ಪಿಇಎಸ್‌ ವಿದ್ಯಾರ್ಥಿಗಳಿಂದ ಮತ್ತೊಂದು ಉಪಗ್ರಹ ನಿರ್ಮಾಣ; 2 ತಿಂಗಳಲ್ಲಿ ನಭಕ್ಕೆ

ಬೆಂಗಳೂರಿನ ಪಿಇಎಸ್‌ ವಿಶ್ವವಿದ್ಯಾಲಯದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ನಿರ್ಮಿಸುತ್ತಿದ್ದಾರೆ. ಡಿಆರ್‌ಡಿಒ ಸಹಯೋಗದಲ್ಲಿ ಸಿದ್ಧವಾಗುತ್ತಿರುವ ಈ ಉಪಗ್ರಹ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ

ಬೆಂಗಳೂರಿನ ಪ್ರತಿಷ್ಠಿತ ತಾಂತ್ರಿಕ ಸಂಸ್ಥೆ ಪಿಇಎಸ್‌ ಯೂನಿವರ್ಸಿಟಿ ವಿದ್ಯಾರ್ಥಿಗಳು ಮತ್ತೊಂದು ಉಪಗ್ರಹವನ್ನು ರೂಪಿಸಿದ್ದು ಉಡಾವಣೆಗೆ ತಯಾರಿ ನಡೆಸಲಾರಂಭಿಸಿದ್ದಾರೆ.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಇದು ಮೂರನೆಯ ಉಪಗ್ರಹವಾಗಿದ್ದು, ಈ ಡಿಆರ್‌ಡಿಒ ಸಹಯೋಗದಲ್ಲಿ ನಿರ್ಮಾಣಗೊಂಡಿದೆ.

ಪೈಸ್ಯಾಟ್‌ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದ ಪಿಇಎಸ್‌ ವಿದ್ಯಾರ್ಥಿಗಳು ಈಗ ಸಂಶೋಧನೆಗಾಗಿ ಆರ್‌ಸ್ಯಾಟ್‌ ರೂಪಿಸಿದ್ದಾರೆ. ಇದು ನ್ಯಾನೊ ಉಪಗ್ರಹವಾಗಿದ್ದು ಹತ್ತು ಕೆಜಿ ತೂಕದ್ದಾಗಿದೆ. ಇದು ಸಾಗರದಲ್ಲಿ ಸಂಚರಿಸುವ ಹಡಗುಗಳ ಸಂಖ್ಯೆ, ಹಡುಗಗಳ ಬಗ್ಗೆ ಮಾಹಿತಿ ಸಂಗ್ರಹಣೆ, ಅವುಗಳ ಚಲನೆಯ ಮಾಹಿತಿ ಮತ್ತು ಬಂದರುಗಳಲ್ಲಿ ಅವುಗಳ ಸಂಚಾರದ ನಿಗಾವಹಿಸಿ ಅನಾಹುತಗಳಿಗೆ ಅವಕಾಶ ಕೊಡದಂತೆ ಎಚ್ಚರವಹಿಸಲು ನೆರವಾಗುತ್ತದೆ ಎಂದು ಉಪಗ್ರಹ ನಿರ್ಮಾಣ ತಂಡ ಹೇಳಿದೆ.

ಯೋಜನೆಯ ಸಮನ್ವಯಾಧಿಕಾರಿಯಾಗಿ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್‌ ಕಮ್ಯುನಿಕೇಷನ್‌ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕರಾದ ಪ್ರೊ ಸಾಂಬಶಿವರಾವ್‌ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲ ಇಸ್ರೋದಲ್ಲಿ ಪ್ರಾಜೆಕ್ಟ್‌ ಮ್ಯಾನೇಜರ್‌, ಡೆಪ್ಯೂಟಿ ಪ್ರಾಜೆಕ್ಟ್‌ ಡೈರೆಕ್ಟರ್‌ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ವಿವಿಯಲ್ಲಿ ಕಳೆದ ಎಂಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಇವರ ಮಾರ್ಗದರ್ಶನಲ್ಲಿ ಉಪಗ್ರಹ ನಿರ್ಮಾಣಗಳ ಯೋಜನೆಗಳು ನಡೆದಿವೆ.

ಈ ಉಪಗ್ರಹಣ ನಿರ್ಮಾಣದ ಆರಂಭಿಕ ಹಂತದಲ್ಲಿ ವಿದ್ಯಾರ್ಥಿಗಳು ನೌಕಾ ಸಂಶೋಧನಾ ಮಂಡಳಿಗೆ ಯೋಜನೆ ಕುರಿತು ಪ್ರಸ್ತಾವನೆ ಸಲ್ಲಿಸಿತ್ತು. ಮೊದಲ ಹಂತ ಪೂರ್ಣಗೊಳ್ಳುವ ಹೊತ್ತಿಗೆ ಡಿಆರ್‌ಡಿಒ ಯೋಜನೆ ಪೂರ್ಣಗೊಳ್ಳಲು ಅಗತ್ಯವಾದ 2.3 ಕೋಟಿ ರೂ.ಗಳ ಆರ್ಥಿಕ ನೆರವು ನೀಡಿ ಬೆಂಬಲಿಸಿತು.

ಮೂರು ವರ್ಷಗಳ ಕಾಲ ಹನ್ನೆರಡು ವಿದ್ಯಾರ್ಥಿಗಳು ಉಪಗ್ರಹ ನಿರ್ಮಾಣಕ್ಕೆ ಶ್ರಮಿಸಿದ್ದು ಅಂತಿಮ ಹಂತದ ಕೆಲಸಗಳು ಜರುಗುತ್ತಿದ್ದು, ಪರೀಕ್ಷಾರ್ಥ ಉಡಾವಣೆಯ ದಿನ ನಿಗದಿಯಾಗುವುದರ ನಿರೀಕ್ಷೆಯಲ್ಲಿದ್ದಾರೆ.