30ಕ್ಕೆ ಕಾಲಿಟ್ಟ ಫೋಟೋಶಾಪ್‌| ಫೋಟೋಗ್ರಾಫರ್‌ಗಳ ಕಣ್ಮಣಿ, ರಾಜಕೀಯ ತಂತ್ರಗಾರಿಕೆಯ ಅಸ್ತ್ರವಾದ ತಂತ್ರಾಂಶ

ನೇರವಾಗಿಯೋ, ಪರೋಕ್ಷವಾಗಿಯೋ ಫೋಟೋಶಾಪ್‌ ನಮ್ಮ ಬದುಕಿನ ಭಾಗವಾಗಿದೆ. ಒಂದು ಸಾಫ್ಟ್‌ವೇರ್‌ ಆಗಿ ಅಷ್ಟೇ ಅಲ್ಲ, ಅದೊಂದು ಕ್ರಿಯಾಪದವಾಗಿ ನಮ್ಮ ವ್ಯವಹಾರಗಳಲ್ಲಿ ಸೇರಿಕೊಂಡಿದೆ. ಫೋಟೋ ಎಡಿಟಿಂಗ್‌, ಗ್ರಾಫಿಕ್‌ ಡಿಸೈನ್‌ ಕ್ಷೇತ್ರಗಳಲ್ಲಿ ಕ್ರಾಂತಿಗೆ ಕಾರಣವಾದ ಈ ಸಾಫ್ಟ್‌ವೇರ್‌ನ ಇತಿಹಾಸದತ್ತ ಹೊರಳು ನೋಟ

“ನೀವು ಯಾವ ಕಡೆಗಾದರೂ ಕಣ್ಣುಹಾಯಿಸಿ, ಫೋಟೋಶಾಪ್‌ನಿಂದ ಸೃಷ್ಟಿಸದೇ ಇರುವ ಒಂದೇ ಒಂದು ವಸ್ತು, ಕಲಾಕೃತಿ ಕಾಣದೇ ಹೋಗುವುದು ತೀರಾ ಅಪರೂಪ.
-ಜಾನ್‌ ನಾಲ್‌, ಫೋಟೋಶಾಪ್‌ ಸೃಷ್ಟಿಕರ್ತ.

ಈಮಾತುಗಳಲ್ಲೇನು ಉತ್ಪ್ರೇಕ್ಷೆ ಇಲ್ಲ. ರಸ್ತೆ ಬದಿಯ ಹೋರ್ಡಿಂಗ್‌, ಗೋಡೆ ಮೇಲಿನ ಸಿನಿಮಾ ಪೋಸ್ಟರ್‌, ಒಂದು ನಿಮಿಷದಲ್ಲಿ ಅರವತ್ತು ಪಾಸ್‌ಪೋರ್ಟ್‌ ಸೈಜ್‌ ಫೋಟೋ ನೀಡುತ್ತೇವೆ ಎಂಬ ಸ್ಟುಡಿಯೋ ಮುಂದಿನ ಬೋರ್ಡ್‌, ನಿಮ್ಮ ಕೈಯಲ್ಲಿರುವ ಯಾವುದಾದರೂ ವಸ್ತುವಿನ ವಿನ್ಯಾಸ ಎಲ್ಲದರ ಹಿಂದೆ ಇರುವುದು ಫೋಟೋಶಾಪ್‌.

ಫೋಟೋಶಾಪ್‌ ಒಂದು ತಂತ್ರಾಂಶ. ಆದರೆ ಅದು ತಂತ್ರಜ್ಞರು ಬಳಸುವ ಸಾಧನವಷ್ಟೇ ಆಗಿ ಉಳಿದಿಲ್ಲ. ಫೋಟೋಗ್ರಾಫ್‌ಗಳನ್ನು ಸಂಸ್ಕರಿಸುವುದಕ್ಕೆ, ಅಂದರೆ ಅಂದಗೊಳಿಸುವುದಕ್ಕೆಂದು ಸೃಷ್ಟಿಯಾದ ಈ ತಂತ್ರಾಂಶ ನಂತರದಲ್ಲಿ ಡಿಜಿಟಲ್‌ ಕಲಾಕೃತಿಗಳ ಸೃಷ್ಟಿ, ವಿನ್ಯಾಸ ಕಾರ್ಯಗಳಿಗೂ ವ್ಯಾಪಕವಾಗಿ ಬಳಕೆಯಾಗಲಾರಂಭಿಸಿತು.

ಸಂಕೀರ್ಣವಲ್ಲದ ಈ ತಂತ್ರಾಂಶ, ಕಂಪ್ಯೂಟರ್‌ ಬಳಸುವ ಪ್ರಾಥಮಿಕ ಇದ್ದ ಯಾರಿಗೂ ಬಳಸುವುದಕ್ಕೆ ಯೋಗ್ಯವಾಗಿತ್ತು. ಹಾಗಾಗಿ ಜನಪ್ರಿಯ ತಂತ್ರಾಂಶವಾಗಿ ಬೆಳೆಯಿತು. ಮೂವತ್ತು ವರ್ಷಗಳ ಹಿಂದೆ ಪರಿಚಯಿಸಲಾದ ಈ ತಂತ್ರಾಂಶ ಕಳೆದ ಹತ್ತು ವರ್ಷಗಳಲ್ಲಿ ಹಲವು ಕಾರಣಗಳಿಗೆ ಅತಿ ಹೆಚ್ಚು ಬಳಕೆಯಾಗುತ್ತಿದೆ.

ಇಮೇಜ್‌ಪ್ರೊನಿಂದ ಫೋಟೋಶಾಪ್‌ವರೆಗೆ

ಫೋಟೋಶಾಪ್‌ನ ಮೊದಲ ಆವೃತ್ತಿಯನ್ನು ಪರಿಚಯಿಸುತ್ತಿರುವ ಅದರ ಸೃಷ್ಟಿಕರ್ತ ಜಾನ್‌ ನಾಲ್‌

ಜಾನ್‌ ನಾಲ್‌, ಇಂಡಸ್ಟ್ರಿಯಲ್‌ ಲೈಟ್‌ ಅಂಡ್‌ ಮ್ಯಾಜಿಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸ್ಟಾರ್‌ವಾರ್ಸ್‌ ಆರಂಭಿಸಿದ, ಈ ಸಂಸ್ಥೆ ಲ್ಯೂಕಾಸ್‌ ಫಿಲ್ಮ್‌ನ ಸ್ಪೆಷಲ್‌ ಎಫೆಕ್ಟ್‌ ಡಿವಿಷನ್‌. ಇಲ್ಲಿ ಯಾರೇ ಕೆಲಸಕ್ಕೆ ಸೇರಿದರೂ ಮೊದಲು ನೈಟ್‌ಶಿಫ್ಟ್‌ ಮಾಡಬೇಕು. ಜಾನ್‌ ಕೂಡ ರಾತ್ರಿ 7 ರಿಂದ ಬೆಳಗ್ಗೆ 5ಗಂಟೆ ವರೆಗೂ ಕೆಲಸ ಮಾಡುತ್ತಿದ್ದರು. ಬಿಡುವು ಸಿಕ್ಕಾಗಲೆಲ್ಲಾ ಅಣ್ಣ ಥಾಮಸ್‌ ಸಂಶೋಧನೆಗೆ ಪೂರಕವಾದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅಂದ ಹಾಗೇ ಜಾನ್‌ ಅಣ್ಣ ಇದೇ ವೇಳೆ ಜಾನ್‌ ಸೋದರ ಥಾಮಸ್‌ ಮಿಷಗನ್‌ ವಿಶ್ವವಿದ್ಯಾಲಯದಲ್ಲಿ ಇಮೇಜ್‌ ಪ್ರೊಸೆಸಿಂಗ್‌ ವಿಷಯದ ಮೇಲೆ ಸಂಶೋಧನೆ ನಡೆಸಿದ್ದರು.

ಈ ಇಬ್ಬರ ಗುರಿ ಒಂದೇ ಆಗಿದ್ದರೂ, ಕೆಲಸ ಮಾಡುತ್ತಿರುವ ವಿಧಾನ ಮತ್ತು ಕ್ರಮಗಳು ಭಿನ್ನವಾಗಿದ್ದವು. ಫೋಟೋಗ್ರಫಿ, ಇಮೇಜ್‌ ಪ್ರೊಸೆಸಿಂಗ್‌ ಕುರಿತು ಭಿನ್ನ ದಿಕ್ಕಿನಲ್ಲಿ ಅಧ್ಯಯನ ಮಾಡುತ್ತಿದ್ದ ಇಬ್ಬರು ಸಾಂಪ್ರದಾಯಿಕ ಫೋಟೋ ಸಂಸ್ಕರಣೆಯ ವಿಧಾನಕ್ಕೆ ಪರ್ಯಾಯವೊಂದನ್ನು ಕಂಡುಕೊಳ್ಳುವುದಕ್ಕೆ ಸಿದ್ಧರಾಗುತ್ತಿದ್ದರು.

ಇದೇ ಸಮಯದಲ್ಲಿ ಈ ಇಬ್ಬರು ಸೋದರರ ತಂದೆ ಫೋಟೋಗ್ರಫಿಯಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಮನೆಯ ಕೆಳಮಹಡಿಯಲ್ಲಿ ತಮ್ಮದೇ ಡಾರ್ಕ್‌ರೂಮ್‌ ಹೊಂದಿದ್ದರು. ಇಲ್ಲಿ ಜಾನ್‌ ಮತ್ತು ಥಾಮಸ್‌ ಫೋಟೋ, ಅದರ ಸಂಸ್ಕರಣೆ, ಬಣ್ಣಗಳು ಇತ್ಯಾದಿಗಳನ್ನು ಅರ್ಥಮಾಡಿಕೊಳ್ಳಲಾರಂಭಿಸಿದ್ದರು.

ಇವರಿಬ್ಬರ ಅಧ್ಯಯನ ಕುತೂಹಲಕ್ಕೆ ಬಲ ನೀಡುವಂತೆ ಆಗ ತಾನೇ ಮಾರುಕಟ್ಟೆಗೆ ಬಂದಿ ಆಪಲ್‌ ಕಂಪನಿ ಮ್ಯಾಕ್‌ ಕಂಪ್ಯೂಟರ್‌ ನೆರವಾಯಿತು. ಥಾಮಸ್‌ ಬಣ್ಣದ ಪರದೆಯ ಕಂಪ್ಯೂಟರ್‌ನಲ್ಲಿ ಕೋಡ್‌ ಬರೆದು ಚಿತ್ರಗಳನ್ನು ಸಂಸ್ಕರಿಸುವ ಪ್ರಯೋಗವನ್ನು ಮಾಡಿದ್ದರು. ಇದನ್ನು ನೋಡಿದ ಜಾನ್‌ ಥಾಮಸ್‌ ಜೊತೆಗೂಡಿ ಕೆಲಸ ಮಾಡಲಾರಂಭಿಸಿದರು. ಇದರ ಫಲವಾಗಿಯೇ ಹುಟ್ಟಿದ್ದು ಫೋಟೋಶಾಪ್‌.

ಇಂದು ಈ ಸಾಫ್ಟ್‌ವೇರ್‌ನೊಂದಿಗೆ 41 ಹೆಸರುಗಳಿವೆ. ಅವರೆಲ್ಲರೂ ಫೋಟೋಶಾಪ್‌ ಸುಧಾರಣೆಯಲ್ಲಿ ಕೊಡುಗೆ ನೀಡಿದವರು. ಆದರೆ ಮೂಲ ಕಲ್ಪನೆ, ಜಾನ್‌ ಮತ್ತು ಥಾಮಸ್‌ ಅವರದ್ದು.

1988ರಲ್ಲಿ ಇಮೇಜ್‌ ಪ್ರೊ ಹೆಸರಿನಲ್ಲಿ ಪರಿಚಯಿಸಲಾದ ಫೋಟೋಶಾಪ್‌ ಆಗಿನ್ನು ವಾಣಿಜ್ಯ ರೂಪವನ್ನು ಪಡೆದಿರಲಿಲ್ಲ. ಸಾಮೂಹಿಕ ಉತ್ಪಾದನೆಗೆ ದೊಡ್ಡ ಆರ್ಥಿಕ ಬಂಡವಾಳ ಬೇಕಿತ್ತು. ಈ ಸಾಫ್ಟ್‌ವೇರ್‌ಗೆ ಪ್ರತಿ ಸ್ಪರ್ಧಿಯೇ ಇಲ್ಲದ ಕಾರಣ, ಮಾರುಕಟ್ಟೆಯಲ್ಲಿ ಯಶಸ್ವಿಯಾಗುವ ವಿಶ್ವಾಸವೂ ಇತ್ತು. ಹಣ ಹೂಡುವವರ ಬೇಟೆ ಆರಂಭಿಸಿದರು. ಆದರೆ ಫಲಪ್ರದವಾಗಲಿಲ್ಲ.

ಸಾಫ್ಟ್‌ವೇರ್‌ನ ಹೆಸರನ್ನು ಬದಲಿಸುತ್ತಾ, ಹತ್ತಾರು ಕಡೆ ಹಣ ಹೂಡುವವರು ಎಡತಾಕಿದರೂ ಪ್ರಯೋಜನವಾಗಿರಲಿಲ್ಲ. ಅನೇಕ ಕಂಪನಿಗಳು ತಮ್ಮದೇ ಆದ ಸಾಫ್ಟ್‌ವೇರ್‌ ಡೆವೆಲಪ್‌ ಮಾಡುವ ಕೆಲಸದಲ್ಲಿ ನಿರತರಾಗಿದ್ದರು. ಈ ನಡುವೆ ಹೂಡಿಕೆದಾರ ಮನ ಗೆಲ್ಲುವುದಕ್ಕಾಗಿ ಹೆಸರು ಬದಲಿಸುವ ಪ್ರಕ್ರಿಯೆಯಲ್ಲಿ ಪ್ರಕಾಶಕರೊಬ್ಬರು ನೀಡಿದಂತೆ ಸಲಹೆಯಂತೆ ಫೋಟೋಶಾಪ್‌ ಹೆಸರೇ ಅಂತಿಮವಾಗಿ ಉಳಿಯಿತು.

ಅಡೋಬ್‌ ಕಂಪನಿ ಆಸಕ್ತಿ ತೋರಿತಾದರೂ ಒಪ್ಪಂದ ಅಂತಿಮವಾಗಲಿಲ್ಲ. ಈ ವೇಳೆ ಬಾರ್ನಿಸ್ಕ್ಯಾನ್‌ ಹೆಸರಿನ ಸ್ಕ್ಯಾನರ್‌ಗಳನ್ನು ಉತ್ಪಾದಿಸುವ ಕಂಪನಿ ಈ ಸೋದರರಿಗೆ ಬೆಂಬಲಿಸಿತು. ಆದರೆ ಈ ಒಪ್ಪಂದ ದೀರ್ಘಕಾಲ ಉಳಿಯಲಿಲ್ಲ.

ಜಾನ್‌ ಮತ್ತೆ ಅಡೋಬ್‌ ಮಾಲಿಕರ ಎದುರು ಕೂತು ತಮ್ಮ ಸಾಫ್ಟ್‌ವೇರ್‌ ಕುರಿತು ಆಸಕ್ತಿ ಹುಟ್ಟಿಸುವ ಪ್ರಯತ್ನ ಮಾಡಿದರು. ಅಲ್ಲಿಯೇ ಕಲಾ ನಿರ್ದೇಶಕ ರಸೆಲ್‌ ಬ್ರೌನ್‌ ಅವರ ಭೇಟಿಯಾಯಿತು. ಅವರೇ ಅಡೋಬ್‌ ಸಂಸ್ಥೆಗೆ ಸಾಫ್ಟ್‌ವೇರ್‌ ಖರೀದಿ ಮಾಡುವುದಕ್ಕೆ ಒತ್ತಾಯಿಸಿದರು. ಮಾತುಕತೆ ಫಲಪ್ರದವಾಯಿತು. ಆದರ ಜಾನ್‌-ಥಾಮಸ್‌ ಸೋದರರು ಸಾಫ್ಟ್‌ವೇರ್‌ ಅನ್ನು ಅಡೋಬ್‌ಗೆ ಮಾರದೆ, ವಿತರಣೆಯ ಹಕ್ಕನ್ನು ನೀಡಿ, ರಾಯಲ್ಟಿ ತೆಗೆದುಕೊಳ್ಳುವುದಕ್ಕೆ ಒಪ್ಪಿಗೆ ನೀಡಿದರು. ಈ ಒಪ್ಪಂದದ ಬಳಿಕ ಸಾಫ್ಟ್‌ವೇರ್‌ನಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲು ಥಾಮಸ್‌ ಕೆಲಸ ಮಾಡಿದರು.

1990ರ ಫೆಬ್ರವರಿ 19ರಂದು ಮೊದಲ ಫೋಟೋಶಾಪ್‌ ವರ್ಷನ್‌ ಕೇವಲ ಮ್ಯಾಕ್‌ ಕಂಪ್ಯೂಟರ್‌ಗಳಿಗೆ ಬಿಡುಗಡೆಯಾಯಿತು.

ಈ ಹೊತ್ತಿಗಾಗಲೇ ರಸೆಲ್‌ ಬ್ರೌನ್‌ ಫೋಟೋಶಾಪ್‌ಗೆ ಭರ್ಜರಿ ಪ್ರಚಾರ ನೀಡಿದ್ದರು. ಜೊತೆಗೆ ಆಗ ಮಾರುಕಟ್ಟೆಯಲ್ಲಿದ್ದ ಇತರೆ ಗ್ರಾಫಿಕ್‌ ಸಾಫ್ಟ್‌ವೇರ್‌ಗಳಿಗೆ ಹೋಲಿಸಿದರೆ, ಫೋಟೋಶಾಪ್‌ ಅತ್ಯಂತ ಸರಳ, ಯಾರೂ ಬಳಸಬಹುದಾದ ಸಾಫ್ಟ್‌ವೇರ್‌ ಆಗಿತ್ತು. ಹಾಗಾಗಿ ಮಾರುಕಟ್ಟೆಯಲ್ಲಿ ವಿಶೇಷ ಆಕರ್ಷಣೆಯಾಯಿತು.

ಅಡೋಬ್‌ ಫೋಟೋಶಾಪ್‌ ಆಗಿ ಎರಡನೆಯ ಆವೃತ್ತಿಯನ್ನು ಹೊರತಂದಿದ್ದು, 1991ರಲ್ಲಿ. ಈ ಹೊತ್ತಿಗೆ ಕೋಡಿಂಗ್‌ ತಂಡವನ್ನು ಕಟ್ಟಿದ್ದ ಜಾನ್‌ ಮತ್ತ ಥಾಮಸ್‌, ಫೋಟೋಶಾಪ್‌ನಲ್ಲಿ ಪೆನ್‌ಟೂನ್‌, ಡ್ಯುಟೋನ್ಸ್‌, ಇಂಪಾರ್ಟ್‌, ರೆಸ್ಟರೈಸೇಷನ್‌, ಸಿಎಂವೈಕೆ ಮುಂತಾದ ಫೀಚರ್‌ಗಳನ್ನು ತಂದರು.

ಇಲ್ಲಿಯವರೆಗೆ ಫೋಟೋಶಾಪ್‌ ಮ್ಯಾಕ್‌ ಕಂಪ್ಯೂಟರ್‌ಗಳಿಗೆ ಮಾತ್ರ ಸೀಮಿತವಾಗಿತ್ತು. 1992ರಲ್ಲಿ ಮೊದಲ ಬಾರಿಗೆ ವಿಂಡೋಸ್‌ ಕಂಪ್ಯೂಟರ್‌ಗಳಿಗೆ ಫೋಟೊಶಾಪ್‌ ಬಿಡುಗಡೆಯಾಯಿತು. ಮೂರನೆಯ ಆವೃತ್ತಿಯಲ್ಲಿ ಲೇಯರ್ಸ್‌, ಫೀಚರ್‌ ಪರಿಚಯಿಸಲಾಯಿತು. ಇದು ಹೆಚ್ಚು ಹೆಚ್ಚು ಕಲಾವಿದರು ಫೋಟೋಶಾಪ್‌ನತ್ತ ಆಸಕ್ತಿ ವಹಿಸುವಂತೆ ಮಾಡಿತು.

ಐದನೆಯ ಆವೃತ್ತಿ ಹಿಸ್ಟರಿ ಪ್ಯಾಲೆಟ್‌, ಕಲರ್‌ ಮ್ಯಾನೇಜ್‌ಮೆಂಟ್‌ಗಳು ಫೀಚರ್‌ಗಳು ಫೋಟೋಶಾಪ್‌ ಬಳಕೆಯ ಸಾಧ್ಯತೆಯನ್ನು ಹಿಗ್ಗಿಸಿದವು. ನಂತರದ ಬಂದ 5.5, 6, 7ನೇ ಆವೃತ್ತಿಗಳು ಅಕ್ಷರಗಳ ಬಳಕೆ, ಲೇಯರ್‌ ಸ್ಟೈಲ್‌, ಹೀಲಿಂಗ್‌ ಬ್ರಶ್‌, ಇಮೇಜ್‌ ರೆಡಿ ಫೀಚರ್‌ಗಳು ಕಲಾವಿದರ ಸೃಜನಶೀಲತೆಗೆ ಬಲ, ಹೊಸ ಆಯಾಮವನ್ನು ತುಂಬಿದವು.

ಅಡೋಬ್‌ ಫೋಟೋಶಾಪ್‌ ಅನ್ನು 7ರ ನಂತರ ಕ್ರಿಯೇಟಿವ್‌ ಸೂಟ್‌ ಹೆಸರಿನಲ್ಲಿ 2003ರಲ್ಲಿ ಬಿಡುಗಡೆ ಮಾಡಲಾಯಿತು. ಸಿಎಸ್‌2ರಿಂದ 5 ವಿಭಿನ್ನ ಆವೃತ್ತಿಗಳ ಬಳಿಕ ಪುನಃ ಕ್ರಿಯೇಟಿವ್‌ ಕ್ಲೌಡ್‌ ಎಂದು ಮರು ನಾಮಕರಣ ಮಾಡಲಾಗಿದೆ.


ನಾನು ಪ್ರಾಮಾಣಿಕವಾಗಿ ಹೇಳ್ತೀನಿ. ಯಾರಾದರೂ ನನ್ನ ತೂಕದ ಬಗ್ಗೆ ಕೇಳಿದ್ರೆ, ನಾನು ಹೇಳೋದಿಷ್ಟೆ, ನನ್ನ ತೂಕದ ವಿಚಾರವನ್ನು ನೋಡಿಕೊಳ್ಳೋಕೆ ನನ್ನೊಂದಿಗೆ ಐದು ಜನ ಇದ್ದಾರೆ. ಇವರ ಜೊತೆಗೆ ಫೋಟೋಶಾಪ್‌ ಇದೆ.
_ಸೋನಮ್‌ ಕಪೂರ್‌ ಹೇಳಿದ ಮಾತು


ದೈಹಿಕ ಸೌಂದರ್ಯವನ್ನು ಮರೆ ಮಾಚುವುದಕ್ಕೆ, ಇರುವುದಕ್ಕೆ ಭಿನ್ನವಾಗಿ ಅಂದರೆ ಇನ್ನಷ್ಟು ಹೆಚ್ಚು ಅಂದವಾಗಿ ಕಾಣುವಂತೆ ಮಾಡುವುದಕ್ಕೆ ಫೋಟೋಶಾಪ್‌ ಬಳಕೆಯಾಗುತ್ತಿದೆ. ಸೋನಮ್‌ ಕಪೂರ್‌ ಮಾತಿನ ಹಿಂದಿನ ಅರ್ಥವೂ ಅದೇ ಅಲ್ಲವೆ?

ಸೆರೆಹಿಡಿದ ಚಿತ್ರಗಳನ್ನು ಒಪ್ಪ ಮಾಡುವುದಕ್ಕೆ, ವಿನ್ಯಾಸ ಮಾಡುವುದಕ್ಕೆ, ಡಿಜಿಟಲ್‌ ಕಲಾಕೃತಿಗಳನ್ನು ಸೃಷ್ಟಿಸುವುದಕ್ಕೆಂದು ಅಭಿವೃದ್ಧಿಪಡಿಸಲಾದ ಫೋಟೋಶಾಪ್‌ ಕಳೆದ ಒಂದು ದಶಕದಲ್ಲಿ ಹಲವು ರೀತಿಯ ‘ಸೃಷ್ಟಿ’ ಕಾರ್ಯದಲ್ಲಿ ಬಳಕೆಯಾಗಿವೆ. ಹೌದು, ನಕಲಿಗಳನ್ನು ಸೃಷ್ಟಿಸುವುದಕ್ಕೆ ಫೋಟೋಶಾಪ್‌ ಬಳಕೆಯಾಗಿರುವ ರೀತಿಯೇ ಬೆಚ್ಚಿಬೀಳಿಸುತ್ತದೆ.

2011ರ ಮಾತು. ಸಿರಿಯಾದ ಅರಬ್‌ ನ್ಯೂಸ್‌ ಏಜೆನ್ಸಿ ಒಂದು ಫೋಟೋ ಮಾಧ್ಯಮಗಳಿಗೆ ಬಿಡುಗಡೆಯಾಯಿತು. ಅಧ್ಯಕ್ಷ ಬಶರ್‌ ಅಲ್‌ ಅಸಾದ್‌, ಹಮಾದ ಗವರ್ನರ್‌ಗೆ ಪ್ರಮಾಣವಚನ ಬೋಧನೆಯ ಫೋಟೋ ಅದು. ದಿ ಗಾರ್ಡಿಯನ್‌ ಪತ್ರಿಕೆಯ ಫೋಟೋ ಎಕ್ಸ್‌ಪರ್ಟ್‌, ಡೇವಿಡ್‌ ಮ್ಯಾಕ್‌ಕಾಯ್‌ ಇದು ಎರಡು ಭಿನ್ನ ಫೋಟೋಗಳನ್ನು ಕಟ್‌ ಮತ್ತು ಪೇಸ್ಟ್‌ ಮಾಡಿದ ಫೋಟೋ ಎಂದು ವಿಶ್ಲೇಷಿಸಿ, ಸಾಬೀತು ಮಾಡಿದರು.

ಸರ್ಕಾರಗಳ ತುತ್ತೂರಿಯಾದ ಸುದ್ದಿ ಸಂಸ್ಥೆ ಮಾಡಿದ ಈ ಅವಾಂತರ ಮುಜುಗರಕ್ಕೆ ಕಾರಣವಾಯಿತು. ಆದರೆ ಇದು ಮೊದಲೂ ಅಲ್ಲ, ಇದೇ ಕೊನೆಯೂ ಅಲ್ಲ. ಜಗತ್ತಿನಾದ್ಯಂತ ಇಂಥ ಚಟುವಟಿಕೆಗಳು ನಡೆಯುತ್ತಲೇ ಇವೆ.

ಸರ್ಕಾರಗಳ ಜನಪ್ರಿಯತೆ ಹೆಚ್ಚಿಸಲು, ಹಿತಾಸಕ್ತಿಯ ವಿಷಯಗಳ ಬಗ್ಗೆ ಜನಾಭಿಪ್ರಾಯ ರೂಪಿಸಲು, ಸುಳ್ಳನ್ನು ಸತ್ಯವಾಗಿಸಲು ಫೋಟೋಶಾಪ್‌ ಅನ್ನು ವ್ಯಾಪಕವಾಗಿ ಬಳಸಲಾಗಿದೆ.

2016ರಲ್ಲಿ ರಾಹುಲ್‌ಗಾಂಧಿ, ನಾನು ಚುನಾವಣೆಯಲ್ಲಿ ಗೆಲ್ಲಿಸುವುದಂಥದ್ದೇನಾದರೂ ಇದ್ದರೆ, ಅದು ಫೋಟೋಶಾಪ್‌” ಎಂಬ ಹೇಳಿಕೆ ರಾಜಕೀಯ ಪ್ರಚಾರದಲ್ಲಿ, ತಂತ್ರಗಾರಿಕೆಯಲ್ಲಿ ಫೋಟೋಶಾಪ್‌ ಪಡೆದುಕೊಂಡ ಸ್ಥಾನ ಎಂಥದ್ದು ಎಂಬುದನ್ನು ಹೇಳುತ್ತದೆ.

ಹಾಲಿ ಪ್ರಧಾನಿ ಅವರ ವರ್ಚಸ್ಸು ಹೆಚ್ಚಿಸಲು, ರಾಹುಲ್‌ ಗಾಂಧಿ ಸೇರಿದಂತೆ ಇತರೆ ಅನೇಕ ನಾಯಕರನ್ನು ಗೇಲಿ ಮಾಡಲು ಫೋಟೋಶಾಪ್‌ ಅಸ್ತ್ರವಾಗಿ ಬಳಕೆಯಾಗಿದೆ. ಹಾಗಾಗಿ ರಾಜಕೀಯ ಪಕ್ಷಗಳು ಪಕ್ಷದ ನಾಯಕರು, ಕಾರ್ಯಕರ್ತರಿಗಿಂತ ತಂತ್ರಜ್ಞರ ತಂಡವನ್ನು ಹೆಚ್ಚು ನಂಬಲು ಆರಂಭಿಸಿದೆ. ಹಾಗಾಗಿ ಐಟಿ ಸೆಲ್‌ಗಳು ಎಲ್ಲ ಪಕ್ಷಗಳಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿವೆ.

ಎಲ್ಲ ವಸ್ತು, ವಿಚಾರಗಳಿಗೆ ಒಳಿತು-ಕೆಡುಕಿನ ಮಗ್ಗಲುಗಳು ಇರುವಂತೆ ಈ ಸಾಧನವೂ ಬಳಕೆದಾರರ ಇಚ್ಛೆಯಂತೆ ಸಾಧನವಾಗಿಯೂ, ಅಸ್ತ್ರವಾಗಿಯೂ ಉಪಯೋಗಕ್ಕೆ ಬಂದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.