ಜಗತ್ತಿನ ಅತಿ ದೊಡ್ಡ ಟೆಕ್ ಸಂಸ್ಥೆ ಗೂಗಲ್ ನ ಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಗಿ ಬ್ರಿನ್ ಇಪ್ಪತ್ತೊಂದರ ಹರೆಯದ ಸಂಸ್ಥೆಯ ದೈನಂದಿನ ಜವಾಬ್ದಾರಿಗಳಿಂದ ದೂರವಾಗುತ್ತಿದ್ದಾರೆ. ಶೇ. 51ರಷ್ಟು ಪಾಲುದಾರಿಕೆಯನ್ನು ಉಳಿಸಿಕೊಂಡಿರುವ ಈ ಇಬ್ಬರು ಭಾರತ ಮೂಲದ, ಗೂಗಲ್‌ನ ನೆಚ್ಚಿನ ಸಿಇಒ ಸುಂದರ್ ಪಿಚ್ಚೈಗೆ ಹೆಚ್ಚಿನ ಜವಾಬ್ದಾರಿ ಹೊರಿಸಿದ್ದಾರೆ

ಎಲ್ಲ ಮಾಹಿತಿ ಒಂದೆಡೆ ಸಿಗಬೇಕು, ಎಲ್ಲರಿಗೂ ಸಿಗುವಂತಾಗಬೇಕು ಎಂಬ ಮಹತ್ವದ ಆಶಯದೊಂದಿಗೆ ಗೂಗಲ್ ಸರ್ಚ್ ಎಂಜಿನ್ ರೂಪಿಸಿದ ಲ್ಯಾರಿ ಪೇಜ್ ಮತ್ತು ಸೆರ್ಗಿ ಬ್ರಿನ್ ಈಗ ಸಂಸ್ಥೆಯ ಜವಾಬ್ದಾರಿಗಳನ್ನು ಭಾರತ ಮೂಲದ ಹಾಗೂ ಗೂಗಲ್ ಸಂಸ್ಥೆಯ ಮುಖ್ಯ ಸ್ಥಾನದಲ್ಲಿರುವ ಸುಂದರ್ ಪಿಚ್ಚೈ ಅವರಿಗೆ ಹೊಣೆಗಾರಿಕೆಯನ್ನು ವರ್ಗಾಯಿಸಿದ್ದಾರೆ.
ಗೂಗಲ್ ಸರ್ಚ್ ಎಂಜಿನ್ ಮತ್ತು ಬಿಸಿನೆಸ್ ವಿಭಾಗದ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುಂದರ್ ಪಿಚ್ಚೈ ಕಳೆದ ಒಂದೂವರೆ ದಶಕದಿಂದ ಗೂಗಲ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪೇಜ್ ಮತ್ತು ಬ್ರಿನ್ ಅವರ ವಿಶ್ವಾಸಾರ್ಹ ವ್ಯಕ್ತಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಈಗ ಗೂಗಲ್ ಮಾತೃ ಸಂಸ್ಥೆ ಆಲ್ಫಾಬೆಟ್‌ನ ಸಿಇಒ ಆಗಿ ನೇಮಕಗೊಂಡಿದ್ದಾರೆ.
ಮಂಗಳವಾರ ಈ ಕುರಿತು ಪತ್ರ ಬರೆದಿರುವ ಪೇಜ್ ಮತ್ತು ಸೆರ್ಗಿ, “ಇಂದು, ಕಂಪನಿಯು ಒಬ್ಬ ವ್ಯಕ್ತಿಯಾಗಿದ್ದರೆ, 21 ವರ್ಷದ ಹರೆಯದ ಯುವಕನಾಗಿರುತ್ತಿದ್ದ ಮತ್ತು ಅದು ಬೆಚ್ಚನೆಯ ಗೂಡನ್ನು ಬಿಡಬೇಕಾದ ಕಾಲ” ಎಂದು ಹೇಳಿದ್ದಾರೆ. ” ಕಂಪನಿಯ ಇಷ್ಟು ದೀರ್ಘ ಕಾಲದ ದೈನಂದಿನ ನಿರ್ವಹಣೆಯಲ್ಲಿ ತೊಡಗಿಕೊಂಡಿದ್ದು, ಅದ್ಭುತವಾದ ಅವಕಾಶ. ಈಗ ಹೆಮ್ಮೆಯ ಪೋಷಕರ ಜವಾಬ್ದಾರಿಯನ್ನು ನಿಭಾಯಿಸುವ ಸಮಯ ಎಂದು ನಂಬಿದ್ದೇವೆ. ಸಲಹೆ ಮತ್ತು ಪ್ರೀತಿಯನ್ನು ಕೊಡುವುದು, ದಿನವೂ ತಲೆ ತೂರಿಸುವುದಲ್ಲ” ಎಂದು ತಮ್ಮ ನಿಲುವಿಗೆ ಕಾರಣ ನೀಡಿದ್ದಾರೆ.
ಪೇಜ್ ಮತ್ತು ಬ್ರಿನ್ ಕೆಲವು ತಿಂಗಳುಗಳಿಂದ ಗೂಗಲ್‌ನ ಮಹತ್ವದ ಸಭೆಗಳು, ಚಟುವಟಿಕೆಗಳಿಂದ ದೂರವೇ ಉಳಿಯುತ್ತಾ ಬಂದಿದ್ದರು. ಮೂರು ತಿಂಗಳಿಗೊಮ್ಮೆ ನಡೆಯುವ ಆಲ್ಫಾಬೆಟ್ ಆದಾಯ ಸಂಬಂಧಿ ಸಭೆಗಳಲ್ಲಿ ಪೇಜ್ ಉಪಸ್ಥಿತರಿದ್ದರು, ಮಾತನಾಡುವುದನ್ನು ನಿಲ್ಲಿಸಿದ್ದರು. ಆಗೀಗ ಪತ್ರಕರ್ತರೊಂದಿಗೆ ಮಾತನಾಡುವುದು ಬಿಟ್ಟರೆ ಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ.
ಬ್ರಿನ್ ಕೂಡ ವಾರದ ಮೀಟಿಂಗ್‌ಗಳಲ್ಲಿ ಕಾಣಿಸಿಕೊಳ್ಳುವುದು ಕಳೆದ ವರ್ಷವೇ ಕೈಬಿಟ್ಟಿದ್ದರು. ಕಳೆದ ವರ್ಷ ಲೈಂಗಿಕ ಕಿರುಕುಳದ ಪ್ರಕರಣವೊಂದು ಗೂಗಲ್ ವಿರುದ್ಧ ಟೀಕೆಗಳ ಸುರಿಮಳೆಗೆ ಕಾರಣವಾದಾಗ ಕ್ಷಮೆಯಾಚಿಸಲು ಈ ಇಬ್ಬರು ಕಾಣಿಸಿಕೊಂಡಿದ್ದರು.
ಸಿಲಿಕಾನ್ ವ್ಯಾಲಿಗೆ ಭರ್ಜರಿ ಸಂಬಳ, ಮುಕ್ತ ಕೆಲಸ ಮಾಡುವ ಪದ್ಧತಿಯನ್ನು ಪರಿಚಯಿಸಿದ ಪೇಜ್ ಮತ್ತು ಸೆರ್ಗಿ, ವೃತ್ತಿ ಪರಿಸರ, ವೃತ್ತಿ ಸಂಸ್ಕೃತಿಗಳೆರಡನ್ನು ಭಿನ್ನವಾಗಿ ವ್ಯಾಖ್ಯಾನಿಸಿದರು.
ಮಹತ್ವಾಕಾಂಕ್ಷಿಯಾದ ಯೋಜನೆಗಳಿಗೆ ಚಾಲನೆ ನೀಡಿರುವ ಈ ಇಬ್ಬರು ದೈನಂದಿನ ವ್ಯವಹಾರಗಳಿಂದ ದೂರ ಉಳಿಯುವ ನಿರ್ಧಾರ ಅಚ್ಚರಿ ಮೂಡಿಸಿದೆ.
ಜಗತ್ತಿನ ಎಲ್ಲ ಮಾಹಿತಿಯನ್ನು ಒಂದೆಡೆ ಸಿಗುವಂತೆ, ಉಪಯೋಗಕ್ಕೆ ಬರುವಂತೆ ಸಂಗ್ರಹಿಸಿಕೊಡುವುದು ಗೂಗಲ್‌ನ ಧ್ಯೇಯವಾಗಿತ್ತು. ಇದು ಅದರಾಚೆಗೆ ಬೆಳೆದಿರುವ ಗೂಗಲ್ ಲಕ್ಷಾಂತರ ಪುಸ್ತಕಗಳಿಗೆ ಡಿಜಿಟಲ್ ರೂಪ ನೀಡಿದೆ. ಜಗತ್ತಿನ ಸಣ್ಣ ಸಣ್ಣ ಬೀದಿಗಳನ್ನು ಭೂಪಟಕ್ಕೆ ಸೇರಿಸಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ಮಾತನ್ನು ಅಕ್ಷರಕ್ಕೆ ಇಳಿಸುವುದರಿಂದ ಹಿಡಿದು ಕಾರುಗಳನ್ನು ಚಲಾಯಿಸುವುದಕ್ಕೆ ಬೇಕಾದ ತಂತ್ರಜ್ಞಾನ ರೂಪಿಸಿವೆ. ಜಿಮೇಲ್, ಆಂಡ್ರಾಯ್ಡ್ ಸೇರಿದಂತೆ ಹತ್ತಾರು ಸೇವೆಗಳ ಮೂಲಕ ಜಗತ್ತನ್ನು ತಮ್ಮ ಬಿಗಿ ಮುಷ್ಟಿಯಲ್ಲಿಟ್ಟುಕೊಂಡಿರುವುದು ಪೇಜ್ ಮತ್ತು ಬ್ರಿನ್ ಜೋಡಿ.
ಫೋರ್ಬ್ಸ್ ಪ್ರಕಾರ ಪೇಜ್ 58.9 ಬಿಲಿಯನ್ ಡಾಲರ್ ಮತ್ತು ಬ್ರಿನ್ 56.8 ಬಿಲಿಯನ್ ಡಾಲರ್ ಆಸ್ತಿಗೆ ಒಡೆಯರು. ಅಂದರೆ ಜಗತ್ತಿನ ಆರನೆ ಮತ್ತು ಏಳನೆಯ ಅತಿ ದೊಡ್ಡ ಶ್ರೀಮಂತರು!

ಶೇ. 51ರಷ್ಟು ಶೇರುಗಳನ್ನು 84%ರಷ್ಟು ಮತದಾನದ ಹಕ್ಕನ್ನು ತಮ್ಮ ಬಳಿಯೇ ಉಳಿಸಿಕೊಂಡಿರುವ ಪೇಜ್ ಮತ್ತು ಬ್ರಿನ್ ಯಾವ ಗಳಿಗೆಯಲ್ಲಾದರೂ ಪಿಚ್ಚೈ ಅವರನ್ನು ಹೊರಗೆ ಗಳಿಸಬಹುದು. ಅವರೇ ಹೇಳಿಕೊಂಡಿರುವಂತೆ ದೈನಂದಿನ ವ್ಯವಹಾರಗಳಲ್ಲಿ ನೇರವಾಗಿ ಭಾಗಿಯಾಗದಿದ್ದರೂ, ಬೋರ್ಡ್ ಮೀಟಿಂಗ್, ಶೇರ್ ಹೋಲ್ಡರ್‌ಗಳ ಮೀಟಿಂಗ್ ಸೇರಿದಂತೆ ಮುಖ್ಯವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.