನಾಯಕಿಗೆ ಮಿಲೋ, ಬದುಕುಳಿಯುವುದಕ್ಕೆ ಇನ್ನು 31% ಆಕ್ಸಿಜೆನ್‌ ಮಾತ್ರ ಇರುವುದು ಎಂದ ಎಚ್ಚರಿಸುತ್ತದೆ. ತನ್ನ ಪೂರ್ವಾಪರ ತಿಳಿದಲ್ಲಿ, ಬದುಕುಳಿಯಬಹುದು ಎಂಬ ನಿರೀಕ್ಷೆಯಲ್ಲಿ, ಮಿಲೋ ಮೂಲಕ ನಾಯಕಿ ತನ್ನ ಪೂರ್ವಾಪರ ತಿಳಿಯುವ ಪ್ರಯತ್ನ ಮಾಡುತ್ತಾ ಹೋಗುತ್ತಾಳೆ.

ಮೊದಲು ತನಗೊಬ್ಬ ಪತಿ ಇದ್ದ ಎಂಬುದು ನೆನಪಿಸಿಕೊಳ್ಳುವ ನಾಯಕಿ, ಆತನ ಮಾಹಿತಿ ಪಡೆಯಲು ಹೋಗಿ, ಆತ ಸತ್ತ ಸುದ್ದಿ ಪಡೆಯುತ್ತಾಳೆ. ಆದರೆ ನೆನಪುಗಳನ್ನು ಹೆಕ್ಕುತ್ತಾ ಹೋದಂತೆ ತಾನೊಬ್ಬ ಜೆನೆಟಿಕ್‌ ವಿಜ್ಞಾನಿ, ಒಂದು ಜೀವಿಯ ಸ್ಮರಣೆಯನ್ನು, ಇನ್ನೊಂದು ಜೀವಿಗೆ ವರ್ಗಾಯಿಸುವ ವಿಧಾನವನ್ನು ಕಂಡುಕೊಂಡ ಅಂಶಗಳು ನಿಧಾನವಾಗಿ ಬಿಚ್ಚಿಕೊಳ್ಳುತ್ತವೆ.

ಈ ಪುಟ್ಟ ಕ್ಯಾಬಿನೊಳಗೆ ಎಲ್ಲವೂ ನಡೆಯುತ್ತಾ ಹೋಗುತ್ತದೆ. ಹಾಗೆಯೇ ಆಕ್ಸಿಜನ್‌ ಪ್ರಮಾಣ ಕುಸಿಯುತ್ತಲೇ ಹೋಗುತ್ತದೆ. ಇದೇ ಉಗುರು ಕಚ್ಚಿ ನೋಡುವಂತೆ ಮಾಡುತ್ತಾ ಹೋಗುತ್ತದೆ.

ಮೊದಲು ತಾನೊಂದು ಆಸ್ಪತ್ರೆಯಲ್ಲಿದ್ದೇನೆ ಎಂಬುದನ್ನು ಪತ್ತೆ ಹಚ್ಚುವ ನಾಯಕಿ, ಅದು ಸುಳ್ಳೆಂದು, ತಾನು ಅಂತರಿಕ್ಷದಲ್ಲಿರುವೆನೆಂದು ತಿಳಿಯುತ್ತದೆ. ಇನ್ನೆರಡೇ ತಲೆಮಾರುಗಳಲ್ಲಿ ಭೂಮಿ ಅಳಿದು ಹೋಗುತ್ತದೆ. ಬೇರೊಂದು ಗ್ರಹದಲ್ಲಿ ಮನುಷ್ಯ ಬದುಕಬಹುದಾದ ಸಾಧ್ಯತೆಯನ್ನು ಕಂಡುಕೊಳ್ಳಲು ನಡೆದ ಪ್ರಯೋಗದ ಭಾಗವಾಗಿ ಅಂತರಿಕ್ಷದಲ್ಲಿ ತೇಲುತ್ತಿರುತ್ತಾಳೆ ನಾಯಕಿ. ಆಕೆಯಂತೆ 10000 ಮಂದಿ ಕ್ರೈಯೊ ಪಾಡ್‌ಗಳಲ್ಲಿ ತೇಲುತ್ತಿರುತ್ತಾರೆ.

ಮುಂದುವರೆದ ತನ್ನ ಹುಡುಕಾಟದಲ್ಲಿ ತನ್ನ ಪತಿ ಬದುಕಿರುವುದಾಗಿಯೂ, ಅವನೂ ತನ್ನಂತೆ ಒಂದು ಪಾಡ್‌ ತೇಲುತ್ತಿರುವುದಾಗಿಯೂ ತಿಳಿದು ಬರುತ್ತದೆ. ಅದನ್ನು ಹೇಳುವುದು ಸ್ವತಃ ನಾಯಕಿ! ಈಗ ಪಾಡ್‌ನಲ್ಲಿ ತೇಲುತ್ತಿರುವುದು ಆ ನಾಯಕಿಯದ್ದೇ ಒಂದು ಕ್ಲೋನ್‌!

ಈ ಎಲ್ಲ ವಾಸ್ತವಾಂಶಗಳನ್ನುತಿಳಿದುಕೊಳ್ಳುವ ಹೊತ್ತಿಗೆ, ಆಕ್ಸಿಜನ್‌ 1%ಗೆ ಬಂದು ನಿಂತಿರುತ್ತದೆ. ಹಾಳಾದ ಇನ್ನೊಂದು ಪಾಡ್‌ನಿಂದ ಆಕ್ಸಿಜನ್‌ ಪಡೆದುಕೊಳ್ಳುವ ವಿಚಾರ ಹೊಳೆಯುತ್ತದೆ. ಮಿಲೋ, ಅದನ್ನು ವರ್ಗಾಯಿಸುವುದಕ್ಕೆ 14227 ಗಂಟೆಗಳು ಬೇಕಾಗುತ್ತದೆ ಎಂದು ಹೇಳುತ್ತದೆ!

ತನ್ನ ಅಸ್ತಿತ್ವಕ್ಕೆ ಹೋರಾಡುವ ನಾಯಕಿಗೆ ಒಂದು ಸಂದರ್ಭದಲ್ಲಿ ದಯಾಮರಣ ಕರುಣಿಸಲು ಮಿಲೋ ಮುಂದಾಗುತ್ತದೆ. ಅದರಿಂದ ರಕ್ಷಿಸಿಕೊಳ್ಳುವ ನಾಯಕಿ ಬದುಕುಳಿಯುವ ಸಾಧ್ಯತೆಗಳನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತಾಳೆ. ತಾನು ಮೊದಲಿದ್ದ ಸ್ಥಿತಿ-ಹೈಪರ್‌ ಸ್ಲೀಪ್‌ಗೆ ಮರಳುವ ಮೂಲಕ ತನ್ನ ಗುರಿ ತಲುಪುವುದಕ್ಕೆ ಸಿದ್ಧಳಾಗುತ್ತಾಳೆ.

ವೋಲ್ಫ್‌ 10-61ಸಿ ಹೆಸರಿನ ಗ್ರಹವೊಂದನ್ನು ತಲುಪುವ ಮೂಲಕ ಚಿತ್ರ ಅಂತ್ಯವಾಗುತ್ತದೆ. ನಾಯಕಿಯ ಜೊತೆಗೆ ಆಕೆಯ ಪತ್ನಿಯೂ ಕೂಡುತ್ತಾನೆ.

ಚಿತ್ರದಲ್ಲಿ ವೈರಸ್‌ವೊಂದರ ಉಲ್ಲೇಖ, ನಾಯಕಿಯ ಪತಿಯೇ ಅದಕ್ಕೆ ಗುರಿಯಾಗುವುದು, ಮಾಸ್ಕ್‌, ಬಹಳ ಮುಖ್ಯವಾಗಿ ಆಕ್ಸಿಜೆನ್‌ಗಳು ನಮ್ಮ ಪ್ರಸ್ತುತ ಸಂದರ್ಭಕ್ಕೆ ಹೊಂದುವಂತೆ ಇರುವುದು, ಪ್ರೇಕ್ಷಕ ಈ ಸಿನಿಮಾನದೊಂದಿಗೆ ಇನ್ನಷ್ಟು ಬೆಸೆದುಕೊಳ್ಳುವುದಕ್ಕೆ ಪ್ರೇರಣೆಯಾಗುವ ಅಂಶಗಳು.

ಸರಳ ಕತೆಯಿದ್ದರೂ, ಹಲವು ತಿರುವುಗಳಿಂದ ಕೂಡಿದ್ದು ರೋಚಕತೆಯ ಅನುಭವವನ್ನು ಕೊಡುವುದರಲ್ಲಿ ಅನುಮಾನವಿಲ್ಲ. ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಮೆಲನಿ ಲಾರೆನ್‌ ತಮ್ಮ ಅಭಿನಯದಲ್ಲಿ ಗೆದ್ದಿದ್ದಾರೆ. ಚಿತ್ರಕತೆ, ಛಾಯಾಗ್ರಹಣ ಎಲ್ಲವೂ ಪ್ರೇಕ್ಷಕನನ್ನು ಚಿತ್ರದುದ್ದಕ್ಕೂ ಸೆಳೆದಿಡುತ್ತದೆ.

ನೆಟ್‌ಫ್ಲಿಕ್ಸ್‌ನಲ್ಲಿ ಚಿತ್ರ ಲಭ್ಯವಿದ್ದು ಟಾಪ್‌ 5ನೇ ಆಗಿ ವೀಕ್ಷಿಸಲ್ಪಡುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.