ಕಳೆದ ವಾರವಷ್ಟೇ ಭಾರತದ್ದೇ ಆ್ಯಪ್ ಸ್ಟೋರ್ ಹೊಂದುವ ಬಗ್ಗೆ ಚರ್ಚೆ ನಡೆದಿರುವ ಸುದ್ದಿ ಗಮನ ಸೆಳೆದಿತ್ತು. ಈ ಚರ್ಚೆಗೆ ಕಾರಣವಾದ ಪೇಟಿಎಂ ಕಂಪನಿಯೇ ಮಿನಿ ಆ್ಯಪ್ ಸ್ಟೋರ್‌ಗೆ ಚಾಲನೆ ನೀಡಿದೆ! ಇಲ್ಲಿ ಆ್ಯಪ್ ಡೌನ್‌ಲೋಡ್ ಮಾಡದೇ ಬಳಸಬಹುದು!

ಗೂಗಲ್ ಹಾಗೂ ಇತರೆ ದೈತ್ಯ ಟೆಕ್‌ಕಂಪನಿಗಳ ಏಕಸ್ವಾಮ್ಯದ ಹಿಡಿತದಿಂದ ತಪ್ಪಿಸಿಕೊಳ್ಳುವುದು ಭಾರತದ ಸರ್ಕಾರದ ಆದ್ಯತೆ. ಹಾಗಾಗಿ ‘ಆತ್ಮನಿರ್ಭರತೆ’ ಎಲ್ಲ ಕಡೆಗೂ ಅನ್ವಯವಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಕಳೆದವಾರ ಭಾರತ ತನ್ನದೇ ಆದ ಆ್ಯಪ್ ಸ್ಟೋರ್ ಹೊಂದಬೇಕೆನ್ನುವ ಚರ್ಚೆ ಆರಂಭವಾಗಿತ್ತು.
ಹೆಸರು ಹೇಳದ ಹಿರಿಯ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಪ್ರಕಟವಾದ ವರದಿಗಳೇ ಸದ್ಯದಲ್ಲಿ ಆ್ಯಪ್ ಸ್ಟೋರ್‌ವೊಂದು ಚಾಲನೆ ಪಡೆಯುವ ಸುಳಿವು ನೀಡಿತ್ತು. ಅದರಂತೆ ಪೇಟಿಎಂ ಕಂಪನಿ 300 ಆ್ಯಪ್‌ಗಳನ್ನು ಒಳಗೊಂಡ ಮಿನಿ ಆ್ಯಪ್ ಸ್ಟೋರ್‌ಗೆ ಚಾಲನೆ ನೀಡಿದೆ.
ಈ ಮಿನಿ ಆ್ಯಪ್ ಸ್ಟೋರ್ ಪ್ರತ್ಯೇಕ ಆ್ಯಪ್ ಅಲ್ಲ. ಪೇಟಿಎಂ ಆ್ಯಪ್‌ನಲ್ಲಿಯೇ ಆ್ಯಪ್ ಸ್ಟೋರ್ ಇದ್ದು, ಇದರಲ್ಲಿ 300 ಆ್ಯಪ್‌ಗಳಿವೆ. ವಿಶೇಷವೆಂದರೆ ಇಲ್ಲಿರುವ ಯಾವುದೇ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿ, ಇನ್‌ಸ್ಟಾಲ್ ಮಾಡುವ ರಗಳೆ ಇಲ್ಲ. ಇವು ಪ್ರೊಗ್ರೆಸಿವ್ ವೆಬ್ ಆಪ್
ಆರ್ಥಿಕ ಸೇವೆಗಳು, ಶಿಕ್ಷಣ, ಲೈಫ್ ಸ್ಟೈಲ್, ಜ್ಯೋತಿಷ್ಯ, ಸಂಗೀತ, ಮಿನಿ ಗೇಮ್ಸ್, ಲೈವ್ ಟಿವಿ, ಫುಡ್, ಸುದ್ದಿ, ಟ್ರಾವೆಲ್, ಆರೋಗ್ಯ, ಶಾಪಿಂಗ್ ವಲಯಕ್ಕೆ ಸಂಬಂಧಿಸಿದ ಆ್ಯಪ್‌ಗಳು ಇದರಲ್ಲಿವೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಪೇಟಿಎಂ, ಭಾರತದ ಸಣ್ಣ ಡೆವೆಲಪರ್‌ಗಳು ಮತ್ತು ಉದ್ಯಮಗಳಿಗೆ ಅನುಕೂಲವಾಗುವಂತೆ ಕಡಿಮೆ ವೆಚ್ಚದಲ್ಲಿ ಸುಲಭವಾಗಿ ಎಚ್‌ಟಿಎಂಎಲ್ ಮತ್ತು ಜಾವಾಸ್ಕ್ರಿಪ್ಟ್ ಬಳಸಿ ಸುಲಭವಾಗಿ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿಕೊಡುವುದು ಉದ್ದೇಶ ಎಂದಿದೆ. ಆ್ಯಪ್ ಸ್ಟೋರ್‌ಗೆ ಸೇರಿಸಲಾಗುವ ಆ್ಯಪ್‌ಗಳು ಉಚಿತವಾಗಿರುತ್ತವೆ ಎಂದೂ ಹೇಳಿದೆ.
ಅಷ್ಟೇ ಅಲ್ಲದೆ ಪೇಟಿಎಂ ವ್ಯಾಲೆಟ್, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್, ಯುಪಿಐಗಳ ಡೆವೆಲಪರ್‌ಗಳಿಗೆ ಉಚಿತ ಹಣಕಾಸು ವ್ಯವಹಾರಗಳಿಗೆ ನೆರವಾಗುತ್ತಿದೆ. ಕ್ರೆಡಿಟ್ ಕಾರ್ಡ್ ಬಳಸಿದ್ದಲ್ಲಿ ಶೇ. 2ರಷ್ಟು ಶುಲ್ಕ ಸಂಗ್ರಹಿಸಲಾಗುತ್ತದೆ ಎಂದು ಪೇಟಿಎಂ ತಿಳಿಸಿದೆ.
ಇದನ್ನೂ ಓದಿ | ಗೂಗಲ್ ಪ್ಲೇಸ್ಟೋರ್, ಆ್ಯಪ್ ಸ್ಟೋರ್ ಬದಲಿಗೆ ಬರಲಿದೆಯೇ ಭಾರತದ್ದೇ ಆ್ಯಪ್ ಸ್ಟೋರ್ ಆರಂಭವಾಗುವುದೆ?
ಕಳೆದ ತಿಂಗಳು ಗೂಗಲ್ ತನ್ನ ಪ್ಲೇಸ್ಟೋರ್‌ನಲ್ಲಿರುವ ಆ್ಯಪ್‌ಗಳಿಗೆ ಶೇ. 30ರಷ್ಟು ಶುಲ್ಕವನ್ನು ಹೇರಿದ್ದಲ್ಲದೆ, ಪೇಟಿಎಂ, ಗೂಗಲ್‌ನ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಪ್ಲೇಸ್ಟೋರ್‌ನಿಂದ ಹೊರಹಾಕಿತ್ತು. ಈ ಹಿನ್ನೆಲೆಯಲ್ಲಿ ಚಾಲನೆ ಪಡೆದ ಭಾರತದ್ದೇ ಆ್ಯಪ್ ಸ್ಟೋರ್ ಚರ್ಚೆ ಈಗ ಮಿನಿ ಸ್ಟೋರ್ ಮೂಲಕ ಹೊಸ ತಿರುವು ಸಿಕ್ಕಿದೆ.